ADVERTISEMENT

ತರಕಾರಿಗೆ ಸಿಗದ ಬೆಲೆ: ಕೃಷಿಕ ಕಂಗಾಲು

ಸುಧಾಕರ ಎಸ್.ತಳವಾರ, ಬೆಂಗಳೂರು
Published 18 ಮಾರ್ಚ್ 2021, 19:30 IST
Last Updated 18 ಮಾರ್ಚ್ 2021, 19:30 IST
ಚಿಕ್ಕೋಡಿ ತಾಲ್ಲೂಕಿನ ಹಿರೇಕೋಡಿ ಗ್ರಾಮದ ಜಮೀನಿನಲ್ಲಿ ರೈತರು ಟೊಮೆಟೊ ಹಣ್ಣುಗಳನ್ನು ಗಿಡದಲ್ಲೇ ಬಿಟ್ಟಿರುವುದು
ಚಿಕ್ಕೋಡಿ ತಾಲ್ಲೂಕಿನ ಹಿರೇಕೋಡಿ ಗ್ರಾಮದ ಜಮೀನಿನಲ್ಲಿ ರೈತರು ಟೊಮೆಟೊ ಹಣ್ಣುಗಳನ್ನು ಗಿಡದಲ್ಲೇ ಬಿಟ್ಟಿರುವುದು   

ಚಿಕ್ಕೋಡಿ: ಉತ್ತಮ ದರ ದೊರೆಯದೆ ಗಿಡಗಳಲ್ಲೇ ಕೊಳೆಯುತ್ತಿರುವ ಟೊಮೆಟೊ. ಮಾರುಕಟ್ಟೆಗೆ ಸಾಗಿಸುವ ವೆಚ್ಚವೂ ಕೈಗೆ ಸಿಗದೆ ಹೊಲಗಳಲ್ಲೇ ಎಲೆಕೋಸು ನಾಶಪಡಿಸುತ್ತಿರುವ ಕೃಷಿಕರು. ಮಾರುಕಟ್ಟೆಗೆ ಹಾಕಿದ ಬಂಡವಾಳವಾದರೂ ಸಿಗಲಿ ಎಂದು ಸಿಕ್ಕಷ್ಟು ಬೆಲೆಗೆ ತರಕಾರಿ ಮಾರಾಟ ಮಾಡುತ್ತಿರುವ ಅಸಹಾಯಕ ರೈತ. ಮುಂಬರುವ ದಿನಗಳಲ್ಲಾದರೂ ಒಳ್ಳೆಯ ದರ ದೊರೆತೀತೆ ಎಂಬ ಆಶಾಭಾವದೊಂದಿಗೆ ಬೆಳೆ ಉಳಿಸಿಕೊಳ್ಳೋಣವೆಂದರೆ ನಾನಾ ಬಗೆಯ ರೋಗ ಹಾಗೂ ಕೀಟಗಳ ಬಾಧೆ.

ತಾಲ್ಲೂಕಿನಲ್ಲಿ ತರಕಾರಿ ಬೆಳೆಗಳಿಗೆ ಸಮಪರ್ಕ ಬೆಲೆ ದೊರೆಯದೆ ನಷ್ಟ ಅನುಭವಿಸುತ್ತಿರುವ ರೈತನ ವ್ಯಥೆ ಇದು.

ಹಿರೇಕೋಡಿ, ನಾಗರಾಳ, ನನದಿ, ಕೇರೂರ, ಶಿರಗಾಂವ, ಚಿಂಚಣಿ, ನೇಜ್, ಕೆಂಚನಟ್ಟಿ, ಬೆಳಕೂಡ ಸೇರಿದಂತೆ ಹತ್ತಾರು ಗ್ರಾಮಗಳಲ್ಲಿ ಬೆಳೆದ ತರಕಾರಿ ಪ್ರತಿ ಗುರುವಾರ ಮತ್ತು ಭಾನುವಾರಗಳಂದು ಹೆಚ್ಚಿನ ಪ್ರಮಾಣದಲ್ಲಿ ಸ್ಥಳೀಯ ಮಾರುಕಟ್ಟೆಗೆ ಬರುತ್ತದೆ. ಅಲ್ಲದೇ, ಘಟಪ್ರಭಾ ಭಾಗದಿಂದಲೂ ಇಲ್ಲಿನ ಮಾರುಕಟ್ಟೆಗೆ ತರಕಾರಿ ಸರಬರಾಜು ಆಗುತ್ತಿದೆ. ಆವಕ ಹೆಚ್ಚಿರುವುದರಿಂದ ಟೊಮೆಟೊ, ಬದನೆಕಾಯಿ, ಗಜರಿ, ಎಲೆಕೋಸು, ಅವರೆ ಮತ್ತು ವಿವಿಧ ಬಗೆಯ ಸೊಪ್ಪುಗಳು ಕನಿಷ್ಠ ಬೆಲೆಗೆ ಮಾರಾಟವಾಗುತ್ತಿವೆ. ಹಾಕಿದ ಬಂಡವಾಳವೂ ಕೈಗೆ ಸಿಗದೆ ಕೃಷಿಕ ಕಂಗಾಲಾಗಿದ್ದಾನೆ.

ADVERTISEMENT

ಸಾವಿರಾರು ರೂಪಾಯಿ ಖರ್ಚು ಮಾಡಿ ಬೆಳೆದು ನಿಂತಿರುವ ಟೊಮೆಟೊ ಕಾಯಿಗಳನ್ನು ಕಿತ್ತು ಮಾರುಕಟ್ಟೆಗೆ ಸಾಗಿಸಿದರೆ ಅದರ ಖರ್ಚು ಕೂಡ ಸಿಗುತ್ತಿಲ್ಲ ಎನ್ನುತ್ತಾರೆ ರೈತರು. ಪರಿಣಾಮ,ಅನೇಕ ರೈತರು ಗಿಡದಲ್ಲೇ ಬಿಟ್ಟುಬಿಟ್ಟಿದ್ದಾರೆ. ಕಾಯಿಗಳು ಹಣ್ಣಾಗಿ ಕೊಳೆತು ವ್ಯರ್ಥವಾಗುತ್ತಿರುವುದು ಕಂಡುಬಂದಿದೆ.

‘ತರಕಾರಿ ಉತ್ಪಾದನಾ ವೆಚ್ಚ ಹೆಚ್ಚಾಗಿದೆ. ಬಿತ್ತನೆ ಬೀಜ, ಸಸಿಗಳ ಬೆಲೆ ದುಬಾರಿಯಾಗಿದೆ. ತರಕಾರಿ ಬೆಳೆಗಳಿಗೆ ತಗಲುವ ರೋಗ ರುಜಿನಗಳನ್ನು ನಿಯಂತ್ರಿಸಲು ಬಳಸುವ ಕ್ರಿಮಿನಾಶಕ, ಕೂಲಿಗಳ ಸಂಬಳ ಸೇರಿದಂತೆ ಸಾವಿರಾರು ರೂಪಾಯಿ ಸುರಿದು ಬೆಳೆದ ಟೊಮೆಟೊ ಬೆಳೆಗೆ ಮಾರುಕಟ್ಟೆಯಲ್ಲಿ ದರ ಕುಸಿದಿದೆ. ಹಾಕಿದ ಬಂಡವಾಳವೂ ಕೈ ಸೇರುತ್ತಿಲ್ಲ. ಹೀಗಾಗಿ ಟೊಮೆಟೊ ಕಾಯಿಗಳನ್ನು ಕಟಾವು ಮಾಡದ ಸ್ಥಿತಿ ಬಂದಿದೆ’ ಎಂದು ಹಿರೇಕೋಡಿಯ ಕೃಷಿಕ ಶಿವಾಜಿ ಕೋಳಿ ಅಳಲು ತೋಡಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.