ADVERTISEMENT

ಕನ್ನಡ ಅಭಿವೃದ್ಧಿಗೆ ₹100 ಕೋಟಿ: ಅಭಿವೃದ್ಧಿ ಪ್ರಾಧಿಕಾರದ ಸೋಮಶೇಖರ್‌ ಒತ್ತಾಯ

​ಪ್ರಜಾವಾಣಿ ವಾರ್ತೆ
Published 10 ಜನವರಿ 2022, 8:53 IST
Last Updated 10 ಜನವರಿ 2022, 8:53 IST
ಗಡಿ ಕನ್ನಡ ಸಾಂಸ್ಕೃತಿಕ ಉತ್ಸವ
ಗಡಿ ಕನ್ನಡ ಸಾಂಸ್ಕೃತಿಕ ಉತ್ಸವ   

ಬೆಳಗಾವಿ: ‘ಕನ್ನಡ ಅಭಿವೃದ್ಧಿ ಚಟುವಟಿಕೆಗಳನ್ನು ಹಮ್ಮಿಕೊಳ್ಳುವುದಕ್ಕಾಗಿ ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರಕ್ಕೆ ₹ 200 ಕೋಟಿ ಹಾಗೂ ಗಡಿ ಜಿಲ್ಲೆ ಬೆಳಗಾವಿಗೆ ಪ್ರತ್ಯೇಕವಾಗಿ ₹100 ಕೋಟಿ ಅನುದಾನ ನೀಡಬೇಕು’ ಎಂದು ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ.ಸಿ. ಸೋಮಶೇಖರ್ ಒತ್ತಾಯಿಸಿದರು.

ಕರ್ನಾಟಕ ಗಡಿ ಅಭಿವೃದ್ಧಿ ಪ್ರಾಧಿಕಾರ ಹಾಗೂ ಹುಕ್ಕೇರಿ ಹಿರೇಮಠದ ಗುರುಶಾಂತೇಶ್ವರ ಜನಕಲ್ಯಾಣ ಪ್ರತಿಷ್ಠಾನದಿಂದ ಸ್ವಾತಂತ್ರ್ಯೋತ್ಸವ ಅಮೃತ ಮಹೋತ್ಸವ ಅಂಗವಾಗಿ ಸೋಮವಾರ ನಡೆದ ‘ಗಡಿ ಕನ್ನಡ ಸಾಂಸ್ಕೃತಿಕ ಉತ್ಸವ’ದಲ್ಲಿ ಅವರು ಮಾತನಾಡಿದರು.

‘ಸರ್ಕಾರ ಈ ವರ್ಷ ನೀಡಿರುವ ₹ 15 ಕೋಟಿ ಅನುದಾನ ಸಾಲುವುದಿಲ್ಲ. 6 ರಾಜ್ಯಗಳೊಂದಿಗೆ ಗಡಿ ಹಂಚಿಕೊಂಡಿರುವ 19 ಜಿಲ್ಲೆಗಳ 63 ತಾಲ್ಲೂಕುಗಳಲ್ಲಿ ಗಡಿ ಭಾಗದ ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಿ, ಕನ್ನಡ ಭಾಷೆ ಬಲಿಷ್ಠಗೊಳಿಸಬೇಕಾಗಿದೆ. ಕನ್ನಡ ಸರ್ಕಾರಿ ಶಾಲಾ ಕಟ್ಟಡಗಳಿಗೆ ಆದ್ಯತೆ ಮೇರೆಗೆ ಮೂಲ ಸೌಕರ್ಯಗಳನ್ನು ಒದಗಿಸಬೇಕಾಗಿದೆ. ಈ ನಿಟ್ಟಿನಲ್ಲಿ ಹೆಚ್ಚಿನ ಆರ್ಥಿಕ ಶಕ್ತಿಯ ಅಗತ್ಯವಿದೆ’ ಎಂದು ಹೇಳಿದರು.

ADVERTISEMENT

ವಿಶೇಷ ಪ್ರಯತ್ನ ಮಾಡಬೇಕು:

‘ಸೀಮಿತ ಅವಕಾಶದಲ್ಲಿ ರಾಜ್ಯದ 400 ಸಂಸ್ಥೆಗಳಿಗೆ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಲು ಅನುದಾನ ನೀಡಲಾಗಿದೆ’ ಎಂದರು.

‘ಜಿಲ್ಲೆಗೆ ₹ 100 ಕೋಟಿ ಅನುದಾನ ದೊರೆಯುವಂತಾಗಲು ಸ್ಥಳೀಯ ಶಾಸಕರು ವಿಶೇಷ ಪ್ರಯತ್ನ ಮಾಡಬೇಕು’ ಎಂದು ಕೋರಿದರು.

‘ಕನ್ನಡಿಗರು ಮತ್ತು ಮರಾಠಿಗರು ಅಣ್ಣ–ತಮ್ಮಂದಿರಿದ್ದಂತೆ. ಹೀಗಿರುವಾಗ, ಕನ್ನಡ ವಿರೋಧಿ ಚಟುವಟಿಕೆಗಳು ನಡೆಯಬಾರದು’ ಎಂದು ಆಶಯ ವ್ಯಕ್ತಪಡಿಸಿದರು.

2 ಕನ್ನಡ ಶಾಲೆ ದತ್ತು:

ಮುಖ್ಯ ಅತಿಥಿಯಾಗಿದ್ದ ಶಾಸಕ ಅನಿಲ ಬೆನಕೆ, ‘ಬೆಳಗಾವಿಯಲ್ಲಿ ಕನ್ನಡ ಪರ– ಅಭಿವೃದ್ಧಿ ಚಟುವಟಿಕೆಗಳಿಗೆ ಸರ್ಕಾರದಿಂದ ನೂರು ಕೋಟಿ ರೂಪಾಯಿ ಅನುದಾನ ತರುವುದಕ್ಕಾಗಿ ವಿಶೇಷ ಪ್ರಯತ್ನ ಮಾಡುತ್ತೇನೆ. ಮುಖ್ಯಮಂತ್ರಿಗೆ ಪತ್ರ ಬರೆಯುತ್ತೇನೆ. ಎರಡು ಕನ್ನಡ ಶಾಲೆಗಳನ್ನು ದತ್ತು ಪಡೆದು ಅಭಿವೃದ್ಧಿಪಡಿಸುತ್ತಿದ್ದೇನೆ’ ಎಂದರು.

‘ಮಾತೃ ಭಾಷೆಯಲ್ಲಿ ಶಿಕ್ಷಣ ಪಡೆಯುವುದು ಅತ್ಯಂತ ಶ್ರೇಷ್ಠವಾದುದು. ಸಂಸ್ಕೃತಿ ಉಳಿಸುವ ನಿಟ್ಟಿನಲ್ಲಿ ಭಾಷೆಯು ಪ್ರಮುಖ ಪಾತ್ರ ವಹಿಸುತ್ತದೆ’ ಎಂದು ಅಭಿಪ್ರಾಯಪಟ್ಟರು.

ಸಾನ್ನಿಧ್ಯ ವಹಿಸಿದ್ದ ಹುಕ್ಕೇರಿ ಹಿರೇಮಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ, ‘ರಾಜ್ಯದಲ್ಲಿರುವ ಎಲ್ಲರೂ ಕನ್ನಡಿಗರೇ ಎನ್ನುವುದನ್ನು ಮರೆಯಬಾರದು’ ಎಂದು ತಿಳಿಸಿದರು.

‘ಪ್ರಾಧಿಕಾರದಿಂದ ನಮ್ಮ ಭಾಗಕ್ಕೆ ನೀಡಿರುವ ಅನುದಾನವನ್ನು ಇಲ್ಲಿನ ಕಲಾವಿದರಿಗೇ ಕೊಡಬೇಕು’ ಎಂದು ಒತ್ತಾಯಿಸಿದರು.

ಮಾಹಿತಿ ಹಕ್ಕು ಆಯುಕ್ತೆ ಗೀತಾ, ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ಮತ್ತು ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ ಅಧ್ಯಕ್ಷ ಮುಕ್ತಾರ್ ಹುಸೇನ್‌ ಪಠಾಣ ಮಾತನಾಡಿದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕಿ ವಿದ್ಯಾವತಿ ಭಜಂತ್ರಿ, ಅಖಿಲ ಗೋವಾ ಕನ್ನಡ ಮಹಾಸಂಘದ ಅಧ್ಯಕ್ಷ ಸಿದ್ದಣ್ಣ ಮೇಟಿ, ಕರ್ನಾಟಕ ಗಡಿ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಪ್ರಕಾಶ ಮತ್ತಿಹಳ್ಳಿ ಪಾಲ್ಗೊಂಡಿದ್ದರು.

ಇದಕ್ಕೂ ಮುನ್ನ, ಸಾಹಿತಿ ಚಂದ್ರಶೇಖರ ಪಾಟೀಲ ಮತ್ತು ಜಾನಪದ ಕಲಾವಿದ ಬಸವಲಿಂಗಯ್ಯ ಹಿರೇಮಠ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.

ನಮ್ಮಲ್ಲೇಕೆ ಕನ್ನಡಮಯ ಆಗುತ್ತಿಲ್ಲ?: ಮಂಗಲಾ

ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾ ಘಟಕದ ಅಧ್ಯಕ್ಷೆ ಮಂಗಲಾ ಮೆಟಗುಡ್ಡ ಮಾತನಾಡಿ, ‘ನೆರೆಯ ಮಹಾರಾಷ್ಟ್ರದ ಸೊಲ್ಲಾಪುರದಲ್ಲಿ ಹಿಂದೆಲ್ಲಾ ಕನ್ನಡದ ವಾತಾವರಣ ಇರುತ್ತಿತ್ತು. ಈಗ, ಸಂಪೂರ್ಣ ಮರಾಠಿಮಯವಾಗಿದೆ. ವ್ಯವಹಾರಗಳೆಲ್ಲವೂ ಮರಾಠಿಯಲ್ಲಿ ನಡೆಯುತ್ತಿವೆ. ಕನ್ನಡವು ಮನೆಮಾತಾಗಿಯೂ ಉಳಿದಿಲ್ಲ’ ಎಂದು ಕಳವಳ ವ್ಯಕ್ತಪಡಿಸಿದರು.

‘ಹೆಣ್ಣು ಕೊಡುವುದು–ತರುವುದು ಮೊದಲಾದ ಸಂಬಂಧ ಬೆಸೆಯುವುದು ಕೂಡ ಕಾಣುತ್ತಿಲ್ಲ. ಅಕ್ಕಲಕೋಟೆ ಭಾಗದಲ್ಲಿ ಮಾತ್ರ ಅಲ್ಪಸ್ವಲ್ಪ ಕನ್ನಡ ಉಳಿದಿದೆ. ಅಲ್ಲಿ ಮರಾಠಿಮಯ ಆದಂತೆ ನಮ್ಮಲ್ಲಿ ಕನ್ನಡಮಯ ಆಗುತ್ತಿಲ್ಲವೇಕೆ ಎಂದು ನಮ್ಮನ್ನು ನಾವು ಕೇಳಿಕೊಳ್ಳಬೇಕಾಗಿದೆ’ ಎಂದರು.

‘ಗಡಿಯಲ್ಲಿ ಜನಸಾಮಾನ್ಯರು ಪ್ರೀತಿಯಿಂದ ‌ಇದ್ದೇವೆ. ಆದರೆ, ಯಾವಾಗ ಗಲಾಟೆ ಆಗುತ್ತದೆಯೋ ಎನ್ನುವ ಆತಂಕವೂ ಇದೆ’ ಎಂದು ನುಡಿದರು.

‘ಗಡಿ ಭಾಗದ ಕನ್ನಡ ಸರ್ಕಾರಿ ಶಾಲೆಗಳ ಸ್ಥಿತಿ ಚಿಂತಾಜನಕವಾಗಿದೆ. ಗಡಿಯಲ್ಲಿ ಅಲ್ಲಲ್ಲಿ ಕನ್ನಡ ಶಾಲೆಗಳು ಸ್ವಂತ ಕಟ್ಟಡ ಇಲ್ಲದೆ, ಕನ್ನಡ ಶಿಕ್ಷಕರಿಲ್ಲದೆ ಅನಿವಾರ್ಯವಾಗಿ ಮರಾಠಿ ಕಲಿಯುವಂತಾಗಿದೆ. ಪಾಲಕರು ಮಕ್ಕಳನ್ನು ಕನ್ನಡ ಶಾಲೆಗಳಿಗೆ ಕಳುಹಿಸುವುದು ತಪ್ಪಾ? ಅವುಗಳ ಅಭಿವೃದ್ಧಿಗೆ ಕ್ರಮ ಕೈಗೊಳ್ಳಬೇಕು ಮತ್ತು ಅಂಗನವಾಡಿಗಳಿಗೆ ಕನ್ನಡ ಬಲ್ಲ‌ವರನ್ನು ನೇಮಿಸಬೇಕು’ ಎಂದು ಸರ್ಕಾರವನ್ನು ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.