ADVERTISEMENT

ಡಿ.ಕೆ. ಶಿವಕುಮಾರ್‌ ಜೊತೆ ಸೇರಿ ಲಕ್ಷ್ಮಣ ಸವದಿ ಕುತಂತ್ರ: ಲಖನ್‌ ಜಾರಕಿಹೊಳಿ ಆರೋಪ

​ಪ್ರಜಾವಾಣಿ ವಾರ್ತೆ
Published 27 ಜನವರಿ 2022, 11:15 IST
Last Updated 27 ಜನವರಿ 2022, 11:15 IST
ಲಖನ್‌ ಜಾರಕಿಹೊಳಿ
ಲಖನ್‌ ಜಾರಕಿಹೊಳಿ    

ಬೆಳಗಾವಿ: ‘ಅಥಣಿಯ ವಿಧಾನಸಭಾ ಕ್ಷೇತ್ರದಲ್ಲಿ ಸೋತವರು ದೊಡ್ಡ ಹುದ್ದೆಗೇರಿ ಅಧಿಕಾರ ಅನುಭವಿಸಿದರು. ಈಗ ಅವರು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಜೊತೆ ಸೇರಿ ಕುತಂತ್ರ ಮಾಡುತ್ತಿದ್ದಾರೆ’ ಎಂದು ವಿಧಾನಪರಿಷತ್ ಸದಸ್ಯ ಲಖನ್‌ ಜಾರಕಿಹೊಳಿ ಆರೋಪಿಸಿದರು.

ಜಿಲ್ಲೆಯ ಗೋಕಾಕದಲ್ಲಿ ಪತ್ರಕರ್ತರೊಂದಿಗೆ ಗುರುವಾರ ಮಾತನಾಡಿದ ಅವರು, ‘ಶಾಸಕ ಬಸನಗೌಡ ಪಾಟೀಲ ಅವರು ಹೇಳಿದಂತೆ ದಂಡೆಯಲ್ಲಿ ಕುಳಿತಿರುವಂಥವರನ್ನು ನಂಬಿಕೊಂಡು ಹೋದರೆ ಬಿಜೆಪಿಗೆ ಕಷ್ಟವಾಗುತ್ತದೆ’ ಎಂದರು.

‘ವಿಧಾನಪರಿಷತ್‌ ಚುನಾವಣೆಯಲ್ಲೂ ಅಥಣಿಯವರು ಕುತಂತ್ರ ಮಾಡಿದರು. ಬಿಜೆಪಿಯ ಮಹಾಂತೇಶ ಕವಟಗಿಮಠ ಸೋಲಲು ಅವರೇ ಕಾರಣ. ಈಗ ಅವರೇ ಸಭೆ ನಡೆಸಿ ಚರ್ಚಿಸುತ್ತಿದ್ದಾರೆ. ಹೈಕಮಾಂಡ್ ಅದೆಲ್ಲವನ್ನೂ ಗಮನಹರಿಸಬೇಕು. ಪಕ್ಷಕ್ಕೆ ದ್ರೋಹ ಮಾಡುತ್ತಿರುವವರು ಯಾರು ಎನ್ನುವುದನ್ನು ತಿಳಿದುಕೊಳ್ಳಬೇಕು. ಗುಪ್ತಚರ ವರದಿಯನ್ನು ಮುಖ್ಯಮಂತ್ರಿ ಗಮನಿಸಿ. ಪಕ್ಷಕ್ಕೆ ದ್ರೋಹ ಎಸಗಿದವರ ವಿರುದ್ಧ ಶಿಸ್ತು ಕ್ರಮ ಜರುಗಿಸಬೇಕು’ ಎಂದು ಒತ್ತಾಯಿಸಿದರು.

ADVERTISEMENT

‘ಅಥಣಿ ನಾಯಕರು ಡಿ.ಕೆ. ಶಿವಕುಮಾರ್‌ ಜೊತೆ ಸಂಪರ್ಕದಲ್ಲಿದ್ದಾರೆ. ಮುಂದೆ ಕಾಂಗ್ರೆಸ್‌ಗೆ ಹೋದರೂ ಹೋಗಬಹುದಾದ ಗ್ಯಾಂಗ್ ಅದು’ ಎಂದು ದೂರಿದರು.

‘ಬಿಜೆಪಿಯಲ್ಲಿ ಉನ್ನತ ಹುದ್ದೆ ಅನುಭವಿಸಿ, ಈಗ ಮತ್ತೆ ಅಧಿಕಾರ ಸಿಗಲೆಂಬ ಕುತಂತ್ರದಿಂದ ಸಭೆ ನಡೆಸುತ್ತಿದ್ದಾರೆ’ ಎಂದು ಸವದಿ ವಿರುದ್ಧ ವಾಗ್ದಾಳಿ ನಡೆಸಿದರು.

‘ಕಾಂಗ್ರೆಸ್‌ನಿಂದ 20 ಕಾಂಗ್ರೆಸ್ ಶಾಸಕರನ್ನು ಬೇಕಾದರೂ ಬಿಜೆಪಿಗೆ ಕರೆತರುವ ಶಕ್ತಿ ಶಾಸಕರಾದ ರಮೇಶ ಹಾಗೂ ಬಾಲಚಂದ್ರ ಜಾರಕಿಹೊಳಿಗೆ ಅವರಿಗಿದೆ. ಅವರೊಂದಿಗೆ ಹಲವರು ಸಂಪರ್ಕದಲ್ಲಿರುವುದು ನಿಜ’ ಎಂದರು.

‘ಕಾಂಗ್ರೆಸ್‌ನಲ್ಲಿ ಸಿದ್ದರಾಮಯ್ಯ ಬಿಟ್ಟರೆ ಬೇರಾವ ನಾಯಕರಿದ್ದಾರೆ? ಅವರವರ ಕ್ಷೇತ್ರದಲ್ಲಿ ಗೆಲ್ಲುವ ತಾಕತ್ತು ಕೂಡ ಉಳಿದವರಿಗೆ ಇಲ್ಲ. ಹೀಗಾಗಿ, ಬಿಜೆಪಿಯಿಂದ ಯಾರೂ ಕಾಂಗ್ರೆಸ್‌ಗೆ ಹೋಗುವುದಿಲ್ಲ’ ಪ್ರತಿಕ್ರಿಯಿಸಿದರು.

‘ಸಹೋದರರಾದ ರಮೇಶ–ಬಾಲಚಂದ್ರ ಜಾರಕಿಹೊಳಿ ಅವರನ್ನು ಬಿಜೆಪಿಯವರು 2023ರ ಚುನಾವಣೆಯಲ್ಲಿ ಸರಿಯಾಗಿ ಬಳಕೆ ಮಾಡಿಕೊಳ್ಳಬೇಕು’ ಎಂದು ಪ್ರತಿಕ್ರಿಯಿಸಿದರು.

‘ನಾನು ಸದ್ಯಕ್ಕೆ ಪಕ್ಷೇತರರಾಗಿಯೇ ಇರುತ್ತೇನೆ. ಸಿದ್ದರಾಮಯ್ಯ ನಮ್ಮ ಗುರುಗಳು. ಅವರ ಬಗ್ಗೆ ಅಪಾರ ಅಭಿಮಾನ ಇದೆ. ಅವರು ಆಹ್ವಾನ ನೀಡಿದರೆ, ಮುಂದಿನ ದಿನಗಳಲ್ಲಿ ವಿಚಾರ ಮಾಡುತ್ತೇನೆ’ ಎಂದು ಪ್ರತಿಕ್ರಿಯಿಸಿದರು.

‘ರಮೇಶ ಜಾರಕಿಹೊಳಿ ವಿರುದ್ಧ ಷಡ್ಯಂತ್ರ ಸಾಧ್ಯವೇ ಇಲ್ಲ. ಅವರಿಗೆ ಸ್ವಂತ ಬಲವಿದೆ. ಗೋಕಾಕ ಮತ್ತು ಅರಭಾವಿ ಕ್ಷೇತ್ರದಲ್ಲಿ ಸಹೋದರಿಗೆ ಲಕ್ಷ ಮತದಾರರಿದ್ದಾರೆ’ ಎಂದರು.

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.