ADVERTISEMENT

ಹೊಸಕೋಟೆ| ಕಳೆಗಟ್ಟಿದ ಕ್ರಿಸ್‌ಮಸ್‌ ಸಂಭ್ರಮ: ಹಬ್ಬಕ್ಕೂ ಮುನ್ನವೇ ಹಲವು ಕಾರ್ಯಕ್ರಮ

​ಪ್ರಜಾವಾಣಿ ವಾರ್ತೆ
Published 23 ಡಿಸೆಂಬರ್ 2025, 6:31 IST
Last Updated 23 ಡಿಸೆಂಬರ್ 2025, 6:31 IST
<div class="paragraphs"><p>ಹೊಸಕೋಟೆಯ ಚರ್ಚ್‌ನಲ್ಲಿ ಏಸು ಮತ್ತು ಮೇರಿ ವೃತ್ತಾಂತ ತಿಳಿಸುವ ಮಾದರಿ</p></div>

ಹೊಸಕೋಟೆಯ ಚರ್ಚ್‌ನಲ್ಲಿ ಏಸು ಮತ್ತು ಮೇರಿ ವೃತ್ತಾಂತ ತಿಳಿಸುವ ಮಾದರಿ

   

ಹೊಸಕೋಟೆ: ಕಳೆದೊಂದು ವಾರದಿಂದ ತಾಲ್ಲೂಕಿನ ಕ್ರಿಶ್ಚಿಯನ್ ಶಾಲಾ–ಕಾಲೇಜು, ಚರ್ಚ್, ಆಸ್ಪತ್ರೆಗಳಲ್ಲಿ ಹಬ್ಬಕ್ಕೂ ಮುನ್ನವೇ ಕ್ರಿಸ್‌ಮಸ್‌ ಹಬ್ಬದ ಸಂಭ್ರಮ ಮನೆ ಮಾಡಿದೆ. ಹಬ್ಬಕ್ಕೆ ಬೇಕಾದ ಸಿದ್ಧತೆಗಳು ಭರದಿಂದ ನಡೆಯುತ್ತಿದ್ದು, ಮಕ್ಕಳು, ಯುವಕರು ಹಿರಿಯರೊಂದಿಗೆ ಬೆರತು ಹಬ್ಬದ ಸ್ವಾಗತಕ್ಕೆ ಸಜ್ಜಾಗುತ್ತಿದ್ದಾರೆ.

ತಾಲ್ಲೂಕಿನ ಚರ್ಚ್, ಆಸ್ಪತ್ರೆ, ಶಾಲಾ ಕಾಲೇಜು, ಮಾರ್ಟ್, ದೊಡ್ಡ ಅಂಗಡಿ ಮುಂಗಟ್ಟುಗಳಲ್ಲಿ ಜಾತಿ, ಮತ–ಪಂಥಕ್ಕೆ ಅತೀತ ಎಂಬಂತೆ ಕ್ರಿಸ್‌ಮಸ್‌ ಟ್ರೀ ಸಿಂಗಾರಗೊಳ್ಳುತ್ತಿದೆ. ಅವುಗಳ ಸಮೀಪ ನಿಂತು ಯುವಕ–ಯವತಿಯರು ಸೇಲ್ಫಿ ತೆಗೆಸಿಕೊಳ್ಳುತ್ತಿದ್ದಾರೆ. ಕ್ರಿಸ್‌ಮಸ್‌ ಹಬ್ಬದಂಉ ಮಕ್ಕಳು ಹಾಡು, ನೃತ್ಯ ಪ್ರದರ್ಶಿಸಲು ತರಬೇತಿ ನಡೆಯುತ್ತಿವೆ.

ADVERTISEMENT

ಹಬ್ಬದ ಪ್ರಯುಕ್ತ ಬಡವರು, ನಿರ್ಗತಿಕರಿಗೆ ಕಳೆದ ಒಂದು ವಾರದಿಂದ ಬೆಚ್ಚನೆಯ ಹೊದಿಕೆ ದಾನ ಮಾಡಲಾಗುತ್ತಿದೆ.

ಹೊಸಕೋಟೆಯ ಸಿಎಸ್‌ಐ ಕ್ರಿಸ್ತನ ಸುವಾರ್ತಾಲಯ ಚರ್ಚ್‌ಗೆ ವಿದ್ಯುತ್‌ ದೀಪಾಲಂಕಾರ.

ತಾಲ್ಲೂಕು ಮತ್ತು ತಾಲ್ಲೂಕಿನ ಆಚೆಗೆ ಇರುವ ಕ್ರಿಶ್ಚಿಯನ್ ಸಮುದಾಯ ಇರುವ ಓಣಿಗಳಿಗೆ ಪ್ರತಿದಿನ ಮೆರವಣಿಗೆ ನಡೆಸಿ ಏಸುವಿನ ಜೀವನ ವೃತ್ತಾಂತ ತಿಳಿಸಲಾಗುತ್ತಿದೆ. ಕರೋಲ್‌ ಗಾಯನವು ನಡೆಯುತ್ತಿದೆ. ಚರ್ಚ್‌ಗಳಲ್ಲಿ ತೆರೆದ ವೇದಿಕೆ ಸಿದ್ಧಪಡಿಸಿ ಪುಟಾಣಿ ಮಕ್ಕಳಿಗೆ ಬಗೆ ಬಗೆಯ ಉಡುಗೊರೆ ನೀಡಲಾಗತ್ತಿದೆ. 

ತಾಲ್ಲೂಕಿನ ಚರ್ಚ್‌ಗಳಲ್ಲಿ ವಿದ್ಯುತ್‌ ದೀಪಾಲಂಕಾರ ಮಾಡಲಾಗಿದೆ. ರಂಗು ರಂಗಿನ ಬೆಳಕಿನ ತೋರಣ, ಜೆಡಿ ಮಣ್ಣು, ಹುಲ್ಲು ಮತ್ತು ಇತರ ವಸ್ತುಗಳಿಂದ ನಿರ್ಮಿಸಿದ ಏಸು ಮತ್ತು ಮೇರಿಯ ಬಾಲ್ಯದ ನೆನಪು ಕಟ್ಟಿಕೊಡುವ ಮಾದರಿಗಳನ್ನು ನಿರ್ಮಿಸಲಾಗಿದೆ.

ಮನೆಗಳಲ್ಲಿಯೂ ಸಿದ್ಧತೆ ಜೋರಾಗಿ ನಡೆಯುತ್ತಿದ್ದು, ಮನೆ ಮುಂದೆ ಕ್ರಿಸ್‌ಮಸ್‌ ಟ್ರೀ ನಿರ್ಮಿಸಲಾಗುತ್ತಿದೆ. ಮನೆ ಆವರಣವನ್ನು ಬಲೂನ್‌ ಮತ್ತು ವಿದ್ಯುತ್‌ ತೋರಣಗಳಿಂದ ಸಿಂಗಾರಿಸಲಾಗುತ್ತಿದೆ. ಹಬ್ಬಕ್ಕೆ ಕೇಕ್‌ ಮತ್ತು ಸಿಹಿ ತಿನ್ನಿಸಿ ತಯಾರಿಸಲು ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗುತ್ತದೆ.