ADVERTISEMENT

ಪಾಕೆಟಲ್ಲಿ ಹಣ ಇಟ್ಟು ಕೊಟ್ಟ ವಿಡಿಯೊ ಹರಿಬಿಟ್ಟ ಮತದಾರ; ಮತವೊಂದಕ್ಕೆ ₹10 ಸಾವಿರ?

​ಪ್ರಜಾವಾಣಿ ವಾರ್ತೆ
Published 13 ಜೂನ್ 2022, 1:00 IST
Last Updated 13 ಜೂನ್ 2022, 1:00 IST
   

ಬೆಳಗಾವಿ: ವಾಯವ್ಯ ಶಿಕ್ಷಕರ ಮತಕ್ಷೇತ್ರದ ಅಭ್ಯರ್ಥಿಯೊಬ್ಬರು ಹಂಚಿದ್ದಾರೆ ಎನ್ನಲಾದ ಹಣದ ಪಾಕೆಟ್ಟಿನ ವಿಡಿಯೊಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ.

ವ್ಯಕ್ತಿಯೊಬ್ಬರು ಈ ಪಾಕೆಟ್ ತೆರೆದು ವಿಡಿಯೂ ಮಾಡಿ ಹರಿಬಿಟ್ಟಿದ್ದಾರೆ. ಪಾಕೆಟ್ ಒಳಗೆ ಅಭ್ಯರ್ಥಿಯು ಪ್ರಚಾರಕ್ಕೆ ಬಳಸಿದ ಭಾವಚಿತ್ರವಿರುವ ಚೀಟಿ ಹಾಗೂ ₹ 2000 ಮುಖಬೆಲೆಯ ಐದು ನೋಟುಗಳು ಇವೆ.

ಆದರೆ ಈ ವಿಡಿಯೊ ಎಲ್ಲಿಯದು, ಹರಿಬಿಟ್ಟಿದ್ದು ಯಾರು, ಹಣ ಹಂಚಿದ್ದು ಯಾರು ಎಂಬ ಸುಳಿವು ಇಲ್ಲ.

ADVERTISEMENT

ಚುನಾವಣಾಧಿಕಾರಿಗಳ ಪರಿಶೀಲನೆ:
ಚಿಕ್ಕೋಡಿ ಹೊರವಲಯದ ರವದಿ ಫಾರ್ಮ್ಸ್ ಎಂಬಲ್ಲಿ ಹಲವು ಶಿಕ್ಷಕ, ಶಿಕ್ಷಕಿಯರು ಭಾನುವಾರ ಸಂಜೆಯೇ ಜಮಾಯಿಸಿದ್ದರು. ಇದನ್ನು ಕಂಡು ವಿರೋಧಿ ಗುಂಪಿನ ಕೆಲವರು ತಕರಾರು ತೆಗೆದರು.

ಫಾರ್ಮಹೌಸಿನಲ್ಲಿ ಹಣ ಹಂಚಲಾಗುತ್ತಿದೆ ಎಂದು ಚುನಾವಣಾಧಿಕಾರಿಗೆ ಕರೆ ಮಾಡಿ ತಿಳಿಸಿದರು. ದೂರಿನ ಹಿನ್ನೆಲೆಯಲ್ಲಿ ಚುನಾವಣೆ ಫ್ಲಾಯಿಂಗ್ ಸ್ಕ್ವಾಡ್ ಮತ್ತು ಪೊಲೀಸರು ಸ್ಥಳ ಪರಿಶೀಲಿಸಿದರು.

ಈ ಎಲ್ಲ ಘಟನಾವಳಿಗಳ ವಿಡಿಯೊಗಳನ್ನೂ ಕೆಲವರು ಹರಿಬಿಟ್ಟಿದ್ದಾರೆ.

ಈ ಫಾರ್ಮ್ ಹೌಸಿನಲ್ಲಿ ನವದಂಪತಿಯ ಆರತಕ್ಷತೆ ಆಯೋಜಿಸಲಾಗಿತ್ತು ಎಂಬ ಮಾಹಿತಿಯೂ ವಿಡಿಯೊದಲ್ಲಿದೆ.

₹ 17.40 ಲಕ್ಷ ನಗದು ವಶ:ಕಾರೊಂದರಲ್ಲಿ ಸಾಗಿಸುತ್ತಿದ್ದ ₹ 17.40 ಲಕ್ಷ ನಗದನ್ನು ಚುನಾವಣಾಧಿಕಾರಿಗಳು ಭಾನುವಾರ ವಶಕ್ಕೆ ಪಡೆದಿದ್ದಾರೆ.

'ಈ ಹಣವು ವಿಜಯಪುರ ಜಿಲ್ಲೆಯ ಸರಹದ್ದಿನಲ್ಲಿ ಸಿಕ್ಕಿದೆ. ಕಾರಿನಲ್ಲಿ ಆರು ಆರೋಪಿಗಳು ಇದ್ದರು. ಅವರ ಬಳಿ ಹಣ ಹಾಕಿದ 174 ಪಾಕೆಟ್ಟುಗಳು ಇದ್ದವು. ಜತೆಗೆ ಶಿಕ್ಷಕರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯ ಪ್ರಚಾರ ಪತ್ರಗಳೂ ಇವೆ. ಎಲ್ಲವನ್ನು ವಶಕ್ಕೆ ತೆಗೆದುಕೊಂಡಿದ್ದು, ಚುನಾವಣಾಧಿಕಾರಿ ಗಮನಕ್ಕೆ ತರಲಾಗುವುದು' ಎಂದು ದಾಳಿ ನಡೆಸಿದ ಅಧಿಕಾರಿ ಮಾಧ್ಯಮದವರಿಗೆ ಮಾಹಿತಿ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.