ADVERTISEMENT

ಬೆಳಗಾವಿ: ಕೇಂದ್ರ ಸರ್ಕಾರದ ವಿರುದ್ಧ ರೈತರ ಆಕ್ರೋಶ

ಪ್ರತಿಭಟನೆ, ರಸ್ತೆ ತಡೆಗೆ ಸೀಮಿತವಾದ ‘ಭಾರತ ಬಂದ್’

​ಪ್ರಜಾವಾಣಿ ವಾರ್ತೆ
Published 27 ಸೆಪ್ಟೆಂಬರ್ 2021, 14:14 IST
Last Updated 27 ಸೆಪ್ಟೆಂಬರ್ 2021, 14:14 IST
ಬೆಳಗಾವಿಯಲ್ಲಿ ಶೇತ್ಕರಿ ಸಂಘಟನೆಯಿಂದ ಸೋಮವಾರ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ನೂರಾರು ಮಂದಿ ಭಾಗವಹಿಸಿದ್ದರು
ಬೆಳಗಾವಿಯಲ್ಲಿ ಶೇತ್ಕರಿ ಸಂಘಟನೆಯಿಂದ ಸೋಮವಾರ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ನೂರಾರು ಮಂದಿ ಭಾಗವಹಿಸಿದ್ದರು   

ಬೆಳಗಾವಿ: ಕೇಂದ್ರ‌ ಸರ್ಕಾರದ ಮೂರು ಕೃಷಿ ಕಾಯ್ದೆಗಳನ್ನು ವಿರೋಧಿಸಿ ಸಂಯುಕ್ತ ಕಿಸಾನ್‌ ಮೋರ್ಚಾ ಕರೆ ನೀಡಿದ್ದ ಭಾರತ ಬಂದ್‌ಗೆ ನಗರವೂ ಸೇರಿದಂತೆ ಜಿಲ್ಲೆಯಾದ್ಯಂತ ನೀರಸ ‍ಪ್ರತಿಕ್ರಿಯೆ ವ್ಯಕ್ತವಾಯಿತು. ನಗರವೂ ಸೇರಿದಂತೆ ಜಿಲ್ಲೆಯ ಅಲ್ಲಲ್ಲಿ ರೈತ ಸಂಘಟನೆಗಳವರು ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.

ಜನಜೀವನ ಎಂದಿನಂತೆಯೇ ಇತ್ತು. ಅಂಗಡಿಗಳು, ವಾಣಿಜ್ಯ ಮಳಿಗೆಗಳು ತೆರೆದಿದ್ದವು. ಶಾಲಾ–ಕಾಲೇಜುಗಳಲ್ಲಿನ ಚಟುವಟಿಕೆಗಳು ನಡೆದವು. ಜನರು, ವಾಹನಗಳು ಹಾಗೂ ಬಸ್‌ಗಳ ಸಂಚಾರ ಎಂದಿನಂತೆಯೇ ಇತ್ತು. ಪ್ರತಿಭಟನೆ ನಡೆಸುತ್ತಿದ್ದ ಸ್ಥಳಗಳಲ್ಲಿ ಕೆಲ ಕಾಲ ವಾಹನಗಳ ಸಂಚಾರಕ್ಕೆ ಅಡಚಣೆ ಉಂಟಾಯಿತು. ಅಲ್ಲಲ್ಲಿ ಪೊಲೀಸರು ಪ್ರತಿಭಟನಾಕಾರರನ್ನು ವಶಕ್ಕೆ ಪಡೆದು ನಂತರ ಬಿಡುಗಡೆ ಮಾಡಿದರು.

ರೈತರು ಮಳೆಯ ನಡುವೆಯೂ ರಾಣಿ ಚನ್ನಮ್ಮ ವೃತ್ತದಲ್ಲಿ ಟ್ರ್ಯಾಕ್ಟರ್‌ಗಳಲ್ಲಿ ಬಂದು ಘೋಷಣೆ ಕೂಗಿದರು. ಹಸಿರು ಟವೆಲ್‌ಗಳನ್ನು ಬೀಸುತ್ತಾ ಪ್ರತಿಭಟಿಸಿದರು. ಕೆಲವರು ಟ್ರ್ಯಾಕ್ಟರ್‌ ಕೆಳಗೆ ಮಲಗಿ ಆಕ್ರೋಶ ವ್ಯಕ್ತಪಡಿಸಿದರು. ನಂತರ ರೈತರನ್ನು ಪೊಲೀಸರು ವಶಕ್ಕೆ ಪಡೆದರು.

ADVERTISEMENT

ಕೇಂದ್ರ ಬಸ್ ನಿಲ್ದಾಣ ಎದುರು ರಾಜ್ಯ ರೈತ ಸಂಘ, ಹಸಿರು ಸೇನೆ, ಭಾರತೀಯ ಕೃಷಿಕ ಸಮಾಜ, ಕರವೇ ಶಿವರಾಮೇಗೌಡ ಬಣ, ಎಐಡಿವೈಒ ಕಾರ್ಯಕರ್ತರು ಮುಂಜಾನೆ ಪ್ರತಿಭಟನೆ ನಡೆಸಿದರು. ಹಳೆಯ ಟೈರ್‌ಗೆ ಬೆಂಕಿ ಹಚ್ಚಿ ಬಸ್ ತಡೆದರು.

ಒಳ ಮತ್ತು ಹೊರ ಬರುವ ಬಸ್‌ಗಳನ್ನು ತಡೆದರು. ಈ ವೇಳೆ ಕೆಲ ಸಮಯ ಬಸ್ ಸಂಚಾರ ಸ್ಥಗಿತಗೊಂಡಿತ್ತು. ಇದರಿಂದ ಪರೀಕ್ಷಾರ್ಥಿಗಳು ಸೇರಿದಂತೆ ಪ್ರಯಾಣಿಕರಿಗೆ ತೊಂದರೆಯಾಯಿತು. ಪೊಲೀಸರು ಮಧ್ಯಪ್ರವೇಶಿಸಿ, ಬಸ್‌ಗಳ ಸಂಚಾರಕ್ಕೆ ಅನುವು ಮಾಡಿಕೊಟ್ಟರು.

ಅರೆಬೆತ್ತಲೆಯಾಗಿ ಪ್ರತಿಭಟನೆ:

ಚನ್ನಮ್ಮ ವೃತ್ತದಲ್ಲಿ ಭಾರತೀಯ ಕೃಷಿಕ ಸಮಾಜದ ಅಧ್ಯಕ್ಷ ಸಿದಗೌಡ ಮೋದಗಿ ನೇತೃತ್ವದಲ್ಲಿ ರೈತರು ಅರೆಬೆತ್ತಲೆಯಾಗಿ ಪ್ರತಿಭಟನೆ ನಡೆಸಿದರು.

ಈ ವೇಳೆ ಮಾತನಾಡಿದ ಮೋದಗಿ, ‘ಕೇಂದ್ರ ಸರ್ಕಾರವು ಮೂರು ಕೃಷಿ ಕಾಯ್ದೆಗಳನ್ನು ರದ್ದುಗೊಳಿಸಬೇಕು’ ಎಂದು ಆಗ್ರಹಿಸಿದರು. ‘ನಾನು ಇಲ್ಲಿಗೆ ಹುತಾತ್ಮನಾಗುವುದಕ್ಕೇ ಬಂದಿದ್ದೇನೆ. ಪೊಲೀಸರು ಕೃಷಿಕರ ಸಂಕಷ್ಟಗಳನ್ನು ಅರಿತು ಪ್ರತಿಭಟನೆಗೆ ಅವಕಾಶ ಮಾಡಿಕೊಡಬೇಕು’ ಎಂದು ಒತ್ತಾಯಿಸಿದರು.

‘ಸಂಯುಕ್ತ ಕಿಸಾನ್ ಮೋರ್ಚಾದಿಂದ ನಡೆಸುತ್ತಿರುವ ಹೋರಾಟಕ್ಕೆ 10 ತಿಂಗಳು ಆಗುತ್ತಿದೆ. ಆದರೂ ಕೇಂದ್ರ ಸರ್ಕಾರ ಸೌಹಾರ್ದದಿಂದ ಸಮಸ್ಯೆ ಬಗೆಹರಿಸಲು ಮುಂದಾಗುತ್ತಿಲ್ಲ. ಬಂಡವಾಳಶಾಹಿಗಳ ಜೊತೆಗೆ ವ್ಯವಹರಿಸಲು ಮತ್ತು ಮಾತನಾಡಲು ಪ್ರಧಾನಿಗೆ ಸಮಯವಿದೆ. ಆದರೆ, ರೈತರ ಹೋರಾಟಕ್ಕೆ ಬೆಲೆ ಕೊಡದೇ ಇರುವುದು ಖಂಡನೀಯ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕರವೇ ಶಿವರಾಮೇಗೌಡ ಬಣದ ಜಿಲ್ಲಾ ಘಟಕದ ಅಧ್ಯಕ್ಷ ವಾಜೀದ ಹಿರೇಕೋಡಿ, ‘ಕೇಂದ್ರ ಸರ್ಕಾರವು ರೈತರ ಕಷ್ಟವನ್ನು ಕೇಳುತ್ತಿಲ್ಲ. ಆದ್ದರಿಂದ ಬಂದ್ ಬೆಂಬಲಿಸಿದ್ದೇವೆ’ ಎಂದರು. ಎಐಡಿವೈಒ ಮುಖಂಡ ರಾಜು ಗಾಣಗಿ ಮಾತನಾಡಿದರು.

ತಡೆಯಲು ಬಂದ ಪೊಲೀಸರೊಂದಿಗೆ ಪ್ರತಿಭಟನಾಕಾರರು ವಾಗ್ವಾದ ನಡೆಸಿದರು. ಬಳಿಕ ಅವರನ್ನು ಪೊಲೀಸರು ವಶಕ್ಕೆ ಪಡೆದರು.

ತಾಲ್ಲೂಕಿನ ಕರಡಿಗುದ್ದಿಯಲ್ಲಿ ರೈತರು ಬೆಳಗಾವಿ-ಬಾಗಲಕೋಟೆ ರಾಜ್ಯ ಹೆದ್ದಾರಿ ಬಂದ್ ಮಾಡಿ ಪ್ರತಿಭಟನೆ ನಡೆಸಿದರು. ಕಾಂಗ್ರೆಸ್ ಮುಖಂಡ ಶಂಕರಗೌಡ ಪಾಟೀಲ, ಗ್ರಾಮ ಪಂಚಾಯ್ತಿ ಅಧ್ಯಕ್ಷ ಶಿವಾಜಿ ಕುರಿ ನೇತೃತ್ವ ವಹಿಸಿದ್ದರು.

‘ದೇವಿ ಬಂದಿದ್ದಾಳೆ’!:

ಚನ್ನಮ್ಮ ವೃತ್ತದಲ್ಲಿ ಪ್ರತಿಭಟನೆ ನಡೆಸುತ್ತಿದ್ದ ವೇಳೆ, ಖಾನಾಪುರ ತಾಲ್ಲೂಕಿನ ಹಟ್ಟಿಹೊಳಿ ಗ್ರಾಮದ ರೇಣುಕಾ ತಡಕೋಡ ಎನ್ನುವವರು ಸವದತ್ತಿಯ ರೇಣುಕಾದೇವಿ ಮೈಮೇಲೆ ಬಂದಿದ್ದಾಳೆ ಎಂದು ಚೀರಾಡಿದ ಪ್ರಸಂಗ ನಡೆಯಿತು. ‘ನಮ್ಮ ಹೋರಾಟಕ್ಕೆ ತೊಂದರೆ ಕೊಟ್ಟರೆ ನಿಮ್ಮನ್ನು ಬಿಡುವುದಿಲ್ಲ’ ಎಂದು ಪೊಲೀಸರಿಗೆ ಎಚ್ಚರಿಕೆ ನೀಡಿದರು.

ಟ್ರ್ಯಾಕ್ಟರ್‌ನಲ್ಲಿ ವಿವಿಧ ಹಳ್ಳಿಗಳಿಂದ ಬಂದಿದ್ದ ರೈತರು ಶೇತ್ಕರಿ ಸಂಘಟನೆ ನೇತೃತ್ವದಲ್ಲಿ ಪ್ರತಿಭಟಿಸಿದರು. ಚನ್ನಮ್ಮ ವೃತ್ತದಲ್ಲಿ ಸಂಚಾರ ಸಂಪೂರ್ಣ ಬಂದ್ ಮಾಡಿದರು. ನೂರಾರು ಮಂದಿ ಭಾಗವಹಿಸಿದ್ದರು.

ಮುಖಂಡ ಅಪ್ಪಾಸಾಹೇಬ ದೇಸಾಯಿ ನೇತೃತ್ವ ವಹಿಸಿದ್ದರು. ಜಿಲ್ಲಾಧಿಕಾರಿ ಎಂ.ಹಿ. ಹಿರೇಮಠ ಅವರಿಗೆ ಮನವಿ ಸಲ್ಲಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.