ಬೆಳಗಾವಿ: ‘ರಾಜ್ಯ ಸರ್ಕಾರ ಭ್ರಷ್ಟಾಚಾರದಲ್ಲಿ ಮುಳುಗಿದೆ. ರಾಜೀವ್ ಗಾಂಧಿ ವಸತಿ ನಿಗಮದಿಂದ ಮನೆಗಳ ಹಂಚಿಕೆಯಲ್ಲಿ ಆಗುತ್ತಿರುವ ಭ್ರಷ್ಟಾಚಾರದ ಬಗ್ಗೆ ಶಾಸಕ ಬಿ.ಆರ್.ಪಾಟೀಲ ನೀಡಿದ ಹೇಳಿಕೆ ಹಾಗೂ ಮುಂದಿನ ಎರಡ್ಮೂರು ದಿನಗಳಲ್ಲಿ ರಾಜೀನಾಮೆ ನೀಡುವ ಬಗ್ಗೆ ಯೋಚಿಸುತ್ತಿರುವುದಾಗಿ ಶಾಸಕ ರಾಜು ಕಾಗೆ ನೀಡಿದ ಹೇಳಿಕೆ ಕಾಂಗ್ರೆಸ್ ಸರ್ಕಾರದಲ್ಲಿನ ಭ್ರಷ್ಟಾಚಾರ ಬಹಿರಂಗಪಡಿಸಿವೆ’ ಎಂದು ಸಂಸದ ಜಗದೀಶ ಶೆಟ್ಟರ್ ಆರೋಪಿಸಿದರು.
ಇಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಈ ಸರ್ಕಾರದಲ್ಲಿ ಭ್ರಷ್ಟಾಚಾರ ತುಂಬಿ ತುಳುಕುತ್ತಿದ್ದು, ಸರ್ಕಾರ ಆರ್ಥಿಕವಾಗಿ ದಿವಾಳಿಯಾಗಿದೆ. ಯಾವ ಕಾಮಗಾರಿಗೂ ಕಾರ್ಯಾದೇಶ ಕೊಡುತ್ತಿಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ ಕೇವಲ ಮೂಗಿಗೆ ತುಪ್ಪ ಒರೆಸುವ ಕೆಲಸ ಮಾಡುತ್ತಿದ್ದಾರೆ. ಬಿಜೆಪಿ ಸರ್ಕಾರದ ಅವಧಿಯಲ್ಲಿ ಮಂಜೂರಾಗಿದ್ದ ಕಾಮಗಾರಿಗಳೇ ಈಗ ನಡೆದಿವೆ’ ಎಂದು ಆಪಾದಿಸಿದರು.
‘ಕಾಂಗ್ರೆಸ್ ಶಾಸಕರು ಪ್ರತಿನಿಧಿಸುವ ವಿಧಾನಸಭಾ ಕ್ಷೇತ್ರಗಳಿಗೆ ಅಭಿವೃದ್ಧಿಗಾಗಿ ಹಣ ಬಿಡುಗಡೆಯಾಗುತ್ತಿಲ್ಲ. ಹಾಗಾಗಿ ಆಡಳಿತ ಪಕ್ಷದ ಶಾಸಕರೇ ಸರ್ಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ಗ್ಯಾರಂಟಿ ಯೋಜನೆಗಳಿಗೆ ಕಾಂಗ್ರೆಸ್ ಸರ್ಕಾರ ₹50 ಸಾವಿರ ಕೋಟಿ ವ್ಯಯಿಸುತ್ತಿದೆ. ಆದರೆ, ಕೃಷ್ಣಾ ಮೇಲ್ದಂಡೆ ಯೋಜನೆಗೆ ಹಣ ಕೊಡುತ್ತಿಲ್ಲ’ ಎಂದು ದೂರಿದರು.
‘ಬಿ.ಆರ್.ಪಾಟೀಲ ಮತ್ತು ರಾಜು ಕಾಗೆ ಹೇಳಿದ್ದು ಸರಿ ಇದೆ. ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ಅವರು ನೈತಿಕ ಹೊಣೆ ಹೊತ್ತು ತಮ್ಮ ಸ್ಥಾನಗಳಿಗೆ ರಾಜೀನಾಮೆ ಕೊಡಬೇಕು’ ಎಂದು ಆಗ್ರಹಿಸಿದರು.
‘ಕಾಂಗ್ರೆಸ್‌ನ ಅಸಮಾಧಾನಿತ ಶಾಸಕರು ಬಿಜೆಪಿಗೆ ಬರುತ್ತಾರೆಯೇ? ಆಪರೇಷನ್ ಕಮಲ ಮಾಡುತ್ತೀರಾ’ ಎಂಬ ಪ್ರಶ್ನೆಗೆ, ‘ಆಪರೇಷನ್ ಕಮಲ ಮಾಡುವ ಅಗತ್ಯವೇ ಇಲ್ಲ. ಕಾಂಗ್ರೆಸ್‌ನ ಅನೇಕ ಶಾಸಕರು ಬಿಜೆಪಿಗೆ ಬರಲು ಸಿದ್ಧವಿದ್ದಾರೆ. ಅವರೇ ಬರುತ್ತಾರೆ. ಕಾಂಗ್ರೆಸ್ ಸರ್ಕಾರದಿಂದ ಆಂತರಿಕ ಕಲಹ ಹೆಚ್ಚಿದ್ದು, ಅದು ಯಾವಾಗ ಸ್ಪೋಟವಾಗುತ್ತದೆ ಗೊತ್ತಿಲ್ಲ. ಯಾವುದೇ ಕ್ಷಣದಲ್ಲಿ ರಾಜಕೀಯ ಧ್ರುವೀಕರಣ ಆಗಲಿದ್ದು, ಸರ್ಕಾರ ಪತನವಾಗುತ್ತದೆ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.