ADVERTISEMENT

ಸರ್ಜಾಪುರ | ಕೆಐಎಡಿಬಿ ಅಧಿಕಾರಿಗಳಿಗೆ ರೈತರ ತರಾಟೆ

​ಪ್ರಜಾವಾಣಿ ವಾರ್ತೆ
Published 1 ಮಾರ್ಚ್ 2026, 4:54 IST
Last Updated 1 ಮಾರ್ಚ್ 2026, 4:54 IST
ಆನೇಕಲ್ ತಾಲ್ಲೂಕಿನ ಸರ್ಜಾಪುರ ಮೇಡಹಳ್ಳಿ ಗ್ರಾಮಕ್ಕೆ ಭೇಟಿ ನೀಡಿದ್ದ ಕೆಐಎಡಿಬಿ ಅಧಿಕಾರಿಗಳ ವಿರುದ್ಧ ರೈತರು ಆಕ್ರೋಶ ವ್ಯಕ್ತಪಡಿಸಿದರು
ಆನೇಕಲ್ ತಾಲ್ಲೂಕಿನ ಸರ್ಜಾಪುರ ಮೇಡಹಳ್ಳಿ ಗ್ರಾಮಕ್ಕೆ ಭೇಟಿ ನೀಡಿದ್ದ ಕೆಐಎಡಿಬಿ ಅಧಿಕಾರಿಗಳ ವಿರುದ್ಧ ರೈತರು ಆಕ್ರೋಶ ವ್ಯಕ್ತಪಡಿಸಿದರು   

ಸರ್ಜಾಪುರ(ಆನೇಕಲ್): ಸರ್ಜಾಪುರ ಹೋಬಳಿಯಲ್ಲಿ ಕೆಐಎಡಿಬಿ ಭೂಸ್ವಾಧೀನ ಪ್ರಕ್ರಿಯೆಯ ಸಂಬಂಧ ತಿಳುವಳಿಕೆ ನೋಟಿಸ್‌ ನೀಡಲು ಶುಕ್ರವಾರ ಸಂಜೆ ಬಂದ ಅಧಿಕಾರಿಗಳನ್ನು ರೈತರು ತರಾಟೆಗೆ ತೆಗೆದುಕೊಂಡಿದ್ದಾರೆ. ನೋಟಿಸ್‌ ಸ್ವೀಕರಿಸಲು ರೈತರು ನಿರಾಕರಿಸಿದರು.

ಕೆಐಎಡಿಬಿ ಭೂಸ್ವಾಧಿನ ವಿರೋಧಿಸಿ ರೈತರು ನಡೆಸುತ್ತಿರುವ ಅಹೋರಾತ್ರಿ ಧರಣಿ 260 ದಿನ ಪೂರೈಸಿದ್ದು, ಪ್ರತಿಭಟನಾ ಸ್ಥಳಕ್ಕೆ ಬಂದ ಅಧಿಕಾರಿಗಳಿಗೆ ಮಹಿಳೆಯರು ಸೇರಿದಂತೆ ನೂರಾರು ಮಂದಿ ರೈತರು ಚಳಿ ಬಿಡಿಸಿದರು.

ಸರ್ಜಾಪುರ ಹೋಬಳಿಯಲ್ಲಿ ಸ್ವಿಫ್ಟ್‌ ಸಿಟಿ ನಿರ್ಮಾಣಕ್ಕಾಗಿ 2,451 ಎಕರೆ ಭೂಮಿಯನ್ನು ಕೆಐಎಡಿಬಿ ಭೂಸ್ವಾಧೀನ ಪಡಿಸಿಕೊಳ್ಳಲು ಸಿದ್ಧತೆ ನಡೆಸಿದೆ. ಆದರೆ ಭೂಸ್ವಾಧೀನಕ್ಕೆ ರೈತರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಭೂಸ್ವಾಧೀನ ಖಂಡಿಸಿ 260ಕ್ಕೂ ಹೆಚ್ಚು ದಿನಗಳಿಂದ ಅಹೋರಾತ್ರಿ ಪ್ರತಿಭಟನೆ ನಡೆಸುತ್ತಿದ್ದಾರೆ.

ADVERTISEMENT

ರೈತರೊಂದಿಗೆ ಚರ್ಚಿಸಲು ವಿಶೇಷ ಭೂಸ್ವಾಧೀನಾಧಿಕಾರಿ ಮಮತ ಅವರು ಆಗಮಿಸಿದ್ದರು. ಆದರೆ ರೈತರು ‘ಯಾವುದೇ ಕಾರಣಕ್ಕೂ ಒಂದಿಂಚು ಭೂಮಿ ನೀಡುವುದಿಲ್ಲ. ನಮ್ಮ ಪ್ರಾಣವಿರುವವರೆಗೂ ನಮ್ಮ ಭೂಮಿ ನಮ್ಮ ಹಕ್ಕು’ ಎಂದು ಘೋಷಣೆ ಮೊಳಗಿಸಿದರು. ತಿಳುವಳಿಕೆ ನೋಟಿಸ್‌ ನೀಡಲು ಬಂದ ಅಧಿಕಾರಿಗಳೊಂದಿಗೆ ಮಾತಿನ ಚಕಮಕಿ ನಡೆಯಿತು.

ಕೆಐಎಡಿಬಿ ಅಧಿಕಾರಿಗಳ ವಿರುದ್ಧ ಘೋಷಣೆ ಕೂಗಿದ ರೈತರು, ‘ಅನ್ನ ನೀಡುವ ರೈತನ ಮೇಲೆ ದೌರ್ಜನ್ಯ ಸಲ್ಲದು’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

‘ಸರ್ಜಾಪುರದ ಭೂಮಿ ಕೃಷಿ ಭೂಮಿಯಾಗಿದೆ. ಈ ಮಣ್ಣನ್ನು ನಂಬಿ ನಾವು ಜೀವನ ನಡೆಸುತ್ತಿದ್ದೇವೆ. ಆದರೆ ಕೆಐಎಡಿಬಿಯು ರೈತರ ಭೂಮಿಯನ್ನು ಸ್ವಾಧೀನ ಪಡಿಸಿಕೊಂಡರೆ ರೈತರು ಬದುಕಿಗಾಗಿ ಎಲ್ಲಿಗೆ ಹೋಗಬೇಕು. ರೈತರ ಕೃಷಿ ಭೂಮಿಯನ್ನು ಬಂಜರು ಭೂಮಿ ಎಂದು ವರದಿ ನೀಡಿದ್ದಾರೆ. ತೋಟಗಾರಿಕೆ, ಕೃಷಿ, ತಾಲ್ಲೂಕು ಆಡಳಿತ, ಕೆಐಎಡಿಬಿ ಅಧಿಕಾರಿಗಲು ಜಂಟಿಯಾಗಿ ಸರ್ಜಾಪುರ ಹೋಬಳಿಗೆ ಭೇಟಿ ನೀಡಿ ಇಲ್ಲಿನ ಭೂಮಿಯನ್ನು ಪರಿಶೀಲನೆ ನಡೆಸಬೇಕು. ಸುಳ್ಳು ವರದಿಗೆ ರೈತರು ಜಗ್ಗುವ ಪ್ರಶ್ನೆಯೇ ಇಲ್ಲ’ ಎಂದು ರೈತ ಜಯಪ್ರಕಾಶ್‌ ಆಕ್ರೋಶ ವ್ಯಕ್ತಪಡಿಸಿದರು.

ಬಿಗಿ ಪೊಲೀಸ್‌ ಬಂದೋಬಸ್ತ್‌: ಕೆಐಎಡಿಬಿ ಅಧಿಕಾರಿಗಳು ಗ್ರಾಮಗಳಿಗೆ ಭೇಟಿ ನೀಡಿದ್ದ ಹಿನ್ನೆಲೆಯಲ್ಲಿ ಬಿಗಿ ಪೊಲೀಸ್‌ ಬಂದೋಬಸ್ತ್‌ ಏರ್ಪಡಿಸಲಾಗಿತ್ತು. ಎಎಸ್ಪಿಗಳಾದ ವೆಂಕಟೇಶ್‌ ಪ್ರಸನ್ನ, ನಾಗರಾಜು, ಡಿವೈಎಸ್ಪಿ ಮಲ್ಲೇಶ್‌, ಸರ್ಕಲ್‌ ಇನ್‌ಸ್ಪೆಕ್ಟರ್‌ಗಳಾದ ಮಂಜುನಾಥ್‌, ನವೀನ್‌, ಸಂಜೀವ್‌ ಮಹಾಜನ್‌ ನೇತೃತ್ವದಲ್ಲಿ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿತ್ತು.

260 ದಿನ ಪೂರೈಸಿದ ಅಹೋರಾತ್ರಿ ಧರಣಿ  ಕೆಐಎಡಿಬಿ ಅಧಿಕಾರಿಗಳೊಂದಿಗೆ ಮಾತಿನ ಚಕಮಕಿ ‘ನಮ್ಮ ಪ್ರಾಣವಿರುವವರೆಗೂ ನಮ್ಮ ಭೂಮಿ ನಮ್ಮ ಹಕ್ಕು’

ತಾಲ್ಲೂಕು ಕಚೇರಿ ಕೆಐಎಡಿಬಿ ಕಚೇರಿ ಮುತ್ತಿಗೆ ಸೇರಿದಂತೆ ಹಲವು ಹೋರಾಟ ನಡೆಸಿದ್ದೇವೆ. 260 ದಿನಗಳಿಂದ ರೈತರು ಹೋರಾಟ ನಡೆಸುತ್ತಿದ್ದರೂ ಯಾರಿಂದಲೂ ಸ್ಪಂದನೆ ದೊರೆತಿಲ್ಲ. ರೈತರ ಹೋರಾಟಕ್ಕೆ ಬೆಲೆಯೇ ಇಲ್ವೆ
ದೇವರಾಜು ರೈತ

ಪಹಣಿಯಲ್ಲಿ ಕೆಐಎಡಿಬಿ ಹೆಸರು ತೆಗೆಯಲು ಆಗ್ರಹ

‘ಸರ್ಜಾಪುರ ಹೋಬಳಿಯ ಭೂಸ್ವಾಧೀನ ಪ್ರಕ್ರಿಯೆಯ ಸಂಬಂಧ ಕೆಲ ರೈತರ ಭೂಮಿಗಳ ಪಹಣಿಯಲ್ಲಿ ಕೆಐಎಡಿಬಿ ಪ್ರಾಥಮಿಕ ಅಧಿಸೂಚನೆಯ ಭೂಸ್ವಾಧೀನ ಎಂದು ಬರುತ್ತಿದೆ. ಪಹಣಿಯಲ್ಲಿ ನಮ್ಮ ಹೆಸರುಗಳ ಬರುವವರೆಗೂ ಕೆಐಎಡಿಬಿ ಅಧಿಕಾರಿಗಳೊಂದಿಗೆ ಚರ್ಚೆಗೆ ನಾವು ಸಿದ್ಧರಿಲ್ಲ. ಹಾಗಾಗಿ ಕೆಐಎಡಿಬಿಯು ಪಹಣಿಯಲ್ಲಿ ಪಹಣಿಯಲ್ಲಿ ಹೆಸರು ಬದಲಾವಣೆ ಮಾಡಲು ಸೂಚನೆ ನೀಡಬೇಕು’ ಎಂದು ರೈತ ಮಹಿಳೆ ಉಮಾ ಪರಶುರಾಮ್‌ ಅಧಿಕಾರಿಗಳನ್ನು ಒತ್ತಾಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.