ADVERTISEMENT

ಸರ್ಕಾರಕ್ಕೆ ಕೆಟ್ಟ ಹೆಸರು ತರಬೇಡಿ: ಆರ್. ಅಶೋಕ್

ಅಧಿಕಾರಿಗಳ ಸಭೆ ನಡೆಸಿದ ಕಂದಾಯ ಸಚಿವ ಆರ್. ಅಶೋಕ್

​ಪ್ರಜಾವಾಣಿ ವಾರ್ತೆ
Published 19 ಅಕ್ಟೋಬರ್ 2020, 12:10 IST
Last Updated 19 ಅಕ್ಟೋಬರ್ 2020, 12:10 IST
ಬೆಳಗಾವಿ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಸೋಮವಾರ ನಡೆದ ಅಧಿಕಾರಿಗಳ ಸಭೆಯಲ್ಲಿ ಕಂದಾಯ ಸಚಿವ ಆರ್. ಅಶೋಕ್ ಮಾತನಾಡಿದರುಪ್ರಜಾವಾಣಿ ಚಿತ್ರ
ಬೆಳಗಾವಿ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಸೋಮವಾರ ನಡೆದ ಅಧಿಕಾರಿಗಳ ಸಭೆಯಲ್ಲಿ ಕಂದಾಯ ಸಚಿವ ಆರ್. ಅಶೋಕ್ ಮಾತನಾಡಿದರುಪ್ರಜಾವಾಣಿ ಚಿತ್ರ   

ಬೆಳಗಾವಿ: ‘ಮನೆ ಕಟ್ಟಿಸಿಕೊಡೋಕೆ ಐದು ವರ್ಷ ಬೇಕಾ? ಹೀಗೆಯೇ ವಿಳಂಬವಾದರೆ ಸರ್ಕಾರಕ್ಕೆ ಕೆಟ್ಟ ಹೆಸರು ಬರುತ್ತದೆ. ಇನ್ನೆರಡು ತಿಂಗಳಲ್ಲಿ ನಿರ್ಮಾಣ ಕಾರ್ಯ ಪೂರ್ಣಗೊಳಿಸಬೇಕು’ ಎಂದು ಕಂದಾಯ ಸಚಿವ ಆರ್. ಅಶೋಕ್‌ ಸೂಚಿಸಿದರು.

ಇಲ್ಲಿನ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಸೋಮವಾರ ನಡೆದ ಜನಪ್ರತಿನಿಧಿಗಳು ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

‘ವಿಧಾನಮಂಡಲ ಅಧಿವೇಶನ ಈ ಬಾರಿ ಕಡಿಮೆ ದಿನ ನಡೆಯಿತು. ಇಲ್ಲವಾದಲ್ಲಿ ವಿರೋಧ ಪಕ್ಷದವರು ಇದನ್ನೇ ದೊಡ್ಡ ವಿಷಯ ಮಾಡುತ್ತಿದ್ದರು. ಮತ್ತೆ ಅಧಿವೇಶನ ಬರುತ್ತದೆಯಲ್ಲವೇ? ಬೇಗ ಮನೆ ನಿರ್ಮಿಸಿಕೊಡಬೇಕು. ತಪ್ಪಾಗಿ ದಾಖಲಾಗಿದ್ದರೆ ರದ್ದುಪಡಿಸುವ ಕೆಲಸವನ್ನಾದರೂ ಮಾಡಬೇಕು. ಹೋದ ವರ್ಷ ಹಾನಿಗೀಡಾಗಿದ್ದ 6ಸಾವಿರ ಮನೆಗಳಲ್ಲಿ ಕಟ್ಟಿರುವುದು 580 ಮಾತ್ರ. ಉಳಿದವು ಯಾಕಿಷ್ಟು ವಿಳಂಬವಾಗಿದೆ’ ಎಂದು ಪ್ರಶ್ನಿಸಿದರು.

ADVERTISEMENT

ಅಲ್ಲಿ ಬುದ್ಧಿವಂತರೇ ಇದ್ದಾರೆ:ಉಳಿದವು ಪ್ರಗತಿಯ ವಿವಿಧ ಹಂತದಲ್ಲಿವೆ ಎಂದು ಸಮರ್ಥನೆಗೆ ಮುಂದಾದ ಅಧಿಕಾರಿಗೆ, ‘ಅಧಿವೇಶನದಲ್ಲಿ ಬುದ್ಧಿವಂತರು ಜಾಸ್ತಿ ಇರುತ್ತಾರೆ. ಅಲ್ಲಿ ಹೀಗೆ ಸ್ಪಷ್ಟನೆ ಕೊಡಲಾಗುವುದಿಲ್ಲ. ನಮ್ಮನ್ನು ಹಿಡಿದುಕೊಂಡು ‌ಬಿಡುತ್ತಾರೆ. ಇಂತಹ ಕಾರಣಗಳನ್ನೆಲ್ಲಾ ಅಧಿವೇಶನ ಅಥವಾ ಜನರಿಗೆ ಹೇಳಲಾಗುವುದಿಲ್ಲ. ಹೀಗೆಯೇ ಆದರೆ ಸರ್ಕಾರಕ್ಕೆ ಕೆಟ್ಟ ಹೆಸರು ಬರುತ್ತದೆ. ಹೀಗಾಗಿ, ಪ್ರಗತಿ ತೋರಿಸಬೇಕು’ ಎಂದು ತಾಕೀತು ಮಾಡಿದರು.

‘ಸಮೀಕ್ಷೆ ಪೂರ್ಣಗೊಂಡು ವಸತಿ ನಿಗಮದ ತಂತ್ರಾಂಶದಲ್ಲಿ ದಾಖಲಾದವರಿಗೆ ತಕ್ಷಣವೇ ಪರಿಹಾರ ನೀಡಬೇಕು. ಪಡೆದವರು ಮನೆ ನಿರ್ಮಿಸುವಂತೆ ನೋಡಿಕೊಳ್ಳಬೇಕು. ತಂತ್ರಾಂಶದಲ್ಲಿ ಬೋಗಸ್ ಎಂಟ್ರಿ ಆಗಿದ್ದಲ್ಲಿ ರದ್ದುಪಡಿಸಬೇಕು’ ಎಂದು ಸೂಚಿಸಿದರು.

ಯಾಕೆ ತಲುಪಿಲ್ಲ?:‘ಕಳೆದ ಬಾರಿಯ ಪ್ರವಾಹ ಹಾನಿ ಪರಿಹಾರ ನೀಡಿಲ್ಲ ಎಂಬ ದೂರು ವ್ಯಾಪಕವಾಗಿದೆ. ಹಣ ಬಿಡುಗಡೆ ಮಾಡಿದ್ದರೂ ಯಾಕೆ ತಲುಪಿಲ್ಲ’ ಎಂದು ಪ್ರಶ್ನಿಸಿದರು.

‘ಬೆಳೆ ಹಾನಿ ಸಮಿಕ್ಷೆಯ‌ನ್ನು ಆದಷ್ಟು ಬೇಗ ಮುಗಿಸಿ ಪರಿಹಾರ ನೀಡಬೇಕು’ ಎಂದು ತಾಕೀತು ಮಾಡಿದರು.

ಕಾರ್ಖಾನೆಗೆ ಸೂಚಿಸಿ:‘ಗಾಳಿ–ಮಳೆಯಿಂದ ನೆಲ ಕಚ್ಚಿದ ಕಬ್ಬನ್ನು ತಕ್ಷಣ ಕಟಾವು ಮಾಡಿ ಕಾರ್ಖಾನೆಗೆ‌ ಕಳುಹಿಸುವ ವ್ಯವಸ್ಥೆ ಮಾಡಿದರೆ ಅನುಕೂಲವಾಗಲಿದೆ’ ಎಂದು ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಒತ್ತಾಯಿಸಿದರು.

ಪ್ರತಿಕ್ರಿಯಿಸಿದ ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ, ‘ಸಕ್ಕರೆ ಕಾರ್ಖಾನೆಯವರ ಸಭೆ ನಡೆಸಿ ಕ್ರಮ ಕೈಗೊಳ್ಳಬೇಕು’ ಎಂದು ಜಿಲ್ಲಾಧಿಕಾರಿಗೆ ಸೂಚಿಸಿದರು.

ವಿಧಾನಸಭೆ ಉಪಸಭಾಧ್ಯಕ್ಷ ಆನಂದ ಮಾಮನಿ, ಶಾಸಕರಾದ ಪಿ. ರಾಜೀವ, ಮಹಾಂತೇಶ ಕೌಜಲಗಿ, ಅಭಯ ಪಾಟೀಲ, ಡಿ.ಎಂ. ಐಹೊಳೆ, ಅನಿಲ ಬೆನಕೆ ಮಾತನಾಡಿದರು.

ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಆಶಾ ಐಹೊಳೆ, ಬುಡಾ ಅಧ್ಯಕ್ಷ ಘೂಳಪ್ಪ ಹೊಸಮನಿ, ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ ಅಧ್ಯಕ್ಷ ಮುಕ್ತಾರ್ ಹುಸೇನ್ ಪಠಾಣ, ಸಿಇಒ ದರ್ಶನ್ ಎಚ್.ವಿ. ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.