ADVERTISEMENT

ಹನಿ ನೀರಾವರಿಗೆ ಎಲ್ಲ ರೈತರಿಗೂ ಶೇ 90ರಷ್ಟು ಸಹಾಯಧನ: ಕೃಷಿ ಸಚಿವ ಬಿ.ಸಿ. ಪಾಟೀಲ

​ಪ್ರಜಾವಾಣಿ ವಾರ್ತೆ
Published 13 ಡಿಸೆಂಬರ್ 2021, 14:23 IST
Last Updated 13 ಡಿಸೆಂಬರ್ 2021, 14:23 IST
ಬಿ.ಸಿ. ಪಾಟೀಲ (ಪ್ರಜಾವಾಣಿ ಸಂಗ್ರಹ ಚಿತ್ರ)
ಬಿ.ಸಿ. ಪಾಟೀಲ (ಪ್ರಜಾವಾಣಿ ಸಂಗ್ರಹ ಚಿತ್ರ)   

ಬೆಳಗಾವಿ: ‘ಹನಿ ನೀರಾವರಿ ಘಟಕ ಅಳವಡಿಸಿಕೊಳ್ಳುವ ಎಲ್ಲ ವರ್ಗದ ರೈತರಿಗೂ ಹಿಂದಿನಂತೆಯೇ ಶೇ 90ರಷ್ಟು ಸಹಾಯಧನ ಕೊಡಲಾಗುವುದು. ಈ ನಿಟ್ಟಿನಲ್ಲಿ ಶೀಘ್ರವೇ ಆದೇಶ ಹೊರಬೀಳಲಿದೆ’ ಎಂದು ಕೃಷಿ ಸಚಿವ ಬಿ.ಸಿ. ಪಾಟೀಲ ಭರವಸೆ ನೀಡಿದರು.

ಮೂರು ಕೃಷಿ ಕಾಯ್ದೆಗಳನ್ನು ವಾಪಸ್ ಪಡೆಯಬೇಕು ಎನ್ನುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ, ತಾಲ್ಲೂಕಿನ ಕೊಂಡಸಕೊಪ್ಪ ಗ್ರಾಮದ ಗುಡ್ಡದಲ್ಲಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯಿಂದ ಸೋಮವಾರ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಮುಖಂಡರಿಂದ ಮನವಿ ಸ್ವೀಕರಿಸಿ ಅವರು ಮಾತನಾಡಿದರು.

‘ಕೋವಿಡ್ ಕಾರಣದಿಂದ ಸಹಾಯಧನವನ್ನು ಎಲ್ಲ ವರ್ಗದ ರೈತರಿಗೂ ಕೊಡಲಾಗುತ್ತಿರಲಿಲ್ಲ. ಇದರಿಂದ ರೈತರಿಗೆ ತೊಂದರೆ ಆಗಿತ್ತು. ಇದನ್ನು ಗಮನಿಸಿ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೊಂದಿಗೆ ಚರ್ಚಿಸಿದ್ದೇನೆ. ಹನಿ ನೀರಾವರಿಗೆ ಶೇ 90ರಷ್ಟು ಸಹಾಯಧನವನ್ನು (2 ಎಕರೆವರೆಗೂ) ಕೊಡಲಾಗುವುದು. ವಿಧಾನಪರಿಷತ್ ಚುನಾವಣೆ ನೀತಿಸಂಹಿತೆ ಇರುವುದರಿಂದ ಆದೇಶ ಹೊರಬಿದ್ದಿಲ್ಲ’ ಎಂದು ಹೇಳಿದರು.

ADVERTISEMENT

‘ರಸಗೊಬ್ಬರದ ತೊಂದರೆ ಇಲ್ಲ. ಭತ್ತ ಖರೀದಿ ಕೇಂದ್ರಗಳನ್ನು ಜನವರಿ 1ರಿಂದ ಆರಂಭಿಸಲಾಗುವುದು. ಪ್ರಸ್ತುತ ರೈತರ ನೋಂದಣಿ ಪ್ರಕ್ರಿಯೆ ನಡೆಯುತ್ತಿದೆ’ ಎಂದರು.

ನಗರಾಭಿವೃದ್ಧಿ ಸಚಿವ ಭೈರತಿ ಬಸವರಾಜ್ ಮಾತನಾಡಿ, ‘ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ವಾರಾಣಸಿಗೆ ಹೋಗಿದ್ದಾರೆ. ಅವರು ಬಂದ ಕೂಡಲೇ, ಮೂರು ಕೃಷಿ ಕಾಯ್ದೆಗಳನ್ನು ವಾಪಸ್ ಪಡೆಯಬೇಕು ಎಂದು ನಿಮ್ಮ ಬೇಡಿಕೆ ಬಗ್ಗೆ ಚರ್ಚಿಸಲಾಗುವುದು. ನಮ್ಮ ಸರ್ಕಾರ ಸಕಾರಾತ್ಮಕವಾಗಿ ಸ್ಪಂದಿಸಲಿದೆ. ಇದು ಪ್ರಮುಖ ಬೇಡಿಕೆಯಾಗಿದ್ದು, ಬೇಗ ಇತ್ಯರ್ಥಪಡಿಸಬೇಕು ಎಂದು ಮುಖ್ಯಮಂತ್ರಿಯನ್ನು ಕೋರಲಾಗುವುದು’ ಎಂದು ತಿಳಿಸಿದರು.

‘ಇನ್ನೂ 9 ದಿನಗಳು ಅಧಿವೇಶನ ನಡೆಯಲಿದೆ. ನಾವು ಮಾಡುವುದಿಲ್ಲ ಎಂದರೆ ನೀವು‌ (ರೈತರು) ಬಿಡುವುದೂ ಇಲ್ಲ. ಸಮಯ ಕೊಡಿ’ ಎಂದು ಕೋರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.