ಆನೇಕಲ್: ತಾಲ್ಲೂಕಿನ ಬೊಮ್ಮಸಂದ್ರದಲ್ಲಿ ರಾಜಕಾಲುವೆ ಒತ್ತುವರಿ ಪ್ರದೇಶದಲ್ಲಿ ನಿರ್ಮಿಸಿದ್ದ ಮನೆಗಳನ್ನು ಕಂದಾಯ ಇಲಾಖೆ ತೆರವುಗೊಳಿಸಿತು. ಇದರಿಂದಾಗಿ ಸುಮಾರು 25 ಕುಟುಂಬಗಳ ಕಾರ್ಮಿಕರು ಬೀದಿ ಪಾಲಾಗಿವೆ.
ಬೊಮ್ಮಸಂದ್ರ ಕೈಗಾರಿಕಾ ಪ್ರದೇಶದ ಸರ್ವೆ ನಂಬರ್ 10ರಲ್ಲಿ ರಾಜಕಾಲುವೆ ಒತ್ತುವರಿ ಪ್ರದೇಶದಲ್ಲಿ ಬಾಡಿಗೆ ಮನೆಗಳನ್ನು ನಿರ್ಮಿಸಲಾಗಿತ್ತು. ಅಮರಾವತಿ ಎಂಬುವರ ಪ್ಯಾಕಿಂಗ್ ಘಟಕದಲ್ಲಿ ಕೆಲಸ ಮಾಡುವ ಕಾರ್ಮಿಕರು ಈ ಮನೆಗಳಲ್ಲಿ ವಾಸವಾಗಿದ್ದರು. ಸೋಮವಾರ ಮತ್ತು ಮಂಗಳವಾರ ಕಂದಾಯ ಇಲಾಖೆ ದಾಳಿ ನಡೆಸಿ ಈ ಮನೆಗಳನ್ನು ತೆರವುಗೊಳಿಸಿತು. ಇದರ ಪರಿಣಾಮವಾಗಿ 45ಕ್ಕೂ ಹೆಚ್ಚು ಕಾರ್ಮಿಕರಿಗೆ ಆಸರೆ ಇಲ್ಲವಾಗಿದೆ.
ಹೊಟ್ಟೆ ಹೊರೆಯಲು ಪಶ್ಚಿಮ ಬಂಗಾಳ ಮತ್ತು ಓಡಿಶಾದಿಂದ ವಲಸೆ ಬಂದಿರುವ ಈ ಕುಟುಂಬಗಳು ಸ್ನಾನ, ಶೌಚಾಲಯ ಸೌಲಭ್ಯಗಳಿಲ್ಲದೆ ನರಕಯಾತನೆ ಪಡುತ್ತಿವೆ. ಎರಡು ತಿಂಗಳ ಹಸುಗೂಸಿಗೆ ತಾಯಿಯೊಬ್ಬರು ಹಾಲುಣಿಸಲು ಕೂಡ ಪರದಾಡುವ ಸ್ಥಿತಿ ಇದೆ.
ಮನೆ ಮಾಲೀಕರಾದ ಅಮರಾವತಿ, ‘ರಾಜಕಾಲುವೆ ಒತ್ತುವರಿ ಬಗ್ಗೆ ತಿಳಿದಿರಲಿಲ್ಲ. ಕಂದಾಯ ಇಲಾಖೆ ಯಾವುದೇ ಮುನ್ಸೂಚನೆ ನೀಡದೆ ಕಾರ್ಮಿಕರಿಗೆ ಪರ್ಯಾಯ ವ್ಯವಸ್ಥೆ ಮಾಡದೆ ತೆರವುಗೊಳಿಸಿದ್ದು ಬೇಸರ’ ಎಂದು ವಿವರಿಸಿದರು.
ಜಲಮೂಲ ಸಂರಕ್ಷಣೆಗಾಗಿ ಒತ್ತುವರಿ ತೆರವು ಸರಿ. ಆದರೆ, ಕಾರ್ಮಿಕರು ತಮ್ಮ ಎಲ್ಲ ಸಾಮಗ್ರಿಗಳನ್ನು ಕಾರ್ಖಾನೆಗಳಲ್ಲಿ ಇರಿಸಬೇಕಾಗಿ ಬಂದಿದೆ. ಅವರಿಗೆ ತಕ್ಷಣದ ಸಹಾಯದ ಅವಶ್ಯ ಇದೆ. ಸಂಬಂಧಿತ ಅಧಿಕಾರಿಗಳು ಈ ಕುಟುಂಬಗಳಿಗೆ ಅಗತ್ಯ ಸೌಲಭ್ಯ ಒದಗಿಸಬೇಕೆಂದು ಮನವಿ ಮಾಡಿದರು.
‘ಕಳೆದ 15 ವರ್ಷಗಳಿಂದ ವಾಸವಾಗಿದ್ದೇವು. ಏಕಾಏಕಿ ಮನೆಗಳನ್ನು ತೆರವುಗೊಳಿಸಿದ್ದರಿಂದ ಬದುಕು ಕಷ್ಟವಾಗಿದೆ. ಈ ಕಾರ್ಮಿಕರಲ್ಲಿ 10 ಮಂದಿ ಮಹಿಳೆಯರಿದ್ದಾರೆ. ಮಕ್ಕಳೂ ಇದ್ದಾರೆ.ಶುಭಾಂಕರ್ ಮಂಡಲ್, ಕಾರ್ಮಿಕ
ಏಕಾಏಕಿ ತೆರವುಗೊಳಿಸಿದ್ದರಿಂದ ಕಷ್ಟವಾಗಿದೆ. ಕಾರ್ಮಿಕರಿಗೆ ವಸತಿ ಊಟದ ಸೌಲಭ್ಯ ಕಲ್ಪಿಸಬೇಕು. ಕಳೆದ ಎರಡು ದಿನಗಳಿಂದ ರಸ್ತೆ ಮಧ್ಯೆ ಜೀವನ ನಡೆಸಬೇಕಾದ ಪರಿಸ್ಥಿತಿ ಬಂದಿದೆ.ರಮೇಶ್, ಸ್ಥಳೀಯ
ಹಸುಗೂಸಿಗೆ ಹಾಲುಣಿಸಲು ಪೋಷಣೆ ಮಾಡಲು ಕಷ್ಟವಾಗಿದೆ. ಹಾಗಾಗಿ ಮಾಲೀಕರು ಅಥವಾ ಸಂಬಂಧಪಟ್ಟವರು ಪರ್ಯಾಯ ವ್ಯವಸ್ಥೆ ಮಾಡಬೇಕು.ಸುಷ್ಮಿತಾ, ಕಾರ್ಮಿಕರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.