
ಕೃಷ್ಣಮೃಗ
ಬೆಳಗಾವಿ: ಸಮೀಪದ ಭೂತರಾಮನ ಹಟ್ಟಿಯ ಲ್ಲಿರುವ ರಾಣಿ ಚನ್ನಮ್ಮ ಕಿರು ಮೃಗಾಲಯದಲ್ಲಿ ಸೋಮವಾರ ಮತ್ತೊಂದು ಕೃಷ್ಣಮೃಗ
ಸಾವನ್ನಪ್ಪಿದ್ದು, ಈವರೆಗಿನ ಸಾವಿನ ಸಂಖ್ಯೆ 31ಕ್ಕೆ ಏರಿದೆ. ಸೋಂಕಿನ ತೀವ್ರತೆ ಹೆಚ್ಚುತ್ತಿದೆ.
‘ಮೃಗಾಲಯದಲ್ಲಿ ನಾವು ಪೋಷಿಸುತ್ತಿದ್ದ ಒಟ್ಟು 38ರ ಪೈಕಿ 30 ಕೃಷ್ಣಮೃಗಗಳು ನಾಲ್ಕು ದಿನಗಳ ಅವಧಿಯಲ್ಲಿ ಮೃತಪಟ್ಟಿವೆ. ಇನ್ನೊಂದು ಕೃಷ್ಣಮೃಗವು ಸೋಮವಾರ ನಸುಕಿನಲ್ಲಿ ಮೃತಪಟ್ಟಿದೆ. ಬಾಕಿ ಉಳಿದಿರುವ ಏಳು ಕೃಷ್ಣಮೃಗಗಳ ಮೇಲೆ ನಿಗಾ ವಹಿಸಿ, ಚಿಕಿತ್ಸೆಯನ್ನೂ ಮುಂದುವರೆಸಿದ್ದೇವೆ’ ಎಂದು ಮೃಗಾಲಯದ ಅಧಿಕಾರಿಯೊಬ್ಬರು ತಿಳಿಸಿದರು.
‘ಇತರ ಪ್ರಾಣಿಗಳಿಗೆ ಸೋಂಕು ಹರಡದಂತೆ ತಡೆಯಲು ಸೋಂಕು ನಿವಾರಕ ಸಿಂಪಡಣೆ ಸೇರಿದಂತೆ ಸೂಕ್ತ ಮುಂಜಾಗ್ರತಾ ಕ್ರಮ ತೆಗೆದುಕೊಳ್ಳಲಾಗಿದೆ. ಪಶು ವೈದ್ಯಾಧಿಕಾರಿಗಳು ಮತ್ತು ಸಿಬ್ಬಂದಿ ಕೃಷ್ಣಮೃಗಗಳ ಮೇಲೆ ನಿಗಾ ವಹಿಸಿದ್ದಾರೆ. ಮೃತ ಪ್ರಾಣಿಗಳ ಒಳ ಅಂಗಾಂಗಗಳ ಮಾದರಿಗಳನ್ನು ಪರೀಕ್ಷೆಗೆ ಕಳುಹಿಸಲಾಗಿದೆ’ ಎಂದು ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಮಂಜುನಾಥ ಚವ್ಹಾಣ ತಿಳಿಸಿದರು.
‘ವೈದ್ಯರು, ಅಧಿಕಾರಿಗಳ ನಿರ್ಲಕ್ಷ್ಯ’
‘ಕೃಷ್ಣಮೃಗಗಳ ಸಾವಿನ ಪ್ರಕರಣದಲ್ಲಿ ಮೃಗಾಲಯದ ವೈದ್ಯ ಮತ್ತು ಸಿಬ್ಬಂದಿ ನಿರ್ಲಕ್ಷ್ಯ ವಹಿಸಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ. ಮೃತ ಪ್ರಾಣಿಗಳ ಒಳ ಅಂಗಾಂಗಗಳ ಪರೀಕ್ಷೆ ಮತ್ತು ತನಿಖಾ ವರದಿಯ ನಿರೀಕ್ಷೆಯಲ್ಲಿದ್ದೇವೆ. ಸಿಬ್ಬಂದಿ ಲೋಪ ದೃಢಪಟ್ಟರೆ, ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಶಿಫಾರಸು ಮಾಡಲಾಗುವುದು’ ಎಂದು ಕರ್ನಾಟಕ ಮೃಗಾಲಯ ಪ್ರಾಧಿಕಾರದ ಅಧ್ಯಕ್ಷ ಕೆ.ರಂಗಸ್ವಾಮಿ ಹೇಳಿದರು.
ಮೃಗಾಲಯಕ್ಕೆ ಸೋಮವಾರ ಭೇಟಿ ನೀಡಿದ ಅವರು, ‘ವೈದ್ಯಕೀಯ ತಂಡವು ಪ್ರಾಣಿಗಳ ಆರೋಗ್ಯವನ್ನು ನಿಯಮಿತವಾಗಿ ತಪಾಸಣೆ ಮಾಡಬೇಕು. ಇಲ್ಲಿ ಅದು ಪಾಲನೆಯಾಗಿಲ್ಲ. ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಸುನೀಲ ಪನ್ವಾರ್ ಕೂಡ ಭಾನುವಾರ ಭೇಟಿ ನೀಡಿದ್ದು, ವರದಿ ಸಲ್ಲಿಸಲಿ ದ್ದಾರೆ. ಅವರ ವರದಿ ಆಧರಿಸಿ, ತಪ್ಪು ಯಾರದ್ದು ಎಂಬುದು ಪರಿಶೀಲಿಸಲಾಗುವುದು’ ಎಂದರು.
‘ಅಳಿವಿನಂಚಿನಲ್ಲಿ ಇರುವ ಈ ಕೃಷ್ಣಮೃಗಗಳ ಪ್ರಬೇಧವನ್ನು ಸಂರಕ್ಷಿಸಿ, ಸಂಖ್ಯೆ ಹೆಚ್ಚಿಸಲು ಇಲ್ಲಿ ಇರಿಸಲಾಗಿದೆ. ಇಷ್ಟೊಂದು ಸಂಖ್ಯೆಯಲ್ಲಿ ಅವು ಮೃತ ಪಟ್ಟಿರುವುದು ಚಿಂತೆಗೀಡು ಮಾಡಿದೆ’ ಎಂದರು.
ಹೊಸಪೇಟೆ, ಗದಗದಲ್ಲೂ ನಿಗಾ
ಹೊಸಪೇಟೆ/ಗದಗ: ಹೊಸಪೇಟೆಯ ಕಮಲಾಪುರ ಸಮೀಪದ ಹಂಪಿ ಮೃಗಾಲಯ ದಲ್ಲಿ 50ಕ್ಕೂ ಹೆಚ್ಚು ಮತ್ತು ಗದಗ ಜಿಲ್ಲೆಯ ಬಿಂಕದಕಟ್ಟಿಯಲ್ಲಿ 70ಕ್ಕೂ ಹೆಚ್ಚು ಕೃಷ್ಣಮೃಗಗಳಿದ್ದು, ಅವುಗಳ ಮೇಲೂ ನಿಗಾ ವಹಿಸಲಾಗಿದೆ.
‘ಹಂಪಿ ಮೃಗಾಲಯದಲ್ಲಿ ಕೃಷ್ಣಮೃಗಗಳಿಗೆ ಯಾವುದೇ ರೀತಿಯಲ್ಲೂ ಅಪಾಯವಾಗದಂತೆ ನಿಗಾ ವಹಿಸಲಾಗಿದೆ. ಇಲ್ಲಿ ಸುತ್ತಮುತ್ತ ಕಾಡು ಇರುವ ಕಾರಣ ಪ್ರಾಣಿಗಳಿಗೆ ಸೋಂಕು ತಗಲುವ ಸಾಧ್ಯತೆ ಕಡಿಮೆ ಇದೆ’ ಎಂದು ಮೃಗಾಲಯದ ವಲಯ ಅರಣ್ಯ ಅಧಿಕಾರಿ ಭರತ್‌ರಾಜ್ ತಿಳಿಸಿದರು. ‘ಬಿಂಕದಕಟ್ಟಿ ಮೃಗಾಲಯ ದಲ್ಲಿ ಕೃಷ್ಣಮೃಗಗಳು ಆರೋಗ್ಯ ವಾಗಿವೆ. ಆದರೂ ಮುಂಜಾಗ್ರತಾ ಕ್ರಮವಾಗಿ ಇತರ ಪ್ರಾಣಿಗಳ ರಕ್ತದ ಮಾದರಿ ಸಂಗ್ರಹಿಸಿ ಬೆಂಗಳೂರಿನ ಪ್ರಯೋ ಗಾಲಯಕ್ಕೆ ಕಳುಹಿಸಿಕೊಡುವ ಯೋಚನೆಯಿದೆ’ ಎಂದು ಮೃಗಾಲಯದ ವಲಯ ಅರಣ್ಯಾಧಿಕಾರಿ ಸ್ನೇಹಾ ಕೊಪ್ಪಳ ತಿಳಿಸಿದರು.
ಗುಜರಾತ್‌ನಲ್ಲಿ ತೆಗೆದುಕೊಂಡಿದ್ದ ಕ್ರಮ, ನೀಡಿದ ಚಿಕಿತ್ಸೆಯ ಮಾಹಿತಿ ಪಡೆದು, ಬೆಳಗಾವಿಯಲ್ಲೂ ಅದನ್ನೇ ಮುಂದುವರಿಸಲಾಗಿದೆಸುನೀಲ ಪನ್ವಾರ್, ಸದಸ್ಯ ಕಾರ್ಯದರ್ಶಿ, ಕರ್ನಾಟಕ ಮೃಗಾಲಯ ಪ್ರಾಧಿಕಾರ
ಕೃಷ್ಣಮೃಗಗಳ ಸಾವಿಗೆ ಕಾರಣ ತಿಳಿಯಲು ಸಮಗ್ರ ತನಿಖೆಗೆ ಸೂಚಿಸಲಾಗಿದೆ. ಸಿಬ್ಬಂದಿ ನಿರ್ಲಕ್ಷ್ಯ ಸಾಬೀತಾದಲ್ಲಿ ಕ್ರಮ ಕೈಗೊಳ್ಳಲಾಗುವುದುಸತೀಶ ಜಾರಕಿಹೊಳಿ, ಲೋಕೋಪಯೋಗಿ ಸಚಿವ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.