ADVERTISEMENT

ಬಸವನಗುಡಿ: ಕಡಲೆಕಾಯಿ ಇಲ್ಲದ ಸರಳ ಪರಿಷೆ

ಕೊರೊನಾದಿಂದ ಪರಿಷೆ ರದ್ದು * ಕಡಲೆಕಾಯಿ ಮಳಿಗೆಗಳಿಗೆ ನಿರ್ಬಂಧ

​ಪ್ರಜಾವಾಣಿ ವಾರ್ತೆ
Published 14 ಡಿಸೆಂಬರ್ 2020, 20:59 IST
Last Updated 14 ಡಿಸೆಂಬರ್ 2020, 20:59 IST
ಬಸವನಗುಡಿಯ ದೊಡ್ಡಬಸವಣ್ಣ ಮೂರ್ತಿಗೆ ಕಡಲೆಕಾಯಿ ನೀಡುವ ಮೂಲಕ ಕಡಲೆಕಾಯಿ ಪರಿಷೆಯನ್ನು ಸರಳವಾಗಿ ಆಚರಿಸಲಾಯಿತು. ಸಂಸದ ತೇಜಸ್ವಿ ಸೂರ್ಯ, ಶಾಸಕ ಎಲ್‌.ಎ.ರವಿಸುಬ್ರಹ್ಮಣ್ಯ ಹಾಗೂ ಭಕ್ತಾದಿಗಳು ಇದ್ದರು–ಪ್ರಜಾವಾಣಿ ಚಿತ್ರ
ಬಸವನಗುಡಿಯ ದೊಡ್ಡಬಸವಣ್ಣ ಮೂರ್ತಿಗೆ ಕಡಲೆಕಾಯಿ ನೀಡುವ ಮೂಲಕ ಕಡಲೆಕಾಯಿ ಪರಿಷೆಯನ್ನು ಸರಳವಾಗಿ ಆಚರಿಸಲಾಯಿತು. ಸಂಸದ ತೇಜಸ್ವಿ ಸೂರ್ಯ, ಶಾಸಕ ಎಲ್‌.ಎ.ರವಿಸುಬ್ರಹ್ಮಣ್ಯ ಹಾಗೂ ಭಕ್ತಾದಿಗಳು ಇದ್ದರು–ಪ್ರಜಾವಾಣಿ ಚಿತ್ರ   

ಬೆಂಗಳೂರು: ಇತಿಹಾಸಪ್ರಸಿದ್ಧ ಬಸವನಗುಡಿಯ ‘ಕಡಲೆಕಾಯಿ ಪರಿಷೆ’ಯು ಕೊರೊನಾ ಕಾರಣದಿಂದಈ ಬಾರಿ ಸರಳವಾಗಿ ನೆರವೇರಿತು. ಪರಿಷೆಯ ಆಕರ್ಷಣೆಯಾಗಿದ್ದ ಕಡಲೆಕಾಯಿ ಮಳಿಗೆಗಳಿಗೆ ಅವಕಾಶ ನೀಡದ ಕಾರಣ ಜಾತ್ರೆಯ ವಾತಾವರಣ ಸೋಮವಾರ ಕಂಡುಬರಲಿಲ್ಲ.

ಕಾರ್ತಿಕ ಮಾಸದ ಕೊನೆಯ ಸೋಮವಾರದಂದು ಬಸವನಗುಡಿಯಲ್ಲಿರುವ ದೊಡ್ಡಗಣಪತಿ ಮತ್ತು ದೊಡ್ಡ ಬಸವಣ್ಣ ದೇವಸ್ಥಾನಗಳಲ್ಲಿಪ್ರತಿವರ್ಷ ಕಡಲೆಕಾಯಿ ಪರಿಷೆ ವಿಜೃಂಭಣೆಯಿಂದ ನಡೆಯುತ್ತಿತ್ತು. ಸೋಮವಾರದಿಂದ ಮೂರು ದಿನಗಳವರೆಗೆ ನಡೆಯುತ್ತಿದ್ದ ಪರಿಷೆಗೆ ವಾರದಿಂದಲೇ ಬಸವನಗುಡಿಯ ರಸ್ತೆಗಳಲ್ಲಿ ಕಡಲೆಕಾಯಿಗಳನ್ನು ರಾಶಿ ಹಾಕಲಾಗುತ್ತಿತ್ತು.

ಬೆಳಿಗ್ಗೆ 10 ಗಂಟೆಗೆ ದೊಡ್ಡ ಬಸವಣ್ಣನಿಗೆ ಸರಳ ಮತ್ತು ಸಾಂಪ್ರದಾಯಿಕವಾಗಿ ಮಹಾಮಂಗಳಾರತಿ ಹಾಗೂ ಕಡಲೆಕಾಯಿ ಅಭಿಷೇಕ ಮಾಡಿ ಪರಿಷೆಯನ್ನು ಸಾಂಕೇತಿಕವಾಗಿ ಉದ್ಘಾಟಿಸಲಾಯಿತು.ಕಡಲೆಕಾಯಿ ಮಾರಾಟಕ್ಕೆ ಅವಕಾಶ ನಿರಾಕರಿಸಿದ್ದರಿಂದ ದೇವಾಲಯದ ಸುತ್ತಮುತ್ತ ಯಾವುದೇ ವ್ಯಾಪಾರ ವಹಿವಾಟು ನಡೆಯಲಿಲ್ಲ. ದೇವಸ್ಥಾನಗಳಲ್ಲಿ ಪೂಜೆ ಮಾತ್ರ ನೆರವೇರಿತು. ಬೆಳಿಗ್ಗೆಯಿಂದ ಸಂಜೆವರೆಗೂ ಭಕ್ತರು ದೇವರ ದರ್ಶನ ಪಡೆದು ಹಿಂದಿರುಗಿದರು.

ADVERTISEMENT

‘ಕಡಲೆಕಾಯಿ ಪರಿಷೆ ಬೆಂಗಳೂರು ಸೇರಿದಂತೆ ನಮ್ಮ ಬಸವನಗುಡಿಗೆ ಹೆಮ್ಮೆಯ ಸಂಕೇತ. ಪರಿಷೆ ನೋಡಲು ಸಾವಿರಾರು ಮಂದಿ ಸೇರುತ್ತಿದ್ದರು. ಕಡಲೆಕಾಯಿ ಮಳಿಗೆಗಳನ್ನು ರಾಜ್ಯ ಹಾಗೂ ಹೊರ ರಾಜ್ಯದ ವ್ಯಾಪಾರಿಗಳು ತೆರೆಯುತ್ತಿದ್ದರು. ಇದಕ್ಕೆಲ್ಲ ಕೊರೊನಾ ಅಡ್ಡಿಪಡಿಸಿತು. ಸೋಂಕು ನಿರ್ಮೂಲನೆಗೊಂಡು, ಮುಂದಿನ ವರ್ಷ ವಿಜೃಂಭಣೆಯಿಂದ ಪರಿಷೆ ಆಚರಿಸೋಣ’ ಎಂದು ಸಂಸದ ತೇಜಸ್ವಿ ಸೂರ್ಯ ಹೇಳಿದರು.

ಅಲಂಕಾರಕ್ಕೆ 67 ಕೆ.ಜಿ.ಬೆಣ್ಣೆ
‘ಬಸವನಗುಡಿಯ ದೊಡ್ಡ ಗಣಪತಿ ದೇವಸ್ಥಾನದಲ್ಲಿರುವ ಮೂರ್ತಿಗೆ ಬೆಣ್ಣೆ ಅಲಂಕಾರ ಮಾಡಲಾಗಿತ್ತು. ಈ ಬಾರಿ ಅಲಂಕಾರಕ್ಕೆ 67 ಕೆ.ಜಿ.ಬೆಣ್ಣೆ ಬಳಸಲಾಗಿದೆ. ಬುಧವಾರದವರೆಗೆ ಇದೇ ಅಲಂಕಾರ ಇರಲಿದೆ’ ಎಂದು ದೇವಸ್ಥಾನದ ಆಡಳಿತ ಮಂಡಳಿಯ ಗೋಪಾಲಗೌಡ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.