ADVERTISEMENT

ಚಿಕ್ಕೋಡಿ ಪುರಸಭೆ: ಆಟಕ್ಕುಂಟು ಲೆಕ್ಕಕ್ಕಿಲ್ಲದ ಕಸವಿಲೇವಾರಿ ಘಟಕ

​ಪ್ರಜಾವಾಣಿ ವಾರ್ತೆ
Published 19 ಅಕ್ಟೋಬರ್ 2025, 7:21 IST
Last Updated 19 ಅಕ್ಟೋಬರ್ 2025, 7:21 IST
ಚಿಕ್ಕೋಡಿ ನಗರದ ಗಾಂಧಿ ಮಾರುಕಟ್ಟೆಯ ಬಳಿಯ ಮುಖ್ಯರಸ್ತೆಯಲ್ಲಿ ಹರಡಿದ ತ್ಯಾಜ್ಯ ರಾಶಿಯ ನೋಟ
ಚಿಕ್ಕೋಡಿ ನಗರದ ಗಾಂಧಿ ಮಾರುಕಟ್ಟೆಯ ಬಳಿಯ ಮುಖ್ಯರಸ್ತೆಯಲ್ಲಿ ಹರಡಿದ ತ್ಯಾಜ್ಯ ರಾಶಿಯ ನೋಟ   

ಚಿಕ್ಕೋಡಿ: ನಗರದ ಪುರಸಭೆ ವ್ಯಾಪ್ತಿಯ 23 ವಾರ್ಡ್‌ಗಳಲ್ಲಿ 40 ಸಾವಿರಕ್ಕೂ ಹೆಚ್ಚು ಜನಸಂಖ್ಯೆ ಇದ್ದು, ಪ್ರತಿದಿನವೂ 10 ಟನ್‌ಗೂ ಹೆಚ್ಚು ಕಸ ಸಂಗ್ರಹವಾಗುತ್ತಿದೆ. ಕಸದ ಸೂಕ್ತ ವಿಲೇವಾರಿ ಹಾಗೂ ಸಂಸ್ಕರಣೆ ಇಲ್ಲದ್ದರಿಂದ ಪಟ್ಟಣದ ಜನರು ಮೂಗು ಮುಚ್ಚಿಕೊಂಡು ತಿರುಗಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಹೀಗಾಗಿ ಹಂದಿ, ನಾಯಿ ಹಾಗೂ ಸೊಳ್ಳೆಗಳ ಕಾಟದಿಂದ ಪಟ್ಟಣದ ಜನರು ನಲುಗಿಹೋಗಿದ್ದಾರೆ.

ತಾಲ್ಲೂಕಿನ ಕರೋಶಿ ಗ್ರಾಮದ ಹೊರವಲಯದಲ್ಲಿ 2005ರಲ್ಲಿ 10 ಎಕರೆ ಪ್ರದೇಶದಲ್ಲಿ ಘನತ್ಯಾಜ್ಯವಿಲೇವಾರಿ ಘಟಕ ಸ್ಥಾಪನೆಯಾಗಿದ್ದರೂ ಅದು ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂಬಂತಾಗಿದೆ. ಕಸ ಸಂಸ್ಕರಣೆ ಮಾಡುವ ಯಂತ್ರೋಪಕರಣಗಳು ತುಕ್ಕು ಹಿಡಿದು ಹೋಗಿದ್ದರಿಂದ ಕಸ ಸಂಸ್ಕರಣೆ ಮಾಡದೇ ಟನ್ ನೂರಾರು ಟನ್ ಕಸವನ್ನು ಸುಖಾ ಸುಮ್ಮನೆ ಗುಡ್ಡೆ ಹಾಕಿದ್ದು ಕಂಡು ಬರುತ್ತದೆ.

ಕಳೆದ 20 ವರ್ಷಗಳಿಂದ ಕಸ ವಿಲೇವಾರಿ ಘಟಕ ಅಸ್ತಿತ್ವದಲ್ಲಿದ್ದರೂ ಕಸವನ್ನು ಸಂಸ್ಕರಣೆ ಕಾರ್ಯ ನಡೆಯುತ್ತಿಲ್ಲ. ಕಸಕ್ಕೆ ಹಲವು ಭಾರಿ ಬೆಂಕಿ ಹಾಕಿ ಅವೈಜ್ಞಾನಿಕ ಕ್ರಮಗಳಿಂದ ಕುಗ್ಗಿಸಲಾಗಿದೆ. ಇದರಿಂದ ಸರ್ಕಾರದ ಕೋಟ್ಯಂತರ ವೆಚ್ಚ ಮಾಡಿ ನಿರ್ಮಾಣ ಮಾಡಿರುವ ಕಸ ವಿಲೇವಾರಿ ಹಾಗೂ ಸಂಸ್ಕರಣ ಘಟಕ ಅರ್ಥ ಕಳೆದುಕೊಂಡಂತಾಗಿದೆ.

ADVERTISEMENT

ಪುರಸಭೆ ವ್ಯಾಪ್ತಿಯಲ್ಲಿ 39 ಕಾಯಂ ಪೌರ ಕಾರ್ಮಿಕರು, 11 ಜನ ವಾಹನ ಚಾಲಕರು, 13 ಜನ ಲೋಡರ್ ಸೇರಿದಂತೆ ಒಟ್ಟು 79 ಜನ ಪೌರ ಕಾರ್ಮಿಕರು ಕಾರ್ಯನಿರ್ವಹಿಸುತ್ತಿದ್ದು, ಕಸ ಸಂಗ್ರಹಣೆ ಮಾಡುವ 14 ವಾಹನಗಳಿವೆ. ದಿನದಿಂದ ದಿನಕ್ಕೆ ಪಟ್ಟಣ ಬೆಳೆಯುತ್ತಿದ್ದಂತೆಯೇ ಕಸ ಸಂಗ್ರಹ ಪ್ರಮಾಣ ಹೆಚ್ಚಳವಾಗುತ್ತಲೇ ಇದೆ. ಪೌರಕಾರ್ಮಿಕರ ಕೊರತೆಯಿಂದ ಸೂಕ್ತ ರೀತಿಯಲ್ಲಿ ಕಸ ಸಂಗ್ರಹ, ವಿಲೇವಾರಿ ಹಾಗೂ ಸಂಸ್ಕರಣ ಮಾಡಲು ಅನಾನುಕೂಲ ಆಗುತ್ತಿದೆ.

ಪಟ್ಟಣದ ಗಾಂಧಿಮಾರುಕಟ್ಟೆ ಸುತ್ತಮುತ್ತಲಿನ ಪ್ರದೇಶದಲ್ಲಂತೂ ಕಸ ಎಲ್ಲೆಂದರಲ್ಲಿ ಕಣ್ಣಿಗೆ ರಾಚುತ್ತದೆ. ಗಾಂಧಿ ಮಾರುಕಟ್ಟೆಗೆ ತೆರಳುವ ಪ್ರಮುಖ ರಸ್ತೆಯೊಂದರಲ್ಲಿ ಹಾದು ಹೋಗಲೂ ಬಾರದ ರೀತಿಯಲ್ಲಿ ಕಸ ರಸ್ತೆ ತುಂಬ ಬಿದ್ದಿದೆ. ಸಮಸ್ಯೆ ಬಗ್ಗೆ ಪುರಸಭೆ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಜಾಣ ನಿದ್ರೆಗೆ ಜಾರಿದ್ದು ಎದ್ದು ಕಾಣುತ್ತದೆ. ಹಲವು ಕಡೆಗೆ ಕಸದ ರಾಶಿಯು ಬಿದ್ದಿರುವುದು ಪುರಸಭೆಯ ಕಾರ್ಯವೈಖರಿಗೆ ಹಿಡಿದ ಕೈಗನ್ನಡಿಯಾಗಿದೆ.

ರಾಷ್ಟ್ರೀಯ ಹಸಿರು ಪೀಠದ ಅಡಿಯಲ್ಲಿ ತೂಕದ ಯಂತ್ರ, ಸೇರಿದಂತೆ ವಿವಿಧ ಯಂತ್ರೋಪಕರಣಗಳ ಖರೀದಿಗೆ 2025-26ನೇ ಸಾಲಿನಲ್ಲಿ ಸ್ವಚ್ಛ ಭಾರತ ಯೋಜನೆ 2 ಅಡಿಯಲ್ಲಿ ₹72 ಲಕ್ಷ ಬಿಡುಗಡೆಯಾಗಿದೆ. ಈ ಹಣದಿಂದ ಕರೋಶಿ ಗ್ರಾಮದ ಹೊರವಲಯದಲ್ಲಿರುವ ಘನತ್ಯಾಜ್ಯ ವಿಲೇವಾರಿ ಘಟಕದಲ್ಲಿ ಕಸ ಸಂಸ್ಕರಣೆ ಮಾಡಿ ಗೊಬ್ಬರ ತಯಾರಿಸುವ ಕಾರ್ಯವನ್ನು ಪುರಸಭೆ ಶೀಘ್ರದಲ್ಲಿ ಪ್ರಾರಂಭಿಸಲಿದೆ. ಹೀಗೆ ತಯಾರಾದ ಗೊಬ್ಬರವನ್ನು ₹3 ಗೆ ಕೆಜಿಯಂತೆ ಮಾರಾಟ ಮಾಡುವ ನಿರ್ಧಾರ ಮಾಡಲಾಗಿದೆ.

ಚಿಕ್ಕೋಡಿ ತಾಲ್ಲೂಕಿನ ಕರೋಶಿ ಗ್ರಾಮದ ಹೊರವಲಯದಲ್ಲಿರುವ ಕಸ ವಿಲೇವಾರಿ ಘಟಕದಲ್ಲಿ ಕಸದ ರಾಶಿ
ಚಿಕ್ಕೋಡಿ ಪುರಸಭೆ ವ್ಯಾಪ್ತಿಯಲ್ಲಿ ಕಸ ವಿಲೇವಾರಿ ಸಮರ್ಪಕವಾಗಿಲ್ಲ. ಸಂಬಂಧಿಸಿದವರು ಜನರ ಆರೋಗ್ಯ ಕಾಪಾಡುವ ಹೊಣೆಗಾರಿಕೆ ನಿಭಾಯಿಸಲು ಮುಂದಾಗಬೇಕು
– ಅಮರ ನಾಯಕ, ಸಾಮಾಜಿಕ ಕಾರ್ಯಕರ್ತ ಚಿಕ್ಕೋಡಿ
ನಗರದಲ್ಲಿ ಸಂಗ್ರಹಿಸುವ ಕಸವನ್ನು ಕರೋಶಿನ ವಿಲೇವಾರಿ ಘಟಕದಲ್ಲಿ ಸಂಸ್ಕರಣೆ ಮಾಡಲಾಗುವುದು. ಇದಕ್ಕಾಗಿ ಹೊಸ ಯಂತ್ರ ಖರೀದಿಯಾಗಿದ್ದು ಶೀಘ್ರವೇ ಕಾರ್ಯಾರಂಭಿಸಲಿವೆ.
– ಜಗದೀಶ ಈಟಿ, ಚಿಕ್ಕೋಡಿ ಪುರಸಭೆ ಮುಖ್ಯಾಧಿಕಾರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.