
ವಿಜಯಪುರ (ದೇವನಹಳ್ಳಿ): ‘ಬಹುಭಾಷೆಯಲ್ಲಿ ದ್ವಿಭಾಷೆ ಎಂಬ ಕುವೆಂಪು ಸೂತ್ರ ಒಪ್ಪಿಕೊಂಡಿರುವವನು ನಾನು. ನಮಗೆ ಕನ್ನಡ, ಇಂಗ್ಲಿಷ್ ಎರಡೇ ಭಾಷೆ ಸಾಕು. ಹಿಂದಿ ಭಾಷೆ ಬೇಕಾಗಿಲ್ಲ. ಎಂದಿಗೂ ಭಾಷಾ ದ್ವೇಷಿಗಳಾಗಬಾರದು. ಜತೆಗೆ ಶಿಕ್ಷಣದಲ್ಲಿ ಅನ್ಯಭಾಷೆ ಹೇರಿಕೆ ಸಹಿಸಬಾರದು’ ಎಂದು ಸಾಹಿತಿ ಡಾ.ವಿ.ಚಂದ್ರಶೇಖರ ನಂಗಲಿ ಅಭಿಪ್ರಾಯಪಟ್ಟರು.
ದೇವನಹಳ್ಳಿ ತಾಲ್ಲೂಕಿನ ಮುದುಗುರ್ಕಿ ಬಳಿಯ ನಾಗಾರ್ಜುನ ಎಂಜಿನಿಯರಿಂಗ್ ಮತ್ತು ತಾಂತ್ರಿಕ ಮಹಾವಿದ್ಯಾಲಯದಲ್ಲಿ ಶುಕ್ರವಾರ ‘ಪ್ರಜಾವಾಣಿ’ ಸಹಯೋಗದಲ್ಲಿ ಆಯೋಜಿಸಿದ್ದ ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೆರವೇರಿಸುವ ಮೂಲಕ ಚಾಲನೆ ನೀಡಿ ಬಳಿಕ ಮಾತನಾಡಿದರು.
‘ತಮಿಳುನಾಡಿನಲ್ಲಿ ಎರಡೇ ಭಾಷೆ ಇರುವುದು. ನಮ್ಮ ರಕ್ತದಲ್ಲೇ ಹಿಂದಿ ಭಾಷೆ ಇಲ್ಲ ಎಂದು ಸ್ಟಾಲಿನ್ ಹೇಳಿದ್ದಾರೆ. ಕನ್ನಡಿಗರಿಗೂ ಇಂತಹ ಗತ್ತು, ಗಾಂಭೀರ್ಯ ಬೇಕಾಗಿದೆ. ಎರಡು ಭಾಷೆ ಸಾಕು ನಮಗೆ. ಹಿಂದಿ ಕಲಿಯುವ ಅವಶ್ಯ ಇಲ್ಲ. ಆಸಕ್ತಿವುಳ್ಳವರು ಕಲಿಯಬಹುದು. ಆದರೆ, ಶೈಕ್ಷಣಿಕ ವಿದ್ಯಾಭ್ಯಾಸದಲ್ಲಿ ಹಿಂದಿ ಹೇರುವಂತಿಲ್ಲ. ಇದು ನನ್ನ ಖಚಿತ ಅಭಿಪ್ರಾಯ. ತಮಿಳುನಾಡಿನ ಭಾಷಾ ನೀತಿಯನ್ನು ದಕ್ಷಿಣದ ಎಲ್ಲ ರಾಜ್ಯಗಳು ಸ್ವೀಕರಿಸುವಂತ ಕಾಲ ಸನ್ನಿಹಿತವಾಗಲಿ’ ಎಂದು ಹಾರೈಸಿದರು.
ಅಮರ ಸಿಂಧುದ್ಭವ ಭೀಷ್ಮನಂತೆ ಅತ್ಯುನ್ನತಿಯಿಂದ ಕೂಡಿರುವ ಭಾಷೆ ಕನ್ನಡ. ಇಂಗ್ಲಿಷ್ ಭಾಷೆ ಕೇವಲ 500 ವರ್ಷಗಳ ಇತಿಹಾಸವಿರುವ ಭಾಷೆ. ಆದರೆ, ಕನ್ನಡ ಭಾಷೆಗೆ ಸುಮಾರು 2 ಸಾವಿರ ವರ್ಷಗಳ ಇತಿಹಾಸವಿದೆ. ಆದ್ದರಿಂದಲೇ ಕನ್ನಡ ನುಡಿ ಅತ್ಯುನ್ನತವಾದ ಭಾಷೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಕನ್ನಡ ನಾಡು ಹೇಗೆ ಅತ್ಯಂತ ಎತ್ತರದ ಪ್ರದೇಶವೋ, ಹಾಗೆಯೇ ಕನ್ನಡ ಸಾಹಿತ್ಯ ಪರಂಪರೆಯೂ ಅತ್ಯಂತ ಎತ್ತರವಾದದ್ದು. ಏಕೆಂದರೆ ಯಾವ ಭಾಷೆಯಲ್ಲೂ ಸಹ ಅಲ್ಲಮಪ್ರಭುವಿನಂತ ಚತುರ್ಮುಖ ಸೌಂದರ್ಯದ ವ್ಯಕ್ತಿ ಕಂಡು ಬರುವುದಿಲ್ಲ. ಅವನೊಬ್ಬ ಸಂತ, ವಿಜ್ಞಾನಿ, ಕವಿ, ತತ್ವಜ್ಞಾನಿ. ಇಂತಹ ವ್ಯಕ್ತಿ ಕನ್ನಡದಲ್ಲಿ ಇರುವುದೇ ಹೆಮ್ಮೆಯ ಸಂಗತಿ. ದೈಹಿಕ ಎತ್ತರದ ಜತೆಗೆ ಮನಸಿನ ಎತ್ತರವೂ ಬಹಳ ಮುಖ್ಯ. ಆಧುನಿಕ ಭಾರತದಲ್ಲಿ ಬುದ್ಧ ಮೌಂಟ್ ಎವರೆಸ್ಟ್. ಕನ್ನಡಿಗರಿಗೆ ಇದರ ಅರಿವಿಲ್ಲ. ಅಲ್ಲಮಪ್ರಭುವಿನಂತಹ ವಚನಕಾರ ಮತ್ತೊಬ್ಬನಿಲ್ಲ ಎಂದು ಬಣ್ಣಿಸಿದರು.
‘ಅಲ್ಲಮನಷ್ಟು ಎತ್ತರ ತಲುಪಲು ಯಾರಿಗೂ ಸಾಧ್ಯವಿಲ್ಲ. ಹಿಂದಿಯ ಕಬೀರ್, ತೆಲುಗಿನ ಯೋಗಿ ವೇಮನ, ಯುರೋಪಿಯನ್ ಭಾಷೆಗಳಲ್ಲಿ ಬರುವ ಕಲೀಲ್ ಇಬ್ರಾನ್ ಯಾರೂ ಅಲ್ಲಮನ ಎತ್ತರ ತಲುಪಲು ಸಾಧ್ಯವಿಲ್ಲ. ಆದ್ದರಿಂದಲೇ ಅಲ್ಲಮನನ್ನು ನಾನು ಮೌಂಟ್ ಎವರೆಸ್ಟ್ ಎಂದು ಕರೆಯುತ್ತೇನೆ. ಪ್ರಾಚೀನ ಭಾರತದಲ್ಲಿ ಬುದ್ಧಗುರು, ಮಧ್ಯಕಾಲೀನ ಭಾರತದಲ್ಲಿ ಅಲ್ಲಮಪ್ರಭು, ಆಧುನಿಕ ಭಾರತದಲ್ಲಿ ಸ್ವಾಮಿ ವಿವೇಕಾನಂದ ಮೌಂಟ್ ಎವರೆಸ್ಟ್. ಇದರಿಂದಲೇ ಕನ್ನಡಿಗರು ಬಹಳ ಅದೃಷ್ಟಶಾಲಿಗಳು. ಆದರೆ, ಅಲ್ಲಮಪ್ರಭುವಿನ ಇರುವಿಕೆಯನ್ನೇ ಕನ್ನಡಿಗರು ಮರೆತಿದ್ದಾರೆ’ ಎಂದು ಡಾ.ಚಂದ್ರಶೇಖರ್ ನಂಗಲಿ ಅಭಿಪ್ರಾಯಪಟ್ಟರು.
ಕಾರ್ಯಕ್ರಮದಲ್ಲಿ ಎನ್.ಸಿ.ಎಂ.ಎಸ್ ಪ್ರಾಂಶುಪಾಲರಾದ ಆನಂದಮ್ಮ, ಎನ್.ಪಿ.ಯು.ಸಿ ಪ್ರಾಂಶುಪಾಲರಾದ ಮಹಂತೇಶಪ್ಪ ಮಾತನಾಡಿದರು. ಕಾಲೇಜಿನ ಕಂಪ್ಯೂಟರ್ ಸೈನ್ಸ್ ವಿಭಾಗದ ಮುಖ್ಯಸ್ಥ ಡಾ.ಗೋಪಿನಾಥ್, ಡಾ.ಸಂಜೀವ್ ಕುಮಾರ್ ಹತ್ತೂರೆ (ಐ.ಎಸ್), ಡಾ.ಲೋಹಿತ್ (ಎಐ, ಎಂಎಲ್), ಡಾ.ವೆಂಕಟೇಶ್, ಎಚ್.ಆರ್. ವಿಭಾಗದ ಬೃಂದಾ, ಪತ್ರಕರ್ತ ನಾಗರಾಜು ಅಶ್ವತ್ಥ್ ಸೇರಿದಂತೆ ಸಂಸ್ಥೆಯ ಎಲ್ಲ ವಿಭಾಗಗಳ ಮುಖ್ಯಸ್ಥರು, ಪ್ರಾಧ್ಯಾಪಕರು, ಅಧ್ಯಾಪಕರು ಸೇರಿದಂತೆ ನೂರಾರು ವಿದ್ಯಾರ್ಥಿಗಳು ಹಾಜರಿದ್ದರು.
ಮರಗಳಿಗೂ ಕಟ್ಟಡಗಳಿಗೂ ಮದುವೆ
ಚಂಡೀಗಢ ಭಾರತದ ಅತ್ಯಂತ ಯೋಜನಾಬದ್ಧವಾದ ನಗರ. ಅಲ್ಲಿ ಮರಗಳಿಗೂ ಕಟ್ಟಡಗಳಿಗೂ ಮದುವೆ ಮಾಡಲಾಗಿದೆ ಎಂದು ಖ್ಯಾತ ವಾಸ್ತುಶಿಲ್ಪಿ ಕಾರ್ಬುಸಿಯರ್ ಹೇಳಿದ್ದಾನೆ. ಅದರಂತೆ ನಾಗಾರ್ಜುನ ಕಾಲೇಜಿನಲ್ಲೂ ಮರಗಳಿಗೂ ಕಟ್ಟಡಗಳಿಗೂ ಮದುವೆ ಮಾಡಲಾಗಿದೆ ಎಂದು ನಂಗಲಿ ಚಂದ್ರಶೇಖರ್ ಬಣ್ಣಿಸಿದರು. ಸೊಲೈಸ್ ಇಂಡಿಯಾ ಕಂಪನಿಯ ಪ್ರಕಾಶ್ ಆರ್.ಎಂ ಭಾಷೆಯ ಉಳಿವಿಗಾಗಿ ಹೆಚ್ಚೆಚ್ಚು ಕನ್ನಡ ಬಳಸಬೇಕು. ಈ ನಿಟ್ಟಿನಲ್ಲಿ ಕನ್ನಡ ಪತ್ರಿಕೆಗಳು ಕನ್ನಡ ಪುಸ್ತಕ ಕನ್ನಡ ಆಡಿಯೊಗಳ ಬಳಕೆ ಹೆಚ್ಚಾಗಬೇಕು ಎಂದರು. ನಾಗಾರ್ಜುನ ಸಮೂಹ ಶಿಕ್ಷಣ ಸಂಸ್ಥೆಗಳ ನಿರ್ದೇಶಕ ಡಾ.ಗೋಪಾಲಕೃಷ್ಣ ವ್ಯವಹಾರದ ಸ್ಥಳಗಳಲ್ಲಿ ಅನ್ಯಭಾಷಿಕರಿಗೆ ಕನ್ನಡ ಕಲಿಸುವ ಕೆಲಸವಾಗಬೇಕು. ಕನ್ನಡವನ್ನು ಹೆಮ್ಮೆಯಿಂದ ಮಾತನಾಡುವ ಮುಖೇನ ತಾಯಿನಾಡಿನ ಭಾಷಾ ಸೇವೆಗೆ ನಾವೆಲ್ಲರೂ ಮುಂದಾಗಬೇಕಿದೆ ಎಂದು ಕಿವಿಮಾತು ಹೇಳಿದರು. ನಾಗಾರ್ಜುನ ಎಂಜಿನಿಯರಿಂಗ್ ಕಾಲೇಜು ಪ್ರಾಂಶುಪಾಲ ಡಾ.ಜಿ.ತಿಪ್ಪೇಸ್ವಾಮಿ ‘ನಮ್ಮದು ಸಾವಯವ ಕರ್ನಾಟಕ ರಾಜ್ಯೋತ್ಸವ. ಕನ್ನಡವನ್ನು ಉಳಿಸಿ ಬೆಳೆಸುವ ಕೆಲಸವಾಗಬೇಕು. ನಾವು ಏನೇ ಮಾಡಿದರೂ ಕನ್ನಡದ ಚಿಂತನೆ ನಮ್ಮಲ್ಲಿ ಸದಾ ಅಡಕವಾಗಿರುತ್ತದೆ. ರಾಜ್ಯೋತ್ಸವ ಸುಸಂದರ್ಭದಲ್ಲಿ ನಾವೆಲ್ಲರೂ ಕನ್ನಡವನ್ನು ಪ್ರಕಾಶಮಾನವಾಗಿ ಬೆಳೆಸುವ ಪ್ರತಿಜ್ಞೆ ತೊಡೋಣ’ ಎಂದು ಅಭಿಪ್ರಾಯಪಟ್ಟರು.
ವಿಜೇತರಿಗೆ ಬಹುಮಾನ
ಕನ್ನಡ ರಾಜ್ಯೋತ್ಸವ ಅಂಗವಾಗಿ ಕಾಲೇಜಿನ ಜೋಲೋ ತಂಡದ ನೇತೃತ್ವದಲ್ಲಿ ಸ್ವರಚಿತ ಕವನ ಸಣ್ಣ ಕಥೆ ಪದಬಂಧ ಶಬ್ದಾರ್ಥ ಕಾಗುಣಿತ ಮುಂತಾದ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು. ಸ್ವರಚಿತ ಕವನ ಸ್ಪರ್ಧೆಯಲ್ಲಿ ಶೃತಿ ಆರ್ ಪ್ರಥಮ ಸಣ್ಣ ಕಥೆ ಸ್ಪರ್ಧೆಯಲ್ಲಿ ರಕ್ಷಿತಾ ಸಿ ಪ್ರಥಮ ಮೋಹಿತ್ ಕುಮಾರ್ ದ್ವಿತೀಯ ಪದಬಂಧ ಸ್ಪರ್ಧೇಯಲ್ಲಿ ಪೂಜಾ ಪ್ರಥಮ ಪ್ರೀತಿ ಆರ್. ದ್ವಿತೀಯ ಶಬ್ದಾರ್ಥ ಸ್ಪರ್ಧೆಯಲ್ಲಿ ಸ್ನೇಹ ಎಂ.ಎಸ್ ಪ್ರಥಮ ಗೌತಮಿ ಜಿ ದ್ವಿತೀಯ ಕಾಗುಣಿತ ಸ್ಪರ್ಧೆಯಲ್ಲಿ ಸ್ನೇಹ ಎನ್.ಪ್ರಥಮ ಬಹುಮಾನ ಪಡೆದುಕೊಂಡರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.