
ದೊಡ್ಡಬಳ್ಳಾಪುರ: ಗ್ರಾಮ ಪಂಚಾಯಿತಿಯಿಂದ ಬಾಶೆಟ್ಟಿಹಳ್ಳಿ ಪಟ್ಟಣ ಪಂಚಾಯಿತಿಯಾಗಿ ಮೇಲ್ದರ್ಜೆಗೇರಿದ ಬಳಿಕ ನಡೆದ ಮೊದಲ ಚುನಾವಣೆಯಲ್ಲಿ ಬಿಜೆಪಿ ಅಧಿಕಾರದ ಗದ್ದುಗೆ ಹಿಡಿದಿದೆ.
ಬಾಶೆಟ್ಟಿಹಳ್ಳಿ ಪಟ್ಟಣ ಪಂಚಾಯಿತಿಯ 19 ವಾರ್ಡ್‌ಗಳಲ್ಲಿ ಬಿಜೆಪಿ 14ರಲ್ಲಿ ಜಯಗಳಿಸಿ ಅಧಿಕಾರ ಹಿಡಿದಿದೆ. ಕಾಂಗ್ರೆಸ್ ಮೂರು, ಜೆಡಿಎಸ್ ಒಂದು ಹಾಗೂ ಸ್ವತಂತ್ರ ಅಭ್ಯರ್ಥಿ ಒಂದು ಕ್ಷೇತ್ರದಲ್ಲಿ ಜಯ ಸಾಧಿಸಿದ್ದಾರೆ.
ಡಿ.21ರಂದು ಪಟ್ಟಣ ಪಂಚಾಯಿತಿ ಚುನಾವಣೆ ಹಾಗೂ ದೊಡ್ಡಬಳ್ಳಾಪುರ ನಗರಸಭೆಯ 21ನೇ ಒಂದು ವಾರ್ಡ್‌ಗೆ ಉಪ ಚುನಾವಣೆಯ ಮತದಾನ ನಡೆದಿತ್ತು. ದೊಡ್ಡಬಳ್ಳಾಪುರ ನಗರಸಭೆ 21ನೇ ವಾರ್ಡ್ ಉಪಚುನಾವಣೆಯಲ್ಲೂ ಬಿಜೆಪಿ ಅಭ್ಯರ್ಥಿ ಗೆಲವು ಸಾಧಿಸಿದ್ದಾರೆ.
ರಾಜ್ಯದಲ್ಲಿ ಮೈತ್ರಿ ಮಾಡಿಕೊಂಡಿರುವ ಬಿಜೆಪಿ ಹಾಗೂ ಜೆಡಿಎಸ್ ಪಟ್ಟಣ ಪಂಚಾಯಿತಿ ಚುನಾವಣೆಯಲ್ಲಿ ಪ್ರತ್ಯೇಕವಾಗಿ ಸ್ಪರ್ಧಿಸಿದ್ದವು. ದೊಡ್ಡಬಳ್ಳಾಪುರ ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘದ ಚುನಾವಣೆ ವೇಳೆ ಮೈತ್ರಿಯಲ್ಲಿ ಉಂಟಾದ ಬಿರುಕು ಈ ಚುನಾವಣೆ ವರೆಗೂ ಮುಂದುವರೆದಿದೆ.
ಡಿ.21 ರಂದು ನಡೆದಿದ್ದ ಪಟ್ಟಣ ಪಂಚಾಯಿತಿ ಚುನಾವಣೆಯ ಮತಗಳ ಎಣಿಕೆ ಬುಧವಾರ ಬೆಳಗ್ಗೆ 8 ಗಂಟೆಯಿಂದ ನಗರದ ಕೊಂಗಾಡಿಯಪ್ಪ ಪ್ರೌಢ ಶಾಲೆಯಲ್ಲಿ ನಡೆಯಿತು. ಮತಗಳ ಎಣಿಕೆ ಕೇಂದ್ರದ ಬಳಿ ಬಿಜೆಪಿ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಜಮಾಯಿಸುವ ಮೂಲಕ ಪ್ರತಿ ವಾರ್ಡ್‌ನ ಫಲಿತಾಂಶ ಘೋಷಣೆಯಾಗುತ್ತಿದ್ದಂತೆ ಪಕ್ಷದ ಬಾವುಟ ಬೀಸುವ ಮೂಲಕ ಜೈಕಾರ ಹಾಕಿ ಸಂಭ್ರಮಿಸಿದರು.
ಕಾಂಗ್ರೆಸ್ ಅಭ್ಯರ್ಥಿಗಳು ಮೂರು ವಾರ್ಡ್‌ಗಳಲ್ಲಿ ಜಯಗಳಿಸಿದ್ದರು. ಸಹ ಮತ ಎಣಿಕೆ ಕೇಂದ್ರದ ಮುಂದೆ ಯಾರೊಬ್ಬರು ಜೈಕಾರ ಕೂಗದೇ ಇದ್ದದ್ದು ಜಯಗಳಿಸಿದ ಅಭ್ಯರ್ಥಿಗಳಲ್ಲಿ ಬೇಸರ ಮೂಡಿಸಿತ್ತು.
ದೊಡ್ಡಬಳ್ಳಾಪುರದ ಮತ ಎಣಿಕೆ ಕೇಂದ್ರದ ಬಳಿ ಬಿಜೆಪಿ ಕಾರ್ಯಕರ್ತರು ಶಾಸಕರ ಮೆರವಣಿಗೆ ನಡೆಸುವ ಮೂಲಕ ಸಂಭ್ರಮಸಿದರು
ಬಾಶೆಟ್ಟಿಹಳ್ಳಿ ಪಟ್ಟಣ ಪಂಚಾಯಿತಿ ಚುನಾವಣೆಯಲ್ಲಿ ಬಿಜೆಪಿ ಸ್ಪಷ್ಟ ಬಹುಮತ ಪಡೆಯುವ ಮೂಲಕ ಅಧಿಕಾರದ ಗದ್ದುಗೆ ಪಡೆಯುವುದು ಖಚಿತವಾಗುತ್ತಿದ್ದಂತೆ ಬಿಜೆಪಿ ಕಾರ್ಯಕರ್ತರು ಸಂಭ್ರಮಾಚರಣೆ ಮಾಡಿದರು. ಶಾಸಕ ಬಿಜೆಪಿ ಯುವ ಮೋರ್ಚಾರ ರಾಜ್ಯ ಘಟಕದ ಅಧ್ಯಕ್ಷರೂ ಆಗಿರುವ ಧೀರಜ್ ಮುನಿರಾಜು ಮತ ಎಣೀಕೆ ಕೇಂದ್ರದ ಬಳಿ ಬಂದರು. ಕಾರ್ಯಕರ್ತರು ಶಾಸಕರು ಹಾಗೂ ಅಭ್ಯರ್ಥಿಗಳನ್ನು ಹೆಗಲ ಮೇಲೆ ಹೊತ್ತು ಸಂಭ್ರಮಿಸುವ ಮೂಲಕ ಮೆರವಣಿಗೆ ನಡೆಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.