ದೊಡ್ಡಬಳ್ಳಾಪುರ: ಮುತ್ತೂರಿನಲ್ಲಿ ಶುಕ್ರವಾರ ಸಂಜೆ ಗಣೇಶ ವಿಸರ್ಜನೆ ವೇಳೆ ನಡೆದ ಪಟಾಕಿ ಸ್ಫೋಟದಲ್ಲಿ ಬಾಲಕ ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಗಣೇಶ ಪ್ರತಿಷ್ಠಾಪಿಸಿದ್ದ ಮೂವರನ್ನು ಬಂಧಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಗಣೇಶೋತ್ಸವ ಆಯೋಜಕರಾದ ಮಾರುತಿ, ಕಿಶೋರ್ ಹಾಗೂ ಮಂಜುನಾಥ್ ಬಂಧಿತರು.
ಸಾರ್ವಜನಿಕ ಗಣೇಶ ಪ್ರತಿಷ್ಠಾಪನೆಗೂ ಮುನ್ನ ಅನುಮತಿ ಪಡೆಯುವುದು ಕಡ್ಡಾಯ. ಗಣೇಶ ಪ್ರತಿಷ್ಠಾಪನೆ, ವಿಸರ್ಜನೆ ಸೇರಿದಂತೆ ಯಾವುದೇ ಹಂತದಲ್ಲೂ ಗಲಾಟೆ, ಅವಘಡ ನಡೆದರೆ ತಾವೇ ಜವಾಬ್ದಾರಿ ಎಂದು ಅನುಮತಿ ನೀಡುವ ವೇಳೆ ಸಂಘಟಕರಿಂದ ಮುಚ್ಚಳಿಕೆ ಪತ್ರ ಬರೆಸಿಕೊಳ್ಳಲಾಗಿತ್ತು. ಅದರ ಆಧಾರದ ಮೇಲೆಯೇ ಸಂಘಟಕರನ್ನು ಬಂಧಿಸಲಾಗಿದೆ ಎಂದು ನಗರ ಪೊಲೀಸ್ ಠಾಣೆ ಇನ್‌ಸ್ಪೆಕ್ಟರ್ ಅಮರೇಶ್‌ಗೌಡ ತಿಳಿಸಿದ್ದಾರೆ.
ಇಬ್ಬರೂ ಮಕ್ಕಳನ್ನು ಕಳೆದುಕೊಂಡ ಕುಟುಂಬ:
ಮೂತ್ತೂರಿನಲ್ಲಿ ಶುಕ್ರವಾರ ಸಂಜೆ ನಡೆದ ಪಟಾಕಿ ಸ್ಫೋಟದಲ್ಲಿ ಮೃತಪಟ್ಟ ಧನುಷ್ ರಾವ್(15) ಕುಟುಂಬದಲ್ಲಿ ಇದು ಎರಡನೇ ಸಾವು.
ಮುತ್ತೂರಿನ ಶ್ರೀನಿವಾಸರಾವ್, ವೆಂಕೂಬಾಯಿ ದಂಪತಿ ಮೊದಲ ಮಗ ಗಗನ್ ವರ್ಷದ ಹಿಂದೆಯಷ್ಟೇ ಕೆರೆಯಲ್ಲಿ ಈಜಲು ಹೋಗಿ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದ. ಈಗ ಎರಡನೇ ಮಗ ಗಣೇಶ ವಿಸರ್ಜನೆ ವೇಳೆ ನಡೆದ ಪಟಾಕಿ ಸ್ಫೋಟದಲ್ಲಿ ಮೃತಪಟ್ಟಿದ್ದಾನೆ. ಕುಟುಂಬಕ್ಕೆ ಆಧಾರವಾಗಬೇಕಿದ್ದ ಇಬ್ಬರು ಮಕ್ಕಳನ್ನು ಪೋಷಕರು ಕಳೆದುಕೊಂಡಿದ್ದಾರೆ.
ಮೃತ ಧನುಷ್ ತಂದೆ ಶ್ರೀನಿವಾಸರಾವ್ ಕೂಲಿ ಕೆಲಸ ಮಾಡುತ್ತಾರೆ. ತಾಯಿ ವೆಂಕೂಬಾಯಿ ಗಾರ್ಮೆಂಟ್ಸ್‌ನಲ್ಲಿ ದುಡಿದು ಮಕ್ಕಳನ್ನು ಬೆಳೆಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.