ADVERTISEMENT

ಮಹಾರಾಷ್ಟ್ರದ ಕಾಡಾನೆ ಸೆರೆಗೆ ಕರ್ನಾಟಕದ ಅರಣ್ಯ ಇಲಾಖೆಗೆ ಮೊರೆ

​ಪ್ರಜಾವಾಣಿ ವಾರ್ತೆ
Published 13 ಮಾರ್ಚ್ 2025, 23:00 IST
Last Updated 13 ಮಾರ್ಚ್ 2025, 23:00 IST
ಖಾನಾಪುರದ ಜಳಗಾ ಶ್ರೀಗಂಧ ನೆಡುತೋಪಿಗೆ ಮಹಾರಾಷ್ಟ್ರದ ಅರಣ್ಯ ಇಲಾಖೆ ಅಧಿಕಾರಿಗಳು ಮತ್ತು ಸಿಬ್ಬಂದಿ ಭೇಟಿ ನೀಡಿದರು
ಖಾನಾಪುರದ ಜಳಗಾ ಶ್ರೀಗಂಧ ನೆಡುತೋಪಿಗೆ ಮಹಾರಾಷ್ಟ್ರದ ಅರಣ್ಯ ಇಲಾಖೆ ಅಧಿಕಾರಿಗಳು ಮತ್ತು ಸಿಬ್ಬಂದಿ ಭೇಟಿ ನೀಡಿದರು   

ಖಾನಾಪುರ: ಮಹಾರಾಷ್ಟ್ರದ ಸಿಂಧದುರ್ಗ ಮತ್ತು ಕೊಲ್ಹಾಪುರ ಜಿಲ್ಲೆ ಅರಣ್ಯ ಪ್ರದೇಶದಲ್ಲಿನ ರೈತರಿಗೆ ತೊಂದರೆ ನೀಡುತ್ತಿರುವ ಕಾಡಾನೆಗಳನ್ನು ಸೆರೆಹಿಡಿಯಲು ತಮಗೆ ನೆರವಾಗುವಂತೆ ಮಹಾರಾಷ್ಟ್ರದ ಅರಣ್ಯ ಇಲಾಖೆಯು ಕರ್ನಾಟಕದ ಅರಣ್ಯ ಇಲಾಖೆ ಕೋರಿದೆ.

ಕೊಲ್ಹಾಪುರದ ಉಪ ಅರಣ್ಯ ಸಂರಕ್ಷಣಾಧಿಕಾರಿ ನೇತೃತ್ವದಲ್ಲಿ ಚಂದಗಡ, ಸಿಂಧದುರ್ಗ ಜಿಲ್ಲೆಯ ವೆಂಗುರ್ಲಾ ಮತ್ತು ಸಾವಂತವಾಡಿಯ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳು, ವಲಯ ಅರಣ್ಯ ಅಧಿಕಾರಿಗಳು ಖಾನಾಪುರದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಸುನೀತಾ ನಿಂಬರಗಿ, ವಲಯ ಅರಣ್ಯಾಧಿಕಾರಿ ಶ್ರೀಕಾಂತ ಪಾಟೀಲ ಬಳಿ ಚರ್ಚಿಸಿದರು.

ಕೊಲ್ಹಾಪುರ ಉಪ ಅರಣ್ಯ ಸಂರಕ್ಷಣಾಧಿಕಾರಿ ಜಿ.ಜಿ.ಸಿಂಗ್ ಮಾತನಾಡಿ, ‘ಮಹಾರಾಷ್ಟ್ರದ ಎರಡೂ ಜಿಲ್ಲೆಗಳ ಅರಣ್ಯ ಪ್ರದೇಶದಲ್ಲಿ 50ಕ್ಕೂ ಹೆಚ್ಚು ಕಾಡಾನೆಗಳಿದ್ದು, ಅವು ರೈತರ ಜಮೀನಿಗೆ ನುಗ್ಗಿ ಬೆಳೆಹಾನಿ ಮಾಡುತ್ತಿವೆ. ಕಾಡಿನಲ್ಲಿ ಇರುವ ಜನರಿಗೆ ಭಯ ಹುಟ್ಟಿಸುತ್ತಿವೆ. ಖಾನಾಪುರದಲ್ಲಿ ನಡೆಸಿದ ಕಾರ್ಯಾಚರಣೆ ಮಾದರಿಯಲ್ಲೇ, ಮಹಾರಾಷ್ಟ್ರದ ಅರಣ್ಯದಲ್ಲೂ ಕಾರ್ಯಾಚರಣೆ ನಡೆಸಿ ಕಾಡಾನೆಗಳನ್ನು ಸೆರೆ ಹಿಡಿಯಲು ನೆರವಾಗಬೇಕು’ ಎಂದು ಮನವಿ ಮಾಡಿದರು.

ADVERTISEMENT

ಇದಕ್ಕೆ ಪ್ರತಿಕ್ರಿಯಿಸಿದ ಸುನೀತಾ ನಿಂಬರಗಿ, ‘ಶಿವಮೊಗ್ಗದ ಸಕ್ರೆಬೈಲ್ ಆನೆ ಬಿಡಾರದಲ್ಲಿ ಪಳಗಿದ ಆನೆಗಳನ್ನು ತರಿಸಿ, ಮಹಾರಾಷ್ಟ್ರದ ಕಾಡಾನೆಗಳನ್ನು ಸೆರೆಹಿಡಿಯಲು ಎಲ್ಲ ರೀತಿಯ ಸಹಕಾರ ನೀಡಲು ಸಿದ್ಧ. ಈ ವಿಷಯವಾಗಿ ಮಹಾರಾಷ್ಟ್ರ ಸರ್ಕಾರವು ಕರ್ನಾಟಕ ಸರ್ಕಾರದ ಜತೆಗೆ ಪತ್ರ ವ್ಯವಹಾರ ಮಾಡಬೇಕು’ ಎಂದರು.

ನಂತರ ಮಹಾರಾಷ್ಟ್ರದ ಅಧಿಕಾರಿಗಳು ತಾಲ್ಲೂಕಿನ ಜಳಗಾ ಗ್ರಾಮದ ಶ್ರೀಗಂಧ ನೆಡುತೋಪು ವೀಕ್ಷಿಸಿದರು. ಬೆಳಗಾವಿ ಉಪ ಅರಣ್ಯ ಸಂರಕ್ಷಣಾಧಿಕಾರಿ ಮರಿಯಾ ಕ್ರಿಸ್ಟ್ರು ರಾಜಾ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.