ADVERTISEMENT

ಯಮಕನಮರಡಿಯಲ್ಲಿ 1.2 KG ಬಂಗಾರ ಕದ್ದಿದ್ದ ಬೆಳಗಾವಿಯ ಮನೆಗಳ್ಳ ಸುರೇಶ ನಾಯಿಕ್ ಬಂಧನ

​ಪ್ರಜಾವಾಣಿ ವಾರ್ತೆ
Published 13 ನವೆಂಬರ್ 2025, 11:38 IST
Last Updated 13 ನವೆಂಬರ್ 2025, 11:38 IST
<div class="paragraphs"><p>ವಶಪಡಿಸಿಕೊಂಡ ವಸ್ತುಗಳು</p></div>

ವಶಪಡಿಸಿಕೊಂಡ ವಸ್ತುಗಳು

   

ಬೆಳಗಾವಿ: ಐಷಾರಾಮಿ ಜೀವನ ಸಾಗಿಸಲು ಹಣ ಗಳಿಸುವ ಉದ್ದೇಶದಿಂದ ಹಿಂದಿಯ ‘ಧೂಮ್‌’ ಚಲನಚಿತ್ರದ ಮಾದರಿಯಲ್ಲಿ ಮನೆಕಳ್ಳತನ ಮಾಡುತ್ತಿದ್ದ ಒಬ್ಬನನ್ನು ಯಮಕನಮರಡಿ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಬೆಳಗಾವಿ ಮಹಾಂತೇಶ ನಗರದಲ್ಲಿ ವಾಸವಿರುವ ಸುರೇಶ ಮಾರುತಿ ನಾಯಿಕ ಬಂಧಿತ. ಆತನಿಂದ 1,280 ಗ್ರಾಂ ಚಿನ್ನಾಭರಣ, 8.5 ಕೆ.ಜಿ ಬೆಳ್ಳಿ ಆಭರಣ, ₹1.25 ಲಕ್ಷ ನಗದು, ಒಂದು ಥಾರ್ ವಾಹನ ಮತ್ತು ಎರಡು ದ್ವಿಚಕ್ರ ವಾಹನ ವಶಕ್ಕೆ ಪಡೆಯಲಾಗಿದೆ.

ADVERTISEMENT

‘ಯಮಕನಮರಡಿ ಗ್ರಾಮದಲ್ಲಿ ಅ.22ರಂದು ವಿಶ್ವನಾಥ ದುಗ್ಗಾಣಿ ಅವರ ಮನೆಯಲ್ಲಿ 1,280 ಚಿನ್ನಾಭರಣ, 8.5 ಕೆ.ಜಿ ಬೆಳ್ಳಿ ಆಭರಣ, ₹1.25 ಲಕ್ಷ ನಗದು ಕಳ್ಳತನ ಆಗಿರುವ ಪ್ರಕರಣ ಬೆಳಕಿಗೆ ಬಂದಿತ್ತು. ಈ ಬಗ್ಗೆ ತನಿಖೆಗಾಗಿ ಯಮಕನಮರಡಿ ಠಾಣೆ ಇನ್‌ಸ್ಪೆಕ್ಟರ್‌ ಜಾವೀದ್‌ ಮುಶಾಪುರಿ ನೇತೃತ್ವದಲ್ಲಿ ತಂಡ ರಚಿಸಲಾಗಿತ್ತು. ಕೆಲವು ಸುಳಿವು ಆಧರಿಸಿ ವೈಜ್ಞಾನಿಕವಾಗಿ ತನಿಖೆ ನಡೆಸಿದ ತಂಡ ಆರೋಪಿ ಬಂಧಿಸುವಲ್ಲಿ ಯಶಸ್ವಿಯಾಗಿದೆ’ ಎಂದು ಎಸ್‌ಪಿ ಡಾ.ಭೀಮಾಶಂಕರ ಗುಳೇದ ಇಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

‘ಆರೋಪಿ ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ವಿಶ್ವನಾಥ ದುಗ್ಗಾಣಿ ಅವರ ಮನೆ ಮಾತ್ರವಲ್ಲ; ಯಮಕನಮರಡಿ, ಮನಗುತ್ತಿ ಗ್ರಾಮ ಮತ್ತು ಸಂಕೇಶ್ವರ ಠಾಣೆ ವ್ಯಾಪ್ತಿಯಲ್ಲೂ ಮನೆಗಳನ್ನು ಕದ್ದಿದ್ದಾಗಿ ಒಪ್ಪಿಕೊಂಡಿದ್ದಾನೆ. ಒಟ್ಟು ನಾಲ್ಕು ಮನೆಕಳ್ಳತನ ಪ್ರಕರಣ ಭೇದಿಸಿದಂತಾಗಿದೆ’ ಎಂದು ವಿವರಿಸಿದರು.

‘ಬೆಳಗಾವಿ ಜಿಲ್ಲೆಯ ವಿವಿಧ ಠಾಣೆಗಳಲ್ಲಿ ಸುರೇಶ ಮೇಲೆ 21 ಪ್ರಕರಣಗಳಿವೆ. ಶ್ರೀಮಂತರು ವಾಸವಿರುವ, ಅದರಲ್ಲೂ ಮನೆಯಲ್ಲಿ ಯಾರೂ ಇಲ್ಲದಿರುವುದು. ಸಿ.ಸಿ.ಟಿ.ವಿ ಕ್ಯಾಮೆರಾ ಇಲ್ಲದಿರುವುದನ್ನು ಗಮನಿಸಿ ಈತ ಕೃತ್ಯ ಎಸಗುತ್ತಿದ್ದ. ‘ಧೂಮ್‌’ ಸಿನಿಮಾ ಮಾದರಿಯಲ್ಲಿ ಕಳ್ಳತನ ಮಾಡಿ ಪರಾರಿಯಾಗುತ್ತಿದ್ದ. ಕದ್ದ ಹಣದಲ್ಲೇ ದುಬಾರಿ ಬೆಲೆಯ ಥಾರ ವಾಹನ, ಎರಡು ಬೈಕ್‌ಗಳನ್ನು ಖರೀದಿಸಿದ್ದ. ಐಷಾರಾಮಿ ಜೀವನ ಸಾಗಿಸುವುದೇ ಈತನ ಉದ್ದೇಶವಾಗಿತ್ತು’ ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.