ADVERTISEMENT

ಬೋರ್‌ವೆಲ್ ಸೇರುತ್ತಿದೆ ಕಲುಷಿತ ನೀರು: ಜನರಿಗೆ ಅನಾರೋಗ್ಯದ ಆತಂಕ

ಮೈದುಂಬಿದ ತುಂಬಿಕೆರೆಗೆ ಸೇರುತ್ತಿದೆ ಗ್ರಾಮದ ಕಲುಷಿತ ನೀರು,

ಪ್ರಜಾವಾಣಿ ವಿಶೇಷ
Published 9 ಅಕ್ಟೋಬರ್ 2025, 2:17 IST
Last Updated 9 ಅಕ್ಟೋಬರ್ 2025, 2:17 IST
ಎಂ.ಕೆ.ಹುಬ್ಬಳ್ಳಿಯ ತುಂಬುಕೆರೆಗೆ ಮಲಪ್ರಭಾ ನದಿ ನೀರು ತುಂಬಿಸಲಾಗುತ್ತಿದೆ
ಎಂ.ಕೆ.ಹುಬ್ಬಳ್ಳಿಯ ತುಂಬುಕೆರೆಗೆ ಮಲಪ್ರಭಾ ನದಿ ನೀರು ತುಂಬಿಸಲಾಗುತ್ತಿದೆ   

ಎಂ.ಕೆ.ಹುಬ್ಬಳ್ಳಿ: ಪಟ್ಟಣದಲ್ಲಿರುವ ತುಂಬು ಕೆರೆಗೆ ಮಲಪ್ರಭಾ ನದಿಯಿಂದ ನೀರು ಹರಿಸುತ್ತಿದ್ದು, ಮೈದುಂಬುತ್ತಿರುವ ಕೆರೆಗೆ ಅಕ್ಕ-ಪಕ್ಕದ ಮನೆಗಳ ಶೌಚಗೃಹದ ಮತ್ತು ಚರಂಡಿ ನೀರು ಸೇರುತ್ತಿದೆ. ಕೆರೆ ನೀರೆಲ್ಲ ಕಲುಷಿತಗೊಳ್ಳುತ್ತಿದ್ದು, ಅನಾರೋಗ್ಯದ ಭೀತಿ ನಿವಾಸಿಗಳನ್ನು ಕಾಡುತ್ತಿದೆ.

ಕೆರೆಯೊಳಗೆ ಪಟ್ಟಣದ ಕೆಲ ಪ್ರದೇಶಗಳಿಗೆ ನೀರು ಪೂರೈಸುವ ಕೊಳವೆಬಾವಿಗಳಿದ್ದು, ಕೆರೆ ಭರ್ತಿಯಿಂದ ಅವು ನೀರಲ್ಲಿ ಮುಳುಗುತ್ತಿವೆ. ಕೊಳಚೆ ನೀರು ಮಿಶ್ರಣಗೊಂಡಿರುವ ಕೆರೆಯ ನೀರು ಕೊಳವೆಬಾವಿಯೊಳಗೆ ಸೇರಿಕೊಂಡು ನಲ್ಲಿಗಳಲ್ಲಿ ಕೆಂಪು ಬಣ್ಣದ ನೀರು ಬರುತ್ತಿದೆ. ಸಾರ್ವಜನಿಕರು ಅನಿವಾರ್ಯವಾಗಿ ಆ ನೀರನ್ನೇ ಬಳಸುತ್ತಿದ್ದಾರೆ. ಕೊಳಚೆ ನೀರು ಮಿಶ್ರಿತ ನೀರು ಬಳಕೆ ಸಾರ್ವಜನಿಕರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವ ಸಾಧ್ಯತೆ ಇದ್ದು, ಸಾಂಕ್ರಾಮಿಕ ಕಾಯಿಲೆಗಳ ಬೀತಿ ಕಾಡುತ್ತಿದೆ.

ಬೇರೆ ಬೋರ್‌ವೆಲ್‌ಗಳ ಮೂಲಕ ತಮಗೆ ನೀರು ಪೂರೈಸಬೇಕೆಂದು ನಿವಾಸಿಗಳು ಆಗ್ರಹಿಸಿದ್ದಾರೆ. ಹಲವು ದಶಕಗಳಿಂದ ನೀರಿಲ್ಲದೇ ಖಾಲಿಯಾಗಿದ್ದ ತುಂಬುಕೆರೆಯನ್ನು ಮಲಪ್ರಭಾ ನದಿಯಿಂದ ತುಂಬಿಸುತ್ತಿರುವುದಕ್ಕೆ ಸಂತಸ ವ್ಯಕ್ತಪಡಿಸಿದ್ದಾರೆ. ಹಲವು ದಶಕಗಳ ಹಿಂದೆ ಊರಿನ ಜನರ ದಾಹ ನೀಗಿಸುತ್ತಿದ್ದ ಪಟ್ಟಣದಲ್ಲಿರುವ ಈ ಕೆರೆ ಈಗ ಮೈದುಂಬಿಕೊಳ್ಳುತ್ತಿದೆ. ಮಲಪ್ರಭಾ ನದಿಯಿಂದ ಜಾಕ್‌ವೆಲ್ ಪೈಪ್‌ಲೈನ್ ಮೂಲಕ ಕೆರೆಗೆ ನೀರು ಹರಿಸಲಾಗುತ್ತಿದೆ.

ADVERTISEMENT

ಕೆರೆಗೆ ಸೇರುತ್ತಿರುವ ಕೊಳಚೆ ನೀರು ತಡೆಗೆ ಅಧಿಕಾರಿಗಳು ಸೂಕ್ತ ಕ್ರಮಕೈಗೊಳ್ಳಬೇಕೆಂದು ನಿವಾಸಿಗಳು ಆಗ್ರಹಿಸಿದ್ದಾರೆ. ತಕ್ಷಣವೇ ತಮಗೆ ಬೇರೊಂದು ಬೋರ್‌ವೆಲ್ ಮೂಲಕ ತಮ್ಮ ಓಣಿಗಳಿಗೆ ನೀರು ಪೂರೈಸಬೇಕೆಂದು ನಿವಾಸಿಗಳಾದ ಮಹಾಂತೇಶ ಗಣಾಚಾರಿ, ಶಾಸ್ತ್ರಿ ಬಡಿಗೇರ, ಸಿದ್ರಾಮ ಗಣಾಚಾರಿ, ಶಿವಯ್ಯ ಮುಗದೈನವರಮಠ ಮನವಿ ಮಾಡಿದ್ದಾರೆ.

ಬೋರ್‌ವೆಲ್‌ನಲ್ಲಿ ಕೆರೆ ನೀರು ಸೇರಿದ್ದರಿಂದ ನಲ್ಲಿಗಳಲ್ಲಿ ಕೆಂಪುನೀರು ಬರುತ್ತಿದೆ. ಕೂಡಲೇ ಪರ್ಯಾಯ ವ್ಯವಸ್ಥೆ ಮಾಡಿ ಸ್ವಚ್ಛ ನೀರು ಪೂರೈಸಲಾಗುವುದು.
-ರವಿಶಂಕರ ಮಾಸ್ತಿಹೊಳಿಮಠ, ಮುಖ್ಯಾಧಿಕಾರಿ ಪಟ್ಟಣ ಪಂಚಾಯಿತಿ. ಎಂ.ಕೆ.ಹುಬ್ಬಳ್ಳಿ
ಎಂ.ಕೆ.ಹುಬ್ಬಳ್ಳಿಯ ತುಂಬುಕೆರೆಯಲ್ಲಿ ಮುಳುಗಿದ ಬೋರ್‌ವೆಲ್‌
ಎಂ.ಕೆ.ಹುಬ್ಬಳ್ಳಿಯ ನಲ್ಲಿಯಲ್ಲಿ ಸರಬರಾಜು ಮಾಡಿದ ಕಲುಷಿತ ನೀರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.