
ಹೊಸಕೋಟೆ: ತಾಲ್ಲೂಕಿನಲ್ಲಿ ಜಲಜೀವನ್ ಮಿಷನ್(ಜೆಜೆಎಂ) ಯೋಜನೆಯಡಿ ಕಾಮಗಾರಿ ಆರಂಭಿಸದ ಆರು ಗುತ್ತಿಗೆದಾರರನ್ನು ಕಪ್ಪುಪಟ್ಟಿಗೆ ಸೇರಿಸಲಾಗಿದ್ದು, ಸಂಬಂದಪಟ್ಟವರಿಗೆ ನೋಟಿಸ್ ನೀಡಲಾಗುವುದು ಎಂದು ಶಾಸಕ ಶರತ್ ಬಚ್ಚೇಗೌಡ ತಿಳಿಸಿದರು.
ನಗರದ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ನಡೆದ ಜಲಜೀವನ್ ಮಿಷನ್ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದರು.
ಸಭೆಯಲ್ಲಿ 56 ಗುತ್ತಿದಾರರು ಸಭೆಯಲ್ಲಿ ಪಾಲ್ಗೋಳ್ಳಬೇಕಾಗಿತ್ತು. ಆದರೆ 30 ಗುತ್ತಿದಾರರು ಮಾತ್ರ ಪಾಲ್ಗೊಂಡಿದ್ಡು, ಅದರಲ್ಲಿ 20 ಗುತ್ತಿಗೆದಾರರು ಕಾಮಗಾರಿ ಪೂರ್ಣಗೊಳಿಸಿದ್ದಾರೆ. ಕಾಮಗಾರಿಯನ್ನೇ ಆರಂಭ ಮಾಡದ ಆರು ಗುತ್ತಿಗೆದಾರರನ್ನು ಕಪ್ಪು ಪಟ್ಟಿಗೆ ಸೇರಿಸಲಾಗಿದೆ ಎಂದು ತಿಳಿಸಿದರು.
ಕಾಟಾಚಾರಕ್ಕೆ ಕೆಲ ಗುತ್ತಿಗೆದಾರರು ಒಂದು ಮೀಟರ್ ಆಳದಲ್ಲಿ ಅಳವಡಿಸಬೇಕಾದ ಪೈಪ್‌ಗಳನ್ನು ಕೇವಲ ಒಂದೂವರೆ ಅಡಿ ಆಳದಲ್ಲಿ ಅಳವಡಿಸಿದ್ದಾರೆ. ಇದರಿಂದ ಇತರೆ ಕಾಮಗಾರಿಗಳ ಸಂದರ್ಭದಲ್ಲಿ ಕೆಲವು ಗ್ರಾಮಗಳಲ್ಲಿ ಪೈಪ್ ಒಡೆದು ಹೋಗುತ್ತಿವೆ. ಇನ್ನೂ ಕೆಲ ಗ್ರಾಮಗಳಲ್ಲಿ ಓವರ್ ಹೆಡ್ ಟ್ಯಾಂಕ್ ನಿರ್ಮಾಣಕ್ಕೆ ಜಾಗದ ಸಮಸ್ಯೆ ಇದ್ದು, ಪಂಚಾಯತಿ ಅಧಿಕಾರಿಗಳು ಸಮಸ್ಯೆ ಬಗೆಹರಿಸದ ಕಾರಣ ಕಾಮಗಾರಿ ಪೂರ್ಣಗೊಳಿಸಲು ವಿಳಂಬವಾಗುತ್ತಿದೆ ಎಂದು ಹೇಳಿದರು.
ಜೆಜೆಎಂ ಅನುದಾನ ವಿವಿರ: ತಾಲ್ಲೂಕಿನ ಒಟ್ಟು 254 ಗ್ರಾಮಗಳಲ್ಲಿ ಜೀವನ್ ಮಿಷನ್ ಅಡಿಯಲ್ಲಿ ₹239 ಕೋಟಿ ವೆಚ್ಚದ ಯೋಜನೆಗೆ ಎರಡು ವರ್ಷಗಳ ಹಿಂದೆಯೇ ಚಾಲನೆ ನೀಡಲಾಗಿತ್ತು. ಇದರಲ್ಲಿ ಈವರೆಗೆ ₹136 ಕೋಟಿ ಅನುದಾನ ಪ್ರಗತಿ ಆಧಾರದಲ್ಲಿ ಬಿಡುಗಡೆಯಾಗಿದೆ. ಉಳಿದಂತೆ ₹103 ಕೋಟಿ ಬಿಡುಗಡೆ ಯಾಗಬೇಕಿದೆ. ಅದರಲ್ಲಿ ₹23.56 ಕೋಟಿ ಬಿಡುಗಡೆಗೆ ಗುತ್ತಿಗೆದಾರರಿಂದ ಪ್ರಸ್ತಾವ ಸಲ್ಲಿಕೆಯಾಗಿದೆ. ಇದರಲ್ಲಿ ಕೇಂದ್ರ ಪಾಲು ₹18.17 ಕೋಟಿ ರಾಜ್ಯದ ಪಾಲು ₹5.69 ಕೋಟಿ ಬಿಡುಗಡೆಯಾಗಬೇಕಿದೆ ಎಂದು ಶಾಸಕ ಶರತ್ ಬಚ್ಚೇಗೌಡ ತಿಳಿಸಿದರು.
ಗ್ರಾಮೀಣ ಕುಡಿಯುವ ನೀರು ಸರಬರಾಜು ಇಲಾಖೆಯ ಇಇ ಶ್ರೀಕಾಂತ್, ಎಇಇ ಬಾಲಚಂದರ್, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಮುನಿಯಪ್ಪ, ಬೆಸ್ಕಾಂ ಎಇಇ ಪುಟ್ಟಸ್ವಾಮಿ ಹಾಜರಿದ್ದರು.
ಡಿಪಿಆರ್ ಪ್ರಕಾರ ಜಲಜೀವನ್ ಮಿಷನ್ ಕಾಮಗಾರಿ ಪೂರ್ಣಗೊಂಡಿದ್ದರೆ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ ಹಸ್ತಾಂತರಿಸಬಹುದು. ಉಳಿದವರು ಮಾರ್ಚ್ 31ರೊಳಗೆ ಜಲಜೀವನ್ ಮಿಷನ್ (ಜೆಜೆಎಂ) ಕಾಮಗಾರಿ ಮುಕ್ತಾಯಗೊಳಿಸಬೇಕಿದೆಶರತ್ ಬಚ್ಚೇಗೌಡ ಶಾಸಕ
ಅಧಿಕಾರಿಗಳ ವಿರುದ್ಧ ಗುತ್ತಿಗೆಗಾರರ ದೂರು
ಜೆಜೆಎಂ ಕಾಮಗಾರಿಗೆ ಚಾಲನೆ ನೀಡಿ ಎರಡು ವರ್ಷ ಕಳೆದರೂ ಕಾಮಗಾರಿ ಪೂರ್ಣಗೊಂಡಿಲ್ಲ. ಸಾಕಷ್ಟು ಗ್ರಾಮಗಳಲ್ಲಿ ಹೊಸ ಮನೆಗಳು ನಿರ್ಮಾಣ ಆಗಿರುವುದರಿಂದ ಅವರಿಗೂ ನೀರಿನ ಸಂಪರ್ಕ ಕೊಡಬೇಕಿದೆ. ಟೆಂಡರ್ ನಲ್ಲಿರುವಷ್ಟು ಮನೆಗಳಿಗೆ ನೀರಿನ ಸಂಪರ್ಕ ನೀಡಿದರೂ ಇನ್ನೂ ಉಳಿದಿದೆ ಎಂದು ಕೆಲವು ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು ಖ್ಯಾತೆ ತೆಗೆಯುತಿದ್ದಾರೆ. ಕಾಮಗಾರಿ ಪೂರ್ಣಗೊಳಿಸಿದರೂ ಯೋಜನೆ ತಮ್ಮ ಸುಪರ್ದಿಗೆ ಪಡೆಯಲು ಮುಂದಾಗುತಿಲ್ಲ. ಇದರಿಂದ ಗುತ್ತಿಗೆದಾರರು ಯೋಜನೆ ಬಾಕಿ ಹಣ ಪಡೆಯಲು ಅಲೆಯುವಂತಾಗಿದೆ ಗುತ್ತಿಗೆದಾರರು ಆಕ್ರೋಶ ಹೊರಹಾಕಿದರು. ಹೆದ್ದಾರಿ ಅಕ್ಕಪಕ್ಕದಲ್ಲಿ ಗ್ರಾಮಗಳಲ್ಲಿ ನೀರಿನ ಪೈಪ್ ಅಳವಡಿಕೆಗೆ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಅನುಮತಿ ನೀಡಿಲ್ಲ. ಕಾಮಗಾರಿಯಲ್ಲಿ ಸೇರ್ಪಡೆಗೊಂಡ ಹೆಚ್ಚುವರಿ ಕೆಲಸದ ಆದೇಶ ಪ್ರತಿ ನೀಡದೆ ಕೆಲ ಅಧಿಕಾರಿಗಳು ವಿಳಂಬದೋರಣೆ ತೋರುತ್ತಿರುವುದು ಸಹ ಕಾಮಗಾರಿ ಕುಂಠಿತಕ್ಕೆ ಕಾರಣ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.