ADVERTISEMENT

ಬೆಳಗಾವಿ: ಡಿ.30ರಂದು ಕೆಎಲ್‌ಇ ಕ್ಯಾನ್ಸರ್‌ ಆಸ್ಪತ್ರೆ ಉದ್ಘಾಟನೆ

​ಪ್ರಜಾವಾಣಿ ವಾರ್ತೆ
Published 24 ಡಿಸೆಂಬರ್ 2024, 23:51 IST
Last Updated 24 ಡಿಸೆಂಬರ್ 2024, 23:51 IST
ಬೆಳಗಾವಿಯಲ್ಲಿ ನಿರ್ಮಿಸಲಾಗಿರುವ ಕೆಎಲ್‌ಇ ಸಂಸ್ಥೆಯ ಕ್ಯಾನ್ಸರ್‌ ಆಸ್ಪತ್ರೆ 
ಪ್ರಜಾವಾಣಿ ಚಿತ್ರ
ಬೆಳಗಾವಿಯಲ್ಲಿ ನಿರ್ಮಿಸಲಾಗಿರುವ ಕೆಎಲ್‌ಇ ಸಂಸ್ಥೆಯ ಕ್ಯಾನ್ಸರ್‌ ಆಸ್ಪತ್ರೆ  ಪ್ರಜಾವಾಣಿ ಚಿತ್ರ   

ಬೆಳಗಾವಿ: ‘ಕೆಎಲ್‌ಇ ಸಂಸ್ಥೆ ನಿರ್ಮಿಸಿದ ಅತ್ಯಾಧುನಿಕ ಚಿಕಿತ್ಸಾ ಸೌಕರ್ಯಗಳನ್ನು ಒಳಗೊಂಡ ಕ್ಯಾನ್ಸರ್‌ ಆಸ್ಪತ್ರೆಯನ್ನು ಡಿ.30ರಂದು ಮಧ್ಯಾಹ್ನ 4ಕ್ಕೆ ರಾಷ್ಟ್ರಪತಿ ದ್ರೌಪದಿ ಮುರ್ಮು ಉದ್ಘಾಟಿಸಲಿದ್ದಾರೆ’ ಎಂದು ಸಂಸ್ಥೆಯ ಕಾರ್ಯಾಧ್ಯಕ್ಷ ಪ್ರಭಾಕರ ಕೋರೆ ತಿಳಿಸಿದರು.

‘ಸುಮಾರು ₹150 ಕೋಟಿ ವೆಚ್ಚದಲ್ಲಿ 300 ಹಾಸಿಗೆಗಳನ್ನು ಹೊಂದಿದ, 1.75 ಲಕ್ಷ ಚದರ ಅಡಿ ವಿಸ್ತೀರ್ಣದ ಬೃಹತ್‌ ಆಸ್ಪತ್ರೆ ಸಿದ್ಧಗೊಂಡಿದೆ. ಅತಿ ಕಡಿಮೆ ದರದಲ್ಲಿ ಕ್ಯಾನ್ಸರ್‌ಗೆ ವಿಶ್ವಮಟ್ಟದ ಚಿಕಿತ್ಸೆ ನೀಡಲಾಗುತ್ತದೆ’ ಎಂದು ಅವರು ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

‘ಸಂಸ್ಥೆಯು ಈಗಾಗಲೇ 5,500 ಹಾಸಿಗೆಗಳ ವಿವಿಧ ಆಸ್ಪತ್ರೆಗಳನ್ನು ನಡೆಸುತ್ತಿದೆ. ಆದರೆ, ಉತ್ತರ ಕರ್ನಾಟಕ ಭಾಗದಲ್ಲಿ ಕ್ಯಾನ್ಸರ್‌ ರೋಗಕ್ಕೆ ಸೂಕ್ತ ಆಸ್ಪತ್ರೆ ಇರಲಿಲ್ಲ. ಬಹಳಷ್ಟು ವರ್ಷಗಳಿಂದ ರೋಗಿಗಳು ಮುಂಬೈ ಇಲ್ಲವೇ ಬೆಂಗಳೂರಿಗೆ ಹೋಗಬೇಕಾಗಿತ್ತು. ಈ ಕೊರತೆ ನೀಗಿಸಲು ಪ್ರತ್ಯೇಕ ಕ್ಯಾನ್ಸರ್‌ ಆಸ್ಪತ್ರೆ ನಿರ್ಮಿಸಿದ್ದೇವೆ. ರಾಜ್ಯ ಮಾತ್ರವಲ್ಲದೇ ಮಹಾರಾಷ್ಟ್ರ, ಗೋವಾ ರಾಜ್ಯಗಳ ರೋಗಿಗಳಿಗೂ ಇದು ಅನುಕೂಲವಾಗಲಿದೆ’ ಎಂದರು.

ADVERTISEMENT

‘ಈ ಆಸ್ಪತ್ರೆ ನಿರ್ಮಿಸಲು ನಮ್ಮ ಸಂಸ್ಥೆಯ ಹಳೆ ವಿದ್ಯಾರ್ಥಿ, ಅಮೆರಿಕದಲ್ಲಿ ನೆಲೆಸಿರುವ ಡಾ.ಸಂಪತ್‌ಕುಮಾರ ಶಿವಾನಗಿ ಹಾಗೂ ಡಾ.ಉದಯಾ ಶಿವಾನಗಿ ಅವರು ₹8 ಕೋಟಿ ದೇಣಿಗೆ ನೀಡಿದ್ದಾರೆ. ಆಸ್ಪತ್ರೆಗೆ ಅವರ ಹೆಸರನ್ನೇ ಇಡಲಾಗುತ್ತಿದೆ. ಶಸ್ತ್ರಚಿಕಿತ್ಸೆ, ಕಿಮೊಥೆರಪಿ, ರೇಡಿಯೊಥೆರಪಿ ಸೇರಿದಂತೆ ಎಲ್ಲ ರೀತಿಯ ಚಿಕಿತ್ಸೆ ಲಭ್ಯ ಇವೆ. ರೋಗಿಗಳಿಗೆ ಅಡ್ಡಪರಿಣಾಮ ಬೀರದಂಥ ಅತ್ಯಾಧುನಿಕ ರೋಬಾಟಿಕ್‌ ಚಿಕಿತ್ಸಾ ವಿಧಾನ ಅಳವಡಿಸಿಕೊಂಡಿದ್ದೇವೆ. ಮುಂಬೈನ ಟಾಟಾ ಮೆಮೋರಿಯಲ್‌ ಆಸ್ಪತ್ರೆಗಿಂತಲೂ ಗುಣಮಟ್ಟದ ವೈದ್ಯಕೀಯ ಸಲಕರಣೆಗಳು ನಮ್ಮಲ್ಲಿವೆ’ ಎಂದು ಅವರು ತಿಳಿಸಿದರು.

‘ಭಾರತವು ಈಗ ಕ್ಯಾನ್ಸರ್‌ ಪೀಡಿತರ ತಾಣವಾಗುತ್ತಿದೆ. ವಿಶ್ವದ ಅತಿ ಹೆಚ್ಚು ರೋಗಿಗಳು ನಮ್ಮಲ್ಲಿದ್ದಾರೆ. ಹೃದ್ರೋಗವನ್ನು ಹಿಂದಿಕ್ಕಿ ಕ್ಯಾನ್ಸರ್‌ ಮೊದಲ ಸ್ಥಾನ ಪಡೆದಿದೆ. ಹಸುಗೂಸಿನಿಂದ ಹಿಡಿದು ಹಿರಿಯರವರೆಗೆ ಎಲ್ಲ ವಯೋಮಾನದವರಿಗೆ, ಎಲ್ಲ ಮಾದರಿಯ ಕ್ಯಾನ್ಸರ್‌ ಚಿಕಿತ್ಸೆಯೂ ಕೆಎಲ್‌ಇ ಕ್ಯಾನ್ಸರ್‌ ಆಸ್ಪತ್ರೆಯಲ್ಲಿ ಲಭ್ಯ ಇವೆ’ ಎಂದು ವಿವರಿಸಿದರು.

ಬೆಳಗಾವಿಯಲ್ಲಿ ಕೆಎಲ್‌ಇ ಸಂಸ್ಥೆ ನಿರ್ಮಿಸಿದ ಕ್ಯಾನ್ಸರ್‌ ಆಸ್ಪತ್ರೆಯ ಅತ್ಯಾಧುನಿಕ ಚಿಕಿತ್ಸಾ ಸೌಕರ್ಯಗಳನ್ನು ಆಸ್ಪತ್ರೆ ವೈದ್ಯಕೀಯ ನಿರ್ದೇಶಕ ಡಾ.ಎಂ.ವಿ.ಜಾಲಿ ಪರಿಚಿಯಿಸಿದರು   ಪ್ರಜಾವಾಣಿ ಚಿತ್ರ
ಬೆಳಗಾವಿಯು ರಾಜ್ಯದ ಆರೋಗ್ಯ ಸೇವೆಗಳ ಕೇಂದ್ರವಾಗಲಿದೆ ಎಂದು ನಾನು 40 ವರ್ಷಗಳ ಹಿಂದೆ ಹೇಳಿದ್ದೆ. ಈಗ ಅದು ಸತ್ಯವಾಗಿದೆ
ಪ್ರಭಾಕರ ಕೋರೆ ಕಾರ್ಯಾಧ್ಯಕ್ಷ ಕೆಎಲ್‌ಇ ಸಂಸ್ಥೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.