ಬೆಳಗಾವಿ: ಬೆಳಗಾವಿ ಕೇಂದ್ರಿತವಾಗಿ ನಡೆದ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ವಂಚನೆ ಪ್ರಕರಣದಲ್ಲಿ ರಾಜ್ಯದ ದೊಡ್ಡ ಉದ್ಯಮಿಗಳು, ಪ್ರಭಾವಿಗಳು ಸಿಕ್ಕಿಕೊಳ್ಳುವ ಸಾಧ್ಯತೆ ಹೆಚ್ಚಿದೆ. ಪ್ರಕರಣದ ಆರೋಪಿ ಒಬ್ಬನೇ ಇದ್ದರೂ ಆತ ಹಲವು ಪ್ರಭಾವಿಗಳ ಹೆಸರು, ಜಿಎಸ್‌ಟಿ ಸಂಖ್ಯೆಗಳನ್ನು ಅಕ್ರಮಕ್ಕೆ ಬಳಸಿದ್ದು ಪ್ರಾಥಮಿಕ ತನಿಖೆಯಲ್ಲಿ ಗೊತ್ತಾಗಿದೆ.
ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಳಗಾವಿಯ ನಕೀಬ್ ನಜೀಬ್ ಮುಲ್ಲಾ (24) ಎಂಬ ಆರೋಪಿಯನ್ನು ಅಧಿಕಾರಿಗಳು ಬುಧವಾರ ಬಂಧಿಸಿದ್ದಾರೆ. ₹132 ಕೋಟಿಯ ನಕಲಿ ವ್ಯವಹಾರದ ದಾಖಲೆ ಸೃಷ್ಟಿಸಿರುವ ಆರೋಪಿ, ₹23.82 ಕೋಟಿ ಇನ್‌ಪುಟ್ ಟ್ಯಾಕ್ಸ್ ಕ್ರೆಡಿಟ್ (ಐಟಿಸಿ) ಸರ್ಕಾರದಿಂದ ಪಡೆದಿದ್ದು ಗೊತ್ತಾಗಿದೆ. ಈತನ ಮೂಲಕ ತೆರಿಗೆ ಸಂದಾಯ ಮಾಡಿದ ಎಲ್ಲರಿಗೂ ಸಂಕಷ್ಟ ತಲೆದೋರಿದೆ.
ಜಿಎಸ್‌ಟಿ ಇಲಾಖೆಯ ಬೆಳಗಾವಿ ವಲಯ ವ್ಯಾಪ್ತಿಗೆ ಬರುವ 12 ಜಿಲ್ಲೆಗ ಹಲವಾರು ದೊಡ್ಡ ಉದ್ಯಮಿಗಳು ಈ ಆರೋಪಿ ಮೂಲಕ ಜಿಎಸ್‌ಟಿ ಕಟ್ಟಿದ್ದಾರೆ. ಅವರಲ್ಲಿ ಹಲವರು ಪ್ರಾಮಾಣಿಕವಾಗಿ ಹಣ ಕೊಟ್ಟಿದ್ದಾರೆ. ಆದರೆ, ಅದನ್ನು ಇಲಾಖೆಗೆ ತಲುಪಿಸದೇ ‘ಜಿಎಸ್‌ಟಿ ತಲುಪಿದೆ’ ಎಂಬ ಸುಳ್ಳು ದಾಖಲೆ ಸೃಷ್ಟಿಸಿ ಅವರಿಗೂ ವಂಚಿಸಿದ ಎಂಬುದು ತಿಳಿದು ಬಂದಿದೆ.
‘ಆರಂಭದಲ್ಲಿ ಸಣ್ಣಪುಟ್ಟ ಮೊತ್ತ ವಂಚಿಸಿದ ಆರೋಪಿ, ನಂತರ ದೊಡ್ಡ ಮೊತ್ತ ಕಬಳಿಸಲು ಉಪಾಯ ಹೂಡಿದ್ದ. ಇದಕ್ಕಾಗಿ ‘ಫೆಡರಲ್ ಲಾಜಿಸ್ಟಿಕ್ಸ್’ ಎಂಬ ನಕಲಿ ಕಂಪನಿ ಕಟ್ಟಿಕೊಂಡ. ಈ ಸಂಸ್ಥೆ ಮೂಲಕ ನೂರಾರು ಕೋಟಿ ರೂಪಾಯಿಗಳ ವ್ಯವಹಾರ ನಡೆಸಿದ ಬಗ್ಗೆ ದಾಖಲೆಗಳನ್ನು ಸೃಷ್ಟಿಸಿದ’ ಎಂಬುದನ್ನು ಅಧಿಕಾರಿಗಳು ಪತ್ತೆ ಮಾಡಿದ್ದಾರೆ.
‘ಇದು ಕೇವಲ ಮೂರು ತಿಂಗಳ ಅವಧಿಯಲ್ಲಿ ನಡೆದ ಅವ್ಯವಹಾರ. ಆರೋಪಿ ಇನ್ನೂ ಏನೇನು, ಎಷ್ಟು ದಿನಗಳಿಂದ ಕೃತ್ಯದಲ್ಲಿ ತೊಡಗಿದ್ದಾನೆ. ಅದರಲ್ಲಿ ಯಾರೆಲ್ಲರೂ ಸಿಕ್ಕಿಬೀಳಬಹುದು ಅಥವಾ ತೊಂದರೆ ಅನುಭವಿಸಬಹುದು ಎಂಬುದು ಪೂರ್ಣಪ್ರಮಾಣದ ತನಿಖೆ ಬಳಿಕ ಗೊತ್ತಾಗಲಿದೆ’ ಎಂದು ಮೂಲಗಳು ತಿಳಿಸಿವೆ.
ದೇಶದಲ್ಲೇ ಮೊದಲ ಪ್ರಕರಣ: ‘ಜಿಎಸ್‌ಟಿ ಕಟ್ಟದೇ ವಂಚಿಸಿದ ಪ್ರಕರಣಗಳು ದೇಶದಲ್ಲಿ ಸಾಕಷ್ಟು ಇವೆ. ಆದರೆ, ನಕಲಿ ಇನ್‌ವಾಯ್ಸ್ (ಬಿಲ್) ಸೃಷ್ಟಿಸಿ ಇಷ್ಟು ದೊಡ್ಡ ಮೊತ್ತದ ಕ್ರೆಡಿಟ್ ಹಣ ಕಬಳಿಸಿದ್ದು ಇದೇ ಮೊದಲು. ಉದ್ಯಮಿಗಳು ಪ್ರಾಮಾಣಿಕವಾಗಿ ಜಿಎಸ್‌ಟಿ ಹಣ ಸಂದಾಯ ಮಾಡಿದ್ದರೂ ಇಲಾಖೆಗೆ ತಲುಪಿಲ್ಲ. ಈಗ ಇಲಾಖೆಯವರು ಸಂಬಂಧಪಟ್ಟ ಉದ್ಯಮಿಗಳಿಂದ ವಸೂಲಿ ಮಾಡಬೇಕು. ಎಷ್ಟು ವರ್ಷಗಳಿಂದ ಹಣ ಸಂದಾಯವಾಗಿಲ್ಲವೋ, ಅದಕ್ಕೆ ಬಡ್ಡಿ ಕೂಡ ಕಟ್ಟುವುದು ಅನಿವಾರ್ಯ’ ಎಂದು ಮೂಲಗಳು ತಿಳಿಸಿವೆ.
‘ಪೂರ್ಣ ಪ್ರಮಾಣದ ತನಿಖೆಗೆ ಸಿದ್ಧತೆ’
‘ನಕೀಬ್ ನಜೀಬ್ ಮುಲ್ಲಾ ಎಂಬ ಆರೋಪಿಯನ್ನು 14 ದಿನ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಆತನ ಮೇಲೆ ತೆರಿಗೆ ವಂಚನೆ ಮೋಸ ನಕಲಿ ವ್ಯವಹಾರ ಸರ್ಕಾರದ ಬೊಕ್ಕಸಕ್ಕೆ ನಷ್ಟ ಮುಂತಾದ ಅಪರಾಧಗಳಡಿ ಪ್ರಕರಣ ದಾಖಲಿಸಲಾಗಿದೆ. ನಮ್ಮ ಅಧಿಕಾರಿಗಳು ತನಿಖೆ ಪೂರ್ಣಗೊಳಿಸಿ ವರದಿ ನೀಡಿದ ಬಳಿಕ ಹಗರಣದ ಕುರಿತು ಪೂರ್ಣ ಮಾಹಿತಿ ಬಹಿರಂಗಪಡಿಸಲಾಗುವುದು’ ಎಂದು ಕೇಂದ್ರೀಯ ಸರಕು ಮತ್ತು ಸೇವಾ ತೆರಿಗೆ ಕೇಂದ್ರೀಯ ಅಬಕಾರಿ ಆಯುಕ್ತರ ಕಚೇರಿಯ ಪ್ರಧಾನ ಆಯುಕ್ತ ದಿನೇಶ ಪಿ. ರಾವ್ ಪಾಂಗರಕರ ‘ಪ್ರಜಾವಾಣಿ’ಗೆ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.