
ದೊಡ್ಡಬಳ್ಳಾಪುರ: ನೇಕಾರರ ಭವನ ನಿರ್ಮಾಣಕ್ಕೆ ಜಿಲ್ಲಾ ಉಸ್ತುವಾರಿ ಸಚಿವರು, ಯೋಜನಾ ಪ್ರಾಧಿಕಾರದ ಅಧ್ಯಕ್ಷರು, ನಗರಸಭೆ ಸದಸ್ಯರನ್ನು ಆಹ್ವಾನಿಸದೆ ಶಿಷ್ಟಾಚಾರ ಉಲ್ಲಂಘಿಸಲಾಗಿದೆ ಎಂದು ಆರೋಪಿಸಿ ಕಾಂಗ್ರೆಸ್ ಕಾರ್ಯಕರ್ತರು ಕಪ್ಪುಪಟ್ಟಿ ಧರಿಸಿಕೊಂಡು ಡಾ.ಬಿ.ಆರ್.ಅಂಬೇಡ್ಕರ್ ವೃತ್ತದಲ್ಲಿ ಬುಧವಾರ ಪ್ರತಿಭಟನೆ ನಡೆಸಿದರು.
ನೇಕಾರರ ಭವನ ನಿರ್ಮಾಣಕ್ಕೆ ಶಾಸಕ ಧೀರಜ್‌ಮುನಿರಾಜ್ ಅವರು ಶಂಕುಸ್ಥಾಪನೆ ನೆರವೇರಿಸುತ್ತಿದ್ದ ಸ್ಥಳದ ಕಡೆಗೆ ಕಾಂಗ್ರೆಸ್ ಕಾರ್ಯಕರ್ತರು ಕೈ ತೋಳಿಗೆ ಕಪ್ಪು ಬಟ್ಟೆ ಕಟ್ಟಿಕೊಂಡು ನುಗ್ಗಲು ಪ್ರಯತ್ನಿಸಿದರು. ಪೊಲೀಸರು ಕಾಂಗ್ರೆಸ್ ಕಾರ್ಯಕರ್ತರನ್ನು ತಡೆಯುತ್ತಿದ್ದಂತೆ ಪ್ರವಾಸಿ ಮಂದಿರ ವೃತ್ತದಲ್ಲೇ ರಸ್ತೆ ತಡೆ ನಡೆಸುವ ಮೂಲಕ ಪ್ರತಿಭಟನೆ ನಡೆಸಿ, ಶಿಷ್ಟಾಚಾರ ಉಲ್ಲಂಘಿಸಿರುವ ಶಾಸಕರ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
‘ನಾನು ಶಾಸಕನಾಗಿದ್ದ ಅವಧಿಯಲ್ಲಿ ನೇಕಾರರ ಅನುಕೂಲಕ್ಕಾಗಿ ವಾಣಿಜ್ಯ ಮಳಿಗೆ ನಿರ್ಮಿಸಲು ಆಯಕಟ್ಟಿನ ಸ್ಥಳದಲ್ಲಿ 10 ಗುಂಟೆ ಜಮೀನನ್ನು ಅಂದಿನ ಜಿಲ್ಲಾಧಿಕಾರಿ ಕರೀಗೌಡ ಅವರು ಮೀಸಲಿರಿಸಿದ್ದರು. ಅಭಿವೃದ್ಧಿ ಕೆಲಸಗಳಿಗೆ ಸದಾ ನಮ್ಮ ಬೆಂಬಲ ಇದೆ. ಆದರೆ ಶಾಸಕರು ಶಿಷ್ಟಾಚಾರವನ್ನು ಉಲ್ಲಂಘಿಸಿ ಸರ್ವಾಧಿಕಾರಿಗಳಂತೆ ವರ್ತಿಸುತ್ತಿದ್ದಾರೆ’ ಎಂದು ಮಾಜಿ ಶಾಸಕ ಟಿ.ವೆಂಕಟರಮಣಯ್ಯ ದೂರಿದರು.
ದೊಡ್ಡಬಳ್ಳಾಪುರ ಯೋಜನಾ ಪ್ರಾಧಿಕಾರ ಅಧ್ಯಕ್ಷ ಜಿ.ಚುಂಚೇಗೌಡ, ಕೆಪಿಸಿಸಿ ಸದಸ್ಯ ಜಿ.ಲಕ್ಷ್ಮೀಪತಿ, ಗ್ರಾಮಾಂತರ ಬ್ಲಾಕ್ ಅಧ್ಯಕ್ಷ ಎಂ.ಬೈರೇಗೌಡ, ನಗರ ಬ್ಲಾಕ್ ಅಧ್ಯಕ್ಷ ಕೆ.ಪಿ.ಜಗನ್ನಾಥ್, ಕಾರ್ಯದರ್ಶಿ ಜವಾಜಿರಾಜೇಶ್, ಕಸಬಾ ಬ್ಲಾಕ್ ಅಧ್ಯಕ್ಷ ಅಪ್ಪಿವೆಂಕಟೇಶ್, ಕಾರ್ಯದರ್ಶಿ ಅಶೋಕ್, ಕಾಂಗ್ರೆಸ್ ಜಿಲ್ಲಾ ಯುವ ಘಟಕದ ಅಧ್ಯಕ್ಷ ಶರತ್‌ಪಟೇಲ್,ತಾಲ್ಲೂಕು ಯುವ ಘಟಕ ಅಧ್ಯಕ್ಷ ಪುನಿತ್‌ಗೌಡ, ಕಸಬಾ ಹೋಬಳಿ ಅಧ್ಯಕ್ಷ ಜಯಸಿಂಹ, ಕೆಂಪಣ್ಣ, ಅಂಜನಮೂರ್ತಿ, ಮುನಿರಾಜು, ಜನಪರಮಂಜು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.