ADVERTISEMENT

International Yoga Day | ಬೆಳಗಾವಿ ಸುವರ್ಣಸೌಧ ಆವರಣದಲ್ಲಿ ಯೋಗ ಸಂಭ್ರಮ

​ಪ್ರಜಾವಾಣಿ ವಾರ್ತೆ
Published 21 ಜೂನ್ 2023, 4:50 IST
Last Updated 21 ಜೂನ್ 2023, 4:50 IST
ಬೆಳಗಾವಿಯ ಸುವರ್ಣ ವಿಧಾನಸೌಧದ ಎದುರು ವಿವಿಧ ಶಾಲೆಗಳ ವಿದ್ಯಾರ್ಥಿಗಳು ಬುಧವಾರ ಯೋಗಾಸನ ಪ್ರದರ್ಶಿಸಿದರು
ಬೆಳಗಾವಿಯ ಸುವರ್ಣ ವಿಧಾನಸೌಧದ ಎದುರು ವಿವಿಧ ಶಾಲೆಗಳ ವಿದ್ಯಾರ್ಥಿಗಳು ಬುಧವಾರ ಯೋಗಾಸನ ಪ್ರದರ್ಶಿಸಿದರು   

ಬೆಳಗಾವಿ: 'ವಸುದೈವ ಕುಟುಂಬಕಂ' ಘೋಷವಾಕ್ಯದೊಂದಿಗೆ ನಡೆದ ಅಂತರರಾಷ್ಟ್ರೀಯ ಒಂಭತ್ತನೇ ಯೋಗ ದಿನಾಚರಣೆ ಅಂಗವಾಗಿ ಸುವರ್ಣ ವಿಧಾನಸೌಧದ ಎದುರು ಬುಧವಾರ ಆಕರ್ಷಕ ಯೋಗ ಪ್ರದರ್ಶನ ನಡೆಯಿತು.

ಬೆಳಗಿನಜಾವದಿಂದಲೇ ಜಮಾಯಿಸಿದ್ದ ವಿದ್ಯಾರ್ಥಿ- ವಿದ್ಯಾರ್ಥಿನಿಯರು, ಯೋಗಪಟುಗಳು ಹಾಗೂ ಗಣ್ಯರು 45 ನಿಮಿಷಗಳ ಕಾಲ ವಿವಿಧ ಆಸನಗಳನ್ನು ಪ್ರದರ್ಶಿಸುವ ಮೂಲಕ ಯೋಗದ ಮಹತ್ವ ಸಾರಿದರು.

ಧ್ಯಾನಕ್ಕೆ ಪೂರಕವಾಗಿರುವ ತಾಡಾಸನ, ಮನಸ್ಸು ಶಾಂತವಾಗಿಟ್ಟುಕೊಳ್ಳುವ ವೃಕ್ಷಾಸನ, ಪಾದ ಹಸ್ತಾಸನಮ, ಅರ್ಧಚಕ್ರಾಸನ, ದಂಡಾಸನ, ಭದ್ರಾಸನ, ವಜ್ರಾಸನ, ಉತ್ಥಾನ ಮಂಡೂಕಾಸನ, ವಕ್ರಾಸನ, ಭುಜಂಗಾಸನ, ಶಲಭಾಸನ, ಸೇತುಬಂಧಾಸನ, ಉತ್ಥಾನ ಪಾದಾಸನ, ಶವಾಸನ, ಪ್ರಾಣಯಾಮ ಸೇರಿದಂತೆ ವಿವಿಧ ಆಸನಗಳನ್ನು ಪ್ರದರ್ಶಿಸಿದರು.

ADVERTISEMENT

ಯೋಗಪಟುಗಳಾದ ಇಂದಿರಾ ಜೋಶಿ ಹಾಗೂ ತಂಡದವರು ಕಾರ್ಯಕ್ರಮ ನಡೆಸಿಕೊಟ್ಟರು.

ಜೆ.ಎಸ್.ಎಸ್. ಕಾಲೇಜಿನ ವಿದ್ಯಾರ್ಥಿ ಸತ್ಯಂ ಕಾಮ್ರೇಕರ್ ಮತ್ತು ಶಿಕ್ಷಕಿ ಪಲ್ಲವಿ ನಾಡಕರ್ಣಿ ನೇತೃತ್ವದಲ್ಲಿ ತರಬೇತಿ ಪಡೆದಿರುವ ಜೈನ್ ಹೆರಿಟೇಜ್ ಶಾಲೆಯ ಮಕ್ಕಳು ಕೂಡ ಯೋಗ ಪ್ರದರ್ಶನ ಮಾಡಿ ಗಮನ ಸೆಳೆದರು.

ರಾಷ್ಟ್ರಮಟ್ಟದ ಯೋಗಪಟುಗಳಾದ ಲವ್ ಡೇಲ್ ಶಾಲೆಯ ನೀರಜ್ ಹಾಗೂ ನಕ್ಷತ್ರ ಅವರು ಅದ್ಭುತ ಪ್ರದರ್ಶನ ನೀಡಿದರು.

ಕೊನೆಯಲ್ಲಿ ಎಸ್.ಬಿ.ಜಿ. ಆಯುಋವೇದ ಮಹಾವಿದ್ಯಾಲಯದ ವಿದ್ಯಾಲಯದ ವಿದ್ಯಾರ್ಥಿಗಳ ತಂಡ ಕೂಡ ವಿವಿಧ ಬಗೆಯ ಆಸನಗಳನ್ನು ಪ್ರದರ್ಶಿಸಿತು.

ವಿವಿಧ ಶಾಲಾ-ಕಾಲೇಜುಗಳ ಮಕ್ಕಳಿಗೆ ಗಣ್ಯರು ಪ್ರಮಾಣಪತ್ರ ವಿತರಿಸಿದರು.

ಬೆಳಗಾವಿಯ ಕಾರಂಜಿ ಮಠದಲ್ಲಿ ಬುಧವಾರ ಪೀಠಾಧಿಪತಿ ಗುರುಸಿದ್ಧ ಸ್ವಾಮೀಜಿ ಯೋಗ ದಿನಾಚರಣೆಯ ಪ್ರಯುಕ್ತ ಯೋಗಾಸನ ಪ್ರದರ್ಶನ ನೀಡಿದರು

ಯೋಗ ಭಾರತದ ಋಷಿ ಪರಂಪರೆ: ಈರಣ್ಣ ಕಡಾಡಿ

'ಭಾರತದ ಋಷಿ ಪರಂಪರೆಯಾಗಿರುವ ಯೋಗ ವನ್ನು ಅಳವಡಿಸಿಕೊಂಡು ದೇಶದ ಪ್ರತಿಯೊಬ್ಬರೂ ಆರೋಗ್ಯವಾಗಿರಬೇಕು ಎಂಬುದು ಯೋಗ ದಿನಾಚರಣೆಯ ಆಶಯವಾಗಿದೆ' ಎಂದು ರಾಜ್ಯಸಭೆ ಸದಸ್ಯ ಈರಣ್ಣ ಕಡಾಡಿ ಹೇಳಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಮಹಾನಗರ ಪಾಲಿಕೆ, ಜಿಲ್ಲಾ ಆಯುಷ್ ಇಲಾಖೆ, ಮಹಾಋಷಿ ಯೋಗ ಹೆಲ್ತ್ ಫೌಂಡೇಷನ್ ಮತ್ತು ವಿವಿಧ ಯೋಗಸಂಸ್ಥೆಗಳ ಆಶ್ರಯದಲ್ಲಿ ಬುಧವಾರ 9ನೇ ಅಂತರರಾಷ್ಟ್ರೀಯ ಯೋಗ ದಿನಾಚರಣೆಯ ಪ್ರಯುಕ್ತ ಸುವರ್ಣ ವಿಧಾನಸೌಧದ ಎದರು ಏರ್ಪಡಿಸಲಾಗಿದ್ದ ಸಾಮೂಹಿಕ ಯೋಗಾಸನ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

'ಜಗತ್ತಿಗೆ ಯೋಗ ಪರಿಚಯಿಸಿದ ಕೀರ್ತಿ ಭಾರತಕ್ಕೆ ಹಾಗೂ ಪ್ರಧಾನಮಂತ್ರಿ ಮೋದಿ ಅವರಿಗೆ ಸಲ್ಲುತ್ತದೆ' ಎಂದು ತಿಳಿಸಿದರು.

ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹರ್ಷಲ್ ಭೋಯರ್, ಹೆಚ್ಚುವರಿ ಜಿಲ್ಲಾಧಿಕಾರಿ ಕೆ.ಟಿ.ಶಾಂತಲಾ, ಲೋಕೋಪಯೋಗಿ ಇಲಾಖೆಯ ಕಾರ್ಯನಿರ್ವಾಹಕ ಎಂಜಿನಿಯರ್ ಸೊಬರದ, ಜಿಲ್ಲಾ ಪಂಚಾಯಿತಿ ಅಧಿಕಾರಿ ರವಿ ಬಂಗಾರೆಪ್ಪನವರ, ಜಿಲ್ಲಾ ಆಯುಷ್ ಅಧಿಕಾರಿ ಡಾ.ಶ್ರೀಕಾಂತ್ ಸುಣಧೋಳಿ, ತಹಶೀಲ್ದಾರ ಸಿದ್ದರಾಜ್ ಭೋಸಗಿ ಮತ್ತಿತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.