ADVERTISEMENT

ಒಳಮೀಸಲಾತಿ ಮಸೂದೆಗೆ ಶೀಘ್ರ ಅನುಮೋದನೆ ಕೋರಿ ರಾಜ್ಯಪಾಲರಿಗೆ ಮನವಿ

​ಪ್ರಜಾವಾಣಿ ವಾರ್ತೆ
Published 18 ಫೆಬ್ರುವರಿ 2026, 5:43 IST
Last Updated 18 ಫೆಬ್ರುವರಿ 2026, 5:43 IST
ಒಳಮೀಸಲಾತಿ ಮಸೂದೆಗೆ ತ್ವರಿತ ಅನುಮೋದನೆ ಕೋರಿ ಸಚಿವ ಕೆ.ಎಚ್.ಮುನಿಯಪ್ಪ ನೇತೃತ್ವದ ನಿಯೋಗವು ಬೆಂಗಳೂರಿನ ಲೋಕ ಭವನದಲ್ಲಿ ರಾಜ್ಯಪಾಲರಿಗೆ ಮನವಿ ಪತ್ರ ಸಲ್ಲಿಸಿದರು
ಒಳಮೀಸಲಾತಿ ಮಸೂದೆಗೆ ತ್ವರಿತ ಅನುಮೋದನೆ ಕೋರಿ ಸಚಿವ ಕೆ.ಎಚ್.ಮುನಿಯಪ್ಪ ನೇತೃತ್ವದ ನಿಯೋಗವು ಬೆಂಗಳೂರಿನ ಲೋಕ ಭವನದಲ್ಲಿ ರಾಜ್ಯಪಾಲರಿಗೆ ಮನವಿ ಪತ್ರ ಸಲ್ಲಿಸಿದರು   

ದೇವನಹಳ್ಳಿ: ಒಳಮೀಸಲಾತಿ ಮಸೂದೆಗೆ ತ್ವರಿತ ಅನುಮೋದನೆ ನೀಡುವಂತೆ ರಾಜ್ಯಪಾಲರಿಗೆ ಸಚಿವ ಕೆ.ಎಚ್.ಮುನಿಯಪ್ಪ ನೇತೃತ್ವದ ನಿಯೋಗ ಮನವಿ ಸಲ್ಲಿಸಿತು.

ಆಹಾರ ಸಚಿವ ಕೆ.ಎಚ್.ಮುನಿಯಪ್ಪ, ಅಬಕಾರಿ ಸಚಿವ ಆರ್.ಬಿ.ತಿಮ್ಮಾಪುರ, ಶಾಸಕರು ಮತ್ತು ಸಮುದಾಯದ ಮುಖಂಡರು ಮಂಗಳವಾರ ಲೋಕಭವನಕ್ಕೆ ಭೇಟಿ ನೀಡಿ ರಾಜ್ಯಪಾಲರಿಗೆ ಮನವಿ ಪತ್ರ ಸಲ್ಲಿಸಿದರು.

ವಿಧಾನಸಭೆ ಮತ್ತು ವಿಧಾನ ಪರಿಷತ್‌ನಲ್ಲಿ ಸರ್ವಾನುಮತದಿಂದ ಅಂಗೀಕಾರಗೊಂಡಿರುವ ಒಳಮೀಸಲಾತಿ ಮಸೂದೆಗೆ ಆದಷ್ಟು ಬೇಗ ಅನುಮೋದನೆ ನೀಡಬೇಕು ಎಂದು ಮನವಿಯಲ್ಲಿ ಕೋರಲಾಗಿದೆ. ಆಡಳಿತ ಪಕ್ಷ ಮತ್ತು ವಿರೋಧ ಪಕ್ಷಗಳ ಬೆಂಬಲದೊಂದಿಗೆ ಈ ಮಸೂದೆ ಅಂಗೀಕಾರವಾಗಿದೆ ಎಂದು ನಿಯೋಗ ರಾಜ್ಯಪಾಲರಿಗೆ ವಿವರಿಸಿತು.

ADVERTISEMENT

ಸಂವಿಧಾನದ ಸಾಮಾಜಿಕ ನ್ಯಾಯ ಮತ್ತು ಸಮಾನತೆ ತತ್ವಗಳಿಗೆ ಅನುಗುಣವಾಗಿ ಪರಿಶಿಷ್ಟ ಜಾತಿ 101 ಒಳ ಸಮುದಾಯಗಳಿಗೆ ಮೀಸಲಾತಿ ಕಲ್ಪಿಸುವ ನಿಟ್ಟಿನಲ್ಲಿ ಈ ಮಸೂದೆ ನೆರವಾಗಲಿದೆ. ಹೀಗಾಗಿ ಮಸೂದೆಗೆ ಶೀಘ್ರ ಒಪ್ಪಿಗೆ ನೀಡಬೇಕು ಎಂದು ನಿಯೋಗ ರಾಜ್ಯಪಾಲರಲ್ಲಿ ವಿನಂತಿಸಿತು.

ಈ ವೇಳೆ ಕೆಜಿಎಫ್ ಶಾಸಕಿ ರೂಪಕಲಾ ಶಶಿಧರ್, ಮಾಯಕೊಂಡ ಶಾಸಕ ಕೆ.ಎಸ್.ಬಸವಂತಪ್ಪ, ನೆಲಮಂಗಲ ಶಾಸಕ ಎನ್. ಶ್ರೀನಿವಾಸ್, ನಾಗಠಾಣ ಶಾಸಕ ವಿಠ್ಠಲ ಕಟಕಧೋಂಡ, ಮಾಜಿ ಸಂಸದ ಬಿ.ಎನ್.ಚಂದ್ರಪ್ಪ, ಎಲ್.ಹನುಮಂತಯ್ಯ, ವಿಧಾನ ಪರಿಷತ್ ಸದಸ್ಯ ಸುಧಾಮ್ ದಾಸ್ ಸೇರಿದಂತೆ ಸಮುದಾಯದ ಮುಖಂಡರು ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.