ADVERTISEMENT

12 ತಿಂಗಳಲ್ಲಿ ಬೇಡಿಕೆ ಈಡೇರಿಸದಿದ್ದರೆ ಸಮಾಧಿ ಸಲ್ಲೇಖನ ವ್ರತ: ಗುಣಧರನಂದಿ ಮಹಾರಾಜ

ಐನಾಪುರದಲ್ಲಿ ಜೈನ ಸಮಾವೇಶ

​ಪ್ರಜಾವಾಣಿ ವಾರ್ತೆ
Published 8 ಜೂನ್ 2025, 14:24 IST
Last Updated 8 ಜೂನ್ 2025, 14:24 IST
<div class="paragraphs"><p>ಬೆಳಗಾವಿ ಜಿಲ್ಲೆಯ ಕಾಗವಾಡ ತಾಲ್ಲೂಕಿನ ಐನಾಪುರದಲ್ಲಿ ನಡೆದ ಜೈನ ಸಮಾವೇಶದಲ್ಲಿ ಜೈನ ಮುನಿಗಳು  ರಾಜ್ಯಪಾಲ ಥಾವರಚಂದ ಗೆಹ್ಲೋತ್‌ ಅವರಿಗೆ ಮನವಿ ಸಲ್ಲಿಸಿದರು</p></div>

ಬೆಳಗಾವಿ ಜಿಲ್ಲೆಯ ಕಾಗವಾಡ ತಾಲ್ಲೂಕಿನ ಐನಾಪುರದಲ್ಲಿ ನಡೆದ ಜೈನ ಸಮಾವೇಶದಲ್ಲಿ ಜೈನ ಮುನಿಗಳು ರಾಜ್ಯಪಾಲ ಥಾವರಚಂದ ಗೆಹ್ಲೋತ್‌ ಅವರಿಗೆ ಮನವಿ ಸಲ್ಲಿಸಿದರು

   

ಪ್ರಜಾವಾಣಿ ಚಿತ್ರ

ಕಾಗವಾಡ(ಬೆಳಗಾವಿ ಜಿಲ್ಲೆ): ‘ಜೈನ ಸಮುದಾಯದ ಕಲ್ಯಾಣಕ್ಕಾಗಿ ಪ್ರತ್ಯೇಕ ಅಭಿವೃದ್ಧಿ ನಿಗಮ–ಮಂಡಳಿ ಸ್ಥಾಪಿಸುವುದು ಸೇರಿದಂತೆ ವಿವಿಧ ಬೇಡಿಕೆ ಈಡೇರಿಸಲು ರಾಜ್ಯ ಸರ್ಕಾರಕ್ಕೆ 12 ತಿಂಗಳ ಗಡುವು ಕೊಟ್ಟಿದ್ದೇವೆ. ಅಷ್ಟರೊಳಗೆ ಈಡೇರಿಸದಿದ್ದರೆ, ಮುಂದಿನ 12 ವರ್ಷಗಳಲ್ಲಿ ಸಮಾಧಿ ಸಲ್ಲೇಖನ ವ್ರತ ಕೈಗೊಳ್ಳುತ್ತೇನೆ’ ಎಂದು ಗುಣಧರನಂದಿ ಮಹಾರಾಜರು ಎಚ್ಚರಿಕೆ ಕೊಟ್ಟರು.

ADVERTISEMENT

ತಾಲ್ಲೂಕಿನ ಐನಾಪುರದಲ್ಲಿ ಭಾನುವಾರ ಆಯೋಜಿಸಿದ್ದ ಅಖಿಲ ಭಾರತ ಭಟ್ಟಾರಕ ಸಮ್ಮೇಳನ ಹಾಗೂ ಜೈನ ಸಮಾವೇಶದಲ್ಲಿ ನೇತೃತ್ವ ವಹಿಸಿ ಅವರು ಮಾತನಾಡಿದರು.

‘ಅಲ್ಪಸಂಖ್ಯಾತ ವರ್ಗದಲ್ಲಿ ಆರು ಸಮುದಾಯಗಳಿವೆ. ಆದರೆ, ರಾಜ್ಯ ಸರ್ಕಾರ ಮುಸ್ಲಿಮರಿಗಷ್ಟೇ ಎಲ್ಲ ಸೌಲಭ್ಯ ಒದಗಿಸಿ ಜೈನ ಸಮುದಾಯ ಕಡೆಗಣಿಸುತ್ತಿರುವುದು ಸರಿಯಲ್ಲ’ ಎಂದು ದೂರಿದರು.

‘ಜೈನ ಸಮುದಾಯದ ಬಡ ವಿಧ್ಯಾರ್ಥಿಗಳಿಗೆ ಹಿಂದಿನ ಸರ್ಕಾರ ನೀಡುತ್ತಿದ್ದ ವಿದ್ಯಾರ್ಥಿ ವೇತನವನ್ನು ಶೇ 80ರಷ್ಟು ಕಡಿತಗೊಳಿಸಲಾಗಿದೆ. ಸರ್ಕಾರ ಈ ನಿರ್ಧಾರದಿಂದ ಹಿಂದಕ್ಕೆ ಸರಿದು, ಮೊದಲಿನಂತೆಯೇ ವಿದ್ಯಾರ್ಥಿವೇತನ ನೀಡಬೇಕು. ಮುಸ್ಲಿಮರಿಗೆ ಹಜ್ ಯಾತ್ರೆಗೆ ನೆರವು ಒದಗಿಸುತ್ತಿರುವ ಸರ್ಕಾರ, ಜೈನ ಸಮುದಾಯವರು ಉಚಿತವಾಗಿ ಸಮ್ಮೇದ ಶಿಖರಜಿ ದರ್ಶನ ಮಾಡಲು ಯೋಜನೆ ಘೋಷಿಸಬೇಕು’ ಎಂದು ಒತ್ತಾಯಿಸಿದರು.

‘ಈಚೆಗೆ ನಡೆಸಿದ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ(ಜಾತಿ ಗಣತಿ)ಯಲ್ಲಿ ಜೈನ ಸಮುದಾಯದ ಜನಸಂಖ್ಯೆ 1.5 ಲಕ್ಷ ಇದೆ ಎಂದು ಸರ್ಕಾರ ಹೇಳಿದೆ. ಆದರೆ, ಜೈನ ಸಮುದಾಯದ 20 ಲಕ್ಷ ಜನರಿದ್ದಾರೆ ಎಂದು ಅಲ್ಪಸಂಖ್ಯಾತರ ಕಲ್ಯಾಣ ಸಚಿವರು ಹೇಳುತ್ತಾರೆ. ಹಾಗಾಗಿ ಜೈನ ಸಮುದಾಯದ ಜನಸಂಖ್ಯೆ ಕುರಿತಾಗಿ ಸರಿಯಾಗಿ ಮಾಹಿತಿ ತಿಳಿಯಲು ಮತ್ತೊಮ್ಮೆ ಜಾತಿ ಜನಗಣತಿ ಮಾಡಿಸಿ’ ಎಂದು ಆಗ್ರಹಿಸಿದರು.

ಸಮಾವೇಶ ಉದ್ಘಾಟಿಸಿದ ರಾಜ್ಯಪಾಲ ಥಾವರಚಂದ ಗೆಹ್ಲೋತ್‌, ‘ಜೈನ ಧರ್ಮ ಬಹಳ ಪುರಾತನವಾದದ್ದು. ನಿಮ್ಮ ಸಮುದಾಯದ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ನನಗೆ ಮನವಿ ಮಾಡಿದ್ದೀರಿ. ಈ ಕುರಿತು ಸರ್ಕಾರದೊಂದಿಗೆ ಚರ್ಚಿಸಿ, ನ್ಯಾಯಯುತವಾದ ಬೇಡಿಕೆಗಳನ್ನು ಈಡೇರಿಸಲು ಪ್ರಯತ್ನಿಸುತ್ತೇನೆ’ ಎಂದು ಭರವಸೆ ನೀಡಿದರು.

ಎಲ್ಲ ಭಟ್ಟಾರಕ ಸ್ವಾಮಿಗಳು ಸಾನ್ನಿಧ್ಯ ವಹಿಸಿದ್ದರು. ಶಾಸಕರಾದ ಲಕ್ಷ್ಮಣ ಸವದಿ, ರಾಜು ಕಾಗೆ, ಅಭಯ ಪಾಟೀಲ, ಗಣೇಶ ಹುಕ್ಕೇರಿ, ದುರ್ಯೋಧನ ಐಹೊಳೆ, ಗಣೇಶ ಹುಕ್ಕೇರಿ, ಮಾಜಿ ಸಚಿವರಾದ ಶ್ರೀಮಂತ ಪಾಟೀಲ, ವೀರಕುಮಾರ ಪಾಟೀಲ, ಮುಖಂಡ ಉತ್ತಮ ಪಾಟೀಲ ಇತರರಿದ್ದರು.

ಬೆಳಗಾವಿ, ಬಾಗಲಕೋಟೆ ಮತ್ತು ವಿಜಯಪುರ ಜಿಲ್ಲೆಗಳ 30 ಸಾವಿರಕ್ಕೂ ಅಧಿಕ ಜನರು ಸಮಾವೇಶದಲ್ಲಿ ಪಾಲ್ಗೊಂಡಿದ್ದರು. ಯಾವೊಬ್ಬ ಸಚಿವರೂ ಸಮಾವೇಶಕ್ಕೆ ಬಾರದಿರುವುದು ಜೈನ ಸಮುದಾಯದವರ ಅಸಮಾಧಾನಕ್ಕೆ ಕಾರಣವಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.