ADVERTISEMENT

ಪ್ರೇಮಿಗಳ ದಿನ: 60 ದಶಲಕ್ಷ ಗುಲಾಬಿ ರಫ್ತು; ಕಳೆದ ವರ್ಷಕ್ಕಿಂತ ಶೇ.79ರಷ್ಟು ಏರಿಕೆ

​ಪ್ರಜಾವಾಣಿ ವಾರ್ತೆ
Published 18 ಫೆಬ್ರುವರಿ 2026, 5:43 IST
Last Updated 18 ಫೆಬ್ರುವರಿ 2026, 5:43 IST
ಪ್ರೇಮಿಗಳ ದಿನದ ಹಿನ್ನೆಲೆಯಲ್ಲಿ ದೇವನಹಳ್ಳಿ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಕಾರ್ಗೊ ವಿಭಾಗದಲ್ಲಿ ರಫ್ತಿಗೆ ಸಿದ್ಧಗೊಂಡಿರುವ ಗುಲಾಬಿ ಹೂವು
ಪ್ರೇಮಿಗಳ ದಿನದ ಹಿನ್ನೆಲೆಯಲ್ಲಿ ದೇವನಹಳ್ಳಿ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಕಾರ್ಗೊ ವಿಭಾಗದಲ್ಲಿ ರಫ್ತಿಗೆ ಸಿದ್ಧಗೊಂಡಿರುವ ಗುಲಾಬಿ ಹೂವು   

ದೇವನಹಳ್ಳಿ: ಪ್ರೇಮಿಗಳ ದಿನದ ಹಿನ್ನೆಲೆಯಲ್ಲಿ ವಿಶ್ವದಾದ್ಯಂತ ತಾಜಾ ಗುಲಾಬಿಗಳಿಗೆ ಭಾರಿ ಬೇಡಿಕೆ ಇತ್ತು. ದೇವನಹಳ್ಳಿ ಕೆಂಪೇಗೌಡ ಅಂತರ ರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಈ ಬಾರಿ ದಾಖಲೆ ಪ್ರಮಾಣದ ಹೂವುಗಳನ್ನು ರಫ್ತು ಮಾಡಲಾಗಿದೆ.

ಒಟ್ಟು ಸುಮಾರು 60 ದಶಲಕ್ಷ ಗುಲಾಬಿ ಹೂವುಗಳನ್ನು 26 ಅಂತರರಾಷ್ಟ್ರೀಯ ಮತ್ತು 47 ದೇಶಿ ವಿಮಾನ ನಿಲ್ದಾಣಗಳಿಗೆ ಕಳುಹಿಸಿಕೊಡಲಾಗಿದೆ. 2,700 ಮೆಟ್ರಿಕ್ ಟನ್‌ಗಿಂತ ಹೆಚ್ಚು ತೂಕದ ಈ ರಫ್ತು, ಕಳೆದ ವರ್ಷಕ್ಕೆ ಹೋಲಿಸಿದರೆ ಹೂವಿನ ಸಂಖ್ಯೆಯಲ್ಲಿ ಶೇ38 ಮತ್ತು ಒಟ್ಟು ತೂಕದಲ್ಲಿ ಶೇ64 ರಷ್ಟು ಏರಿಕೆಯಾಗಿದೆ.

ಅಂತರರಾಷ್ಟ್ರೀಯ ಮಟ್ಟದಲ್ಲಿ ಸುಮಾರು 305 ಮೆಟ್ರಿಕ್ ಟನ್ ಹೂವುಗಳನ್ನು ರವಾನಿಸಲಾಗಿದೆ. ಸಿಂಗಪುರ ಪ್ರಮುಖ ತಾಣವಾಗಿ ಹೊರಹೊಮ್ಮಿದೆ. ನಂತರದ ಸ್ಥಾನಗಳಲ್ಲಿ ಕೌಲಾಲಂಪುರ, ಅಬುಧಾಬಿ, ನ್ಯೂಯಾರ್ಕ್ ಮತ್ತು ಕುವೈತ್ ನಗರಗಳಿವೆ. ಈ ಬಾರಿ ಲಾಸ್ ಏಂಜಲೀಸ್, ಲಂಡನ್, ಡಲ್ಲಾಸ್, ಟೊರೊಂಟೊ ಮತ್ತು ಒರ್ಲ್ಯಾಂಡೊ ಸೇರಿದಂತೆ ಕೆಲವು ಹೊಸ ತಾಣಗಳಿಗೂ ಹೂವಿನ ರಫ್ತು ವಿಸ್ತರಿಸಲಾಗಿದೆ.

ADVERTISEMENT

ದೇಶಿ ಮಾರುಕಟ್ಟೆಯಲ್ಲಿ 2,402 ಮೆಟ್ರಿಕ್ ಟನ್ ಗುಲಾಬಿಗಳನ್ನು ಸಾಗಿಸಲಾಗಿದೆ. ಕಳೆದ ವರ್ಷಕ್ಕಿಂತ ಶೇ79ರಷ್ಟು ಏರಿಕೆ ಕಂಡು ಬಂದಿದೆ. ದೆಹಲಿ ಮತ್ತು ಕೋಲ್ಕತ್ತ ನಗರಗಳಲ್ಲಿ ಎಂದಿನಂತೆ ಹೆಚ್ಚಿನ ಬೇಡಿಕೆ ಮುಂದುವರಿದಿದೆ. ಗುವಾಹಟಿ, ಮುಂಬೈ ಮತ್ತು ಜೈಪುರದಲ್ಲೂ ಗಮನಾರ್ಹ ಬೇಡಿಕೆ ದಾಖಲಾಗಿದೆ. ವಿಶೇಷವಾಗಿ ಕೋಲ್ಕತ್ತ, ಮುಂಬೈ, ಚಂಡೀಗಢ ಮತ್ತು ಲಖನೌ ನಗರಗಳಲ್ಲಿ ಶೇ150 ಕ್ಕೂ ಅಧಿಕ ಬೆಳವಣಿಗೆ ಕಂಡು ಬಂದಿದೆ.

ವಿಮಾನ ನಿಲ್ದಾಣದ ಆಧುನಿಕ ಸರಕು ಸಾಗಣೆ ಮೂಲಸೌಕರ್ಯ ಮತ್ತು ‘ಕೋಲ್ಡ್ ಚೈನ್’ ಸೌಲಭ್ಯ ಹೂವುಗಳ ತಾಜಾತನ ಕಾಪಾಡಲು ನೆರವಾಗಿವೆ. ನೈಜ ಕಾಲದ ಟ್ರ್ಯಾಕಿಂಗ್ ಮತ್ತು ತಾಪಮಾನ ನಿಯಂತ್ರಣ ವ್ಯವಸ್ಥೆಗಳ ಮೂಲಕ ಹೂವುಗಳನ್ನು ಸುರಕ್ಷಿತವಾಗಿ ಮತ್ತು ವೇಗವಾಗಿ ಸಾಗಿಸಲಾಗುತ್ತಿದೆ.

ಈ ಮೂಲಕ ಕೊಳೆಯುವ ಉತ್ಪನ್ನಗಳ ರಫ್ತಿನಲ್ಲಿ ದೇಶದ ಮುಂಚೂಣಿ ವಿಮಾನ ನಿಲ್ದಾಣ ಎಂಬ ಸ್ಥಾನವನ್ನು ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣವು ಸತತ ಐದನೇ ವರ್ಷವೂ ಕಾಯ್ದುಕೊಂಡಿದೆ ಎಂದು ಪ್ರಕಟಣೆ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.