
ಬೆಳಗಾವಿ: ‘ನಗರದಲ್ಲಿ ರಸ್ತೆಗಳು ಹಾಳಾಗಿದ್ದು ಕೂಡಲೇ ದುರಸ್ತಿ ಮಾಡಿಸಬೇಕು. ವಿಧಾನ ಮಂಡಲ ಅಧಿವೇಶನ ನಡೆಯಲಿರುವ ಕಾರಣ, ಸ್ವಚ್ಛತೆಯ ಬಗ್ಗೆ ಕಾಳಜಿ ವಹಿಸಬೇಕು’ ಎಂದು ಸಂಸದ ಜಗದೀಶ ಶೆಟ್ಟರ್ ತಿಳಿಸಿದರು.
ಸ್ಮಾರ್ಟ್‌ಸಿಟಿ ಯೋಜನೆ ಹಾಗೂ ಎಸ್‌ಎಎಸ್‌ಸಿಐ ಯೋಜನೆಯ ಪ್ರಗತಿ ಪರಿಶೀಲನೆ ನಡೆಸಿದ ಅವರು, ‘₹990 ಕೋಟಿ ಅನುದಾನದಲ್ಲಿ ₹931 ಕೋಟಿಯಲ್ಲಿ 104 ಕಾಮಗಾರಿಗಳನ್ನು ಪೂರ್ಣಗೊಳಿಸಲಾಗಿದೆ. ಇನ್ನೂ 4 ಕಾಮಗಾರಿಗಳು ಬಾಕಿ. ಅವುಗಳನ್ನೂ ಆದ್ಯತೆ ಮೇಲೆ ಮುಗಿಸಬೇಕು’ ಎಂದರು.
‘ಟಿಳಕವಾಡಿಯ ಕಲಾಮಂದಿರ ನಿರ್ಮಿಸಿದ್ದು ಮಳಿಗೆಗಳ ಹಂಚಿಕೆ ಆಗಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ. ಇದರಿ ಸರಿಯಾದ ಕ್ರಮವಲ್ಲ. ಮಳಿಗೆಗಳು ಖಾಲಿ ಇದ್ದರೆ ಹಾಳಾಗುತ್ತವೆ. ಕೂಡಲೇ ಟೆಂಡರ್ ಕರೆದು ಹಂಚಿ’ ಎಂದು ತಾಕೀತು ಮಾಡಿದರು.
‘ನಗರದ ಕಂಟೋನಮೆಂಟ್ ಬಳಿ ಇರುವ ನಗರದ ಜಮೀನು ಪಾಲಿಕೆ ವ್ಯಾಪ್ತಿಗೆ ಪಡೆಯುವ ಬಗ್ಗೆ ಸಭೆಗಳು ನಡೆದಿವೆ ಅಷ್ಟೇ. ಈ ಪ್ರಕ್ರಿಯೆ ಬೇಗ ಪೂರ್ಣಗೊಳಿಸಬೇಕು. ಕೇಂದ್ರ ಸರ್ಕಾರದ ‘ಅಮೃತ’ ಯೋಜನೆಯಡಿ ಏಳು ಕೆರೆಗಳ ಪುನಶ್ಚೇತನಕ್ಕೆ ಮತ್ತು ಉದ್ಯಾನ ಸುಧಾರಣೆ ಕಾರ್ಯ ₹24 ಕೋಟಿ ವೆಚ್ಚದಲ್ಲಿ ನಡೆಸಲಾಗುತ್ತಿದೆ. ಗುಣಮಟ್ಟದ ಕಾಮಗಾರಿ ನಡೆಸಬೇಕು’ ಎಂದರು.
‘ನಗರದ ಘನತ್ಯಾಜ್ಯ ವಿಲೇವಾರಿ ‘ವಿಶ್ವಾಸ್’ ಯೋಜನೆಯಡಿ ₹135 ಕೋಟಿ ಅನುದಾನ ಕೇಂದ್ರದಿಂದ ಮಂಜೂರಾಗಿದೆ. ಇದು 2023ರಲ್ಲಿ ಮಂಜೂರಾಗಿದ್ದು, ಈ ಕಾಮಗಾರಿ ವಿಳಂಬಕ್ಕೆ ಕಾರಣ ಕೇಳಲಾಗಿ ಆದಷ್ಟು ಬೇಗನೆ ಇದನ್ನು ಪ್ರಾರಂಭಿಸಿ’ ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಮಹಾನಗರ ಪಾಲಿಕೆ ಆಯ್ತುಕ್ತೆ, ಸ್ಮಾರ್ಟ್‌ಸಿಟಿ ಮಿಷನ್ ವ್ಯವಸ್ಥಾಪಕ ನಿರ್ದೇಶಕಿ ಬಿ.ಶುಭಾ, ಇತರ ಅಧಿಕಾರಿಗಳು ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.