ADVERTISEMENT

ಕೊರೊನಾ ಭೀತಿ | ವಾಟ್ಸ್‌ಆ್ಯಪ್‌ ವಿಡಿಯೊ ಕಾಲ್‌ನಲ್ಲೇ ನಿಶ್ಚಿತಾರ್ಥ, ವಿಧಿ– ವಿಧಾನ

​ಪ್ರಜಾವಾಣಿ ವಾರ್ತೆ
Published 8 ಏಪ್ರಿಲ್ 2020, 15:26 IST
Last Updated 8 ಏಪ್ರಿಲ್ 2020, 15:26 IST
ಅತ್ತಿಹಾಳದ ಸರ್ಕಾರಿ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಪಿ.ಡಿ.ಪಾಟೀಲ ಮತ್ತು ಕುಟುಂಬ. ವಧು ಅನುಷಾ ಚಿತ್ರದಲ್ಲಿದ್ದಾರೆ(ಎಡದಿಂದ ಐದನೇಯವರು)
ಅತ್ತಿಹಾಳದ ಸರ್ಕಾರಿ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಪಿ.ಡಿ.ಪಾಟೀಲ ಮತ್ತು ಕುಟುಂಬ. ವಧು ಅನುಷಾ ಚಿತ್ರದಲ್ಲಿದ್ದಾರೆ(ಎಡದಿಂದ ಐದನೇಯವರು)   

ಯಮಕನಮರಡಿ: ಕೊರೊನಾ ವೈರಸ್ ಭೀತಿ, ಲಾಕ್‌ ಡೌನ್ ಹಿನ್ನೆಲೆಯಲ್ಲಿ ಹುಕ್ಕೇರಿ ತಾಲ್ಲೂಕಿನ ಅತ್ತಿಹಾಳದ ಸರ್ಕಾರಿ ಪ್ರೌಢಶಾಲೆಯ ಮುಖ್ಯಶಿಕ್ಷಕ ಪ್ರಕಾಶ.ಡಿ.ಪಾಟೀಲ ಅವರು ತಮ್ಮ ಪುತ್ರಿ ಅನುಷಾ ಅವರ ನಿಶ್ಚಿತಾರ್ಥವನ್ನು ಬಾಗಲಕೋಟೆಯ ಸುರೇಶ ಮಲಕಾಜಪ್ಪಾ ಅರಕೇರಿ ಅವರ ಪುತ್ರ ಮಹಾಂತೇಶ ಅವರೊಂದಿಗೆ ಅಂತರ್ಜಾಲದ ನೆರವಿನಿಂದ ಮಂಗಳವಾರ ನೆರವೇರಿಸಿದ್ದಾರೆ.

ವಾಟ್ಸ್‌ಆ್ಯಪ್‌ ವಿಡಿಯೊ ಕಾಲ್‌ನಲ್ಲೇ ನಿಶ್ಚಿತಾರ್ಥದ ಎಲ್ಲ ವಿಧಿ–ವಿಧಾನಗಳನ್ನು ಎರಡೂ ಕುಟುಂಬದವರು ಪೂರೈಸಿದರು.

ವಧುವಿನ ತಂದೆ ಮಾತನಾಡಿ, ಸರಳವಾಗಿ ಮಗಳ ನಿಶ್ಚಿತಾರ್ಥವನ್ನು ಬೀಗರ ಸಹಕಾರದಿಂದ ಮಾಡಿದ್ದೇವೆ ಎಂದರು.

ADVERTISEMENT

ವಧು ಅನುಷಾ ಮಾತನಾಡಿ, ’ಸರ್ಕಾರದ ಜಾರಿಗೊಳಿಸಿದ ನಿಯಮಗಳನ್ನು ಪಾಲಿಸುವುದು ಎಲ್ಲರ ಕರ್ತವ್ಯ. ನಿಶ್ಚಿತಾರ್ಥದ ವೇಳೆ ಎಷ್ಟು ಜನ ಇದ್ದಾರೆ ಎನ್ನುವುದಕ್ಕಿಂತ, ಪ್ರಧಾನಿ ಮೋದಿ ಅವರ ಸಲಹೆಗಳನ್ನು ಪಾಲಿಸುವುದು ನಮಗೆ ಮುಖ್ಯವಾಗಿತ್ತು. ಹೀಗಾಗಿ ವಿಡಿಯೊ ಕಾಲ್ ಮೂಲಕ ನಿಶ್ಚಿತಾರ್ಥ ಮಾಡಿಕೊಂಡಿದ್ದೇನೆ‘ ಎಂದು ತಿಳಿಸಿದರು.

ಹಿರಿಯರು ಯಾದಿ ತಯಾರಿಸಿ ದೇವರ ಮುಂದೆ ಇಟ್ಟು, ಪೂಜೆ ಸಲ್ಲಿಸುವ ಸನ್ನೀವೇಶಗಳನ್ನು ಆನ್‌ಲೈನ್‌ನಲ್ಲೇ ಎರಡೂ ಕುಟುಂಬಗಳು ವೀಕ್ಷಿಸಿದವು. ವರ ಮಹಾಂತೇಶ ಸಹ ವಿಡಿಯೊ ಕಾಲ್‌ನಲ್ಲಿ ಮಾತನಾಡಿದರು.

ಹುಕ್ಕೇರಿ ತಾಲ್ಲೂಕು ಅಕ್ಷರ ದಾಸೋಹ ಯೋಜನೆಯ ಸಹಾಯಕ ನಿರ್ದೇಶಕ ಶ್ರೀಶೈಲ ಹಿರೇಮಠ, ಎಲ್ಲರೂ ಒಗ್ಗಟ್ಟಿನಿಂದ ಸಾಮಾಜಿಕ ಅಂತರ ಪಾಲಿಸದರೆ ಕೊರೊನಾ ಹಬ್ಬುವುದನ್ನು ತಡೆಯಬಹುದು.ಈ ನಿಟ್ಟಿನಲ್ಲಿ ಪಾಟೀಲ ಕುಟುಂಬ ಮಾದರಿ ಕಾರ್ಯ ಮಾಡಿದೆ ಎಂದರು.

ಪ್ರಕಾಶ ಪಾಟೀಲ ಅವರ ಪತ್ನಿ ಜಯಶ್ರೀ , ತಾಯಿ ಲೀಲಾವತಿ, ಸಹೋದರ ಸಂಜಯ ಪಾಟೀಲ ಮತ್ತು ಮಕ್ಕಳು ಮಾತ್ರ ಈ ಬೇಳೆ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.