ADVERTISEMENT

ಹೊಸಕೋಟೆ: ದೂರದೃಷ್ಟಿ ಇಲ್ಲದೆ ಬೆಳವಣಿಗೆಗೆ ಬೇಕು ಅಭಿವೃದ್ಧಿ ನೀಲನಕ್ಷೆ

ಹೊಸಕೋಟೆಯನ್ನು ನುಂಗುತ್ತಿರುವ ಬೆಂಗಳೂರು ನಗರೀಕರಣ; ಅಭಿವೃದ್ಧಿ ಮರೀಚಿಕೆ

​ಪ್ರಜಾವಾಣಿ ವಾರ್ತೆ
Published 3 ಫೆಬ್ರುವರಿ 2026, 4:28 IST
Last Updated 3 ಫೆಬ್ರುವರಿ 2026, 4:28 IST
ಹೊಸಕೋಟೆ ಕೆಇಬಿ ಸರ್ಕಲ್ ಬಳಿಯ ರಸ್ತೆ ಸ್ಥಿತಿ
ಹೊಸಕೋಟೆ ಕೆಇಬಿ ಸರ್ಕಲ್ ಬಳಿಯ ರಸ್ತೆ ಸ್ಥಿತಿ   

ಹೊಸಕೋಟೆ: ನಗರ ಮತ್ತು ಗ್ರಾಮಂತರ ಪ್ರದೇಶವನ್ನು ಬೆಂಗಳೂರಿನ ನಗರೀಕರಣ ಹಂತ ಹಂತವಾಗಿ ನುಂಗುತ್ತಿದೆ. ಆದರೆ ಅದಕ್ಕೆ ತಕ್ಕನಾದ ದೂರುದೃಷ್ಟಿ ಯೋಜನೆ ಇಲ್ಲದೆ ತಾಲ್ಲೂಕಿನಲ್ಲಿ ಎಲ್ಲಿ ನೋಡಿದರೂ ಕಸ, ದೂಳಿನ ಮಜ್ಜನ. ದಶಕಗಳಿಂದ ಶೇ 80 ರಷ್ಟು ನಗರ ಮತ್ತು ಗ್ರಾಮಾಂತರ ಸಂಪರ್ಕ ರಸ್ತೆಗಳು ಹದಗೆಟ್ಟಿದ್ದು, ಗುಂಡಿಮಯ ರಸ್ತೆಗೆ ಕಾಯಕಲ್ಪ ಸಿಕ್ಕಿಲ್ಲ. ಮತ್ತೊಂದೆಡೆ ಪ್ರಭಾವಿ ಕೈಗಳ ಜಲಮೂಲಗಳಾ ಕೆರೆ, ಕುಂಟೆ ಮತ್ತು ಸಂಪದ್ಭರಿತ ಸಾರಯುಕ್ತ ಲ್ಯಾಟರೈಟ್ ಗುಡ್ಡಗಳನ್ನು ಅವ್ಯಾಹತವಾಗಿ ಇಲ್ಲವಾಗಿಸುತ್ತಿವೆ. ಇವುಗಳ ರಕ್ಷಣೆ, ನಗರ ಮತ್ತು ಗ್ರಾಮೀಣ ಪ್ರದೇಶ ಅಭಿವೃದ್ಧಿಗೆ ಈ ಬಾರಿ ಬಜೆಟ್‌ನಲ್ಲಿ ಜೀವ ತುಂಬಬೇಕೆಂಬ ನಿರೀಕ್ಷೆ ಜನರಲ್ಲಿ ಮೂಡಿದೆ.

ಸುಮಾರು ಎಂಟು ವರ್ಷದ ಹಿಂದೆ ನಗರದಾದ್ಯಂತ ಒಳ ಚರಂಡಿ ಕಾಮಗಾರಿಗೆ ಚಾಲನೆ ನೀಡಲಾಗಿತ್ತು. ಆದರೆ ಕಾರಣಾಂತರಗಳಿಂದ ಸ್ಥಗಿತಗೊಂಡಿತ್ತು. ಮಳೆಗಾಲ ಬಂತೆಂದರೆ ಒಳ ಚರಂಡಿ ಇಲ್ಲದೆ ರಸ್ತೆಯೇ ಚರಂಡಿ ರೂಪ ತಾಳುತ್ತದೆ. ಹೀಗಾಗಿ ನಗರಕ್ಕೆ ಶಾಶ್ವತ ಒಳಚರಂಡಿ ಕಾಮಗಾರಿಗೆ ಈ ಬಾರಿಯ ಬಜೆಟ್‌ನಲ್ಲಿ ಅನುಮೋದನೆಗಾಗಿ ನಗರದ ಜನ ಕಾಯುತ್ತಿದ್ದಾರೆ.

ದಶಕದಿಂದ ರಸ್ತೆಗಳು ಗುಂಡಿಮಯ: ತಾಲ್ಲೂಕಿನ ಕಸಬಾ ಹೋಬಳಿ, ನಂದಗುಡಿ, ಸೂಲಿಬೆಲೆ, ಅನಗೊಂಡನಹಳ್ಳಿ ಹೋಬಳಿಗಳ ಶೇ 80 ರಷ್ಟು ರಸ್ತೆಗಳು ದಶಕಗಳಿಂದಲೂ ರಸ್ತೆಗಳು ಸಂಪೂರ್ಣ ಹದಗೆಟ್ಟಿದೆ. ಇವು ರಸ್ತೆಗಳೋ ಗುಂಡಿಗಳೋ ಎಂದು ತಿಳಿಯದಾಗಿದೆ. ಆದರೂ ಇದರ ನಡುವೇ ಸವಾರರು ಸಾಹಸ ಮಾಡುತ್ತಾ ಸಂಚರಿಸುತ್ತಿದ್ದಾರೆ. ಇತ್ತೀಚೆಗೆ ಶಾಸಕ ಮತ್ತು ಮುಖ್ಯಮಂತ್ರಿ, ಆರ್‌ಡಿಪಿಆರ್ ಅನುದಾನ ಅಡಿ ಶೇ 20 ರಷ್ಟು ರಸ್ತೆಗಳು ಅಭಿವೃದ್ದಿ ಕಾಣುತ್ತಿವೆ. ಉಳಿದ ರಸ್ತೆಗಳ ನಿರ್ಮಾಣಕ್ಕೆ ಅನುದಾನ ಬೇಕಿದೆ.

ADVERTISEMENT

ಕರೆಗಳಿಗೆ ಮರು ಜೀವ ಸಿಗಲಿ: ಕೆರೆ, ಕುಂಟೆ, ಹಳ್ಳ ಕೊಳ್ಳಗಳು ಒಂದು ಕಾಲಕ್ಕೆ ನಗರ ಮತ್ತು ಗ್ರಾಮೀಣ ಭಾಗದ ಜೀವನಾಡಿಯಾಗಿದ್ದವು. ಬೆಂಗಳೂರಿನ ನಗರಿಕರಣ ಕೆರೆ ಕುಂಟೆ, ಹಳ್ಳ ಕೊಳ್ಳಗಳು ವೇರ್‌ಹೌಸ್, ಅಪಾರ್ಟ್‌ಮೆಂಟ್‌,  ಕಂಪನಿ, ರೇಸಾರ್ಟ್, ಬಡಾವಣೆ ಹೆಸರಿನಲ್ಲಿ ಕಣ್ಮರೆಯಾಗುತ್ತಿದೆ. ಸಾಯುತ್ತಿರುವ ಜೀವನಾಡಿಗಳಿಗೆ ಮರುಜೀವ ತುಂಬಬೇಕಿದೆ.

ಹೊಸಕೋಟೆ ನಗರದ ಕೇಂದ್ರ ಭಾಗದಲ್ಲಿರುವ ದೊಡ್ಡ ಅಮಾನಿಕೆರೆ ಮತ್ತು ಚಿಕ್ಕ ಅಮಾನಿಕೆರೆಗಳಲ್ಲಿ 200ಕ್ಕೂ ಹೆಚ್ಚು ಜೀವ ಮತ್ತು ಸಸ್ಯ ವೈವಿದ್ಯ ಪ್ರಭೇದಗಳಿವೆ. ನಗರೀಕರಣದ ಛಾಯೆಯಿಂದ ವಲಸೆ ಪಕ್ಷಿಗಳು ಅಳಿವಿನಂಚಿಗೆ ತಲುಪ್ಪುತ್ತಿವೆ. ದೊಡ್ಡ ಅಮಾನಿಕೆರೆ ಅಭಿವೃದ್ಧಿ ಪಡಿಸಿ ಪ್ರವಾಸಿ ಮತ್ತು ಜೀವ ವೈದ್ಯತೆಯ ತಾಣವಾಗಿಸಬೇಕೆಂದು ಜನರ ಒತ್ತಾಯ.

ಸುಸಜ್ಜಿತ ಮರುಕಟ್ಟೆ ಇಲ್ಲ: ನಗರದ ಜನಸಂಖ್ಯೆ ಒಂದು ಲಕ್ಷ ಸಮೀಪಿಸುತ್ತಿದೆ. ಆದರೆ ನಗರ ವ್ಯಾಪ್ತಿಯಲ್ಲಿ ಮಜ್ಜಿಗೆ ಕುಂಟೆ ಮತ್ತು ಅಲ್ಲಲ್ಲಿ ಬೀದಿ ಬದಿ ಮಾತ್ರ ವ್ಯಾಪಾರ ನಡೆಯುತ್ತಿದೆ. ಎಲ್ಲಿಯೂ ಮಾರುಕಟ್ಟೆ ಇಲ್ಲ. ಅದ್ದರಿಂದ ನಗರಕ್ಕೆ ಸುಸಜ್ಜಿತ ಮಾರುಕಟ್ಟೆ ನಿರ್ಮಾಣವಾದರೆ ರೈತರಿಗೂ ಸಾರ್ವಜನಿಕರಿಗೂ ಅನುಕೂಲವಾಗುತ್ತದೆ.

ತಾಲ್ಲೂಕಿನಲ್ಲಿ 37,628 ರೈತ ಕುಟುಂಬಗಳಿವೆ. ಆದರೆ ತಾವು ಬೆಳೆದ ಬೆಳೆಯನ್ನು ಬೆಂಬಲ ಬೆಲೆಯಲ್ಲಿ ಮಾರಾಟ ಮಾಡಲು ತಾಲ್ಲೂಕಿನಲ್ಲಿ ಸುಸಜ್ಜಿತ ಮಾರುಕಟ್ಟೆ ಕೇಂದ್ರ ಎಂಬುದಿಲ್ಲ. ಹೂ ಮಂಡಿ ಇದೆ ಆದರೆ ಮಳೆಗಾಲ ಬಂತು ಎಂದರೆ ಕೆಸರು ರಾಡಿಯಾಗುತ್ತದೆ ಎಂದು ಸಿಐಟಿಯು ತಾಲ್ಲೂಕು ಮುಖಂಡ ವೆಂಕಟರಾಜು ತಿಳಿಸಿದರು.

ಕೆಸಿ ವ್ಯಾಲಿ ಯೋಜನೆಯಡಿ ₹400 ಕೋಟಿ ವೆಚ್ಚದಲ್ಲಿ ಸೂಲಿಬೆಲೆ ಮತ್ತು ನಂದಗುಡಿ ಹೋಬಳಿಯ 40 ಕೆರೆಗಳ ನೀರು ತುಂಬಿಸುವ ಯೋಜನೆ ಬಗ್ಗೆ ಭರವಸೆಗಳಷ್ಟೇ ಕೇಳಿ ಬರುತ್ತಿದೆ. ಇದು ಕಾರ್ಯರೂ‍ಪಕ್ಕೆ ಬಂದಿಲ್ಲ. ಹೀಗಾಗಿ ಬಜೆಟ್‌ನಲ್ಲಿ ಈ ಯೋಜನೆ ಕಾರ್ಯಗತವಾಗಲು ಅಗತ್ಯ ಕ್ರಮ ಕೈಗೊಳ್ಳಬೇಕು. 100 ಹಾಸಿಗೆಯ ತಾಯಿ ಮಕ್ಕಳ ಸರ್ಕಾರಿ ಆಸ್ಪತ್ರೆ ನಿರ್ಮಾಣವು ಕುಂಠಿತ ಸಾಗಿದೆ. ಕಾಮಗಾರಿಗೆ ವೇಗ ನೀಡಲು ಅಗತ್ಯ ಅನುದಾನ ನಿರೀಕ್ಷೆಯಲ್ಲಿದ್ದಾರೆ ಸ್ಥಳೀಯರು.

ಮಳೆ ಬಂತು ಎಂದರೆ ರಸ್ತೆಗಳ ಸ್ಥಿತಿ ಕಮ್ಮಸಂದ್ರ ಗಂಗಾವರ ರಸ್ತೆ (ಸಂಗ್ರಹಿತ ಚಿತ್ರ)

ಪ್ರಮುಖ ಬೇಡಿಕೆಗಳು

*ಹೊಸಕೋಟೆಗೆ ಗುಲಾಬಿ ಮಾರ್ಗದ ಮೆಟ್ರೊ ವಿಸ್ತರಣೆ

*ಕೆ.ಸಿ. ವ್ಯಾಲಿ ಯೋಜನೆಯಡಿ ಕೆರೆಗಳಿಗೆ ನೀರು

*ತಾಯಿ–ಮಕ್ಕಳ ಆಸ್ಪತ್ರೆ ನಿರ್ಮಾಣಕ್ಕೆ ವೇಗ

*ಪ್ರಜಾ ಸೌಧ ಕಟ್ಟಡ ನಿರ್ಮಾಣ

*ಚೆನ್ನ ಭೈರೇಗೌಡ ಕ್ರೀಡಾಂಗಣ ಮೆಲ್ದರ್ಜೆಗೆ

*ಶಾಶ್ವತ ಒಳಚರಂಡಿ 

*ನೂತನ ನ್ಯಾಯಾಲಯ ಸಂಕೀರ್ಣ ಕಟ್ಟಡ

*ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ ಮತ್ತು ಡಿಪೊ

*ನೂತನ ರಂಗಮಂದಿರ 

*ಸರ್ಕಾರಿ ಮಹಿಳಾ ಪದವಿ ಕಾಲೇಜು

*ಹೂ ಮಂಡಿ ಮೆಲ್ದರ್ಜೆಗೆ 

*ನೂತನ ತರಕಾರಿ ಮಾರುಕಟ್ಟೆ 

*ನಗರ ಕೇಂದ್ರ ಗ್ರಂಥಾಲಯ ಮೆಲ್ದರ್ಜೆಗೆ

*ಜೀವ ವೈವಿದ್ಯ, ಪ್ರವಾಸಿ ತಾಣವಾಗಿ ದೊಡ್ಡ ಅಮಾನಿಕೆರೆ

ಜಾನಪದ ಕಲೆಗಳು ಕಣ್ಮರೆಯಾಗುತ್ತಿರುವ ಸಂದರ್ಭದಲ್ಲಿ 8000ಕ್ಕೂ ಹೆಚ್ಚು ಕಲಾವಿದರು ಇರುವ ತಾಲ್ಲೂಕಿನಲ್ಲಿ ರಂಗ ಮಂದಿರ ಇಲ್ಲ. ಈ ಬಾರಿಯ ಬಜೆಟ್‌ನಲ್ಲಿ ಕಲಾ ಕ್ಷೇತ್ರಕ್ಕೆ ವಿಶೇಷ ಅನುದಾನ ಸಿಗಲಿ
ನಟರಾಜ್ ಉಪಾಧ್ಯಕ್ಷ ತಾಲ್ಲೂಕು ಕಲಾವಿದರ ಕ್ಷೇಮಾಭಿವೃದ್ದಿ ಸಂಘ
ದಶಕದಿಂದ ಬಾಡಿಗೆ ಕಟ್ಟಡದಲ್ಲಿ ನ್ಯಾಯಾಲಯ ಕಾರ್ಯನಿರ್ವಹಿಸುತ್ತಿದೆ. ಈ ಬಾರಿಯಾದರೂ ಜಾಗ ಮತ್ತು ಕಟ್ಟಡದ ನಿರ್ಮಾಣಕ್ಕೆ ಅನುದಾನ ಸಿಗಲಿ
ಹರಿಂದ್ರ ರಾಜ್ಯಾಧ್ಯಕ್ಷ ಅಖಿಲ ಭಾರತ ವಕೀಲ ಒಕ್ಕೂಟ

ಬೆಂಬಲ ಬೆಲೆ; ಒಂದು ವ್ಯವಸ್ಥೆ ರೂಪಿಸಿ

ವೆಂಗಯ್ಯನ ಕೆರೆ ಏತ ನೀರಾವರಿ ಕೃಷ್ಣ ಮೇಲ್ದಂಡೆ ಯೋಜನೆ ಕೆಸಿ ವ್ಯಾಲಿ ಯೋಜನೆಗಳಿಂದ ತಾಲ್ಲೂಕಿನ ಎಲ್ಲಾ ಕೆರೆಗಳನ್ನು ತುಂಬಿಸಿದರೆ ಅನ್ನದಾತ ನಿಟ್ಟುಸಿರು ಬಿಡಲು ಸಾಧ್ಯ. ಅದಕ್ಕೆ ತಕ್ಕನಾಗಿ ಬೆಳೆದ ಬಳೆಗಳಿಗೆ ಬೆಲೆಗೆ ಬೆಂಬಲ ಬೆಲೆ ನಿಗದಿ ಮಾಡಲು ಸರ್ಕಾರ ಒಂದು ವ್ಯವಸ್ಥೆಯನ್ನು ರೂಪಿಸಬೇಕು. ಪ್ರಭುದೇವಯ್ಯ ರೈತ ಒಬಾಳಪುರ ಹೊಸಕೋಟೆಗೆ ಸಮೀಪ ಇರುವ ವೆಮಗಲ್ ನರಸಾಪುರ ಕೈಗಾರಿಕಾ ಪ್ರದೇಶ ಅಭಿವೃದ್ದಿ ಪಡಿಸಲಾಗುತ್ತಿದೆ. ಆದರೆ ಬೆಂಗಳೂರಿಗೆ ಸಮೀಪ ಇರುವ ತಾಲ್ಲೂಕಿನ ಪಿಲಗುಂಪೆ ಕೈಗಾರಿಕಾ ಪ್ರದೇಶ ಅಭಿವೃದ್ಧಿ ವಿಚಾರದಲ್ಲಿ ಮಲತಾಯಿ ಧೋರಣೆ ಅನುಸರಿಸಲಾಗುತ್ತಿದೆ. ಬಜೆಟ್‌ನಲ್ಲಿ ಪಿಲಗುಂಪೆ ಕೈಗಾರಿಕಾ ಪ್ರದೇಶ ಅಭಿವೃದ್ಧಿಗೂ ಒತ್ತು ನೀಡಬೇಕು

-ಎಂ. ಮುನಿರಾಜು, ಎಸ್‌ಎಫ್‌ಐ ಮುಖಂಡ

ರಾಜಕೀಯ ತಿಕ್ಕಾಟ: ರೈಲ್ವೆ ಮೇಲ್ಸೇತುವೆಗೆ ಗ್ರಹಣ

ರಾಜಕೀಯ ತಿಕ್ಕಾಟ ಹಾಗೂ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಪಾಲು ಪಾವತಿಯ ಗೊಂದಲದಿಂದ ಕೋರಳೂರು-ಮಲ್ಲಸಂದ್ರ ರೈಲ್ವೆ ಮೇಲ್ಸೇತುವೆ ನಿರ್ಮಾಣ ನೆನೆಗುದಿಗೆ ಬಿದ್ದಿದೆ. ಇದರಿಂದ ರೈಲ್ವೆ ಹಳಿ ಬಳಿ ನಿತ್ಯ ವಾಹನ ದಟ್ಟಣೆ ತಪ್ಪಿದ್ದಿಲ್ಲ. ಪ್ರತಿ ರೈಲಿನ ಸಂಚಾರಕ್ಕೂ ವಾಹನ ಸವಾರರು ಕಾದು ನೀಲ್ಲಬೇಕಿದೆ. ಇದರಿಂದ ವಿದ್ಯಾರ್ಥಿಗಳು, ಕೆಲಸಕ್ಕೆ ಹೋಗುವವರು ಹಾಗೂ ಆಂಬುಲೆನ್ಸ್‌ಗಳು ವಾಹನ ದಟ್ಟಣೆಯಲ್ಲಿ ಸಿಲುಕಿಕೊಂಡು ತೊಂದರೆ ಅನುಭವಿಸುತ್ತಿವೆ. ಕೇಂದ್ರದ ₹53 ಕೋಟಿ, ರಾಜ್ಯದ ₹51 ಕೋಟಿ ವೆಚ್ಚದಲ್ಲಿ ಕೋರಳೂರು-ಮಲ್ಲಸಂದ್ರ ರೈಲ್ವೆ ಮೇಲ್ಸೇತುವೆಗೆ ಈ ಹಿಂದೆಯೇ ಕಾಮಗಾರಿಗೆ ಚಾಲನೆ ನೀಡಲಾಗಿತ್ತು. ಆದರೆ ರಾಜಕೀಯ ತಿಕ್ಕಾಟದಿಂದ ಪ್ರತಿದಿನ ಸಾರ್ವಜನಿಕರು ತೊಂದರೆ ಅನುಭವಿಸುವಂತಾಗಿದೆ. ಈ ಸಮಸ್ಯೆ ಬಗೆಹರಿಸಲು ರಾಜ್ಯ ಸರ್ಕಾರ ಪ್ರಸ್ತಕ ಬಜೆಟ್‌ನಲ್ಲಿ ಆದ್ಯತೆ ನೀಡಲಿ ಎಂಬುದು ಸ್ಥಳೀಯ ಒತ್ತಾಸೆ.

ಕಾರ್ಯರೂಪಕ್ಕೆ ಬಾರದ ಯೋಜನೆ

ಕೆಸಿ ವ್ಯಾಲಿ ಯೋಜನೆಯಡಿ ₹400 ಕೋಟಿ ವೆಚ್ಚದಲ್ಲಿ ಸೂಲಿಬೆಲೆ ಮತ್ತು ನಂದಗುಡಿ ಹೋಬಳಿಯ 40 ಕೆರೆಗಳ ನೀರು ತುಂಬಿಸುವ ಯೋಜನೆ ಬಗ್ಗೆ ಭರವಸೆಗಳಷ್ಟೇ ಕೇಳಿ ಬರುತ್ತಿದೆ. ಇದು ಕಾರ್ಯರೂ‍ಪಕ್ಕೆ ಬಂದಿಲ್ಲ. ಹೀಗಾಗಿ ಬಜೆಟ್‌ನಲ್ಲಿ ಈ ಯೋಜನೆ ಕಾರ್ಯಗತವಾಗಲು ಅಗತ್ಯ ಕ್ರಮ ಕೈಗೊಳ್ಳಬೇಕು. 100 ಹಾಸಿಗೆಯ ತಾಯಿ ಮಕ್ಕಳ ಸರ್ಕಾರಿ ಆಸ್ಪತ್ರೆ ನಿರ್ಮಾಣವು ಕುಂಠಿತ ಸಾಗಿದೆ. ಕಾಮಗಾರಿಗೆ ವೇಗ ನೀಡಲು ಅಗತ್ಯ ಅನುದಾನ ನಿರೀಕ್ಷೆಯಲ್ಲಿದ್ದಾರೆ ಸ್ಥಳೀಯರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.