ADVERTISEMENT

ಪೋಷಕರಿಗೆ ಹೇಳದೆ ಬಾರದ ಲೋಕಕ್ಕೆ ಹೊರಟ ಮಕ್ಕಳು

ಹೊಸಕೋಟೆ ಬಳಿ ಸರಣಿ ಅಪಘಾತ

​ಪ್ರಜಾವಾಣಿ ವಾರ್ತೆ
Published 14 ಫೆಬ್ರುವರಿ 2026, 0:30 IST
Last Updated 14 ಫೆಬ್ರುವರಿ 2026, 0:30 IST
ಹೊಸಕೋಟೆ ತಾಲ್ಲೂಕಿನ ಎಂ.ಸತ್ಯವಾರ ಬಳಿ ಕಾರು ಡಿಕ್ಕಿಯಿಂದ ಹೆದ್ದಾರಿಯಿಂದ ಸರ್ವಿಸ್ ರಸ್ತೆಗೆ ಹಾರಿ ಬಿದ್ದಿರುವ ಕ್ಯಾಂಟರ್
ಹೊಸಕೋಟೆ ತಾಲ್ಲೂಕಿನ ಎಂ.ಸತ್ಯವಾರ ಬಳಿ ಕಾರು ಡಿಕ್ಕಿಯಿಂದ ಹೆದ್ದಾರಿಯಿಂದ ಸರ್ವಿಸ್ ರಸ್ತೆಗೆ ಹಾರಿ ಬಿದ್ದಿರುವ ಕ್ಯಾಂಟರ್   

ಹೊಸಕೋಟೆ: ‘ತಮ್ಮ ಮಕ್ಕಳು ಬೆಳಗಿನ ಸುಖ ನಿದ್ರೆಯಲ್ಲಿದ್ದಾರೆ ಎಂದು ಭಾವಿಸಿದ ಪೋಷಕರಿಗೆ ಪೊಲೀಸರ ‍ಫೋನ್‌ ಕರೆ ಬರಸಿಡಿಲು ಬಡಿಸಿತು. ರಾತ್ರಿ ಊಟ ಮಾಡಿ ಮಲಗಿದ್ದ ಮಕ್ಕಳು, ಅಪಘಾತದಲ್ಲಿ ಅಸುನೀಗಿದ ಸುದ್ದಿ ಕೇಳಿ ಪೋಷಕರ ಜಂಘಾಬಲವೇ ಕುಸಿದು ಹೋಗಿದೆ’.

ಪೊಲೀಸರು ಕರೆ ಮಾಡಿದಾಗ; ‘ಅಪಘಾತ ಸಂಭವಿಸಿದ ಮಾತನ್ನು ಪೋಷಕರು, ಆ ಕ್ಷಣ ನಂಬಲೇ ಇಲ್ಲ. ನಮ್ಮ ಮಗ ಮಲಗಿದ್ದಾನೆ. ಹೀಗೊಂದು ಮರು ಉತ್ತರ ಎಲ್ಲ ಪೋಷಕರು ಕೊಟ್ಟಿದ್ದಾರೆ. ಆದರೆ, ಘಟನೆ ವಿವರಗಳನ್ನು ಪ್ರತಿ ಪೋಷಕರಿಗೂ ಪೊಲೀಸರು ಮನವರಿಕೆ ಮಾಡಿಕೊಟ್ಟಿದ್ದಾರೆ’.  

ವಿವಿಧ ಶಾಲಾ–ಕಾಲೇಜಿನಲ್ಲಿ ಓದುತ್ತಿದ್ದ ಈ 17–18 ಹರೆಯದ ವಿದ್ಯಾರ್ಥಿಗಳು ಒಟ್ಟಾಗಿ ಜಾಲಿ ರೈಡ್‌ ಹೊರಟ್ಟಿದ್ದರು. ಇವರು ಎಲ್ಲಿಗೆ ಹೋಗುತ್ತಿದ್ದರು ಎಂಬುದು ಯಾರಿಗೂ ತಿಳಿದಿರಲಿಲ್ಲ. ಆದರೆ, ಹೊಸಕೋಟೆಯಲ್ಲಿ ಬಿರಿಯಾನಿ ಸೇವಿಸಲು ಈ ಸ್ನೇಹಿತರು ತೆರಳುತ್ತಿದ್ದರು ಎನ್ನುವ ಮಾಹಿತಿ ಇದೆ.

ADVERTISEMENT

ಕತ್ತಲಲ್ಲಿ ತಾಯಿ ಬದುಕು:

ಈ ಸರಣಿ ಅಪಘಾತದಲ್ಲಿ ಜೀವ ಕಳೆದುಕೊಂಡ ಬೈಕ್‌ ಸವಾರ 26 ವರ್ಷದ ಗಗನ್‌, ದೃಷ್ಟಿಹೀನ ತಾಯಿಗೆ ಒಬ್ಬನೇ ಮಗ. ಅಪ್ಪ ತೀರಿ ಹೋಗಿ ಹಲವು ವರ್ಷಗಳೇ ಕಳೆದಿದೆ. ಸಂಸಾರದ ನೊಗ ಹೊತ್ತ ಅವರು, ಪಿಲಗುಂಪೆ ಕೈಗಾರಿಕಾ ಪ್ರದೇಶದಲ್ಲಿ ಹಣ್ಣು–ತರಕಾರಿ ರಫ್ತು ಮಾಡುವ ಕಂಪನಿಯೊಂದರಲ್ಲಿ ಮೇಲ್ವಿಚಾರಕನಾಗಿ ಕೆಲಸ ಮಾಡುತ್ತಿದ್ದರು. ರಾತ್ರಿ ಪಾಳಿ ಕೆಲಸ ಮುಗಿಸಿ ತನ್ನ ಊರಾದ ದೇವನಹಳ್ಳಿ ತಾಲ್ಲೂಕಿನ ದೇವನಾಯಕನಹಳ್ಳಿಯತ್ತ ಹೊರಟಿದ್ದರು.

‘ಅಂಧ ತಾಯಿ ಬದುಕನ್ನು ಶಾಶ್ವತ ಕತ್ತಲಿಗೆ ನೂಕಿದಂತಾಗಿದೆ. ಆ ತಾಯಿಗೆ ಯಾರು ದಿಕ್ಕು?’–ಎಂದು ಗಗನ್‌ ಸಂಬಂಧಿಕರು ಭಾವುಕರಾಗಿ ಹೇಳುತ್ತಾ ಕಣ್ಣೀರಾಗಿದ್ದು, ಅಲ್ಲಿ ನೆರೆದಿದ್ದ ಜನರ ಕಣ್ಣಾಲಿಗಳನ್ನೂ ತೇವಗೊಳಿಸಿತ್ತು.   

ಘಟನಾ ಸ್ಥಳದಲ್ಲಿ ಪೊಲೀಸರ ಸ್ಥಳ ಮಹಜರು
ಕಾರು ಡಿಕ್ಕಿ ರಭಸಕ್ಕೆ ಕ್ಯಾಂಟರ್ ಟೈರ್ ಕಳಚಿಕೊಂಡು ರಸ್ತೆಗೆ ಬಿದ್ದಿರುವುದು
ಅಪಘಾತದ ಭೀಕರತೆ ಹೇಳುವ ನಜ್ಜುಗುಜ್ಜಾದ ಕಾರು

ಛಿದ್ರಗೊಂಡ ದೇಹಗಳು...

ಅಪಘಾತ ಸಂಭವಿಸಿದ ಕಾರು 250 ಮೀಟರ್‌ ವೇಗವಾಗಿ ಹೋಗಿ ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದ ಬಳಿಕ ನಿಂತಿತು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಕಾರಿನಲ್ಲಿ ವಿದ್ಯಾರ್ಥಿಗಳು ಕುಳಿತ ಸ್ಥಿತಿಯಲ್ಲೇ ಮೃತಪಟ್ಟಿದ್ದಾರೆ. ಗುರುತಿಸಲಾಗದಷ್ಟು ದೇಹಗಳು ಛಿದ್ರಗೊಂಡಿದ್ದವು ಎಂದು ಸ್ಥಳೀಯರು ತಿಳಿಸಿದ್ದಾರೆ. ಮೃತದೇಹಗಳನ್ನು ಹೊಸಕೋಟೆ ಎಂವಿಜೆ ಆಸ್ಪತ್ರೆಗೆ ಸಾಗಿಸಿ ಶವ ಪರೀಕ್ಷೆ ನಡೆಸಿ ಸದ್ಯ ಮೂರು ದೇಹಗಳನ್ನು ಮಾತ್ರ ಪೋಷಕರಿಗೆ ಹಸ್ತಾಂತರಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಅಶ್ವಿನ್ ನಾಯರ್ ಪೋಷಕರು ಅಮೆರಿಕದಲ್ಲಿ ಇರುವ ಕಾರಣ ಶನಿವಾರ ಇಲ್ಲವೇ ಭಾನುವಾರ ಬಂದು ಮೃತದೇಹವನ್ನು ತೆಗೆದುಕೊಳ್ಳಲಿದ್ದಾರೆ ಎನ್ನಲಾಗಿದೆ.  ಘಟನಾ ಸ್ಥಳಕ್ಕೆ ಐಜಿ ಲಾಬೂರಾಮ್ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಎಂ.ವಿ.ಚಂದ್ರಕಾಂತ್‌ ಎಎಸ್‌ಪಿ ವೆಂಕಟೇಶ್ ಪ್ರಸನ್ನ ಡಿವೈಎಸ್‌ಪಿ ಮಲ್ಲೇಶ್ ಸೂಲಿಬೆಲೆ ಠಾಣೆ ಸಬ್‌ ಇನ್‌ಸ್ಪೆಕ್ಟರ್‌ ರವಿಕುಮಾರ್ ಭೇಟಿ ನೀಡಿ ಪರಿಶೀಲಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.