ADVERTISEMENT

ಏಕರೂಪ ಆಹಾರ ಪದ್ಧತಿಯಿಂದ ಅನಾರೋಗ್ಯ: ಡಾ.ಕೆ.ಸಿ ರಘು

​ಪ್ರಜಾವಾಣಿ ವಾರ್ತೆ
Published 24 ಜನವರಿ 2021, 5:58 IST
Last Updated 24 ಜನವರಿ 2021, 5:58 IST
ಕಾರ್ಯಕ್ರಮದಲ್ಲಿ ಆಹಾರ ತಜ್ಞ ಡಾ.ಕೆ.ಸಿ.ರಘು ಮಾತನಾಡಿದರು
ಕಾರ್ಯಕ್ರಮದಲ್ಲಿ ಆಹಾರ ತಜ್ಞ ಡಾ.ಕೆ.ಸಿ.ರಘು ಮಾತನಾಡಿದರು   

ದೊಡ್ಡಬಳ್ಳಾಪುರ: ಪ್ರಕೃತಿಯಲ್ಲಿ ಜೀವವೈವಿಧ್ಯತೆ ಅಗತ್ಯವಿರುವಂತೆ ಆಹಾರ ಪದ್ಧತಿಯಲ್ಲಿಯೂ ವೈವಿಧ್ಯತೆ ಇರಬೇಕು. ಆಹಾರ ವೈವಿಧ್ಯತೆ ಇಲ್ಲದಿರುವುದು ಹಲವು ರೋಗಗಳಿಗೆ ಕಾರಣವಾಗುತ್ತಿದೆ ಎಂದು ಆಹಾರ ತಜ್ಞ ಹಾಗೂ ಸಮಾಜ ಚಿಂತಕ ಡಾ.ಕೆ.ಸಿ.ರಘು ಕಳವಳ ವ್ಯಕ್ತಪಡಿಸಿದರು.

ಜಿಲ್ಲಾ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಯುವ ಸಂಚಲನದ ಸಹಯೋಗದೊಂದಿಗೆ ನಗರದ ಕೊಂಗಾಡಿಯಪ್ಪ ಕಾಲೇಜಿನಲ್ಲಿ ಸ್ವಾಮಿ ವಿವೇಕಾನಂದ ಜನ್ಮದಿನಾಚರಣೆ ಹಾಗೂ ರಾಷ್ಟ್ರೀಯ ಯುವ ಸಪ್ತಾಹ-2021ರ ಅಂಗವಾಗಿ ನಡೆದ ಸ್ವಾಮಿ ವಿವೇಕಾನಂದರ ವಿಚಾರಧಾರೆ ಹಾಗೂ ಪ್ರಸ್ತುತ ಯುವಜನರ ಆರೋಗ್ಯ ಕುರಿತ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

’ಪಾಶ್ಚಿಮಾತ್ಯ ಸಂಸ್ಕೃತಿ ಪ್ರಭಾವದಿಂದಾಗಿ ಸತ್ವಯುಕ್ತವಾದ ಪಾರಂಪರಿಕ ಆಹಾರ ಪದ್ಧತಿ ಕಡೆಗಣಿಸುತ್ತಿದ್ದೇವೆ. ಆರೋಗ್ಯ ಎಂದರೆ ಆಸ್ಪತ್ರೆ, ವೈದ್ಯರು ಎನ್ನುವ ಭಾವನೆ ಇದೆ. ಅಮೆರಿಕದಲ್ಲಿಯೂ ಆಹಾರಕ್ಕೆ ₹5 ಸಾವಿರ ಖರ್ಚು ಮಾಡಿದರೆ ಆಸ್ಪತ್ರೆಗಳಿಗಾಗಿ ₹10ಸಾವಿರ ಖರ್ಚು ಮಾಡಲಾಗುತ್ತಿದೆ. ಲಕ್ಷಾಂತರ ರೀತಿಯ ವಾಸನೆ ಗ್ರಹಿಸುವ ಗ್ರಂಥಿಗಳಿಗೆ ನಾವು ಕೆಲಸ ನೀಡುತ್ತಿಲ್ಲ. ದೇಹದ ಬ್ಯಾಕ್ಟೀರಿಯಾಗಳ ಚಲನವಲನ ಅರ್ಥೈಸಿಕೊಳ್ಳುತ್ತಿಲ್ಲ‘ ಎಂದು ಹೇಳಿದರು.

ADVERTISEMENT

ದೇಹದಲ್ಲಿ ಸಕ್ಕರೆ ಅಂಶ, ಉಪ್ಪಿನಾಂಶ ಹೆಚ್ಚು ಮಾಡುವ ಆಹಾರಕ್ಕೆ ಆದ್ಯತೆ ನೀಡುತ್ತಿದ್ದೇವೆ ಹೊರತು, ನಿಧಾನವಾಗಿ ಜೀರ್ಣವಾಗಿ ದೇಹಕ್ಕೆ ಪೌಷ್ಟಿಕಾಂಶ ನೀಡುವ ಆಹಾರ ಮರೆಯುತ್ತಿದ್ದೇವೆ. ಉತ್ತಮ ಆಹಾರ ಪದ್ಧತಿಯಿಂದಾಗಿ ಶೇ90ರಷ್ಟು ರೋಗ ತಡೆಗಟ್ಟಬಹುದಾಗಿದೆ ಎಂದು ತಿಳಿಸಿದರು.

ಸಮಾರಂಭದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲ ಮೇಜರ್ ಬಿ.ತಜಾಮುಲ್ಲಾ ಪಾಷ ವಹಿಸಿದ್ದರು. ಯುವ ಸಂಚಲನ ಅಧ್ಯಕ್ಷ ಚಿದಾನಂದಮೂರ್ತಿ, ದಿವಾಕರ್‌,ನಾಗದಳ ಸಂಚಾಲಕ ಸುಂ.ಸು.ಬದ್ರೀನಾಥ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.