ಕರಡಿ ದಾಳಿಯಿಂದ ಕಾಲು ಕಳೆದುಕೊಂಡ ಬೆಳಗಾವಿ ಜಿಲ್ಲೆಯ ಖಾನಾಪುರ ತಾಲ್ಲೂಕಿನ ಮಾನ ಗ್ರಾಮದ ಸಖಾರಾಮ ಗಾಂವಕರ ಅವರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಯಿತು ಪ್ರಜಾವಾಣಿ ಚಿತ್ರ
ಖಾನಾಪುರ (ಬೆಳಗಾವಿ ಜಿಲ್ಲೆ): ಖಾನಾಪುರ ತಾಲ್ಲೂಕಿನ ಮಾನ ಗ್ರಾಮದ ಹೊರವಲಯದ ಅರಣ್ಯ ಪ್ರದೇಶದಲ್ಲಿ ಸೋಮವಾರ ಕರಡಿ ದಾಳಿಯಿಂದ ರೈತನ ಕಾಲು ತುಂಡಾಗಿದೆ. ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಮಾನ ಗ್ರಾಮದ ಸಖಾರಾಮ ಗಾಂವಕರ (62) ದಾಳಿಗೆ ಒಳಗಾದವರು. ದಂಪತಿ ಜಾನುವಾರುಗಳ ಸಮೇತ ತಮ್ಮ ಹೊಲಕ್ಕೆ ಹೊರಟಿದ್ದರು. ಕಾಡುದಾರಿಯಲ್ಲಿ ಕರಡಿ ಎದುರಾಯಿತು. ಅದನ್ನು ಕಂಡ ಸಖಾರಾಮ ಪತ್ನಿಯನ್ನು ಗಿಡದ ಮೇಲೆ ಹತ್ತಿಸಿದರು. ತಾವೂ ಗಿಡ ಏರಬೇಕು ಎನ್ನುವಷ್ಟರಲ್ಲಿ ಓಡಿಬಂದ ಕರಡಿ ಕಾಲಿಗೆ ಕಚ್ಚಿತು. ಎಡಗಾಲನ್ನು ಬಾಯಲ್ಲಿ ಹಿಡಿದುಕೊಂಡು ಎಳೆದಾಡಿತು. ನಮ್ಮ ಕೈಯಲ್ಲಿದ್ದ ಕೊಯ್ತಾದಿಂದ ಕರಡಿಗೆ ಹೊಡೆದಾಗಿ ಬಿಟ್ಟು ಓಡಿತು ಎಂದು ಸಖಾರಾಮ ತಿಳಿಸಿದ್ದಾರೆ.
ತುಂಡಾದ ಕಾಲಿನಿಂದ ತೀವ್ರ ರಕ್ತಸ್ರಾವವಾಯಿತು. ಸಖಾರಾಮ ತಮ್ಮ ಮೊಬೈಲ್‌ನಿಂದ ಪುತ್ರಿಗೆ ಕರೆ ಮಾಡಿ ವಿಷಯ ತಿಳಿಸಿದರು. ಅರಣ್ಯ ಇಲಾಖೆ ಸಿಬ್ಬಂದಿ ಹಾಗೂ ಊರಿನ ಜನ ಗುಂಪಾಗಿ ಅವರನ್ನು ಹುಡುಕಾಡಲು ಶುರು ಮಾಡಿದರು. ಮಧ್ಯಾಹ್ನ 12ಕ್ಕೆ ದಾಳಿ ನಡೆಸಿದ್ದರೂ ಸಂಜೆ 5ಕ್ಕೆ ಅವರು ಪತ್ತೆಯಾದರು.
ಬೆಳಗಾವಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅವರ ಎಡಗಾಲನ್ನು ಬೇರ್ಪಡಿಸಿ ಶಸ್ತ್ರಚಿಕಿತ್ಸೆ ಮಾಡಲಾಗಿದೆ ಎಂದು ಖಾನಾಪುರ ಎಸಿಎಫ್ ಸುನಿತಾ ನಿಂಬರಗಿ ತಿಳಿಸಿದ್ದಾರೆ. ಕಣಕುಂಬಿ ವಲಯ ಅರಣ್ಯಾಧಿಕಾರಿಗಳ ಕಚೇರಿಯಲ್ಲಿ ಪ್ರಕರಣ ದಾಖಲಾಗಿದೆ.
ಕರಡಿ ದಾಳಿಯಿಂದ ಕಾಲು ಕಳೆದುಕೊಂಡ ಬೆಳಗಾವಿ ಜಿಲ್ಲೆಯ ಖಾನಾಪುರ ತಾಲ್ಲೂಕಿನ ಮಾನ ಗ್ರಾಮದ ಸಖಾರಾಮ ಗಾಂವಕರ ಅವರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಯಿತು ಪ್ರಜಾವಾಣಿ ಚಿತ್ರ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.