
ದೊಡ್ಡಬಳ್ಳಾಪುರ: ಮಾತೃಭಾಷೆ ಭೋಜಪುರಿಯಾದರೂ ಈಕೆಗೆ ಕನ್ನಡವೇ ಅಚ್ಚುಮೆಚ್ಚು. ಕನ್ನಡ ಮಾಧ್ಯಮದಲ್ಲೇ ಓದುತ್ತಿರುವ ಈ ಬಾಲಕಿ ಎಸ್ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಕನ್ನಡ ವಿಷಯಲ್ಲಿ 125ಕ್ಕೆ 125 ಸಾಧನೆ ಮಾಡಿದ್ದಾಳೆ.
ಈಕೆ ಹೆಸರು ಗರೀಮಾ. ಬಿಹಾರದ ವೈಶಾಲಿ ಜಿಲ್ಲೆಯ ಗರೀಮಾ ಕುಟುಂಬ ಉದ್ಯೋಗ ಅರಸಿ ಬಂದು ತಾಲ್ಲೂಕಿನ ಬಾಶೆಟ್ಟಿಹಳ್ಳಿ ಕೈಗಾರಿಕಾ ಪ್ರದೇಶದಲ್ಲಿ ವಾಸವಿದೆ. ಇಲ್ಲಿ ಕೆಲಸ ಪಡೆದು, ಉದ್ಯಮ ಕಟ್ಟಿ, ಹಲವಾರು ವರ್ಷಗಳಿಂದ ಈ ನೆಲ, ಜಲ ಬಳಸುತ್ತಿದ್ದರೂ ಕನ್ನಡ ಏಕೆ ಕಲಿಯಬೇಕು ಎಂದು ಪ್ರಶ್ನಿಸುವವರ ನಡುವೆ ಗರೀಮಾ ಕನ್ನಡ ಪ್ರೇಮ ಮೆರೆಯುತ್ತಿದ್ದಾಳೆ.
ಪ್ರಾಥಮಿಕ ಶಿಕ್ಷಣವನ್ನು ಕನ್ನಡದಲ್ಲಿ, ಪ್ರೌಢ ಶಿಕ್ಷಣವನ್ನು ಇಂಗ್ಲಿಷ್ ಮಾಧ್ಯಮದಲ್ಲಿ ಕಲಿತಿದ್ದು, 2025ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಕನ್ನಡ ಭಾಷಾ ವಿಷಯದಲ್ಲಿ ಶೇ 100ರಷ್ಟು ಅಂಕಗಳಿಸಿದ್ದಾಳೆ.
ತಾಲ್ಲೂಕಿನ ಬಾಶೆಟ್ಟಿಹಳ್ಳಿ ಕೈಗಾರಿಕಾ ಪ್ರದೇಶದಲ್ಲಿ ಗಾರ್ಮೆಂಟ್ಸ್ ಹಾಗೂ ಕೈಗಾರಿಕೆಗಳಲ್ಲಿ ಕೂಲಿ ಕೆಲಸ ಹುಡುಕಿಕೊಂಡು ಉತ್ತರ ಭಾರತದ ಬಿಹಾರದಿಂದ ಬಂದ ಗರೀಮಾ ಕುಮಾರಿ ತಾಯಿ ಮುನ್ನೀದೇವಿ, ತಂದೆ ರಾಮ್ ಪ್ರವೇಶ್ ರಾಮ್ ಅವರು ಇಲ್ಲಿಯೇ ನೆಲೆ ನಿಂತು, ಬಾಶೆಟ್ಟಿಹಳ್ಳಿಯಲ್ಲಿನ ಅಜಾಕ್ಸ್ ಕನ್ನಡ ಸರ್ಕಾರಿ ಪಬ್ಲಿಕ್ ಶಾಲೆಗೆ ತಮ್ಮ ಇಬ್ಬರು ಮಕ್ಕಳನ್ನು ಸೇರಿಸಿದ್ದರು.
‘ಮನೆಯಲ್ಲಿ ಅಪ್ಪ, ಅಮ್ಮ, ಅಣ್ಣನೊಂದಿಗೆ ಭೋಜುಪುರಿ ಭಾಷೆಯಲ್ಲಿ ಮಾತನಾಡಿದರೂ, ನನ್ನ ಶಾಲೆಯಲ್ಲಿನ ಸ್ನೇಹಿತರು ಹಾಗೂ ಶಿಕ್ಷಕರೊಂದಿಗೆ 1ನೇ ತರಗತಿಯಿಂದಲೇ ಕನ್ನಡದಲ್ಲಿ ಮಾತನಾಡುತ್ತಿದ್ದೆ. ಅಣ್ಣ ಸಹ ಕನ್ನಡ ಮಾಧ್ಯಮದಲ್ಲೇ ಓದುತ್ತಿದ್ದರಿಂದ ಕನ್ನಡ ಕಲಿಯಲು ಕಷ್ಟ ಅನ್ನಿಸಲಿಲ್ಲ. ಕನ್ನಡ ಅಂದರೆ ನನಗಿಷ್ಟ. ಈ ಭಾಷೆ ಮಾತನಾಡಲು, ಬರೆಯಲು ಚೆಂದ ’ ಎನ್ನುತ್ತಾರೆ ಗರೀಮಾ ಕುಮಾರಿ.
ವೈದ್ಯೆಯಾಗುವ ಗುರಿಯೊಂದಿಗೆ ಗರೀಮಾ ಕುಮಾರಿ ಈಗ ನಗರದ ಶ್ರೀವಾಣಿ ಪದವಿ ಪೂರ್ವ ಕಾಲೇಜಿನಲ್ಲಿ ಪ್ರಥಮ ವರ್ಷದ ವಿಜ್ಞಾನ ವಿಭಾಗದಲ್ಲಿ ವ್ಯಾಸಂಗ ಮಾಡುತ್ತಿದ್ದರೆ, ಅಣ್ಣ ಬೆಂಗಳೂರಿನ ಕಾಲೇಜಿನಲ್ಲಿ ಎಂಜಿನಿಯರಿಂಗ್ ಓದುತ್ತಿದ್ದಾನೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.