ADVERTISEMENT

ಹುಸ್ಕೂರು ಜಾತ್ರೆಗೆ ಸಿದ್ಧತೆ: ಇದೇ ಮೊದಲ ಬಾರಿಗೆ ತೇರು ಸದೃಢ ಪ್ರಮಾಣಪತ್ರ

​ಪ್ರಜಾವಾಣಿ ವಾರ್ತೆ
Published 3 ಮಾರ್ಚ್ 2026, 4:49 IST
Last Updated 3 ಮಾರ್ಚ್ 2026, 4:49 IST
ಹುಸ್ಕೂರು ಮದ್ದೂರಮ್ಮ ದೇವಿ ದೇವಾಲಯದ ನೋಟ
ಹುಸ್ಕೂರು ಮದ್ದೂರಮ್ಮ ದೇವಿ ದೇವಾಲಯದ ನೋಟ   

ಆನೇಕಲ್: ತಾಲ್ಲೂಕಿನ ಇತಿಹಾಸ ಪ್ರಸಿದ್ಧ ಹುಸ್ಕೂರು ಮದ್ದೂರಮ್ಮ ದೇವಿ ಜಾತ್ರಾ ಮಹೋತ್ಸವಕ್ಕೆ ಸಿದ್ಧತೆ ಆರಂಭಗೊಂಡಿದೆ. ಕಳೆದ ಬಾರಿಯ ಜಾತ್ರೆಯಲ್ಲಿ ಎರಡು ತೇರು ಉರುಳಿ ಬಿದ್ದು ಬಾಲಕಿ ಸೇರಿ ಇಬ್ಬರು ಮೃತಪಟ್ಟಿದ್ದರು. ಒಂಭತ್ತು ಮಂದಿ ಗಾಯಗೊಂಡಿದ್ದಾರೆ. ಇದರಿಂದ ಈ ವರ್ಷ ಇದೇ ಮೊದಲ ಬಾರಿಗೆ ತೇರು ಸದೃಢ ಪ್ರಮಾಣಪತ್ರವನ್ನು ಕಡ್ಡಾಯಗೊಳಿಸಲಾಗಿದೆ.

ಹುಸ್ಕೂರು ಮದ್ದೂರಮ್ಮ ದೇವಿಯ ಜಾತ್ರೆಯ ಪ್ರಮುಖ ಆಕರ್ಷಣೆ ಕುರ್ಜು. 2025ರಲ್ಲಿ 120-150 ಅಡಿಗಳ ಕುರ್ಜು ಕಟ್ಟಿ ದೇವಾಲಯದತ್ತ ಎಳೆದು ತರುವಾಗ ಎರಡು ತೇರು ಉರುಳಿ ಬಿದ್ದಿತ್ತು. ಈ ಬಾರಿ ಆನೇಕಲ್‌ ತಾಲ್ಲೂಕು ಆಡಳಿತ ಅವಘಡ ತಡೆಗೆ ಬಿಗಿ ಕ್ರಮಗಳನ್ನು ಕೈಗೊಂಡಿದ್ದು, ಎಲ್ಲಾ 17 ಗ್ರಾಮಗಳಿಗೂ ರಥವನ್ನು 80 ಅಡಿ ಮೀರದಂತೆ ಕಟ್ಟಬೇಕು ಎಂದು ಸೂಚನೆ ನೀಡಿದೆ. ಗ್ರಾಮಗಳಲ್ಲಿ 80 ಅಡಿ ಮೀರದಂತೆ ರಥ ನಿರ್ಮಾಣದ ಕಾರ್ಯ ಭರದಿಂದ ಸಾಗುತ್ತಿದೆ.

ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯಪಾಲಕ ಎಂಜಿನಿಯರ್‌ ತೇರು ಸದೃಢ ಪ್ರಮಾಣ ಪತ್ರವನ್ನು ನೀಡಲಿದ್ದಾರೆ. ಜಿಲ್ಲಾಡಳಿತ ಸೂಚನೆ ನೀಡಿರುವ ಎಲ್ಲಾ ಅಂಶಗಳನ್ನು ಅನುಸರಿಸಿರುವ ಬಗ್ಗೆ ಖಾತ್ರಿ ಪಡಿಸಿಕೊಳ್ಳಲು ಈ ಬಾರಿ ತೇರು ಸದೃಢ ಪ್ರಮಾಣಪತ್ರ ನೀಡಲಾಗುತ್ತಿದೆ ಎಂದು ತಹಶೀಲ್ದಾರ್‌ ಶಶಿಧರ್ ಮಾಡ್ಯಾಳ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ADVERTISEMENT

ಹುಸ್ಕೂರು ಮದ್ದೂರಮ್ಮ ದೇವಿಯ ಜಾತ್ರೆಯ ಮಾರ್ಚ್‌ 13ರಿಂದ 17ರವರೆಗೆ ನಡೆಯಲಿದೆ. 17 ಗ್ರಾಮಗಳಲ್ಲಿ ಕುರ್ಜುಗಳನ್ನು (ರಥಗಳು) ನಿರ್ಮಾಣ ಕಾರ್ಯ ನಡೆಯುತ್ತಿದ್ದು, ಜಾತ್ರೆಗೆ ಬೆಂಗಳೂರು ನಗರ ಜಿಲ್ಲಾಡಳಿತ ಮತ್ತು ಆನೇಕಲ್‌ ತಾಲ್ಲೂಕು ಆಡಳಿತ ಸಕಲ ಸಿದ್ಧತೆ ನಡೆಸುತ್ತಿದೆ. ಜಾತ್ರೆಯ ಪ್ರಯುಕ್ತ 17 ರಥಗಳು ಮಾರ್ಚ್‌ 14ರಂದು 17 ಗ್ರಾಮಗಳ ಕುರ್ಜು ಹುಸ್ಕೂರು ದೇವಾಲಯ ಆವರಣ ತಲುಪಲಿದೆ.

ಕುರ್ಜು ಬರುವ ರಸ್ತೆಯಲ್ಲಿ ಗುಂಡಿ ಮುಚ್ಚಿ: ಜಾತ್ರಗೆ 5-6 ಲಕ್ಷ ಭಕ್ತರು ಬರುವ ನಿರೀಕ್ಷೆಯಿದೆ. ಹಾಗಾಗಿ ತಾಲ್ಲೂಕು ಆಡಳಿತ ಎಲ್ಲಾ ಮುನ್ನೆಚ್ಚರಿಕೆ ಕ್ರಮ ಕೈಗೊಂಡಿದೆ. ಲೋಕೋಪಯೋಗಿ ಇಲಾಖೆ, ತಾಲ್ಲೂಕು ಪಂಚಾಯಿತಿ, ಪಂಚಾಯಿತಿ ರಾಜ್‌ ಇಲಾಖೆಯ ಎಂಜಿನಿಯರ್‌ಗೆ ಕುರ್ಜು ಬರುವ ರಸ್ತೆ ಮಾರ್ಗಗಳಲ್ಲಿರುವ ರಸ್ತೆ ಗುಂಡಿಗಳನ್ನು ಮುಚ್ಚುವಂತೆ ಸೂಚನೆ ನೀಡಲಾಗಿದೆ ಎಂದು ತಹಶೀಲ್ದಾರ್‌ ಶಶಿಧರ್‌ ಮಾಡ್ಯಾಳ್‌ ತಿಳಿಸಿದ್ದಾರೆ.

ಬೆಸ್ಕಾಂ ಇಲಾಖೆಯು ವಿದ್ಯುತ್‌ ತಂತಿಗಳನ್ನು ತಾತ್ಕಾಲಿಕವಾಗಿ ತೆರವುಗೊಳಿಸಬೇಕು. ಪ್ರಾದೇಶಿಕ ಅರಣ್ಯಾಧಿಕಾರಿಗಳು ರಥೋತ್ಸವದ ಮೆರವಣಿಗೆಯ ಕುರ್ಜುಗಳು ಬರುವ ರಸ್ತೆ ಬದಿಯಲ್ಲಿನ ಮರಗಳ ರೆಂಬೆ, ಕೊಂಬೆ ಮತ್ತು ಒಣಗಿದ ಮರ ತೆರವುಗೊಳಿಸಬೇಕು.

ಪೊಲೀಸ್‌ ಇಲಾಖೆಯು ಕುರ್ಜು ಹಿಂದೆ ಮುಂದೆ ಇರುವ ಸಾರ್ವಜನಿಕರಿಗೆ ಜಾಗೃತಿ ಮೂಡಿಸಬೇಕು. ತುರ್ತು ಚಿಕಿತ್ಸೆಗಳಿಗಾಗಿ ವೈದ್ಯಕೀಯ ಸಿಬ್ಬಂದಿಯನ್ನು ಆರೋಗ್ಯ ಇಲಖೆ ನಿಯೋಜಿಸಬೇಕು. ಪೊಲೀಸ್‌ ಮತ್ತು ಸಂಚಾರ ಪೊಲೀಸ್‌ ಇಲಾಖೆಯು ಕಾನೂನು ಸುವ್ಯವಸ್ಥೆ ಮತ್ತು ವಾಹನಗಳ ನಿಲುಗಡೆಯ ಬಗ್ಗೆ ನಿಗಾ ವಹಿಸಬೇಕು. ಅಗ್ನಿಶಾಮಕ ದಳದ ಸಿಬ್ಬಂದಿ ನೈಸರ್ಗಿಕ ಕವಿಕೋಪ ಮುಂಜಾಗೃತೆಯಡಿಯಲ್ಲಿ ಕ್ರಮಕೈಗೊಳ್ಳಬೇಕು. ಎಲ್ಲಾ ಇಲಾಖೆಗಳ ಅಧಿಕಾರಿಗಳು ಸಮನ್ವಯ ಸಾಧಿಸಿ ಹುಸ್ಕೂರು ಮದ್ದೂರಮ್ಮ ದೇವಿ ಜಾತ್ರೆಯನ್ನು ಯಶಸ್ಸುಗೊಳಿಸಬೇಕು ಎಂದು ತಿಳಿಸಿದರು.

ವಜ್ರದ ಕವಚ, ಚಿನ್ನಾಭರಣ ಅಲಂಕಾರಕ್ಕೆ ಒತ್ತಾಯ: ಹುಸ್ಕೂರು ಮದ್ದೂರಮ್ಮ ದೇವಿಗೆ ಟಿಪ್ಪುಸುಲ್ತಾನ್‌ ನೀಡಿದ್ದ ವಜ್ರದ ಆಭರಣಗಳು ಮತ್ತು ಚಿನ್ನದ ಆಭರಣಗಳನ್ನು ತೊಡಿಸಬೇಕು. ಪೊಲೀಸ್‌ ಇಲಾಖೆ ಸೂಕ್ತ ಬಂದೋಬಸ್ತ್ ಏರ್ಪಡಿಸಿ ಖಜಾನೆಯಲ್ಲಿರುವ ಆಭರಣಗಳಿಂದ ಅಲಂಕಾರ ಮಾಡಬೇಕು ಎಂದು ಹೀಲಲಿಗೆ ಗ್ರಾಮದ ಚಂದ್ರಶೇಖರ್‌ ತಿಳಿಸಿದರು. 

ಭದ್ರತೆಯ ದೃಷ್ಠಿಯಿಂದ ಎಲ್ಲಾ ಆಭರಣಗಳನ್ನು ಖಜಾನೆಯಲ್ಲಿ ಇಡಲಾಗಿದ್ದು, ಜಾತ್ರೆ ವೇಳೆ ಪ್ರತಿ ವರ್ಷ ದೇವಿಗೆ ಆಭರಣಗಳಿಂದ ಅಲಂಕಾರ ಮಾಡುತ್ತಿಲ್ಲ ಎಂದು ತಿಳಿಸಿದರು.

ಹುಸ್ಕೂರು ಮದ್ದೂರಮ್ಮ ದೇವಿ ಜಾತ್ರೆಯಲ್ಲಿ ತೇರುಗಳು 
ಜಾತ್ರೆ ಯಶಸ್ವಿ ಹಾಗೂ ಶಾಂತಿ ಸುವ್ಯವ್ಥೆ ಕಾಪಾಡಲು ಎಲ್ಲಾ ಇಲಾಖೆಗಳ ಅಧಿಕಾರಿಗಳು ಸಮನ್ವಯತೆಯಿಂದ ಕೆಲಸ ಮಾಡಬೇಕು. ಸಭೆಯಲ್ಲಿ ತಿಳಿಸಿರುವ ಕೆಲಸಗಳನ್ನು ಆಯಾ ಇಲಾಖೆಗಳು ನಿಗದಿತ ಅವಧಿಯಲ್ಲಿ ಮಾಡಬೇಕು. ಜಿಲ್ಲಾಧಿಕಾರಿ ಸೂಚನೆಯನ್ನು ಕಡ್ಡಾಯವಾಗಿ ಪಾಲಿಸಬೇಕು
ಶಶಿಧರ್ ಮಾಡ್ಯಾಳ್‌ ತಹಶೀಲ್ದಾರ್‌
ಜಿಲ್ಲಾಧಿಕಾರಿ ಸೂಚನೆಯಂತೆ 80 ಅಡಿ ಮೀರದಂತೆ ಕುರ್ಜು ಕಟ್ಟುತ್ತೇವೆ. ರಸ್ತೆ ಗುಂಡಿ ಮುಚ್ಚಿಸುವುದು ಸೇರಿದಂತೆ ಅಗತ್ಯ ಕ್ರಮಗಳನ್ನು ಜಿಲ್ಲಾಡಳಿತ ಬೇಗ ಮಾಡಬೇಕು. 10 ದಿನಗಳ ಮಾತ್ರ ಜಾತ್ರೆಗೆ ಉಳಿದಿದ್ದು ರಸ್ತೆ ಗುಂಡಿಗಳನ್ನು ಮುಚ್ಚಲು ವೇಗ ನೀಡಬೇಕು
ಗಟ್ಟಹಳ್ಳಿ ಸೀನಪ್ಪ ಗಟ್ಟಹಳ್ಳಿ ನಿವಾಸಿ

ಕುರ್ಜು ಮೆರವಣಿಗೆ; ಜಿಲ್ಲಾಡಳಿತ ಸೂಚನೆ

ಯಾವುದೇ ಅವಘಡ ನಡೆಯದಂತೆ ಎಚ್ಚರವಹಿಸಲು ಜಿಲ್ಲಾಡಳಿತಯು 17 ಗ್ರಾಮದ ಕುರ್ಜು ಸಮಿತಿ ಸದಸ್ಯರ ಸಭೆ ನಡೆಸಿ ಸೂಚನೆ ನೀಡಿದೆ. ತೇರನ್ನು ಕಡ್ಡಾಯವಾಗಿ 80 ಅಡಿ ಮೀರದಂತೆ ಕಟ್ಟಬೇಕು. ಪ್ರತಿ ತೇರು ಕಟ್ಟುವ ಗ್ರಾಮದಲ್ಲಿ ಉಸ್ತುವಾರಿಯಾಗಿ ಒಬ್ಬರನ್ನು ನೇಮಕ ಮಾಡಬೇಕು. ರಸ್ತೆ ಮಾರ್ಗದಲ್ಲಿ ಗುಂಡಿ ಮತ್ತು ವಿದ್ಯುತ್‌ ತಂತಿಗಳನ್ನು ಮುಂಚಿತವಾಗಿ ತೆರವುಗೊಳಿಸಬೇಕು. ತೇರು ಎಳೆಯುವ ಎತ್ತುಗಳನ್ನು ಕಟ್ಟುವ ಸಮಯದಲ್ಲಿ ಎತ್ತುಗಳಿಗೆ ತೊಂದರೆಯಾಗದಂತೆ ಕ್ರಮ ವಹಿಸಬೇಕು. ಜಾತಿ ವಿಚಾರವಾಗಿ ನಿಂದನೆ ಮಾಡಬಾರದು. ಕುರ್ಜು ಚಕ್ರಗಳಿಗೆ ಅಗತ್ಯ ಸಾಧನಗಳನ್ನು ಭದ್ರಪಡಿಸಿಕೊಳ್ಳಬೇಕು. ಸ್ವಯಂ ಸೇವಕರು ಕುರ್ಜು ಹಿಂದೆ ಮುಂದೆ ಇರುವ ಸಾರ್ವಜನಿಕರು ಜಾಗೃತವಾಗಿ ಇರುವಂತೆ ಅರಿವು ಮೂಡಿಸಬೇಕು ಕುರ್ಜುಗಳ ಚಕ್ರವು ಮರದಿಂದ ಕೂಡಿರಬೇಕು ಕಬ್ಬಿಣದ ಚಕ್ರವನ್ನು ಅಳವಡಿಸಬಾರದೆಂದು ಎಲ್ಲಾ ಗ್ರಾಮಗಳಿಗೂ ಸೂಚನೆ ನೀಡಲಾಗಿದೆ ಎಂದು ಬೆಂಗಳೂರು ನಗರ ಜಿಲ್ಲಾಧಿಕಾರಿ ಜಿ. ಜಗದೀಶ್‌ ತಿಳಿಸಿದರು.

ಏಕಗವಾಕ್ಷಿ ಸಮಿತಿಯಿಂದ ಅರ್ಜಿ ಸ್ವೀಕಾರ

ರಥೋತ್ಸವದಲ್ಲಿ ಭಾಗಿಯಾಗುವ ಕುರ್ಜುಗಳಿಗೆ ಅನುಮತಿ ಪಡೆಯಲು ಈ ಹಿಂದೆ ಪೊಲೀಸ್‌ ಬೆಸ್ಕಾಂ ಅಗ್ನಿಶಾಮಕ ದಳ ಸೇರಿದಂತೆ ವಿವಿಧ ಇಲಾಖೆಗಳಿಂದ ನಿರಪೇಕ್ಷಣಾ ಪತ್ರ ಪಡೆಯಬೇಕಾಗಿತ್ತು. ಈ ಬಾರಿ ಏಕಗವಾಕ್ಷಿ ಸಮಿತಿಯನ್ನು ರೂಪಿಸಿದ್ದು ಗ್ರಾಮಗಳಲ್ಲಿನ ಕುರ್ಜಿನ ಮುಖ್ಯಸ್ಥರು ಹೆಬ್ಬಗೋಡಿಯ ಡಿವೈಎಸ್ಪಿ ಕಚೇರಿಯಲ್ಲಿಯೇ ಅರ್ಜಿ ಸಲ್ಲಿಸಬಹುದಾಗಿದೆ. ಇದರಿಂದಾಗಿ ಗ್ರಾಮಸ್ಥರು ಕಚೇರಿಗಳಿಗೆ ಓಡಾಡುವುದು ತಪ್ಪಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.