
ದೊಡ್ಡಬಳ್ಳಾಪುರ: ತಾಲ್ಲೂಕಿನ ಚಿಗರೇನಹಳ್ಳಿ ಎಂ.ಎಸ್.ಜಿ.ಪಿ ಕಸ ವಿಲೇವಾರಿ ಘಟಕದತ್ತ ನಿಯಮ ಬಾಹಿರವಾಗಿ ಹೆಚ್ಚುವರಿ ಕಸ ತುಂಬಿಕೊಂಡು ಬರುತ್ತಿದ್ದ ಲಾರಿಗಳನ್ನು ಶಾಸಕ ಧೀರಜ್ ಮುನಿರಾಜು ಮಂಗಳವಾರ ತಡೆದು ಹಿಂದಕ್ಕೆ ಕಳುಹಿಸಿದ ಘಟನೆ ನಡೆದಿದೆ.
ದೊಡ್ಡಮಂಕಲಾಳ ಸಮೀಪ ಈ ತಪಾಸಣೆ ನಡೆಸಿದ ಶಾಸಕರು, ಲಾರಿಗಳ ಸಾಮರ್ಥ್ಯ ನವೀಕರಣ ಸೇರಿದಂತೆ ಹಲವು ನಿಯಮಗಳ ಉಲ್ಲಂಘನೆ ಕಂಡು ಬಂದ ಹಿನ್ನೆಲೆಯಲ್ಲಿ ಆರ್.ಟಿ.ಒ ಅಧಿಕಾರಿಗಳನ್ನು ಸ್ಥಳಕ್ಕೆ ಕರೆಸಿ ಪರಿಶೀಲನೆ ನಡೆಸಿ ದಂಡ ವಿಧಿಸುವಂತೆ ಸೂಚಿಸಿದರು.
ಸ್ಥಳದಲ್ಲಿ ಮಾತನಾಡಿದ ಶಾಸಕ ಧೀರಜ್ ಮುನಿರಾಜು, ಎಂ.ಎಸ್.ಜಿ.ಪಿ ಕಸ ವಿಲೇವಾರಿ ಘಟಕ ನಿಯಮಗಳನ್ನು ಮೀರಿ ಕಾರ್ಯನಿರ್ವಹಿಸುತ್ತಿರುವ ಕುರಿತು ಹಲವು ಬಾರಿ ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಕ್ರಮಕೈಗೊಂಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ಈ ಹಿನ್ನೆಲೆಯಲ್ಲಿ ಹೈಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ದೂರು (ಪಿಐಎಲ್) ದಾಖಲಿಸಿ ಕಾನೂನು ಹೋರಾಟ ಮುಂದುವರಿಸಲಾಗಿದೆ ಎಂದು ತಿಳಿಸಿದರು.
ಬೆಂಗಳೂರು ಸಮೀಪದ ಮಹದೇವಪುರದ ಕಸ ವಿಲೇವಾರಿ ಘಟಕದಲ್ಲಿ ಪ್ರತಿಭಟನೆ ನಡೆಯುತ್ತಿರುವ ಕಾರಣಕ್ಕೆ ಅಲ್ಲಿಗೆ ಹೋಗಬೇಕಿದ್ದ ಸುಮಾರು 400 ಲಾರಿಗಳನ್ನು ಹೆಚ್ಚುವರಿಯಾಗಿ ಇಲ್ಲಿಗೆ ಕಳುಹಿಸಲಾಗುತ್ತಿದೆ. ಇದು ಖಂಡನೀಯ ಮತ್ತು ಸಂಚುಪೂರ್ವಕವಾಗಿ ದೊಡ್ಡಬಳ್ಳಾಪುರವನ್ನು ಕಸದ ತಾಣವಾಗಿ ಮಾಡುವ ಪ್ರಯತ್ನವಾಗಿದೆ ಎಂದು ಶಾಸಕ ಆರೋಪಿಸಿದರು.
ಮತ್ತೆ ತಲೆಯೆತ್ತಿದ ಟೆರ್ರಾ ಫಾಂ ಕಳವಳ: ಈ ಹಿಂದೆ ಸ್ಥಳೀಯರ ತೀವ್ರ ಪ್ರತಿಭಟನೆಯಿಂದಾಗಿ ಮುಚ್ಚಲಾಗಿದ್ದ ಗುಂಡ್ಲಹಳ್ಳಿ ಟೆರ್ರಾ ಫಾಂ ಕಸ ವಿಲೇವಾರಿ ಘಟಕವನ್ನು ಮರು ಆರಂಭಿಸಲು ಸಿದ್ಧತೆ ನಡೆಯುತ್ತಿರುವ ಕುರಿತು ಈಗಾಗಲೇ ವಿಧಾನಸಭೆಯಲ್ಲಿ ಮುಖ್ಯಮಂತ್ರಿ ಗಮನಕ್ಕೆ ತಂದು ವಿರೋಧ ವ್ಯಕ್ತಪಡಿಸಲಾಗಿದೆ. ಯಾವುದೇ ಕಾರಣಕ್ಕೂ ಈ ಘಟಕವನ್ನು ಮರು ತೆರೆಯಲು ಬಿಡುವುದಿಲ್ಲ ಎಂದರು.
ಶಾಸಕರು ಮತ್ತು ಸ್ಥಳೀಯರು ಕಸದ ಲಾರಿಗಳನ್ನು ತಡೆದ ಪರಿಣಾಮ ನೂರಾರು ಲಾರಿಗಳು ರಸ್ತೆ ಬದಿಯಲ್ಲೇ ಸಾಲುಗಟ್ಟಿ ನಿಲ್ಲಬೇಕಾದ ಸ್ಥಿತಿ ನಿರ್ಮಾಣವಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.