
ಬೈಲಹೊಂಗಲ: ರೈತರ ಪ್ರತಿ ಟನ್ ಕಬ್ಬಿಗೆ ₹3,500 ದರ ನೀಡುವಂತೆ ಒತ್ತಾಯಿಸಿ ವಿವಿಧ ರೈತಪರ ಸಂಘಟನೆಗಳು, ಕಬ್ಬು ಬೆಳೆಗಾರರು, ಸಂಘ, ಸಂಸ್ಥೆಗಳ ಮುಖಂಡರು, ಪದಾಧಿಕಾರಿಗಳು ನೀಡಿದ ಬೈಲಹೊಂಗಲ ಬಂದ್ ಕರೆ ಶನಿವಾರ ಸಂಪೂರ್ಣ ಯಶಸ್ವಿ ಆಯಿತು.
ಬಂದ್ ಇದ್ದರೂ ಬೆಳಿಗ್ಗೆ ಅಲ್ಲಲ್ಲಿ ಅಂಗಡಿಗಳನ್ನು ಅರ್ಧ ಭಾಗ ತೆರೆದು ವ್ಯಾಪಾರ ಮಾಡುತ್ತಿದ್ದ ಅಂಗಡಿಗಳ ಮೇಲೆ, ರಸ್ತೆಗಿಳಿದ ಬಸ್‌ಗಳ ಮೇಲೆ, ಹೊಸೂರ ರಸ್ತೆಯ ಇನಾಮದಾರ ಶುಗರ್ಸ್ ಫ್ಯಾಕ್ಟರಿ ಕಚೇರಿ ಮೇಲೆ ಹೋರಾಟಗಾರರು ಕಲ್ಲು ತೂರಿ ಆಕ್ರೋಶ ವ್ಯಕ್ತಪಡಿಸಿದರು.
ಬೈಲಹೊಂಗಲ ಪಟ್ಟಣದೆಲ್ಲೆಡೆ ಹೋರಾಟಗಾರರು ಎರಡು ಬಾರಿ ಬೈಕ್ ರ‍್ಯಾಲಿ ನಡೆಸಿ ಅಲ್ಲಲ್ಲಿ ಬೀದಿ ಬದಿಯ ವ್ಯಾಪಾರಸ್ಥರು, ಗೂಡಂಗಡಿಗಳನ್ನು ಬಂದ್ ಮಾಡಿಸಿದರು.
ಧಾರವಾಡ ಬೈಪಾಸ್ ರಸ್ತೆ ಮೂಲಕ ಸಾಗುತ್ತಿದ್ದ ಬಸ್ ಮೇಲೆ, ಬೆಳಗಾವಿ ರಸ್ತೆಯ ಹೊರವಲಯದಲ್ಲಿ ಬೆಳಗಾವಿ, ಬೈಲಹೊಂಗಲ ಬಸ್‌ಗಳ ಮೇಲೆ ಕಲ್ಲು ತೂರಾಟ ನಡೆಸಿದರು.
ಸೋಮವಾರ ಪೇಟೆ ತರಕಾರಿ ಮಾರುಕಟ್ಟೆಯಲ್ಲಿ ವ್ಯಾಪಾರಸ್ಥರ ಅಂಗಡಿಗಳನ್ನು ಒತ್ತಾಯದಿಂದ ಮುಚ್ಚಿಸಲಾಯಿತು. ಬಜಾರ ರಸ್ತೆ, ಬಸ್ ನಿಲ್ದಾಣ, ಬೆಲ್ಲದ ಕೂಟ, ಎಪಿಎಂಸಿ, ಇಂಚಲ ಕ್ರಾಸ್ ಎಲ್ಲ ಅಂಗಡಿಗಳು, ಬಾರ್, ರೆಸ್ಟೋರೆಂಟ್, ಹೊಟೇಲ್‌ಗಳನ್ನು ವ್ಯಾಪಾರಸ್ಥರು ಸ್ವಯಂ ಪ್ರೇರಣೆಯಿಂದ ಬಂದ್ ಮಾಡಿ ಹೋರಾಟಕ್ಕೆ ಬೆಂಬಲ ಸೂಚಿಸಿದರು.
ಮಧ್ಯಾಹ್ನ ಬಸ್, ಖಾಸಗಿ ವಾಹನಗಳ ಓಡಾಟ ಸಂಪೂರ್ಣ ಬಂದ್ ಆಗಿತ್ತು. ಚಿತ್ರ ಮಂದಿರ, ಪೆಟ್ರೋಲ್ ಬಂಕ್, ಶಾಲೆ, ಕಾಲೇಜು ಬಂದ್ ಆಗಿದ್ದವು.
ಡಿವೈಎಸ್ಪಿ ವೀರಯ್ಯ ಹಿರೇಮಠ ಮಾರ್ಗದರ್ಶನದಲ್ಲಿ ಸಿಪಿಐ ಪ್ರಮೋದ ಯಲಿಗಾರ ಬಿಗಿ ಪೊಲೀಸ್ ಬಂದು ಬಸ್ತ್ ಒದಗಿಸಿದ್ದರು.
ಮಾಜಿ ಶಾಸಕ ಡಾ.ವಿಶ್ವನಾಥ ಪಾಟೀಲ, ವಕೀಲ ಶ್ರೀಶೈಲ ಬೋಳನ್ನವರ, ಹೋರಾಟಗಾರರಾದ ಶಂಕರ ಮಾಡಲಗಿ, ಮಹಾಂತೇಶ ಕಮತ, ಮಲ್ಲಿಕಾರ್ಜುನ ಹುಂಬಿ, ಶಂಕರ ಬೋಳನ್ನವರ, ಎಫ್.ಎಸ್.ಸಿದ್ದನಗೌಡರ, ಪ್ರಮೋದಕುಮಾರ ವಕ್ಕುಂದಮಠ, ಸುರೇಶ ವಾಲಿ, ಅನೇಕರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.