ADVERTISEMENT

ಆನೇಕಲ್ | ಚರಂಡಿಯಂತಾದ ಜೀವನಾಡಿ: ಹೊಸಹಳ್ಳಿ ಕೆರೆ ಅಸ್ತಿತ್ವಕ್ಕೆ ಕುತ್ತು

​ಪ್ರಜಾವಾಣಿ ವಾರ್ತೆ
Published 15 ಜುಲೈ 2024, 4:40 IST
Last Updated 15 ಜುಲೈ 2024, 4:40 IST
ಆನೇಕಲ್‌ ತಾಲ್ಲೂಕಿನ ಹೊಸಹಳ್ಳಿ ಕೆರೆಯ ನೋಟ
ಆನೇಕಲ್‌ ತಾಲ್ಲೂಕಿನ ಹೊಸಹಳ್ಳಿ ಕೆರೆಯ ನೋಟ   

ಆನೇಕಲ್: ಹೆನ್ನಾಗರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎಚ್‌.ಹೊಸಹಳ್ಳಿ ಗ್ರಾಮದ ಕೆರೆ ಒಡಲಿಗೆ ಕೈಗಾರಿಕೆಗಳ ಕಲುಷಿತ ನೀರು ಸೇರುತ್ತಿದ್ದು, ಗಬ್ಬು ನಾರುತ್ತಿದೆ. ಈ ಮೂಲಕ ಕೆರೆ ಅಸ್ತಿತ್ವಕ್ಕೆ ಕುತ್ತು ಬಂದಿದೆ.

ಹೊಸಹಳ್ಳಿ ಕೆರೆಯು ಸುಮಾರು 25 ಎಕರೆಗೂ ಹೆಚ್ಚು ವಿಸ್ತಿರ್ಣದಲ್ಲಿ ವ್ಯಾಪಿಸಿದೆ. ಈ ಕೆರೆಯು ಕಾಚನಾಯಕನಹಳ್ಳಿ, ಹೊಸಹಳ್ಳಿ, ಶ್ರೀರಾಂಪುರ, ಯಾರಂಡಹಳ್ಳಿ ಗ್ರಾಮಗಳ ನೂರಾರು ಎಕರೆ ಜಮೀನಿಗೆ ನೀರಿನ ಆಸರೆಯಾಗಿತ್ತು. ಆದರೆ ಕಲುಷಿತ ನೀರು ಸೇರಿ ಕೆರೆ ನೀರಿನ ಬಣ್ಣವೇ ಬದಲಾಗಿದೆ. ಕೆರೆಯ ನೀರು ಚರಂಡಿಯ ನೀರಿನಂತಿದೆ. ಮೂಗು ಮುಚ್ಚಿಕೊಂಡು ಓಡಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.

ಪಕ್ಕದಲ್ಲಿಯೇ ಬಡಾವಣೆಗಳಿವೆ ಎತ್ತರದ ಅಪಾರ್ಟ್‌ಮೆಂಟ್‌ಗಳು ನಿರ್ಮಣವಾಗಿವೆ. ಇಲ್ಲಿಯ ಪರಿಸರಕ್ಕೆ ಸುಂದರ ತಾಣವಾಗಬೇಕಾಗಿದ್ದ ಕೆರೆ ಮಾಲಿನ್ಯದಿಂದಾಗಿ ಕಪ್ಪುಚುಕ್ಕೆಯಂತಿದೆ.

ADVERTISEMENT

ಕೆರೆಗೆ ಹೊಂದಿಕೊಂಡಂತೆ ಹಲವಾರು ಅಪಾರ್ಟ್‌ಮೆಂಟ್‌ಗಳಿವೆ, ಕೈಗಾರಿಕ ಪ್ರದೇಶ ಸಮೀಪದಲ್ಲಿದೆ. ಇದರಿಂದಾಗಿ ತ್ಯಾಜ್ಯ ನೀರು ಕೆರೆಗೆ ಹರಿಯುತ್ತಿದೆ. ಕೆರೆಗೆ ತ್ಯಾಜ್ಯ ನೀರು ಬಿಡುತ್ತಿರುವುದರಿಂದ ಕೆಟ್ಟ ವಾಸನೆ ಬರುತ್ತಿದೆ.

ಹೊಸಹಳ್ಳಿ ಕೆರೆಗೆ ಕಾರ್ಖಾನೆಗಳ ತ್ಯಾಜ್ಯ ನೀರು, ಸುತ್ತಮುತ್ತಲ ಬಡಾವಣೆಗಳ ಒಳಚರಂಡಿ ನೀರು ಶುದ್ಧೀಕರಣ ಮಾಡದೇ ಕೆರೆಗೆ ಹರಿಸುತ್ತಿರುವುದರಿಂದ ಕೆರೆ ಕಲುಷಿತಗೊಂಡಿದೆ.

ಕೆರೆಯಲ್ಲಿನ ಗಿಡ ಮರಗಳು ಒಣಗಿ ಹೋಗಿರುವುದು ಕೆರೆಯಲ್ಲಿ ವಿಷಯುಕ್ತ ಅಂಶ ಇರುವುದಕ್ಕೆ ಕನ್ನಡಿಯಂತಿದೆ. ಸುತ್ತಮುತ್ತಲಿನ ಪ್ರದೇಶದ ಅಂತರ್ಜಲ ಕಲುಷಿತವಾಗಿವೆ.

ಮನೆಗಳಲ್ಲಿ ಸೊಳ್ಳೆಗಳು ಹೆಚ್ಚಾಗಿವೆ. ಶುದ್ಧ ಗಾಳಿಯಿಲ್ಲದೇ ದುರ್ವಾಸನೆ ಬೀರುತ್ತಿದೆ. ಹಾಗಾಗಿ ಕೆರೆಯನ್ನು ಉಳಿಸಬೇಕು ಎಂಬುದು ಗ್ರಾಮಸ್ಥರ ಒತ್ತಾಸೆಯಾಗಿದೆ.

ಹೊಸಹಳ್ಳಿಯ ಕೆರೆಯು ತನ್ನ ಅಸ್ತಿತ್ವವನ್ನೇ ಕಳೆದುಕೊಂಡಿದೆ. ಕೆರೆ ಇದ್ದು ಇಲ್ಲದಂತಾಗಿದೆ. ಸದಾ ಕೆರೆ ತುಂಬಿದ್ದರೂ ಈ ನೀರು ಯಾವುದೇ ಉಪಯೋಗಕ್ಕೂ ಬರುವುದಿಲ್ಲ. ಕೆರೆಯ ಬಳಿ ಹೋಗಲು, ಕೆರೆಯ ನೀರನ್ನು ಮುಟ್ಟಲು ಭಯ ಪಡುವಂತಹ ಪರಿಸ್ಥಿತಿಯಿದೆ. ಕೆರೆಯ ನೀರನ್ನು ಮುಟ್ಟಿದರೆ ಕೆರೆತ ಶುರುವಾಗುತ್ತದೆ. ದನ ಕರುಗಳು ಸಹ ಈ ಕೆರೆಯ ನೀರನ್ನು ಕುಡಿಯಲು ಬಿಡುವುದಿಲ್ಲ ಎಂದು ಗ್ರಾಮಸ್ಥರು ಹೇಳಿದರು.

ಹೆನ್ನಾಗರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ವಿವಿಧ ಕೆರೆಗಳು ಕೈಗಾರಿಕೆಗಳ ತ್ಯಾಜ್ಯದಿಂದ ಹಾಳಾಗುತ್ತಿದ್ದು ಗಬ್ಬು ನಾರುವಂತಾಗಿದೆ. ಹೆನ್ನಾಗರ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಆರು ಕೆರೆಗಳಿದ್ದು ಈ ಪೈಕಿ ಹೆನ್ನಾಗರ, ಹೊಸಹಳ್ಳ, ಯಾರಂಡಹಳ್ಳಿ ಕೆರೆಗಳಿಗೆ ಕೈಗಾರಿಕೆಗಳ ತ್ಯಾಜ್ಯ ನೀರು ಹರಿಯುತ್ತಿರುವುದರಿಂದ ಕೆರೆಗಳು ಹಾಳಾಗುತ್ತಿವೆ.

ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಮಾಸ್ತೇನಹಳ್ಳಿ, ರಾಮಕೃಷ್ಣಾಪುರ, ಯಾಡಂಹಳ್ಳಿ, ಹಿನ್ನಕ್ಕಿ, ಹೊಸಹಳ್ಳಿ ಕೆರೆ ಸೇರಿದಂತೆ ಐದು ಕೆರೆಗಳು ಗ್ರಾಮ ಪಂಚಾಯಿತಿ ಸುಪರ್ದಿಯಲ್ಲಿವೆ. ಹೆನ್ನಾಗರ ಕೆರೆ ಸಣ್ಣ ನೀರಾವರಿ ಇಲಾಖೆಯ ವ್ಯಾಪ್ತಿಗೆ ಒಳಪಟ್ಟಿದೆ. ಯಾಡಂಹಳ್ಳಿ ಕೆರೆಯಲ್ಲಿ ಖಾಸಗಿ ಕಂಪನಿಯೊಂದರ ಸಿಎಸ್‌ಆರ್‌ ಅನುದಾನದ ಮೂಲಕ ಅಭಿವೃದ್ಧಿ ಪಡಿಸಿದ್ದು ಉಳಿದ ಕೆರೆಗಳ ಅಭಿವೃದ್ಧಿಗೆ ಕ್ರಮ ವಹಿಸಲಾಗುವು ಎಂದು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಸಿದ್ದರಾಜು ತಿಳಿಸಿದರು.

ಹೊಸಹಳ್ಳಿ ಕೆರೆಯ ಪಕ್ಕದಲ್ಲಿಯೇ ಬಿದ್ದಿರುವ ಕಸದ ರಾಶಿ
ರಾಜಕಾಲುವೆಗಳನ್ನು ತ್ಯಾಜ್ಯ ನೀರು ಹರಿಯುತ್ತಿರುವುದು
ಹೊಸಹಳ್ಳಿ ಕೆರೆ ಕಲುಷಿತವಾಗಿದ್ದು ಗಬ್ಬುನಾರುತ್ತಿರುವುದರಿಂದ ಹೊಸಹಳ್ಳಿ ಕೆರೆಯ ಏರಿಯ ಮೇಲೆ ಓಡಾಡಲು ಸಾಧ್ಯವಾಗುತ್ತಿಲ್ಲ. ಈ ಬಗ್ಗೆ ಸಂಬಂಧಿಸಿದ ಅಧಿಕಾರಿಗಲು ಶೀಘ್ರ ಕ್ರಮ ವಹಿಸಬೇಕು
ದಿಲೀಪ್‌ ಹೆನ್ನಾಗರ ನಿವಾಸಿ
ಹೊಸಹಳ್ಳಿ ಕೆರೆಗೆ ವಿವಿಧ ಕಾರ್ಖಾನೆಗಳು ಮತ್ತು ಅಪಾರ್ಟ್‌ಮೆಂಟ್‌ಗಳಿಂದ ತ್ಯಾಜ್ಯ ನೀರು ಹರಿಯುತ್ತಿದೆ. ಈ ಸಂಬಂಧ ಪಂಚಾಯಿತಿಯಿಂದ ತ್ಯಾಜ್ಯ ನೀರು ಹರಿಸುತ್ತಿರುವ ಕಾರ್ಖಾನೆಗಳಿಗೆ ನೊಟೀಸ್‌ ನೀಡಲಾಗಿದೆ
ಸಿದ್ದರಾಜು ಪಿಡಿಓ
ಕೆರೆ ಅಂಗಳದಲ್ಲಿ ತ್ಯಾಜ್ಯ
ಹಾಳಾಗಿರುವ ಕೆರೆಯ ಅಂದವನ್ನು ಮತ್ತಷ್ಟು ಹಾಳು ಮಾಡಲು ಕಾದಿರುವ ಜನರು ಸುತ್ತಮುತ್ತಲಿನ ಕಸವನ್ನು ತಂದು ಕೆರೆಯ ಏರಿಯ ಮೇಲೆ ಹಾಕುತ್ತಿದ್ದಾರೆ. ಕಟ್ಟಡ ತ್ಯಾಜ್ಯವನ್ನು ಕೆರೆಯ ಅಂಗಳದಲ್ಲಿ ಎಸೆಯಲಾಗುತ್ತಿದೆ. ಇದರಿಂದಾಗಿ ಕೆರೆಯು ಸಂಪೂರ್ಣ ಮಾಲಿನ್ಯಗೊಂಡಿದ್ದು ಜನರಿಗೆ ಶಾಪವಾಗಿದೆ. ರಾಜಕಾಲುವೆಗಳಲ್ಲಿ ಮಳೆಯ ನೀರು ಹರಿಯುವ ಬದಲಿಗೆ ಚರಂಡಿ ನೀರು ಹರಿಯುತ್ತಿದೆ. ಈ ಚರಂಡಿ ನೀರು ಕೆರೆ ಸೇರುತ್ತಿದ್ದು ಕೆರೆ ತುಂಬುತ್ತಿದೆ. ಆದರೆ ತುಂಬಿದ ಕೆರೆಯಿಂದ ಜನರಿಗಾಗಲಿ ಪರಿಸರಕ್ಕಾಗಲಿ ಯಾವುದೇ ಉಪಯೋಗವಿಲ್ಲ. ಬದಲಿಗೆ ಜನರು ಪರಿತಪಿಸುವಂತಾಗಿದೆ. ಕೆರೆಯನ್ನು ಶುದ್ಧೀಕರಿಸಿ ಹಳೆಯ ಗತ ವೈಭವವನ್ನು ಮರಳಿ ಪಡೆಯಲಾಗುವುದೇ ಎಂದು ಜನರು ಚಾತಕ ಪಕ್ಷಿಗಳಂತೆ ಕಾದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.