ADVERTISEMENT

ಬೆಳಗಾವಿ ಮಹಾನಗರ ಪಾಲಿಕೆ ಬಜೆಟ್ ಮಂಡನೆ: ನೀರಿಗಿಂತ ನಾಯಿಗಳಿಗೇ ಹೆಚ್ಚು ವೆಚ್ಚ !

​ಪ್ರಜಾವಾಣಿ ವಾರ್ತೆ
Published 25 ಫೆಬ್ರುವರಿ 2026, 14:14 IST
Last Updated 25 ಫೆಬ್ರುವರಿ 2026, 14:14 IST
<div class="paragraphs"><p>ಬೆಳಗಾವಿ ಮಹಾನಗರ ಪಾಲಿಕೆಯ 2026-27ನೇ ಸಾಲಿನ ಆಯವ್ಯಯ ಪ್ರತಿಗಳನ್ನು ಪಾಲಿಕೆಯ ತೆರಿಗೆ, ಹಣಕಾಸು ಮತ್ತು ಅಪೀಲುಗಳ ಸ್ಥಾಯಿ ಸಮಿತಿ ಅಧ್ಯಕ್ಷೆ ರೇಷ್ಮಾ ಹೂಗಾರ ಅವರು ಮೇಯರ್‌ ಮಂಗೇಶ ಪವಾರ್‌ಗೆ ಬುಧವಾರ ನೀಡಿದರು. ಉಪಮೇಯರ್‌ ವಾಣಿ ಜೋಶಿ ಹಾಗೂ ಅಧಿಕಾರಿಗಳು ಪಾಲ್ಗೊಂಡರು  </p></div>

ಬೆಳಗಾವಿ ಮಹಾನಗರ ಪಾಲಿಕೆಯ 2026-27ನೇ ಸಾಲಿನ ಆಯವ್ಯಯ ಪ್ರತಿಗಳನ್ನು ಪಾಲಿಕೆಯ ತೆರಿಗೆ, ಹಣಕಾಸು ಮತ್ತು ಅಪೀಲುಗಳ ಸ್ಥಾಯಿ ಸಮಿತಿ ಅಧ್ಯಕ್ಷೆ ರೇಷ್ಮಾ ಹೂಗಾರ ಅವರು ಮೇಯರ್‌ ಮಂಗೇಶ ಪವಾರ್‌ಗೆ ಬುಧವಾರ ನೀಡಿದರು. ಉಪಮೇಯರ್‌ ವಾಣಿ ಜೋಶಿ ಹಾಗೂ ಅಧಿಕಾರಿಗಳು ಪಾಲ್ಗೊಂಡರು

   

ಪ್ರಜಾವಾಣಿ ಚಿತ್ರ

ಬೆಳಗಾವಿ: ಮಹಾನಗರ ಪಾಲಿಕೆಯಿಂದ ಈ ವರ್ಷ ₹442.54 ಕೋಟಿ ಆದಾಯ ನಿರೀಕ್ಷಿಸಲಾಗಿದ್ದು, ₹441.62 ಕೋಟಿ ವೆಚ್ಚ ಅಂದಾಜಿಸಲಾಗಿದೆ. ಎಲ್ಲ ಖರ್ಚುಗಳನ್ನು ತೆಗೆದು ₹92.32 ಲಕ್ಷ ಉಳಿತಾಯ ಸಾಧಿಸುವ ಗುರಿ ಹೊಂದಿರುವ ಬಜೆಟ್ ಅನ್ನು ಬುಧವಾರ ಮಂಡಿಸಲಾಯಿತು.

ADVERTISEMENT

ಮೇಯರ್‌ ಮಂಗೇಶ ಪವಾರ್ ಅಧ್ಯಕ್ಷತೆಯಲ್ಲಿ ನಡೆದ ಬಜೆಟ್‌ ಸಭೆಯಲ್ಲಿ, ಪಾಲಿಕೆಯ ತೆರಿಗೆ, ಹಣಕಾಸು ಮತ್ತು ಅಪೀಲುಗಳ ಸ್ಥಾಯಿ ಸಮಿತಿ ಅಧ್ಯಕ್ಷೆ ರೇಷ್ಮಾ ಹೂಗಾರ ಅವರು, ನಗರದ ಅಭಿವೃದ್ಧಿಗೆ ದಿಕ್ಕು ತೋರಿಸುವ 2026–27ನೇ ಸಾಲಿನ ಬಜೆಟ್‌ ಮಂಡಿಸಿದರು. ಇದಕ್ಕೂ ಮುನ್ನ ಅವರು ಮೇಯರ್‌ ಹಾಗೂ ಉಪಮೇಯರ್‌ ವಾಣಿ ಜೋಶಿ ಅವರಿಗೆ ಬಜೆಟ್‌ ಪತ್ರಗಳನ್ನು ತಲುಪಿಸಿದರು.

ಪ್ರತಿ ಬಾರಿಯಂತೆ ಈ ಬಾರಿಯೂ ನಗರದ ಸ್ವಚ್ಛತೆ, ಎಲ್ಲ 58 ವಾರ್ಡುಗಳಲ್ಲೂ ಮೂಲ ಸೌಕರ್ಯ ಅಭಿವೃದ್ಧಿ, ವಿದ್ಯುತ್ ಬಿಲ್ ಪೂರಣ, ಪೌರ ಕಾರ್ಮಿಕರ ವೇತನ ಸೇರಿದಂತೆ ಮೂಲ ಸೌಕರ್ಯಗಳಿಗೆ ಆದ್ಯತೆ ನೀಡಲಾಗಿದೆ.

ಪ್ರಮುಖ ವೆಚ್ಚಗಳು: ಎಸ್.ಎಫ್.ಸಿ ವಿದ್ಯುತ್ ಅನುದಾನ ₹62.6 ಕೋಟಿ, ಎಸ್.ಎಫ್.ಸಿ ಮುಕ್ತ ನಿಧಿ ₹3.22 ಕೋಟಿ, 16ನೇ ಹಣಕಾಸು ಆಯೋಗ ಅನುದಾನಕ್ಕೆ ₹21 ಕೋಟಿ ವೆಚ್ಚವನ್ನು ಅಂದಾಜಿಸಲಾಗಿದೆ.

ಮುಖ್ಯವಾಗಿ ಸ್ವಚ್ಛತೆ ಮತ್ತು ವೇತನಗಳಿಗೆ ಹೆಚ್ಚಿನ ಹಂಚಿಕೆ ನೀಡಲಾಗಿದೆ. ಹೊರಗುತ್ತಿಗೆ ಸ್ವಚ್ಛತಾ ವೆಚ್ಚ ₹38.25 ಕೋಟಿ, ನೇರ ನೇಮಕಾತಿ ಪೌರ ಕಾರ್ಮಿಕರ ವೇತನಕ್ಕೆ ₹11 ಕೋಟಿ, ಪೌರಕಾರ್ಮಿಕರ ಉ‍ಪಾಹಾರ ಭತ್ಯೆ ₹2 ಕೋಟಿ, ವೈಜ್ಞಾನಿಕ ಘನತ್ಯಾಜ್ಯ ವಿಲೇವಾರಿ ₹4 ಕೋಟಿ, ಬೀದಿ ದೀಪ ನಿರ್ವಹಣೆ ₹50 ಲಕ್ಷ, ರಸ್ತೆ, ಚರಂಡಿ, ಪಾದಚಾರಿ ಮಾರ್ಗ ನಿರ್ವಹಣೆಗೆ ₹6.95 ಕೋಟಿ, ಬೀದಿ ನಾಯಿಗಳ ಶೆಡ್ ನಿರ್ಮಾಣ ಹಾಗೂ ಸಂತಾನಶಕ್ತಿ ಹರಣ ಶಸ್ತ್ರಚಿಕಿತ್ಸೆಗೆ ₹2.10 ಕೋಟಿ, ಸ್ಮಶಾನ ಅಭಿವೃದ್ಧಿ ₹1 ಕೋಟಿ, ಕುಡಿಯುವ ನೀರು, ತೆರೆದ ಭಾವಿ ಅಭಿವೃದ್ಧಿ ₹25 ಲಕ್ಷ, ಕ್ರೀಡೆಗಳಿಗೆ ₹14.43 ಲಕ್ಷ, ಬೆಳಗಾವಿ ಯೋಜನೆಗೆ ವಂತಿಕೆ ₹5 ಕೋಟಿ ವೆಚ್ಚವನ್ನು ಅಂದಾಜಿಸಲಾಗಿದೆ.

ಎಲ್ಲ ವಾರ್ಡುಗಳಲ್ಲೂ ಮೂಲಸೌಕರ್ಯ ಕಾಮಗಾರಿಗಳಿಗೆ ₹27 ಕೋಟಿ ವೆಚ್ಚ ಅಂದಾಜಿಸಿದ್ದು, ಇದರಲ್ಲಿ ಹೊಸದಾಗಿ ಸಿಸಿ ರಸ್ತೆ ಮತ್ತು ಚರಂಡಿ ನಿರ್ಮಾಣವನ್ನೂ ಸೇರಿಸಲಾಗಿದೆ.

ಇತರೆ ಬಂಡವಾಳ ವೆಚ್ಚಗಳು: ಒಳಚರಂಡಿ ದುರಸ್ತಿ, ಹೊಸ ಚರಂಡಿಗಳ ನಿರ್ಮಾಣ ಹಾಗೂ ಸಮುದಾಯ ಶೌಚಾಲಯ ಸೇರಿ ಒಟ್ಟು 22 ಕೋಟಿ, ಪಾಲಿಕೆ ಆಸ್ತಿ ಸಂರಕ್ಷಣೆ ₹2 ಕೋಟಿ, ಉದ್ಯಾನಗಳ ಅಭಿವೃದ್ಧಿ ₹1.35 ಕೋಟಿ, ಇ– ಆಫೀಸ್ ವ್ಯವಸ್ಥೆ, ಗಣಕೀಕರಣ ಮತ್ತು ಯಂತ್ರೋಪಕರಣಕ್ಕೆ ₹1.45 ಕೋಟಿ ವೆಚ್ಚ ನಿಗದಿ ಮಾಡಲಾಗಿದೆ.

ನೀರಿಗಿಂತ ನಾಯಿಗಳಿಗೇ ಹೆಚ್ಚು ವೆಚ್ಚ!

ಸ್ಮಾರ್ಟ್‌ಸಿಟಿಯಲ್ಲಿ ಕಳೆದೊಂದು ದಶಕಗಳಿಂದಲೂ ಬೀದಿನಾಯಿಗಳ ಕಾಟ ವಿಪರೀತವಾಗಿದೆ. ಸಾವಿರಾರು ಸಂಖ್ಯೆಯ ನಾಯಿಗಳು ಪ್ರತಿ ವರ್ಷವೂ ಹೆಚ್ಚುತ್ತಲೇ ಇವೆ. ಪ್ರಸಕ್ತ ಬಜೆಟ್‌ನಲ್ಲಿ ಕೂಡ ನಾಯಿಗಳ ಉಪಟಳ ನಿಯಂತ್ರಣ ಹಾಗೂ ಸಂತಾನಶಕ್ತಿ ಹರಣ ಶಸ್ತ್ರಚಿಕಿತ್ಸೆಗೆ ₹2.10 ಕೋಟಿ ಅನುದಾನ ಮೀಸಲು ಇಡಲಾಗಿದೆ.

2024–25ನೇ ಸಾಲಿನ ಹಾಗೂ 2025–26ನೇ ಸಾಲಿನ ಬಜೆಟ್‌ನಲ್ಲಿಯೂ ಅಂದಾಜು ₹2 ಕೋಟಿ ಮೀಸಲು ಇಡಲಾಗಿತ್ತು. ಆದರೆ, ನಾಯಿಗಳ ಸಂತಾನ ಮಾತ್ರ ಕಡಿಮೆ ಆಗಿಲ್ಲ. ಅಚ್ಚರಿಯೆಂದರೆ ಕುಡಿಯುವ ನೀರಿಗಿಂತಲೂ ನಾಯಿಗಳೇ ಹೆಚ್ಚು ಹಣ ನುಂಗುತ್ತಿವೆ!

ತೆರಿಗೆ: ಮತ್ತದೇ ಅಭಿಯಾನ

ಈ ಬಾರಿ ಎಲ್ಲ ಮೂಲಗಳ ತೆರಿಗೆಯನ್ನು ಅಚ್ಚುಕಟ್ಟಾಗಿ ಸಂಗ್ರಹಿಸಲು ಅಭಿಯಾನ ಹಮ್ಮಿಕೊಳ್ಳುವುದಾಗಿ ಬಜೆಟ್‌ನಲ್ಲಿ ಪ್ರಸ್ತಾಪ ಮಾಡಲಾಗಿದೆ. ಇದು ಕೂಡ ಹಳೆಯ ಚಾಳಿಯೇ. ಕಳೆದ ಐದಾರು ಬಜೆಟ್‌ಗಳಲ್ಲಿಯೂ ಇದೇ ಮಾದರಿಯ ಅಭಿಯಾನದ ನಿರೀಕ್ಷೆ ಇಡಲಾಗಿತ್ತು. ಆದರೂ ನಾಗರಿಕರಿಂದ ನಿರೀಕ್ಷಿತ ತೆರಿಗೆ ಸಂಗ್ರಹ ಸಾಧ್ಯವಾಗಲಿಲ್ಲ.

ಅಂಕಿ ಅಂಶಗಳು

ಬೆಳಗಾವಿ ಪಾಲಿಕೆ ಆದಾಯ ಮೂಲ: ₹85 ಕೋಟಿ

ಆಸ್ತಿ ತೆರಿಗೆಯಿಂದ ಸಂಗ್ರಹ: ₹7.55 ಕೋಟಿ

ಆಸ್ತಿಗಳ ವರ್ಗಾವಣೆ ಶುಲ್ಕ ಹಾಗೂ ದಂಡ ಮೂಲ: ₹9.90 ಕೋಟಿ

ಕಟ್ಟಡ ಪರವಾನಗಿ, ಅಭಿವೃದ್ಧಿ, ಸುಧಾರಣೆ ಶುಲ್ಕ: ₹11 ಕೋಟಿ

ಖಾಲಿ ನಿವೇಶನಗಳ ಮಾರಾಟದಿಂದ: ₹9.75 ಕೋಟಿ

ಘನತ್ಯಾಜ್ಯ ನಿರ್ವಹಣಾ ಶುಲ್ಕ: ₹4 ಕೋಟಿ

ಉದ್ದಿಮೆ ಪರವಾನಗಿಯಿಂದ: ₹5 ಕೋಟಿ

ಹೊಸ ಯುಜಿಡಿ ಸಂಪರ್ಕದಿಂದ: ₹1.5 ಕೋಟಿ

ರಸ್ತೆ ಅಗೆತ ಶುಲ್ಕ: ₹1.7 ಕೋಟಿ

ಅವಶೇಷ ನಿರ್ಮೂಲನೆ ಮೂಲ: ₹1.3 ಕೋಟಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.