
ದೊಡ್ಡಬಳ್ಳಾಪುರದ ಮತ ಎಣಿಕೆ ಕೇಂದ್ರದ ಬಳಿ ಬಿಜೆಪಿ ಕಾರ್ಯಕರ್ತರು ಶಾಸಕರ ಮೆರವಣಿಗೆ ನಡೆಸುವ ಮೂಲಕ ಸಂಭ್ರಮಸಿದರು
ದೊಡ್ಡಬಳ್ಳಾಪುರ: ಬಾಶೆಟ್ಟಿಹಳ್ಳಿಯಲ್ಲಿ ಪಟ್ಟಣ ಪಂಚಾಯಿತಿ ಚುನಾವಣೆ ಫಲಿತಾಂಶ ಬುಧವಾರ ಪ್ರಕಟವಾಗಿದೆ. 19 ವಾರ್ಡ್‌ಗಳಲ್ಲಿ ರಾಜ್ಯದಲ್ಲಿ ಆಡಳಿತರೂಢ ಕಾಂಗ್ರೆಸ್‌ನ ಕೇವಲ ಮೂರು ಅಭ್ಯರ್ಥಿಗಳು ಮಾತ್ರ ಗೆಲವು ಸಾಧಿಸಿದ್ದು, ಸರ್ಕಾರದ ‘ಪಂಚ ಗ್ಯಾರಂಟಿಗಳು’ ‘ಕೈ’ ಹಿಡಿದಂತೆ ಕಾಣುತ್ತಿಲ್ಲ.
ಬಾಶೆಟ್ಟಿಹಳ್ಳಿ ಪಟ್ಟಣ ಪಂಚಾಯಿತಿ ಚುನಾವಣಾ ಪ್ರಚಾರ ಸಭೆಗಳಲ್ಲಿ ಮಾಜಿ ಶಾಸಕ ಟಿ.ವೆಂಕಟರಮಣಯ್ಯ ಅವರು ರಾಜ್ಯ ಸರ್ಕಾರದ ಪಂಚ ಗ್ಯಾರಂಟಿಗಳು ಅದರಲ್ಲೂ ಗೃಹಲಕ್ಷ್ಮಿ, ಗೃಹಜ್ಯೋತಿ ಅಡಿ ಉಚಿತ ವಿದ್ಯುತ್ ನೀಡುತ್ತಿರುವ ಬಗ್ಗೆಯೇ ಹೇಳುತ್ತಿದ್ದರು. ಆದರೆ ಮಾಜಿ ಶಾಸಕರ ಈ ಯಾವುದೇ ಮಾತುಗಳು ಸಹ ಮತಗಳಾಗಿ ಪರಿವರ್ತನೆಯಾಗುವಲ್ಲಿ ವಿಫಲವಾಗಿದ್ದು, ಕಾಂಗ್ರೆಸ್ ಮೂರು ಸ್ಥಾನಗಳಿಗೆ ತೃಪ್ತಿ ಪಟ್ಟುಕೊಳ್ಳುವಂತಾಗಿದೆ.
ಬಾಶೆಟ್ಟಿಹಳ್ಳಿ ಪಟ್ಟಣ ಪಂಚಾಯಿತಿ ಚುನಾವಣೆ ಬಿಜೆಪಿ ಪಾಲಿಗೆ ಸಂಘಟನೆಗೆ ಹೊಸ ಉತ್ಸಾಹ ಮೂಡಿಸಿರುವುದು ಒಂದು ಕಡೆಯಾದರೆ, ಇಲ್ಲಿಂದ ಮುಂದೆ ತಾಲ್ಲೂಕಿನಲ್ಲಿ ನಡೆಯಲಿರುವ ಗ್ರಾಮ ಪಂಚಾಯಿತಿ, ಜಿಲ್ಲಾ ಪಂಚಾಯಿತಿ ನಂತರ ವಿಧಾನಸಭಾ ಚುನಾವಣೆಗೂ ಮುನ್ನುಡಿ ಬರೆದಿದೆ.
ಬಾಶೆಟ್ಟಿಹಳ್ಳಿ ಭಾಗದಲ್ಲಿ ತಮ್ಮ ಪ್ರಭಾವ ಹೊಂದಿದ್ದ ಬಿಜೆಪಿ ಮುಖಂಡ ಹಾಗೂ ಬಮೂಲ್ ನಿರ್ದೇಶಕ ಬಿ.ಸಿ.ಆನಂದಕುಮಾರ್ ಪಕ್ಷದ ಪರವಾಗಿ ಎಲ್ಲೂ ಶಾಸಕರೊಂದಿಗೆ ಪ್ರಚಾರದಲ್ಲಿ ಕಾಣಿಸಿಕೊಂಡಿಲ್ಲ. ಬದಲಿಗೆ ತಮ್ಮ ಹತ್ತಿರದ ಸಂಬಂಧಿ ಎಳ್ಳುಪುರ ವಾರ್ಡ್‌ನಲ್ಲಿ ಅಂಬರೀಶ್ ಸೇರಿದಂತೆ ಮೂರು ವಾರ್ಡ್‌ಗಳಲ್ಲಿ ಸ್ವತಂತ್ರ ಅಭ್ಯರ್ಥಿಗಳನ್ನು ಬೆಂಬಲಿಸುವ ಮೂಲಕ ಪ್ರಚಾರ ನಡೆಸಿದರು.
ಇದರಿಂದಾಗಿ ನಿರಾಯಸವಾಗಿ ಜಯಗಳಿಸುವ ಅವಕಾಶ ಇದ್ದ ಬಿಜೆಪಿ ಅಭ್ಯರ್ಥಿಗಳು ಹಾಗೂ ಮುಖಂಡರು ತೀವ್ರ ಕಸರತ್ತು ನಡೆಸುವಂತೆ ಹಾಗೂ ಅಭ್ಯರ್ಥಿಗಳಿಗೆ ಚುನಾವಣೆ ದುಬಾರಿಯಾಗುವಂತೆ ಮಾಡಿತ್ತು. ಅಂತಿಮವಾಗಿ ಬಿಜೆಪಿ ಹೆಚ್ಚು ಸ್ಥಾನಗಳನ್ನು ಗಳಿಸುವ ಮೂಲಕ ಅಧಿಕಾರದ ಚುಕ್ಕಣಿ ಹಿಡಿದಿದೆ. ಆದರೆ ಭಿನ್ನಮತ ಶಮನವಾಗುತ್ತದ ಕಾದು ನೋಡಬೇಕಿದೆ.
ಬಿಜೆಪಿ ಅಭ್ಯರ್ಥಿಗಳ ಸೋಲಿಗೆ ಯಾರು ಎಷ್ಟೇ ರೀತಿಯ ಪ್ರಯತ್ನ ಮಾಡಿದರು ಸಹ ಮತದಾರರು ಬಿಜೆಪಿ ಅಭ್ಯರ್ಥಿಗಳನ್ನು ಬೆಂಬಲಿಸಿದ್ದಾರೆ. ಕಾಂಗ್ರೆಸ್ ಗ್ಯಾರಂಟಿಗಳು ಮತದಾರರಲ್ಲಿ ವಾರಂಟಿ ಕಳೆದುಕೊಂಡಿವೆ.ಧೀರಜ್ ಮುನಿರಾಜು, ಶಾಸಕ
ತಕ್ಷಣದ ಲಾಭದ ಮುಂದೆ ನಮ್ಮ ಅಭಿವೃದ್ಧಿ ಕೆಲಸ, ರಾಜ್ಯ ಸರ್ಕಾರದ ಗ್ಯಾರಂಟಿಗಳನ್ನು ಮತದಾರರು ಮರೆತಿದ್ದಾರೆ. ಸೋಲಿಗೆ ಹೆದರದೆ ಪಕ್ಷ ಸಂಘಟಿಸಲಾಗುವುದುಅಪ್ಪಿ ವೆಂಕಟೇಶ್, ಅಧ್ಯಕ್ಷ, ಕಾಂಗ್ರೆಸ್ ಕಸಬಾ ಬ್ಲಾಕ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.