ADVERTISEMENT

ಸ್ಟೇರಿಂಗ್‌ ರಾಡ್‌ ತುಂಡಾಗಿ ವಿದ್ಯುತ್‌ ಕಂಬಕ್ಕೆ ಬಸ್‌ ಡಿಕ್ಕಿ

ಅಪಾಯದಿಂದ ‍ಪಾರಾದ 95 ಪ್ರಯಾಣಿಕರು

​ಪ್ರಜಾವಾಣಿ ವಾರ್ತೆ
Published 23 ನವೆಂಬರ್ 2023, 14:26 IST
Last Updated 23 ನವೆಂಬರ್ 2023, 14:26 IST
ಮಾಗಡಿ ತಾಲ್ಲೂಕಿನ ಬಾಚೇನಹಟ್ಟಿ ಬಳಿ ಕೆಎಸ್‌ಆರ್‌ಟಿಸಿ ಸ್ಟೇರಿಂಗ್‌ ರಾಡ್‌ ತುಂಡಾಗಿ ಬಸ್‌ ವಿದ್ಯುತ್‌ ಕಂಬಕ್ಕೆ ಡಿಕ್ಕಿ ಹೊಡೆದಿದೆ
ಮಾಗಡಿ ತಾಲ್ಲೂಕಿನ ಬಾಚೇನಹಟ್ಟಿ ಬಳಿ ಕೆಎಸ್‌ಆರ್‌ಟಿಸಿ ಸ್ಟೇರಿಂಗ್‌ ರಾಡ್‌ ತುಂಡಾಗಿ ಬಸ್‌ ವಿದ್ಯುತ್‌ ಕಂಬಕ್ಕೆ ಡಿಕ್ಕಿ ಹೊಡೆದಿದೆ   

ಮಾಗಡಿ: ಬೆಂಗಳೂರಿನಿಂದ ಮಾಗಡಿ ಮಾರ್ಗವಾಗಿ ಹುಲಿಯೂರು ದುರ್ಗಕ್ಕೆ ತೆರಳುತ್ತಿದ್ದ ಕೆಎಸ್ಆರ್‌ಟಿಸಿ ಬಸ್‌ ಸ್ಟೇರಿಂಗ್ ರಾಡ್‌ ತುಂಡಾಗಿ‌, ಚಾಲಕನ ನಿಯಂತ್ರಣ ತಪ್ಪಿ ವಿದ್ಯುತ್‌ ಕಂಬಕ್ಕೆ ಡಿಕ್ಕಿ ಹೊಡೆದಿದ್ದು, ಅದೃಷ್ಟವಶಾತ್‌ ಬಸ್‌ನಲ್ಲಿದ್ದ ಪ್ರಯಾಣಿಕರು ಅಪಾಯದಿಂದ ಪಾರಾಗಿದ್ದಾರೆ.

ತಾಲ್ಲೂಕಿನ ಬಾಚೇನಹಟ್ಟಿ ಬಳಿ ಗುರುವಾರ ಬೆಳಗ್ಗೆ ಈ ಘಟನೆ ನಡೆದಿದ್ದು, ಬಸ್‌ನಲ್ಲಿ 95 ಮಂದಿ ಪ್ರಯಾಣಿಸುತ್ತಿದ್ದರು. ವಿದ್ಯುತ್‌ ಕಂಬದಲ್ಲಿ ವಿದ್ಯುತ್‌ ಇಲ್ಲದಿದ್ದರಿಂದ ಅವಘಡ ತಪ್ಪಿದೆ.

ಬಾಚೇನಹಟ್ಟಿ ನಿಲ್ದಾಣ ಬಿಟ್ಟು ಬಸ್‌ ಸ್ವಲ್ಪ ದೂರ ಸಂಚರಿಸುತ್ತಿದ್ದಂತೆ ಜೋರಾಗಿ ಶಬ್ದ ಕೇಳಿಸಿತು. ಚಾಲಕ ಪ್ರಕಾಶ್‌ ಕೂಡಲೇ ಬಸ್‌ ನಿಯಂತ್ರಿಸಲು ಬ್ರೇಕ್‌ ತುಳಿದರು. ಸ್ಟೇರಿಂಗ್‌ ರಾಡ್‌ ತುಂಡರಿಸಿದ್ದ ಕಾರಣ ಸ್ಟೇರಿಂಗ್‌ ಸುತ್ತುತ್ತಿತ್ತು. ಚಾಲಕ ಏನಾಗಿದೆ ಎಂದು ನೋಡುವಷ್ಟರಲ್ಲಿ ಬಸ್‌ ವಿದ್ಯುತ್‌ ಕಂಬಕ್ಕೆ ಡಿಕ್ಕಿ ಹೊಡೆಯಿತು ಎಂದು ಬಸ್‌ ನಿರ್ವಾಹಕ ಸತೀಶ್‌ ತಿಳಿಸಿದರು.

ADVERTISEMENT

‘ಗ್ರಾಮಸ್ಥರು ನೀಡಿದ ಮಾಹಿತಿ ಆಧಾರಿಸಿದ ಸ್ಥಳಕ್ಕೆ ಆಗಮಿಸಿದ ಬೆಸ್ಕಾಂ ಸಿಬ್ಬಂದಿ ಬಸ್‌ ಮೇಲೆ ಬಿದ್ದಿದ್ದ ವಿದ್ಯುತ್‌ ಕಂಬವನ್ನು ತೆರವುಗೊಳಿಸಿದರು. ಪ್ರಯಾಣಿಕರಿಗೆ ಯಾವುದೇ ತೊಂದರೆ ಆಗಿಲ್ಲ. ಬದಲಿ ಬಸ್‌ನಲ್ಲಿ ಪ್ರಯಾಣಿಕರನ್ನು ಕಳಿಸಿದ್ದೇವೆ’ ಎಂದು ತಿಳಿಸಿದರು.

‘ಸಾಮರ್ಥ್ಯಕ್ಕಿಂತ ಅಧಿಕ ಪ್ರಯಾಣಿಕರು ಬಸ್‌ನಲ್ಲಿದ್ದರು. ಚಾಲಕನ ಜಾಗರೂಕತೆಯಿಂದ ಭಾರಿ ಅನಾಹುತ ತಪ್ಪಿದೆ. ವಿದ್ಯುತ್‌ ಪ್ರವಹಿಸಿದ್ದರೆ ದೊಡ್ಡ ಅನಾಹುತ ಸಂಭವಿಸುತ್ತಿತು’ ಎಂದು ಪ್ರತ್ಯಕ್ಷದರ್ಶಿ ಮಾರುತಿ ಯಾದವ್‌ ತಿಳಿಸಿದರು.

ಮಾಗಡಿ ಡಿಪೊ ಆರಂಭವಾದಾಗ ತೀರಾ ಹಳೆಯ ಬಸ್‌ಗಳನ್ನು ಕೊಟ್ಟರು. ಡಿಪೊದಲ್ಲಿರುವ ಕೆಎಸ್‌ಆರ್‌ಟಿಸಿ ಬಸ್‌ಗಳು ಎಫ್‌ಸಿ ಆಗಿಲ್ಲ. ಜಿಲ್ಲಾ ಡಿಪೋದಲ್ಲಿ ಬಸ್‌ಗಳನ್ನು ಎಫ್‌ಸಿ ಮಾಡಿಸಿಲ್ಲ. ಈ ಬಗ್ಗೆ ಅಧಿಕಾರಿಗಳು ಗಮನಿಸುತ್ತಿಲ್ಗ. ಮಾಗಡಿ ಡಿಪೊಗೆ ನೂತನ ಬಸ್‌ ಒದಗಿಸಬೇಕೆಂದು ಅವರು ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.