ADVERTISEMENT

ಹೊಸಕೋಟೆಯಲ್ಲಿ ಭೂಗತ ಕೇಬಲ್ ಅಳವಡಿಕೆ ಕಾಮಗಾರಿ ಅವಾಂತರ– ಜನರು ತತ್ತರ

ಅಗೆದ ಗುಂಡಿ ಮುಚ್ಚಿಲ್ಲ; ಕಾಮಗಾರಿ ತ್ಯಾಜ್ಯ ತೆರವುಗೊಳಿಸಿಲ್ಲ । ವಾಹನ ಸವಾರರ ಸರ್ಕಸ್‌ । ಜೆಜೆಎಂ ಮಾದರಿ ಅಧ್ವಾನ

​ಪ್ರಜಾವಾಣಿ ವಾರ್ತೆ
Published 21 ಅಕ್ಟೋಬರ್ 2025, 2:17 IST
Last Updated 21 ಅಕ್ಟೋಬರ್ 2025, 2:17 IST
ಹೊಸಕೋಟೆಯ ಕೋರ್ಟ್ ವೃತ್ತ ಸಂಪರ್ಕಿಸುವ ದೊಡ್ಡಗಟ್ಟಿಗನಬ್ಬೆ ರಸ್ತೆ ಬಳಿ ಭೂತಗ ಕೇಬಲ್ ಅಳವಡಿಕೆಗಾಗಿ ಭೂಮಿ ಅಗೆದು ಕಾಟಾಚಾರಕ್ಕೆ ಮುಚ್ಚಿರುವ ಜಾಗದಲ್ಲಿ ವಾಹನ ಸವಾರರ ಸರ್ಕಸ್‌
ಹೊಸಕೋಟೆಯ ಕೋರ್ಟ್ ವೃತ್ತ ಸಂಪರ್ಕಿಸುವ ದೊಡ್ಡಗಟ್ಟಿಗನಬ್ಬೆ ರಸ್ತೆ ಬಳಿ ಭೂತಗ ಕೇಬಲ್ ಅಳವಡಿಕೆಗಾಗಿ ಭೂಮಿ ಅಗೆದು ಕಾಟಾಚಾರಕ್ಕೆ ಮುಚ್ಚಿರುವ ಜಾಗದಲ್ಲಿ ವಾಹನ ಸವಾರರ ಸರ್ಕಸ್‌   

ಹೊಸಕೋಟೆ: ಜೆಜೆಎಂ ಬಳಿಕ ಮತ್ತೊಂದು ಕಾಮಗಾರಿ ನಗರದ ವಾಹನ ಸವಾರರ ನೆಮ್ಮದಿ ಕೆಡಿಸಿದ್ದು, ಸುಗಮ ಸಂಚಾರ ಕಂಟಕ ತಂದಿದೆ.

ವಿದ್ಯುತ್‌ ಕಂಬ ಮುಕ್ತ ನಗರಕ್ಕಾಗಿ ಹಾಗೂ ಭೂಮಿ ಒಳಗಿಂದ ವಿದ್ಯುತ್‌ ಸಂಪರ್ಕ ಕಲ್ಪಿಸುವ ಉದ್ದೇಶದಿಂದ ಬೆಸ್ಕಾಂ ನಡೆಸುತ್ತಿರುವ ಭೂಗತ ಕೇಬಲ ಅಳವಡಿಕೆ ಕಾಮಗಾರಿಯಿಂದ ರಸ್ತೆಗಳಲ್ಲೆ ಅಧ್ವಾನಗೊಂಡಿದೆ. ಕೇಬಲ ಅಳವಡಿಕೆಗೆ ಅಗೆದ ಜಾಗವನ್ನು ಸರಿಯಾಗಿ ಮುಚ್ಚದ ಕಾರಣ ಅಗೆದಿದ್ದ ಭಾಗದಲ್ಲಿ ಕುಸಿದಿದ್ದು, ಹಳ್ಳ ಉಂಟಾಗಿ ಅಪಾಯಕ್ಕೆ ಆಹ್ವಾನ ನೀಡುತ್ತಿದೆ.

31 ವಾರ್ಡ್‌ಗಳಲ್ಲಿ ಭೂಗತ ಕೇಬಲ್ ಅಳವಡಿಕೆಗೆ ಸರ್ಕಾರ ಸುಮಾರು ₹100 ಕೋಟಿಯ ಅನುದಾನ ಮಂಜೂರು ಮಾಡಿದೆ. ಆದರೆ ತ್ವರಿತಗತಿಯಲ್ಲಿ ಆರಂಭವಾದ ಕಾಮಗಾರಿ ಆಮೆಗತಿಯಲ್ಲಿ ಸಾಗುತ್ತಿದೆ. ಕೇಬಲ ಅಳವಡಿಕೆಗೆ ಅಗೆದ ಜಾಗವನ್ನು ವೈಜ್ಞಾನಿಕವಾಗಿ ಮುಚ್ಚದ ಕಾಮಗಾರಿ ಆ ಪ್ರದೇಶ  ಕುಸಿದು, ಗುಂಡಿಗಳಾಗಿ ಪರಿವರ್ತನೆಗೊಂಡಿದೆ.

ADVERTISEMENT

ರಾಷ್ಟ್ರೀಯ ಹೆದ್ದಾರಿ ಹೊರತುಪಡಿಸಿ ನಗರದ ವ್ಯಾಪ್ತಿಗೆ ಬರುವ ರಸ್ತೆಗಳು ಕಿರಿದಾಗಿವೆ. ಇದಕ್ಕೆ ಹೊಂದಿಕೊಂಡೆ ಚರಂಡಿ, ಅಂಗಡಿ ಮುಂಗಟ್ಟು, ಸಾರ್ವಜನಿಕರ ಮನೆಗಳಿವೆ. ಈ ಪ್ರದೇಶಗಳಲ್ಲಿ ಕಾಮಗಾರಿ ನಡೆಸಿ ಅರೆಬರೆಯಾಗಿ ಗುಂಡಿಮುಚ್ಚುವುದು ಸರಿಯೇ ಎಂದು ಸಾರ್ವಜನಿಕರು ಅಸಮಾಧಾನಿತ ಧ್ವನಿಯಲ್ಲಿ ಪ್ರಶ್ನಿಸಿದ್ದಾರೆ.

ಜನಜಂಗುಳಿ ಸೇರುವ ‍ಪ್ರದೇಶದಲ್ಲಿ, ಅಂಗಡಿ ಮುಂಗಟ್ಟು, ಚರಂಡಿ, ಮನೆ, ರಸ್ತೆಗಳಲ್ಲಿ ಅಗೆದು ವಾರಗಟ್ಟಲೇ ಹಾಗೆ ಬಿಟ್ಟು ನಿಧಾನಗತಿಯಲ್ಲಿ ಕಾಮಗಾರಿ ನಡೆಸುತ್ತಿರುವುದು ಸಾರ್ವಜನಿಕರು ಹಾಗೂ ಸವಾರರಲ್ಲಿ ಆಕ್ರೋಶ ಮೂಡಿಸಿದೆ.

ರಸ್ತೆ ಮಟ್ಟಕ್ಕಿಂತ ಕೇಬಲ್ ಕಾಮಗಾರಿಯನ್ನು ಎತ್ತರಿಸಿ ನಡೆಸಲಾಗುತ್ತಿದ್ದು, ಮಳೆಯ ನೀರು ಎಲ್ಲಿಗೆ ಹೋಗಬೇಕೆಂಬ ಪ್ರಶ್ನೆ ಮೂಡಿದೆ.

ಕಾಮಗಾರಿ ಸಂದರ್ಭದಲ್ಲಿ ಬಳಸಿದ ಪರಿಕರ, ಅಗೆದ ಮಣ್ಣು ಕಲ್ಲನ್ನು ತೆರವುಗೊಳಿಸದ ಕಾರಣ ಸವಾರರ ಸವಾರರಿಗೆ ಕಿರಿಕಿರಿಯಾಗುತ್ತಿದ್ಉ,  ವಾಹನ ದಟ್ಟಣೆ ಉಂಟಾಗುತ್ತಿದೆ. ಬೀದಿ ಬದಿ ವ್ಯಾಪಾರಸ್ಥರಿಗೆ, ಪದಾಚಾರಿಗಳಿಗೂ ತೊಂದರೆಯಾಗಿದೆ.

ಕೋರ್ಟ್ ವೃತ್ತದಿಂದ ದೊಡ್ಡಗಟ್ಟಿಗನಬ್ಬೆ ರಸ್ತೆ ಸಂಪರ್ಕಿಸುವ ರಸ್ತೆಯಲ್ಲಿ ದೊಡ್ಡ ಮೋರಿಯಷ್ಟು ಗುಂಡಿ ಅಗೆದು ಅದನ್ನು 20 ದಿನಗಳಿಂದ ಹಾಗೇ ಬಿಟ್ಟು, ನಂತರ ಕಾಟಾಚಾರಕ್ಕೆ ಅರ್ಧಂಬರ್ಧ ಮಣ್ಣು ಮುಚ್ಚಲಾಗಿದೆ. ಇದರಿಂದ ಬೈಕ್‌ಗಳು ಮಾತ್ರ ಸರ್ಕಸ್‌ ಮಾಡುತ್ತಾ ಸಂಚರಿಸಬೇಕಿದೆ. ಉಳಿದ ವಾಹನಗಳು ಸುತ್ತಿಬಳಸಿ ಸಂಚಾರ ಮಾಡಬೇಕಿದೆ.

ವ್ಯಾಪಾರ ನಷ್ಟ

ದಸರಾ ಹಬ್ಬಕ್ಕೂ ಮುಂಚೆ ನಮ್ಮ ಅಂಗಡಿ ಮುಂದೆ ಅಗೆದಿದ್ದ ಗುಂಡಿಗೆ ಮೊನ್ನೆ ತೇಪೆ ಹಚ್ಚುವ ಕೆಲಸ ಮಾಡಿದ್ದಾರೆ. ಈ ಕಾಮಗಾರಿಗಳಿಂದ ಮಳಿಗೆ ಗ್ರಾಹಕರೇ ಬರುತ್ತಿಲ್ಲ. ವರ್ಷದಲ್ಲಿ ದಸರಾ ದೀಪಾವಳಿಗೆ ಒಳ್ಳೆಯ ವ್ಯಾಪಾರ ಆಗುತ್ತದೆ.  ಇಂತಹ ಹಬ್ಬದ ದಿನಗಳಲ್ಲೇ ಇವರ ಕಾಮಗಾರಿಗಳಿಂದ ನಷ್ಟವಾದರೆ ಯಾರನ್ನು ಕೇಳಬೇಕು.  ಅರ್ಧಂಬರ್ಧ ಕೆಲಸ ಮಾಡಿಸಿದರೆ ₹5 ರಿಂದ ₹10 ಸಾವಿರ ಕೈ ಯಿಂದ ಖರ್ಚು ಮಾಡಿ ನಾವೇ ಸರಿಪಡಿಸಬೇಕು. ಇಲ್ಲದಿದ್ದರೆ ವ್ಯಾಪಾರ ಆಗಲ್ಲ ರಾಜು ಬೇಕರಿ ಮಾಲೀಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.