
ದೇವನಹಳ್ಳಿ: ಗ್ರಾಮೀಣ ಪ್ರದೇಶಗಳ ಆಸ್ತಿ ದಾಖಲೆಗಳಿಗೆ ಪಾರದರ್ಶಕತೆ ತರುವ ಉದ್ದೇಶದಿಂದ ಸರ್ಕಾರ ಜಾರಿಗೆ ತಂದ ಇ–ಸ್ವತ್ತು 2.0 ತಂತ್ರಾಂಶ ತಾಂತ್ರಿಕ ದೋಷಗಳಿಂದ ಗ್ರಾಮೀಣ ಭಾಗದ ಸಾರ್ವಜನಿಕರಿಗೆ ಹೊಸ ಇ- ಖಾತೆ ಸಿಗುತ್ತಿಲ್ಲ.
ತಾಂತ್ರಿಕ ಅಡಚಣೆಯ ಕಾರಣ ಹೊಸ ಖಾತೆ ಹಾಗೂ ತಿದ್ದುಪಡಿ ಪ್ರಕ್ರಿಯೆ ವಿಳಂಬವಾಗುತ್ತಿದ್ದು, ಗ್ರಾಮೀಣ ಭಾಗದ ಆಸ್ತಿ ಮಾಲೀಕರಿಗೆ ತಲೆನೋವಾಗುತ್ತಿದೆ.
ಇ–ಸ್ವತ್ತು 1.0ರಲ್ಲಿ ಕಂಡುಬಂದ ತಾಂತ್ರಿಕ ಮಿತಿ ಸರಿಪಡಿಸುವ ಆಶಯದಿಂದ ಹೊಸ ಆವೃತ್ತಿ ಜಾರಿಗೆ ತರಲಾಗಿತ್ತು. ಆದರೆ ಆರಂಭ ಹಂತದಲ್ಲೇ ಸರ್ವರ್ ಡೌನ್, ಲಾಗಿನ್ ವಿಫಲತೆ, ದಾಖಲೆ ಅಪ್‌ಲೋಡ್ ಆಗದಿರುವುದು, ಅರ್ಜಿ ಸ್ಥಗಿತಗೊಳ್ಳುವುದು ಸೇರಿದಂತೆ ಹಲವು ದೋಷ ಕಾಣಿಸಿಕೊಂಡಿವೆ. ಇದರ ಪರಿಣಾಮ ಗ್ರಾಮ ಪಂಚಾಯಿತಿಗಳಲ್ಲಿ ದಿನನಿತ್ಯದ ಆಸ್ತಿ ಸಂಬಂಧಿತ ಸೇವೆಗಳು ಅಸ್ತವ್ಯಸ್ತಗೊಂಡಿವೆ.
ಗ್ರಾಮೀಣ ನಾಗರಿಕರು ಹೊಸ ಖಾತೆ ಪಡೆಯಲು, ಹಳೆಯ ಖಾತೆ ತಿದ್ದುಪಡಿ ಮಾಡಿಸಿಕೊಳ್ಳಲು ತಮ್ಮ ದೈನಂದಿನ ಕೆಲಸ ಬಿಟ್ಟು ಪಂಚಾಯಿತಿಗಳಿಗೆ ಅಲೆದಾಡುವಂತಾಗಿದೆ. ಕೆಲವೆಡೆ ದಿನಗಟ್ಟಲೆ ತಂತ್ರಾಂಶ ಕಾರ್ಯನಿರ್ವಹಿಸದ ಕಾರಣ ಅರ್ಜಿದಾರರು ನಿರಾಶೆಯಿಂದ ಮನೆಗೆ ಮರಳುವ ದೃಶ್ಯಗಳು ಸಾಮಾನ್ಯವಾಗಿವೆ.
ಬೇಜಾರ್ ಗ್ರಾಮಗಳಿಗೆ ಖಾತೆ ಇಲ್ಲವೇ?: ‘ತಾಲ್ಲೂಕಿನಲ್ಲಿ ಹಲವು ಬೇಜಾರ್ ಗ್ರಾಮಗಳು (ದಾಖಲೆಗಳಲ್ಲಿ ವಾಸವಿಲ್ಲದ ಗ್ರಾಮಗಳು) ಇವೆ. ಆ ಗ್ರಾಮಗಳಲ್ಲಿರುವ ನಿವೇಶನಗಳಿಗೆ ಇ–ಸ್ವತ್ತು ನೀಡಲು ಹೊಸ ತಂತ್ರಾಂಶದಲ್ಲಿ ಅವಕಾಶವೇ ಇಲ್ಲ. ಖಾತೆ ತಿದ್ದುಪಡಿ ಮಾಡಿಸಿಕೊಳ್ಳಲು ಮೂರು ಬಾರಿ ಅರ್ಜಿ ಸಲ್ಲಿಸಿದ್ದೇನೆ. ಪ್ರತಿಬಾರಿ ಹೊಸ ದೋಷ ತೋರಿಸುತ್ತಿದೆ. ಇದರಿಂದ ತೆರಿಗೆ ಪಾವತಿಯೂ ಆಗುತ್ತಿಲ್ಲ’ ಎಂದು ಸ್ಥಳೀಯ ಮುನಿಯಪ್ಪ ಆರೋಪಿಸುತ್ತಾರೆ.
ಪಂಚಾಯಿತಿ ಸಿಬ್ಬಂದಿಗೂ ಸಂಕಷ್ಟ: ಇ–ಸ್ವತ್ತು 2.0 ತಂತ್ರಾಂಶದ ದೋಷಗಳಿಂದ ಪಂಚಾಯಿತಿ ಸಿಬ್ಬಂದಿಗೂ ಕೆಲಸ ನಿರ್ವಹಿಸಲು ಅಡಚಣೆ ಎದುರಾಗಿದೆ. ‘ನಾವು ಅರ್ಜಿಗಳನ್ನು ಸ್ವೀಕರಿಸುತ್ತೇವೆ. ಆದರೆ ಸಿಸ್ಟಂ ಓಪನ್ ಆಗದೇ ಇದ್ದರೆ ಏನು ಮಾಡುವುದು? ಸಾರ್ವಜನಿಕರಿಗೆ ಕೋಪ ಬರುತ್ತದೆ’ ಎಂದು ಹೆಸರು ಹೇಳದ ಪಂಚಾಯಿತಿ ಸಿಬ್ಬಂದಿ ತಿಳಿಸಿದರು.
‘ಇ–ಸ್ವತ್ತು 2.0 ಹೊಸ ತಂತ್ರಾಂಶವಾಗಿರುವುದರಿಂದ ಆರಂಭಿಕ ಹಂತದಲ್ಲಿ ಕೆಲ ತಾಂತ್ರಿಕ ಸಮಸ್ಯೆಗಳು ಕಾಣಿಸುತ್ತಿವೆ. ದೋಷಗಳನ್ನು ಹಂತ ಹಂತವಾಗಿ ಸರಿಪಡಿಸಲಾಗುತ್ತಿದ್ದು, ಶೀಘ್ರದಲ್ಲೇ ವ್ಯವಸ್ಥೆ ಸುಗಮವಾಗಿ ಕಾರ್ಯನಿರ್ವಹಿಸುತ್ತದೆ’ ಎಂದು ಜಿಲ್ಲಾ ಪಂಚಾಯಿತಿಯ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.
ಇ–ಸ್ವತ್ತು ವ್ಯವಸ್ಥೆ ಸರಿಯಾಗಿ ಜಾರಿಯಾದಲ್ಲಿ ಗ್ರಾಮೀಣ ಪ್ರದೇಶಗಳಲ್ಲಿ ಆಸ್ತಿ ದಾಖಲೆಗಳಲ್ಲಿ ಪಾರದರ್ಶಕತೆ ಹೆಚ್ಚಾಗಿ ಜನರಿಗೆ ಅನುಕೂಲವಾಗಲಿದೆ ಎಂಬ ನಿರೀಕ್ಷೆ ಇದೆ. ಆದರೆ, ತಾಂತ್ರಿಕ ದೋಷಗಳು ಶೀಘ್ರ ಸರಿಪಡಿಸದಿದ್ದರೆ, ಗ್ರಾಮೀಣ ಜನರ ಅಸಮಾಧಾನ ಮತ್ತಷ್ಟು ತೀವ್ರಗೊಳ್ಳುವ ಸಾಧ್ಯತೆ ಇದೆ.
ನಾವು ಕೆಲಸ ಬಿಟ್ಟು ಪಂಚಾಯಿತಿಗೆ ಬರುತ್ತೇವೆ. ಆದರೆ ತಂತ್ರಾಂಶ ಕೆಲಸ ಮಾಡುತ್ತಿಲ್ಲ ಎಂದು ಹೇಳಿ ವಾಪಸ್ ಕಳುಹಿಸುತ್ತಾರೆ. ತಿಂಗಳಾದರೂ ಖಾತೆ ಸಿಕ್ಕಿಲ್ಲಮಧುಸೂದನ್ ಅರ್ಜಿದಾರ
ಸಮಸ್ಯೆ ಪರಿಹಾರಕ್ಕೆ ಸಹಾಯವಾಣಿ ಇ–ಸ್ವತ್ತು 2.0 ಸಂಬಂಧಿತ ಸಮಸ್ಯೆಗಳಿಗೆ ಪರಿಹಾರ ಒದಗಿಸಲು ದೇವನಹಳ್ಳಿ ತಾಲ್ಲೂಕು ಪಂಚಾಯಿತಿಯಲ್ಲಿ ಸಹಾಯವಾಣಿ ಆರಂಭಿಸಲಾಗಿದೆ. ಕುಂದಾಣ ಚನ್ನರಾಯಪಟ್ಟಣ ಕಸಬಾ ಮತ್ತು ವಿಜಯಪುರ ಹೋಬಳಿಯ ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯ ಸಾರ್ವಜನಿಕರು ತಾಂತ್ರಿಕ ಸಮಸ್ಯೆಗಳ ಕುರಿತು ಮಾಹಿತಿ ಪಡೆಯಲು ವಿದ್ಯಾ ಮೊ. 9972911656 ಪಿಡಿಒ ಪ್ರಕಾಶ್ ಮೊ.6363288040 ಅನ್ನು ಸಂಪರ್ಕಿಸಬಹುದುಸಿ.ಎಸ್. ಶ್ರೀನಾಥ್‌ಗೌಡ ಇ.ಒ ದೇವನಹಳ್ಳಿ ತಾಲ್ಲೂಕು ಪಂಚಾಯಿತಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.