ADVERTISEMENT

ರಾಜ್ಯದ 865 ಹಳ್ಳಿಗಳಿಗೆ ‘ಮಹಾ’ ಆರೋಗ್ಯ ವಿಮೆ: ಎರಡೂ ಸರ್ಕಾರಗಳ ವಜಾಕ್ಕೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 16 ಮಾರ್ಚ್ 2023, 14:31 IST
Last Updated 16 ಮಾರ್ಚ್ 2023, 14:31 IST
ಬೆಳಗಾವಿಯಲ್ಲಿ ಕಾಂಗ್ರೆಸ್‌ ಸಭೆ
ಬೆಳಗಾವಿಯಲ್ಲಿ ಕಾಂಗ್ರೆಸ್‌ ಸಭೆ    

ಬೆಳಗಾವಿ: ‘ಕರ್ನಾಟಕದ 865 ಹಳ್ಳಿಗಳಿಗೆ ಆರೋಗ್ಯ ವಿಮೆ ಜಾರಿ ಮಾಡುವ ಮೂಲಕ ಮಹಾರಾಷ್ಟ್ರ ಸರ್ಕಾರ ಒಕ್ಕೂಟ ವ್ಯವಸ್ಥೆಗೆ ಧಕ್ಕೆ ತಂದಿದೆ. ಕೇಂದ್ರ ಸರ್ಕಾರ ಮಧ್ಯಪ್ರವೇಶಿಸಿ, ಕರ್ನಾಟಕ ಹಾಗೂ ಮಹಾರಾಷ್ಟ್ರ ಸರ್ಕಾರಗಳನ್ನು ವಜಾಗೊಳಿಸಬೇಕು’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ ಆಗ್ರಹಿಸಿದರು.

ನಗರದಲ್ಲಿ ಗುರುವಾರ ಕಾರ್ಯಕರ್ತರ ಸಭೆಯ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ‘ಮಹಾರಾಷ್ಟ್ರದ ಈ ನಡೆ ಪ್ರಜಾಪ್ರಭುತ್ವ ವಿರೋಧಿಯಾಗಿದೆ. ಆರೂವರೆ ಕೋಟಿ ಕನ್ನಡಿಗರನ್ನು ಅವಮಾನಿಸಿದೆ. ರಾಜ್ಯದಲ್ಲಿ 26 ಸಂಸದರು ಇದ್ದಾರೆ, ಬಿಜೆಪಿಯದ್ದೇ ಸರ್ಕಾರವಿದೆ. ಆದರೂ ಈ ಕ್ರಮ ತಡೆಯಲು ಮುಂದಾಗಿಲ್ಲ. ಇದರ ಹೊಣೆ ಹೊತ್ತು ಎಲ್ಲ ಸಂಸದರು ಹಾಗೂ ಮುಖ್ಯಮಂತ್ರಿ ರಾಜೀನಾಮೆ ನೀಡಬೇಕು’ ಎಂದರು.

‘ಸಂವಿಧಾನದ ಆರ್ಟಿಕಲ್‌– 356ರ ಪ್ರಕಾರ ಮಹಾರಾಷ್ಟ್ರ ಸರ್ಕಾರ ಮಾಡಿದ್ದು ಶಿಕ್ಷಾರ್ಹ ಅಪ‍ರಾಧ. ಕೇಂದ್ರದಲ್ಲಿ, ಎರಡೂ ರಾಜ್ಯಗಳಲ್ಲಿ ಬಿಜೆಪಿ ಸರ್ಕಾರಗಳೇ ಇವೆ. ಆದರೂ ಒಕ್ಕೂಟ ವ್ಯವಸ್ಥೆಗೆ ಧಕ್ಕೆ ತರುವಂಥ ಪ್ರಯತ್ನ ನಿಂತಿಲ್ಲ. ಪ್ರಧಾನಿ ನರೇಂದ್ರ ಮೋದಿ ಹಾಗೂ ಗೃಹಮಂತ್ರಿ ಅಮಿತ್‌ ಶಾ ಅವರು ತಕ್ಷಣ ಮಧ್ಯಸ್ಥಿಕೆ ವಹಿಸಬೇಕು. ಮಹಾರಾಷ್ಟ್ರ ಸರ್ಕಾರದ ಯೋಜನೆ ಹಿಂತೆಗೆದುಕೊಳ್ಳಲು ತಾಕೀತು ಮಾಡಬೇಕು’ ಎಂದೂ ಒತ್ತಾಯಿಸಿದರು.

ADVERTISEMENT

ವಿಪಕ್ಷ ನಾಯಕ ಸಿದ್ದರಾಮಯ್ಯ ಮಾತನಾಡಿ, ‘ಮಹಾಜನ್‌ ಆಯೋಗದ ವರದಿಯನ್ನು ಕರ್ನಾಟಕ ಒಪ್ಪುದರೆ ಮಹಾರಾಷ್ಟ್ರ ಮತ್ತೆ ತಕರಾರು ಮಾಡಿದೆ. ಗಡಿ ತಂಟೆ ಸುಪ್ರೀಂಕೋರ್ಟ್‌ನಲ್ಲಿದ್ದಾಗಲೇ, ಅದೇ 865 ಹಳ್ಳಿಗಳಿಗೆ ಮಾತ್ರ ಆರೋಗ್ಯ ವಿಮೆ ಜಾರಿಗೊಳಿಸಿದೆ. ಇದು ಒಂದು ಹಳ್ಳಿ, ಜಿಲ್ಲೆ ಅಥವಾ ಗಡಿಗೆ ಸೀಮಿತ ಸಂಗತಿಯಲ್ಲ. ಇಡೀ ರಾಜ್ಯದ ಆರೂವರೆ ಕೋಟಿ ಕನ್ನಡಿಗರಿಗೆ ಮಾಡಿದ ಅವಮಾನ’ ಎಂದು ಕಿಡಿ ಕಾರಿದರು.

‘ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಜತ್ತ, ಅಕ್ಕಲಕೋಟೆಯ ಯಾವುದೋ ಊರು, ಶಾಲೆಗೆ ನೆರವು ನೀಡಿದ ಕಾರಣಕ್ಕೆ ಪ್ರತೀಕಾರವಾಗಿ ಈ ರೀತಿ ಆರೋಗ್ಯ ವಿಮೆ ಘೋಷಿಸಲು ಬರುವುದಿಲ್ಲ. ನೆರೆರಾಜ್ಯಗಳು ಪರಸ್ಪರ ನೆರವು ನೀಡುವುದು ತಪ್ಪಲ್ಲ. ಆದರೆ, ರಾಜ್ಯದ ಆಡಳಿತ ವ್ಯವಸ್ಥೆಯನ್ನೇ ಪ್ರಶ್ನೆ ಮಾಡಿ, ಒಳನುಗ್ಗುವುದು ಅಕ್ಷಮ್ಯ ಅಪರಾಧ’ ಎಂದೂ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ ಸುರ್ಜೇವಾಲಾ, ಕಾರ್ಯದರ್ಶಿ ವಿಶ್ವನಾಥ, ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಸತೀಶ ಜಾರಕಿಹೊಳಿ, ಸಲೀಂ ಅಹ್ಮದ್‌, ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ.ಪಾಟೀಲ, ಶಾಸಕಿ ಲಕ್ಷ್ಮೀ ಹೆಬ್ಬಾಳಕರ, ಮಹಿಳಾ ಘಟಕದ ಅಧ್ಯಕ್ಷ ಪುಷ್ಪಾ ಅಮರನಾಥ, ಮುಖಂಡರಾದ ಕೆ.ಎಚ್‌.ಮುನಿಯಪ್ಪ, ಶ್ರೀನಿವಾಸ, ವಿಶ್ವನಾಥಯ್ಯ ಸೇರಿದಂತೆ ಹಲವು ಮುಖಂಡರು ಇದ್ದರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.