ADVERTISEMENT

ಖಾದಿ ಬೆಳವಣಿಗೆಗೆ ಶ್ರಮಿಸುತ್ತಿರುವ ‘ಯೋಗಿ’

ಗಾಂಧಿ ಅನುಯಾಯಿ ಗಂಗಪ್ಪ ಮಾಳಗಿ

ರುದ್ರಗೌಡ ಪಾಟೀಲ
Published 1 ಅಕ್ಟೋಬರ್ 2019, 20:00 IST
Last Updated 1 ಅಕ್ಟೋಬರ್ 2019, 20:00 IST
ಗಂಗಪ್ಪ ಮುದ್ದಪ್ಪ ಮಾಳಗಿ
ಗಂಗಪ್ಪ ಮುದ್ದಪ್ಪ ಮಾಳಗಿ   

ಸಾಂಬ್ರಾ: ಬೆಳಗಾವಿ ತಾಲ್ಲೂಕು ಹುದಲಿಗೆ ‘ಖಾದಿ ಗ್ರಾಮ’ ಎಂಬ ಹೆಸರು ತಂದುಕೊಡುವಲ್ಲಿ ಗಾಂಧಿ ಅನುಯಾಯಿ ಗಂಗಪ್ಪ ಮುದ್ದಪ್ಪ ಮಾಳಗಿ ಶ್ರಮ ದೊಡ್ಡದು. ಅಲ್ಲಿನ ಖಾದಿ ಗ್ರಾಮೋದ್ಯೋಗ ಸಹಕಾರಿ ಸಂಘದ ಅಧ್ಯಕ್ಷರಾಗಿ ಅವರು ಸೇವೆ ಸಲ್ಲಿಸುತ್ತಿದ್ದಾರೆ.

ಹುದಲಿಯ ಮುದ್ದಪ್ಪ– ಭೀಮಮ್ಮ ಕೃಷಿಕ ದಂಪತಿಗೆ 1922ರಲ್ಲಿ ಜನಿಸಿದ ಅವರು, ಚಿಕ್ಕ ವಯಸ್ಸಿನಲ್ಲೇ ಸ್ವಾತಂತ್ರ್ಯ ಸಂಗ್ರಾಮಕ್ಕೆ ಇಳಿದಿದ್ದರು. ಖಾದಿ ಕೆಲಸದಲ್ಲಿ ಮಗ್ನರಾಗಿದ್ದರು. ರಾತ್ರಿ ಶಾಲೆಗಳಲ್ಲಿ ಶಿಕ್ಷಣ ಪಡೆದು ಜ್ಞಾನ ಭಂಡಾರ ಹೆಚ್ಚಿಕೊಂಡರು. ಗಾಂಧೀಜಿ, ಗಂಗಾಧರರಾವ್‌ ದೇಶಪಾಂಡೆ ಅವರ ಸಂಪರ್ಕದಿಂದ ಸೇವಾ ಮನೋಭಾವ ರೂಢಿಸಿಕೊಂಡರು. ತಮ್ಮ 10ನೇ ವಯಸ್ಸಿನಿಂದಲೇ ಚರಕದಿಂದ ತಯಾರಾದ ಖಾದಿ ಧರಿಸಿ ದೇಶಭಕ್ತಿ ಪ್ರದರ್ಶಿಸಿದರು.

1937ರಲ್ಲಿ ಗಾಂಧೀಜಿಯವರು ಹುದಲಿಗೆ ಬಂದು ವಾಸ್ತವ್ಯ ಮಾಡಿದ್ದರು. ಆಗ 15 ವರ್ಷದ ಮಾಳಗಿ, ಅತ್ಯುತ್ಸಾಹದಿಂದ ಗಾಂಧೀಜಿ ಅವರ ಕುಟೀರದ ಸ್ವಯಂ ಸೇವಕರಾಗಿ ಕೆಲಸ ಮಾಡಿದ್ದರು. ನೂಲಲು ಹಂಜಿ ತಯಾರಿಸಿ ಕೊಟ್ಟು ವಾರವಿಡೀ ದುಡಿದು ಗಾಂಧೀಜಿ ಪ್ರೀತಿಗೆ ಪಾತ್ರರಾಗಿದ್ದರು. ಅವರಿಗೆ ಬೆಳ್ಳಿ ಪದಕ ನೀಡಿದ್ದ ಗಾಂಧೀಜಿ ಮೆಚ್ಚುಗೆ ವ್ಯಕ್ತಪಡಿಸಿ ಬೆನ್ನು ತಟ್ಟಿದ್ದರು. ಅವರ ಪ್ರೋತ್ಸಾಹದಿಂದ ಸ್ವಾತಂತ್ರ್ಯ ಹೋರಾಟಗಾರರಾಗಿ ಹೊರ ಹೊಮ್ಮಿದರು.

ADVERTISEMENT

ತರುಣ ಸಂಘ ಸ್ಥಾಪಿಸಿ:ಚಲೇಜಾವ್‌ ಚಳವಳಿಯಲ್ಲಿ ಪಾಲ್ಗೊಂಡು ಸುಲಧಾಳ, ಸುಳೇಬಾವಿ ರೈಲು ನಿಲ್ದಾಣಗಳ ದಪ್ತರಗಳನ್ನು ಸುಟ್ಟು ಹಿಂಡಲಗಾ ಜೈಲಿನಲ್ಲಿ ಶಿಕ್ಷೆ ಅನುಭವಿಸಿದವರು. 1938ರಲ್ಲಿ ತರುಣ ಸಂಘ ಸ್ಥಾಪಿಸಿ ವಿವಾಹಗಳನ್ನು ಆಡಂಬರವಿಲ್ಲದೇ ಮಾಡಿಸುತ್ತಿದ್ದರು. ಕೊಳಲು ನುಡಿಸುತ್ತಿದ್ದರು ಹಾಗೂ ಕುಸ್ತಿಪಟುವಾಗಿದ್ದರು.

1954ರಲ್ಲಿ ಖಾದಿ ಗ್ರಾಮೋದ್ಯೋಗ ಸಂಘ ಸ್ಥಾಪಿಸಿ, ಬೆಳವಣಿಗೆಗೆ ಶ್ರಮಿಸಿದರು. ಹಲವು ಮಂದಿಗೆ ಉದ್ಯೋಗವನ್ನೂ ಕೊಟ್ಟವರು. ಗ್ರಾಮ ಶಿಕ್ಷಣ ಬೆಳವಣಿಗೆಗೆ 2 ಎಕರೆ ಭೂಮಿ ದಾನ ಮಾಡಿದ್ದಾರೆ. ಯುವಜನರಿಗೆ ಮಾದರಿಯಾಗಿದ್ದಾರೆ.

ಖಾದಿ ಸಂಘವನ್ನು ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ಹೆಸರುವಾಸಿಯಾಗುವಂತೆ ಬೆಳೆಸಿ ರಾಜ್ಯ ಹಾಗೂ ರಾಷ್ಟ್ರಪ್ರಶಸ್ತಿ ಪಡೆದಿದ್ದಾರೆ. ಅವರು ಸಹಕಾರಿ ರಂಗಕ್ಕೆ ನೀಡಿದ ಸೇವೆ ಪರಿಗಣಿಸಿ ರಾಜ್ಯ ಸರ್ಕಾರವು ‘ಸಹಕಾರಿ ರತ್ನ’ ಪ್ರಶಸ್ತಿ ನೀಡಿ ಗೌರವಿಸಿದೆ. 96 ವರ್ಷ ವಯಸ್ಸಿನ ಅವರ ಜೀವನಶೈಲಿ ಯುವಕರಿಗೆ ಆದರ್ಶವಾಗಿದೆ. ಪ್ರಗತಿಪರ ರೈತರಾಗಿಯೂ ಗಮನಸೆಳೆದಿದ್ದಾರೆ. ಉತ್ತಮ ಬೆಳೆಗಳನ್ನು ಬೆಳೆದು ಸ್ಪರ್ಧೆಗಳಲ್ಲೂ ಪ್ರಥಮ ಬಹುಮಾನ ಪಡೆದು ‘ಆದರ್ಶ ರೈತ’ ಎನಿಸಿದ್ದಾರೆ. ರಾಜ್ಯ ಖಾದಿ ಗ್ರಾಮೋದ್ಯೋಗ ಒಕ್ಕೂಟದ ಉಪಾಧ್ಯಕ್ಷರಾಗಿ ಕೆಲಸ ಮಾಡಿದ್ದಾರೆ.

ಗಾಂಧೀಜಿ ಪ್ರೇರಣೆ:‘ಸಣ್ಣ ವಯಸ್ಸಿನಲ್ಲಿ ಪರಿಶಿಷ್ಟರ ಓಣಿಯಲ್ಲಿ ಕಸ ಗುಡಿಸುತ್ತಿದೆ. ಬಾವಿಯಿಂದ ನೀರೆತ್ತಲು ಅವರಿಗೆ ಸಹಾಯ ಮಾಡುತ್ತಿದ್ದೆ. ಇದಕ್ಕಾಗಿ ಊರಿನವರು ನನ್ನನ್ನು ಬಹಿಷ್ಕಾರ ಹಾಕಿದ್ದರು’ ಎಂದು ನೆನೆಯುತ್ತಾರೆ ಅವರು.

‘ಗಾಂಧೀಜಿಯವರೇ ನನಗೆ ಪ್ರೇರಣೆ. ಅವರ ಅಹಿಂಸಾ ಮಾರ್ಗ ಪಾಲಿಸಿ ಸಮಾಜದ ಕೆಲಸಗಳನ್ನು ಮಾಡಿದ್ದೇನೆ. ಗ್ರ್ರಾಮೀಣ ಮಹಿಳೆಯರು ತಮ್ಮ ಜೀವನ ಮಟ್ಟ ಸುಧಾರಿಸಲು, ಆರ್ಥಿಕವಾಗಿ ಸಬಲರಾಗಲು ಸಹಕಾರ ನೀಡುತ್ತಿದ್ದೇನೆ. ಗ್ರಾಮಗಳಲ್ಲಿ ಸ್ವಚ್ಛತೆ ಕಾಪಾಡಿಕೊಳ್ಳಬೇಕು. ಹಸಿರು ಕಾಪಾಡಿಕೊಳ್ಳಬೇಕು’ ಎಂದು ತಿಳಿಸಿದರು.

‘ನನ್ನ 8ನೇ ವಯಸ್ಸಿನಿಂದಲೂ ಖಾದಿ ಉಡುಪುಗಳನ್ನು ಧರಿಸುತ್ತಿದ್ದೇನೆ. ಬೇರೆಯವರೂ ಬಳಸುವಂತೆ ‍ಪ್ರಚಾರ ಆಂದೋಲನ ನಡೆಸುತ್ತಿದ್ದೇನೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.