ಲಕ್ಷ್ಮೀ ಹೆಬ್ಬಾಳಕರ
ಬೆಳಗಾವಿ: ‘ಬಾಗಲಕೋಟೆಯ ದಿವ್ಯಜ್ಯೋತಿ ಅಂಧ ಮಕ್ಕಳ ಶಾಲೆಯಲ್ಲಿ ಬುದ್ಧಿಮಾಂದ್ಯ ಬಾಲಕ ದೀಪಕ ರಾಠೋಡ ಮೇಲೆ ಹಲ್ಲೆ ನಡೆಸಿದವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸುತ್ತೇವೆ’ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮಿ ಹೆಬ್ಬಾಳಕರ ಹೇಳಿದರು.
ಇಲ್ಲಿ ಭಾನುವಾರ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಅವರು, ‘ಇದೊಂದು ಅಮಾನವೀಯ ಘಟನೆ. ಮಕ್ಕಳ ರಕ್ಷಣಾ ಹಕ್ಕುಗಳೆಲ್ಲ ಉಲ್ಲಂಘನೆಯಾಗಿವೆ. ಈಗ ದೈಹಿಕವಾಗಿ ಸದೃಢವಿರುವ ಮಕ್ಕಳನ್ನು ಹೊಡೆದರೆ ಅಪರಾಧ ಎಂದು ಪರಿಗಣಿಸಿ ಶಿಕ್ಷೆ ನೀಡುತ್ತೇವೆ. ಹೀಗಿರುವಾಗ ಬುದ್ಧಿಮಾಂದ್ಯ ಮಕ್ಕಳ ಮೇಲಿನ ಹಲ್ಲೆ ಸಹಿಸುವ ಮಾತೇ ಇಲ್ಲ’ ಎಂದು ಎಚ್ಚರಿಕೆ ಕೊಟ್ಟರು.
‘ಸರ್ಕಾರದ ಯಾವ ಅನುಮತಿ ಇಲ್ಲದೆ, ಬಾಗಲಕೋಟೆಯಲ್ಲಿ ಅನಧಿಕೃತವಾಗಿ ಆ ಸಂಸ್ಥೆ ತೆರೆದಿದ್ದಾರೆ. ಸಮಾಜಕ್ಕೆ ಕಳಂಕ ತರುವ ಈ ಘಟನೆಯಿಂದ ನಮಗೂ ಮುಜುಗರವಾಗುತ್ತದೆ. ಘಟನೆ ಬೆಳಕಿಗೆ ಬಂದ ತಕ್ಷಣ ಅಧಿಕಾರಿಗಳನ್ನು ಅಲ್ಲಿಗೆ ಕಳುಹಿಸಿದ್ದೇನೆ. ಜಿಲ್ಲಾಧಿಕಾರಿ ಜತೆಗೆ ಮಾತನಾಡಿ, ವಸತಿ ಶಾಲೆ ಮುಚ್ಚಿಸಲು ಕ್ರಮ ಕೈಗೊಳ್ಳುತ್ತೇನೆ’ ಎಂದರು.
‘ಅಲ್ಲಿನ ಬೇರೆ ಮಕ್ಕಳನ್ನೂ ಸರ್ಕಾರಿ ಅನುದಾನಿತ ಮಕ್ಕಳ ರಕ್ಷಣಾ ನಿಲಯಕ್ಕೆ ಸ್ಥಳಾಂತರಿಸುತ್ತೇವೆ. ಪಾಲಕರ ಅನುಮತಿ ಮೇರೆಗೆ ಈ ಕ್ರಮ ವಹಿಸುತ್ತೇವೆ’ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.