
ದೊಡ್ಡಬಳ್ಳಾಪುರ: ತಾಲ್ಲೂಕಿ ನಾರಸಿಂಹನಹಳ್ಳಿ ರೈತ ಬಿ.ಶ್ರೀಕಾಂತ್ ಪುಷ್ಪ ಕೃಷಿ ಮೆಚ್ಚಿಕೊಂಡಿರುವ ಹಾಲೆಂಡ್ ಹೂ ತಳಿ ಸಂಧೋಕರು ಶ್ರೀಕಾಂತ್ ಮಗಳು ಮೋಕ್ಷಶ್ರೀ ಹೆಸರಲ್ಲಿ ಹೊಸ ಹೂವಿನ ತಳಿಯೊಂದನ್ನು ಅಭಿವೃದ್ಧಿಪಡಿಸಿದ್ದಾರೆ.
ನಾಲ್ಕು ವರ್ಷಗಳ ಹಿಂದೆ ಹಾಲೆಂಡ್ ತಳಿ ಸಂಧೋಕರು ಅಭಿವೃದ್ಧಿಪಡಿಸಿರುವ ಈ ಹೂವನ್ನು ಭಾರತ ಸೇರಿದಂತೆ ಪ್ರಪಂಚದ ವಿವಿಧ ಭಾಗಗಳಲ್ಲಿ ಬೆಳೆಯಲಾಗುತ್ತಿದೆ.
ನಾರಸಿಂಹನಹಳ್ಳಿ ಸಮೀಪ 52 ಎಕರೆ ಜಮೀನಿನ ಹಸಿರು ಮನೆಯಲ್ಲಿ ಡೆಲ್ಫಿನಿಯಂ, ಸೆಲ್ಸಿಯಾ (ವೂಲ್ ಫ್ಲವರ್), ಗುಲಾಬಿ ಹೋಲುವ ಇಕೊಸ್ಟೋಮಾ, ಸೇರಿದಂತೆ 15 ಬಗೆಯ ವಿದೇಶಿ ತಳಿಯ ಹೂವುಗಳನ್ನು ಶ್ರೀಕಾಂತ್ ಬೆಳೆದಿದ್ದಾರೆ. ಈ ಹೂವುಗಳು ಹಾಲೆಂಡ್, ಪೊಲೆಂಡ್, ಜಪಾನ್, ಆಸ್ಟ್ರೇಲಿಯಾ, ನೆದರ್‌ಲ್ಯಾಂಡ್ಸ್, ಕೊಲೊಂಬಿಯಾದಂತಹ ರಾಷ್ಟ್ರಗಳ ಹವಾಮಾನದಲ್ಲಿ ಮಾತ್ರ ಬೆಳೆಯುತ್ತವೆ.
ಬೆಂಗಳೂರಿನ ಗಾಂಧಿ ಕೃಷಿ ವಿಶ್ವ ವಿದ್ಯಾಲಯದ ವಿದ್ಯಾರ್ಥಿಗಳು, ದೇಶ, ವಿದೇಶಗಳ ರೈತರು, ಹೂವಿನ ತಳಿ ಸಂಶೋಧನ ಸಂಸ್ಥೆಗಳ ಸಂಶೋಧನಾ ವಿದ್ಯಾರ್ಥಿಗಳು ತೋಟಕ್ಕೆ ಭೇಟಿ ನೀಡುತ್ತಾರೆ.
ಈ ತೋಟದಲ್ಲಿ ಬೆಳೆಯುವ ಹೂವು ದೇಶ, ವಿದೇಶಗಳಿಗೆ ರಫ್ತಾಗುತ್ತಿವೆ. ತಾರಾ ಹೋಟೆಲ್‌ಗಳಲ್ಲಿ ಅಲಂಕಾರಕ್ಕೆ ಇಲ್ಲಿಯ ಹೂವುಗಳು ಬಳಕೆಯಾಗುತ್ತಿವೆ.
ದೊಡ್ಡಬಳ್ಳಾಪುರ ತಾಲ್ಲೂಕಿನಲ್ಲಿ 52 ಎಕರೆ ಹಾಗೂ ಗೌರಿಬಿದನೂರು ತಾಲ್ಲೂಕಿನಲ್ಲಿ 25 ಎಕರೆ ಪ್ರದೇಶದಲ್ಲಿನ ಹೂವಿನ ತೋಟಗಳಿಂದ ಸುಮಾರು 300 ಜನರಿಗೆ ನೇರ ಉದ್ಯೋಗ ದೊರೆತಿದೆ. ಪರೋಕ್ಷವಾಗಿ ಹಲವಾರು ಮಂದಿಗೆ ಉದ್ಯೋಗ ದೊರೆತಿದೆ ಎನ್ನುತ್ತಾರೆ ಶ್ರೀಕಾಂತ್.
ಶ್ರೀಕಾಂತ್ ಮೂಲತಃ ಆಂಧ್ರಪ್ರದೇಶ ಬೊಲ್ಲೆಪಲ್ಲಿ ಗ್ರಾಮದವರು. ಆದರೆ ಪುಷ್ಪಕೃಷಿ ಸಲುವಾಗಿ 32 ವರ್ಷಗಳ ಹಿಂದೆ ಬೆಂಗಳೂರಿನ ಹೆಬ್ಬಾಳಕ್ಕೆ ಬಂದು ನೆಲೆಸಿದರು. ಹೂವು ಬೆಳೆಗೆ ಉತ್ತಮ ಹವಾಮಾನ, ಮಣ್ಣು ಹಾಗೂ ವಿಮಾನ ನಿಲ್ದಾಣಕ್ಕೆ ಸಮೀಪ ಎನ್ನುವುದು ಸೇರಿದಂತೆ ಹಲವಾರು ಕಾರಣದಿಂದ ದೊಡ್ಡಬಳ್ಳಾಪುರ ತಾಲ್ಲೂಕಿನ ನಾರಸಿಂಹನಹಳ್ಳಿಯಲ್ಲಿ ಹೂವಿನ ಕೃಷಿಯಲ್ಲಿ ತೊಡಗಿಸಿಕೊಂಡಿದ್ದಾರೆ.
ಬೆಂಗಳೂರಿನ ಹೆಬ್ಬಾಳದಲ್ಲಿನ ಅಂತರರಾಷ್ಟ್ರೀಯ ಹೂವು ಹರಾಜು ಮಾರುಕಟ್ಟೆ ಸಮಿತಿಯ ನಿರ್ದೇಶಕರೂ ಆಗಿದ್ದಾರೆ. ಬೆಂಗಳೂರು ಗಾಂಧಿ ಕೃಷಿ ವಿಶ್ವವಿದ್ಯಾಲಯದಲ್ಲಿ ಆರಂಭವಾಗಿರುವ ಕೃಷಿ ಮೇಳದಲ್ಲಿ ಜಿಲ್ಲಾ ಮಟ್ಟದ ಪ್ರಗತಿಪರ ಕೃಷಿಕ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
‘ಆರು ವರ್ಷದ ಹಿಂದೆ ₹2 ಕೋಟಿ ವೆಚ್ಚದಲ್ಲಿ ವಿದೇಶಿ ಹೂವಿನ ಸಸಿ ತರಿಸಿಕೊಂಡು ಬೆಳೆಯಲು ಆರಂಭಿಸಿದೆ. ಮೊದಲಿಗೆ ನಷ್ಟವಾದರೂ ಪ್ರಯತ್ನ ಬಿಡಲಿಲ್ಲ. ವಿವಿಧ ತೋಟಗಳಿಗೆ ಹೋಗಿ ಹೂವು ಬೆಳೆಯುವ ವಿಧಾನ ಅಧ್ಯಯನ ಮಾಡಿ ಯಶಸ್ವಿಯಾದೆ. ಈಗ ವಿದೇಶಿಯರು ನನ್ನ ತೊಟದ ಹೂವುಗಳನ್ನು ನೋಡಿ ಅಚ್ಚರಿಪಡುವಂತಾಗಿದೆ’ ಎಂದು ಅನುಭವ ಹಂಚಿಕೊಂಡರು.
ಮಾರುಕಟ್ಟೆಯಲ್ಲಿ ಬೆಲೆ ಇದೆ ಎಂದು ಹೂವು ಬೆಳೆಯಲು ಹೋದರೆ ನಷ್ಟ ಗ್ಯಾರಂಟಿ. ನಿರಂತರವಾಗಿ ಹೂವು ಬೆಳೆಯುತ್ತಿದ್ದರೆ ಮಾತ್ರ ಲಾಭಗಳಿಸಲು ಸಾಧ್ಯ. ಸರ್ಕಾರ ಸಹ ಹೂವು ಬೆಳೆಗಾರರ ಸಹಾಯಕ್ಕೆ ನಿಲ್ಲಬೇಕಿದೆ. ವಿದೇಶಗಳಲ್ಲಿ ಯಾವುದೇ ಸಭೆ, ಸಮಾರಂಭ ನಡೆದರೂ ರೈತರಿಂದ ಹೂವು ಖರೀಸಲಾಗುತ್ತದೆ. ಹೋಟೆಲ್‌ಗಳಲ್ಲಿ ಅಲಂಕಾರಕ್ಕೆ ಪ್ಲಾಸ್ಟಿಕ್ ಹೂವು ಬಳಸುವುದಿಲ್ಲ. ಈ ನೀತಿ ನಮ್ಮ ದೇಶದಲ್ಲೂ ಜಾರಿಯಾಗಬೇಕು. ಇದರಿಂದ ಹೂವು ಬಳಕೆ ಹೆಚ್ಚಾಗಿ ರೈತರಿಗೂ ಉತ್ತಮ ಬೆಲೆ ದೊರೆಯುತ್ತದೆ. ಜೊತೆಗೆ ಹತ್ತಾರು ಜನರಿಗೆ ಸ್ಥಳೀಯವಾಗಿಯೇ ಉದ್ಯೋಗ ದೊರೆಯುತ್ತದೆ. ಇದಕ್ಕೆ ಸರ್ಕಾರ ಹೆಚ್ಚುವರಿಯಾಗಿ ಯಾವುದೇ ಬಂಡವಾಳ ಹೂಡದೆ ಉದ್ಯೋಗ ದೊರೆಯುವಂತೆ ಮಾಡಬಹುದು ಎನ್ನುತ್ತಾರೆ ಶ್ರೀಕಾಂತ್.
ವಿದೇಶಕ್ಕೆ ರಫ್ತು ಕನಸು
ನಮ್ಮ ದೇಶದ ಅದ್ಭುತ ಹವಾಮಾನದಲ್ಲಿ ಯೂರೋಪ್ ದೇಶಗಳನ್ನು ಮೀರಿಸುವಂತಹ ವಿದೇಶಿ ತಳಿಯ ಹೂವುಗಳನ್ನು ಬೆಳೆಯಬಹುದು. ಭಾರತದ ರೈತರು ಹೂವು ಬೆಳೆಯಲ್ಲಿ ಸ್ವಾವಲಂಬಿಯಾಗಬೇಕು ಹಾಗೂ ರಫ್ತು ಮಾಡುವ ಹಂತಕ್ಕೆ ಬೆಳೆಯಬೇಕು ಎನ್ನುವುದೇ ನನ್ನ ಕನಸು. ಇದಕ್ಕಾಗಿ ನಮ್ಮ ತೋಟಕ್ಕೆ ಯಾವುದೇ ಸಂದರ್ಭದಲ್ಲಿ ರೈತರು, ಕೃಷಿ ವಿದ್ಯಾರ್ಥಿಗಳು ಬಂದರೆ ಅನುಭವಗಳನ್ನು ಮುಕ್ತವಾಗಿ ಹಂಚಿಕೊಳ್ಳುತ್ತೇನೆ.ಬಿ.ಶ್ರೀಕಾಂತ್, ಹೂವು ಬೆಳೆಗಾರ
ನೋಡುಗರ ಅಚ್ಚರಿ
ನಮ್ಮೂರಿನ ಸಮೀಪ 2010ರಲ್ಲಿ ಶ್ರೀಕಾಂತ್ ಹೂವು ಬೆಳೆಯಲು ಪ್ರಾರಂಭಿಸಿದರು. ಇಂದು ದೇಶ, ವಿದೇಶದ ನೂರಾರು ಜನ ಬಂದು ನೋಡಿ ಅಚ್ಚರಿ ಪಡುವಂತಹ ಹೂವುಗಳು ಇಲ್ಲಿ ಬೆಳೆದಿದ್ದಾರೆ. ಈ ಹೂವಿನ ತೋಟಕ್ಕೆ ಹೋಗಿ ನೋಡಲು ಯಾವುದೇ ಅನುಮತಿ ಬೇಕಿಲ್ಲ. ಇವರ ತೋಟಕ್ಕೆ ಗೇಟ್ ಇಲ್ಲಓಂ ಪ್ರಕಾಶ್,ಸ್ಥಳೀಯ ರೈತ, ಕಾರನಾಳ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.