ADVERTISEMENT

ಬೆಳಗಾವಿ: ಸರ್ಕಾರಿ ಕಾಲೇಜುಗಳಲ್ಲಿ ನೀಟ್‌, ಜೆಇಇ ತರಬೇತಿ

ಬೆಳಗಾವಿ ಜಿಲ್ಲೆ ಎರಡು ಕಡೆ ಉಚಿತ ತರಬೇತಿಗೆ ಕ್ರಮ * ಪ್ರತಿ ಭಾನುವಾರ ಅಣಕು ಪರೀಕ್ಷೆ

ಇಮಾಮ್‌ಹುಸೇನ್‌ ಗೂಡುನವರ
Published 12 ಫೆಬ್ರುವರಿ 2026, 0:30 IST
Last Updated 12 ಫೆಬ್ರುವರಿ 2026, 0:30 IST
ಬೈಲಹೊಂಗಲದ ಸರ್ಕಾರಿ ಪಿಯು ಕಾಲೇಜಿನಲ್ಲಿ ಭಾನುವಾರ ಪರೀಕ್ಷೆ ಬರೆಯುತ್ತಿರುವ ವಿದ್ಯಾರ್ಥಿಗಳು
ಬೈಲಹೊಂಗಲದ ಸರ್ಕಾರಿ ಪಿಯು ಕಾಲೇಜಿನಲ್ಲಿ ಭಾನುವಾರ ಪರೀಕ್ಷೆ ಬರೆಯುತ್ತಿರುವ ವಿದ್ಯಾರ್ಥಿಗಳು   

ಬೆಳಗಾವಿ: ಕೆ–ಸಿಇಟಿ, ನೀಟ್‌, ಜೆಇಇ ಅರ್ಹತಾ ಪರೀಕ್ಷೆಗಳಿಗೆ ಸಿದ್ದತೆ ನಡೆಸಿರುವ ಬಡ ವಿದ್ಯಾರ್ಥಿಗಳಿಗೆ ಜಿಲ್ಲೆಯ ಎರಡು ಸರ್ಕಾರಿ ಪಿಯು ಕಾಲೇಜುಗಳಲ್ಲಿ ಉಚಿತವಾಗಿ ತರಬೇತಿ ನೀಡಿ, ಪರೀಕ್ಷೆಗೆ ಸಜ್ಜುಗೊಳಿಸಲಾಗುತ್ತಿದೆ.

ಚಿಕ್ಕೋಡಿ ತಾಲ್ಲೂಕಿನ ಮಜಲಟ್ಟಿ ಕಾಲೇಜಿನಲ್ಲಿ 53, ಬೈಲಹೊಂಗಲದ ಕಾಲೇಜಿನಲ್ಲಿ 60 ವಿದ್ಯಾರ್ಥಿಗಳಿಗೆ ಸದ್ಯ ತರಬೇತಿ ಕೊಡಲಾಗುತ್ತಿದೆ. ಈ ಎರಡೂ ಕಾಲೇಜುಗಳಲ್ಲಿ ಇದೇ ಶೈಕ್ಷಣಿಕ ವರ್ಷದಿಂದ ಆಯ್ದ ವಿದ್ಯಾರ್ಥಿಗಳಿಗಾಗಿ ‘ಸೂಪರ್‌–50’ ಎಂಬ ಕಾರ್ಯಕ್ರಮವನ್ನು ಜಿಲ್ಲಾ ಪಂಚಾಯಿತಿಯು ರೂಪಿಸಿದೆ. 

ವಿಜ್ಞಾನ ವಿಭಾಗದ ವಿದ್ಯಾರ್ಥಿಗಳಲ್ಲಿ ಸ್ಪರ್ಧಾತ್ಮಕ ಮನೋಭಾವ ಬೆಳೆಸಲು ಜಿಲ್ಲಾ ಪಂಚಾಯಿತಿ ಸಿಇಒ ರಾಹುಲ್‌ ಶಿಂಧೆ, ಅವರು ‘ಸಿಇಟಿ–ಸಕ್ಷಮ್‌’ ಯೋಜನೆ ಜಾರಿಗೊಳಿಸಿದ್ದರು. ಇದಕ್ಕೆ ಉತ್ತಮ ಫಲ ಸಿಕ್ಕಿತ್ತು.

ADVERTISEMENT

2024–25ನೇ ಸಾಲಿನ ಕೆ–ಸಿಇಟಿಯಲ್ಲಿ ಬೆಳಗಾವಿ ಶೈಕ್ಷಣಿಕ ಜಿಲ್ಲೆಯಲ್ಲಿ 18 ಮತ್ತು ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯಲ್ಲಿ 43 ವಿದ್ಯಾರ್ಥಿಗಳು ಒಟ್ಟು 50 ಸಾವಿರ ರ್‍ಯಾಂಕ್‌ನೊಳಗೆ ಸ್ಥಾನ ಪಡೆದಿದ್ದರು. ಈ ವರ್ಷವೂ ಜಿಲ್ಲೆಯ ಎಲ್ಲ ಸರ್ಕಾರಿ ಪಿಯು ಕಾಲೇಜುಗಳಲ್ಲಿ ಸಿಇಟಿ–ಸಕ್ಷಮ್‌ ಕಾರ್ಯಕ್ರಮ ಮುಂದುವರಿದಿದೆ.

ಪ್ರತಿ ಭಾನುವಾರ ಪರೀಕ್ಷೆ

‘ಪರೀಕ್ಷೆಯ ಮೂಲಕ ಪ್ರತಿಭಾವಂತ ವಿದ್ಯಾರ್ಥಿಗಳನ್ನು ತರಬೇತಿಗೆ ಆಯ್ಕೆ ಮಾಡಲಾಗಿದೆ. ಪರೀಕ್ಷೆಗೆ ಅಗತ್ಯವಿರುವ ಪುಸ್ತಕಗಳನ್ನು ಜಿಲ್ಲಾ ಪಂಚಾಯಿತಿಯೇ ಒದಗಿಸಿದೆ. ಕಾಲೇಜಿನ ಉಪನ್ಯಾಸಕರೇ ವಿಶೇಷ ತರಗತಿಗಳನ್ನು ನಡೆಸುತ್ತಾರೆ’ ಎಂದು ಮಜಲಟ್ಟಿ ಕಾಲೇಜಿನ ಪ್ರಾಚಾರ್ಯ ಆನಂದ ಕೋಳಿ ತಿಳಿಸಿದರು.

‘ಒಂದು ವಾರವಿಡೀ ಕಲಿಸಿದ ವಿಷಯದ ಮೌಲ್ಯಮಾಪನಕ್ಕಾಗಿ ಪ್ರತಿ ಭಾನುವಾರ ಪರೀಕ್ಷೆ ನಡೆಸುತ್ತೇವೆ’ ಎಂದು ಅವರು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

‘ಸರ್ಕಾರಿ ಕಾಲೇಜು ವಿದ್ಯಾರ್ಥಿಗಳೂ ನೀಟ್‌, ಜೆಇಇನಲ್ಲಿ ಉತ್ತಮ ರ್‍ಯಾಂಕ್‌ ಗಳಿಸಬೇಕು ಎಂಬುದು ಉದ್ದೇಶ. ಪೂರಕವಾಗಿ ತರಬೇತಿ ನೀಡಲಾಗುತ್ತಿದೆ. ವಿದ್ಯಾರ್ಥಿಗಳು  ಧಾರವಾಡದ ಐಐಟಿಗೂ ಭೇಟಿ ನೀಡಿ ಅಧ್ಯಯನ ಮಾಡಿದ್ದಾರೆ’  ಎಂದು ಬೈಲಹೊಂಗಲ ಕಾಲೇಜಿನ ಉಪನ್ಯಾಸಕ ಬಸವರಾಜ ಕೊಳವಿ ಪ್ರತಿಕ್ರಿಯಿಸಿದರು.

ಸರ್ಕಾರಿ ಕಾಲೇಜಿನ ವಿದ್ಯಾರ್ಥಿಗಳೂ ಕೆ–ಸಿಇಟಿ ಜೆಇಇ ನೀಟ್‌ನಲ್ಲಿ ಯಶಸ್ಸು ಕಾಣಲೆಂದು ತರಬೇತಿ ಕೊಡುತ್ತಿದ್ದೇವೆ. ಇದಕ್ಕೆ ಉತ್ತಮ ಸ್ಪಂದನ ಸಿಕ್ಕಿದೆ
ರಾಹುಲ್‌ ಶಿಂಧೆ ಜಿಲ್ಲಾ ಪಂಚಾಯಿತಿ ಸಿಇಒ
ಲಕ್ಷಾಂತರ ರೂಪಾಯಿ ವ್ಯಯಿಸಿ ಖಾಸಗಿಯಾಗಿ ತರಬೇತಿ ಪಡೆಯುವುದು ಕಷ್ಟವಿತ್ತು. ಉಚಿತ ತರಬೇತಿ ನೀಡಿ ಮೂರೂ ಪರೀಕ್ಷೆಗಳ ಬಗೆಗಿನ ಗೊಂದಲ ಬಗೆಹರಿಸಿದರು. ಪರೀಕ್ಷೆ ಕುರಿತಾಗಿ ಈಗ ಸ್ಪಷ್ಟಚಿತ್ರಣ ಸಿಕ್ಕಿದೆ.
ಬೀಬಿ ಆಯೇಷಾ ನದಾಫ್ ವಿದ್ಯಾರ್ಥಿನಿ ಬೈಲಹೊಂಗಲ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.