
ಬೆಳಗಾವಿ (ಸುವರ್ಣಸೌಧ): ‘ಹುಬ್ಬಳ್ಳಿ– ಧಾರವಾಡ ಮಹಾನಗರಪಾಲಿಕೆಯನ್ನು ವಿಭಜಿಸಿ ಪ್ರತ್ಯೇಕ ಧಾರವಾಡ ಮಹಾನಗರಪಾಲಿಕೆಯಾಗಿ ಮಾಡುವ ಪ್ರಸ್ತಾವವನ್ನು ರಾಜ್ಯಪಾಲರಿಗೆ ಸಲ್ಲಿಸಲಾಗಿದೆ. ಆದಷ್ಟು ಬೇಗ ಅನುಮೋದನೆ ನೀಡುವಂತೆ ಮನವಿ ಮಾಡಲು ರಾಜ್ಯಪಾಲರ ಬಳಿ ನಿಯೋಗ ಕೊಂಡೊಯ್ಯಲಾಗುವುದು’ ಎಂದು ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್ ಹೇಳಿದರು.
ವಿಧಾನಸಭೆಯಲ್ಲಿ ಪ್ರಶ್ನೋತ್ತರ ಅವಧಿಯಲ್ಲಿ ಕಾಂಗ್ರೆಸ್‌ನ ಪ್ರಸಾದ್ ಅಬ್ಬಯ್ಯ ಮಾತನಾಡಿ ‘ಧಾರವಾಡ ಮಹಾನಗರಪಾಲಿಕೆಯನ್ನಾಗಿ ಜನವರಿ ತಿಂಗಳಲ್ಲಿಯೇ ಅಧಿಸೂಚನೆ ಹೊರಡಿಸಿದ್ದರೂ ಈವರೆಗೂ ಕಾರ್ಯಗತ ಆಗಿಲ್ಲ. ಅನುಮೋದನೆಗಾಗಿ ರಾಜ್ಯಪಾಲರಿಗೆ ಸಲ್ಲಿಸಿದ ಕಡತ ಏಳು ತಿಂಗಳಿನಿಂದ ಅವರ ಬಳಿಯೇ ಇದೆ’ ಎಂದು ಆಕ್ಷೇಪ ವ್ಯಕ್ತಪಡಿಸಿದರು.
ಅದಕ್ಕೆ ಉತ್ತರಿಸಿದ ಸಚಿವರು ‘ಹುಬ್ಬಳ್ಳಿ– ಧಾರವಾಡ ಮಹಾನಗರಪಾಲಿಕೆಯನ್ನು ವಿಭಜಿಸಿ ಪ್ರತ್ಯೇಕ ಧಾರವಾಡ ಮಹಾನಗರಪಾಲಿಕೆ ರಚಿಸಲು ಮತ್ತು ಉಳಿದ ಪ್ರದೇಶವನ್ನು ಹುಬ್ಬಳ್ಳಿ ಮಹಾನಗರಪಾಲಿಕೆ ಎಂದು ಮುಂದುವರಿಸಲು ಉದ್ದೇಶಿಸಿ ಬಾಧಿತರಿಂದ ಆಕ್ಷೇಪಣೆ ಸಲಹೆಗಳನ್ನು ಆಹ್ವಾನಿಸಿ 2025ರ ಜ. 21ರಂದು ಪ್ರಾಥಮಿಕ ಅಧಿಸೂಚನೆ ಹೊರಡಿಸಲಾಗಿದೆ. ಆಕ್ಷೇಪಣೆ ಸಲಹೆಗಳ ಕುರಿತ ವರದಿಯನ್ನು ಪೌರಾಡಳಿತ ನಿರ್ದೇಶನಾಲಯದಿಂದ ಧಾರವಾಡ ಜಿಲ್ಲಾಧಿಕಾರಿಗೆ ಸಲ್ಲಿಸಲಾಗಿದ್ದು ಆ ವರದಿ ಸಹಿತ ರಾಜ್ಯಪಾಲರ ಅನುಮೋದನೆ ಸಲ್ಲಿಸಲಾಗಿದೆ’ ಎಂದರು.